ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ : ರಾಜ್ಯ ಸರಕಾರದ ವಿಶೇಷ ಸಚಿವ ಸಂಪುಟ ಸಭೆ ನಂದಿಬೆಟ್ಟದಲ್ಲಿ ನಡೆಯಲು ದಿನಗಣನೆ ಆರಂಭವಾಗಿದ್ದು ಪ್ರವಾಸೋಧ್ಯಮ ಇಲಾಖೆಯ ನಿರ್ವಹಣೆಯಲ್ಲಿರುವ ಫೈನ್ ಟಾಪ್ ರೆಸ್ಟೋರೆಂಟ್‌ನಲ್ಲಿ ಸಭೆಯ ಆಯೋಜನೆಗೆ ಬೇಕಾದ ಸಿದ್ಧತೆಗಳು ಭರದಿಂದ ಸಾಗಿವೆ.
ಹೌದು. ಜೂನ್ ೧೯ ರ ಮದ್ಯಾಹ್ನ ೧೨ಕ್ಕೆ ವಿಶ್ವವಿಖ್ಯಾತ ನಂದಿಬೆಟ್ಟದ ತುದಿಯಲ್ಲಿರುವ ಫೈನ್ ಟಾಪ್‌ರೆಸ್ಟೋರೆಂಟ್‌ನಲ್ಲಿ ೨೦೨೫ನೇ ಸಾಲಿನ ೧೩ನೇ ವಿಶೇಷ ಸಂಪುಟ ಸಭೆಯನ್ನು ಕರ್ನಾಟಕ ಸರಕಾರ ಆಯೋಜನೆ ಮಾಡಿದೆ. ಸಭೆಯ ಬಳಿಕ ಸುದ್ದಿಗೋಷ್ಟಿಯನ್ನು ಕೂಡ ಏರ್ಪಡಿಸಲಾಗಿದೆ. ಸಭೆಯನ್ನು ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ನಡೆಸಲು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ವಿಭಾಗದ ಜಿಲ್ಲಾಡಳಿತಗಳು ಮುತುವರ್ತಿ ವಹಿಸಿ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿವೆ.
೧೩ನೇ ವಿಶೇಷ ಸಚಿವ ಸಂಪುಟಸಭೆ ನಡೆಯುವ ಕಾರಣವಾಗಿ ನಂದಿಬೆಟ್ಟ ಮತ್ತು ಅದರ ಪರಿಸರ ವನ್ನು ನವವಧುವಿನಂತೆ ಸಿಂಗರಿಸಲಾಗಿದೆ.ಸಭೆಯ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಜೂನ್ ೧೬ರ ಸಂಜೆ ೫ ಗಂಟೆಯಿಂದ ೨೦ರ ಸಂಜೆ ೫ರ ತನಕ ಮೂರುದಿನಗಳ ಕಾಲ ಸಂಪೂರ್ಣವಾಗಿ ನಿಷೇಧ ಹೇರಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: Chikkanayakanahalli (Tumkur) News: ಬಸ್ ಸೌಲಭ್ಯಕ್ಕೆ ಒತ್ತಾಯ
ನಂದಿಬೆಟ್ಟದ ಮೇಲ್ಭಾಗದಲ್ಲಿರುವ ವಸತಿ ಕೊಠಡಿಗಳ ಮುಂಗಡ ಕಾಯ್ದಿರಿಸುವಿಕೆ ಕೂಡ ನಿಲ್ಲಿಸ ಲಾಗಿದೆ. ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಸಹಿತ ೩೩ ಇಲಾಖೆಗಳ ಸಚಿವರು, ಶಾಸಕರು, ಇಲಾಖಾ ಮುಖ್ಯಸ್ಥರು, ಅಧಿಕಾರಿಗಳು ಆಗಮಿಸುತ್ತಾರೆ.ನಂದಿ ಗಿರಿಧಾಮಕ್ಕೆ ಹೋಗಿ ಬರಲು ಒಂದೇ ರಸ್ತೆಯಿರುವ ಕಾರಣ ವಾಹನ ದಟ್ಟಣೆ ಹೆಚ್ಚಿರುತ್ತದೆ.ಜತೆಗೆ ಕಡಿದಾದ ತಿರುವುಗಳಿರುವುದರಿಂದ ಪ್ರವಾಸಿಗರನ್ನು ನಿಯಂತ್ರಿಸುವುದು ಕಷ್ಟಕರವಾದ ಕಾರಣ ಮುಂಜಾಗ್ರತಾ ಕ್ರಮ ಕೈಗೊಂಡು ೩ ದಿನಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಇನ್ನು ಸಚಿವ ಸಂಪುಟ ಸಭೆ ನಡೆಯುವ ದಿನ ಬೆಳಿಗ್ಗೆ ಭೋಗನಂದೀಶ್ವರ ದೇವಾಲಯದಲ್ಲಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟ ಸಹೋಧ್ಯೋಗಿಗಳು ಪೂಜೆ ಸಲ್ಲಿಸಿ ಗುಂಪುಚಿತ್ರ ತೆಗೆಸಿಕೊಂಡು ನಂತರ ಬೆಟ್ಟದ ಮೇಲಿನ ಸಂಪುಟ ಸಭೆಗೆ ಹಾಜರಾಗುತ್ತಾರೆ ಎಂಬುದು ಶಾಸಕ ಪ್ರದೀಪ್ ಈಶ್ವರ್ ಅವರ ಹೇಳಿಕೆಯಾಗಿದೆ. ಇದೇ ಉದ್ದೇಶಕ್ಕೆ ಜೂನ್ ೧೧ ರಂದು ಐಜಿಪಿ ಮತ್ತವರ ತಂಡ ನಂದಿಗ್ರಾಮದ ಭೋಗ ನಂದೀಶ್ವರ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ವಿಶೇಷ ಮುತುವರ್ಜಿವಹಿಸಿ ಸಭೆಯ ಯಶಸ್ಸಿಗೆ ಅಧಿಕಾರಿಗಳೊಟ್ಟಿಗೆ ನಂದಿಬೆಟ್ಟಕ್ಕೆ ಭೇಟಿ ನೀಡಿ ಆಗಬೇಕಾದ ಕಾರ್ಯಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿರುವುದನ್ನು ಕಾಣಬಹುದು.
ಸಭೆಯ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿದ್ದು ಊಟೋಪಚಾರ, ವಸತಿಯ ಬಗ್ಗೆಯೂ ವಿಶೇಷ ಮುತುವರ್ಜಿ ವಹಿಸಲಾಗಿದೆ.ಸಭೆಯಲ್ಲಿ ಎಲ್ಲೂ ಲೋಪಗಳಾಗದಂತೆ ಅಪರಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ನೇತೃತ್ವದಲ್ಲಿ ೧೯ ಸಮಿತಿಗಳನ್ನು ರಚಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಊಟೋಪಚಾರದಲ್ಲಿ ಕೂಡ ಜಿಲ್ಲೆಯ ವಿಶೇಷತೆಯನ್ನು ಎತ್ತಿಹಿಡಿಯುವಂತೆ ವ್ಯವಸ್ಥೆ ಮಾಡಲಾ ಗಿದೆ ಎಂದು ತಿಳಿದು ಬಂದಿದ್ದು, ರಕ್ಷಣೆಯ ವಿಚಾರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹದ್ಧಿನಕಣ್ಣು ಇಡಲಿದೆ.ಬೆಟ್ಟಕ್ಕೆ ಬರುವವರ ಹೋಗುವವರ ಬಗ್ಗೆ ತೀವ್ರ ನಿಗಾ ವಹಿಸಲು ಎಸ್ಪಿ ಕುಶಾಲ್ ಚೌಕ್ಸೆ ತನ್ನ ಅಧೀನ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಾರೆ ೨೦೨೫ನೇ ಸಾಲಿನ ೧೩ನೇ ಸಚಿವ ಸಚಿವ ಸಂಪುಟ ಸಭೆಯು ಯಾವುದೇ ವಿಘ್ನಗಳಿಲ್ಲದೆ ಸುಸೂತ್ರವಾಗಿ ನಡೆಯಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾಪೊಲೀಸ್ ಇಲಾಖೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಟೊಂಕ ಕಟ್ಟಿ ನಿಂತಿದ್ದು ಈ ಮೂಲಕ ವಾದರೂ ಜಿಲ್ಲೆಯ ಬೇಡಿಕೆಗಳಿಗೆ ಅನುಮೋಧನೆ ಪಡಯಲಿ ಎನ್ನುವುದು ಜನತೆಯ ಆಶಯ ವಾಗಿದೆ.