ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇತ್ತೀಚಿಗೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಬಾಲ ಗರ್ಭಿಣಿಯರಗುತ್ತಿ ರುವುದು ಕಂಡುಬಂದಿದೆ, ಇಂತಹ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಬೇಕು ಹಾಗೂ ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ರಕ್ಷಣೆ ಮಾಡುವಂತಹ ಕೆಲಸ ಎಲ್ಲರಿಂದಲೂ ಆಗಬೇಕೆಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ತಿಳಿಸಿದರು.
ಅವರು ಗುರುವಾರ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಕ್ಕಳ ರಕ್ಷಣೆಯ ಕುರಿತಂತೆ "ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸ್ವ-ಸಹಾಯ ಸಂಘಗಳ ಸಂಸ್ಥೆಯ ಜ್ಞಾನ ವಿಕಾಸ ಸಮಿತಿಯ ಮಹಿಳಾ ಸದಸ್ಯರೊಂದಿಗಿನ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವರ್ಷದಲ್ಲಿ ಮಕ್ಕಳ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳಲ್ಲಿ ಇತ್ಯರ್ಥಗೊಂಡ 8 ಪ್ರಕರಣಗಳ ಆರೋಪಿತರಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 4 ಲಕ್ಷ ದಂಡ ವಿಧಿಸಲಾಗಿದೆ. ಆದ ಕಾರಣ ಹದಿಹರೆ ಯದ ಮಕ್ಕಳು ಇಂತಹ ಪ್ರಕರಣಗಳಿಗೆ ಬಲಿಯಾಗದಂತೆ ತಾವು ಹೆಚ್ಚಿನ ಜವಾಬ್ದಾರಿ ವಹಿಸಿ ಕೊಂಡು ಮಕ್ಕಳ ರಕ್ಷಣೆ ಮಾಡುವಲ್ಲಿ ಸ್ವಯಂ ಪ್ರೇರಿತರಾಗಲು ಅಧಿಕಾರಿಗಳಿಗೆ ಸೂಚಿಸಿ ದರು.
ಇದನ್ನೂ ಓದಿ: Chikkaballapur News: ಸಮಗ್ರ ಕೀಟ ನಿರ್ವಹಣೆ ಮೂಲಕ ಬೂದಿ ಹುಳು ಹಾವಳಿ ನಿವಾರಣೆ ಸಾಧ್ಯ : ರಾಧಾಕೃಷ್ಣನ್
ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮಗಳ ಕುರಿತು ಹಾಗೂ ಬಾಲ್ಯ ವಿವಾಹಗಳನ್ನು ತಡೆಗಟ್ಟಲು, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಾವಲು ಸಮಿತಿ ಗಳನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಈಗಾಗಲೇ ರಚನೆ ಮಾಡಿದ್ದು, ಅವುಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ತಾವು ಸಹ ಸದಸ್ಯರಾಗಿ ಹೆಚ್ಚಿನ ತಿಳುವಳಿಕೆಯನ್ನು ಪಡೆದುಕೊಂಡು ತಮ್ಮ ತಮ್ಮ ಗ್ರಾಮಗಳಲ್ಲಿ ಬಾಲ್ಯ ವಿವಾಹಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಏಕಪೋಷ ಕರ ಕುಟುಂಬಗಳಲ್ಲಿನ ಹೆಣ್ಣು ಮಕ್ಕಳು ಬಾಲ್ಯವಿವಾಹಕ್ಕೆ ಒಳಗಾಗದಂತೆ ಮತ್ತು ಅನಾಥ ಮಕ್ಕಳು, ಬಾಲ ಕಾರ್ಮಿಕ, ಭಿಕ್ಷಾಟನೆಯ ಹಾಗೂ ಪರಿತ್ಯಕ್ತ ಮಕ್ಕಳು ಹಾಗೂ ಮಾದಕ ವ್ಯಸನಕ್ಕೊಳಗಾದ ಮಕ್ಕಳು ಕಂಡುಬಂದಲ್ಲಿ 1098 ಮಕ್ಕಳ ಸಹಾಯವಾಣಿಗೆ ಅಥವಾ ಇಲಾಖೆಗೆ ಮಾಹಿತಿಯನ್ನು ನೀಡಿದಲ್ಲಿ ಅಂತಹ ಮಕ್ಕಳಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಪ್ರಾಯೋಜಕತ್ವ ಯೋಜನೆಯಡಿ ತಿಂಗಳಿಗೆ 4000/- ರೂ.ಗಳಂತೆ ಪ್ರೋತ್ಸಾಹಧನ ನೀಡಲಾಗುವುದು. ಪೋಷಕರಿಗೆ ಬೇಡವಾದ ಮಕ್ಕಳನ್ನು ಮಕ್ಕಳಿಲ್ಲದ ದಂಪತಿಗಳಿಗೆ ದತ್ತು ಕಾರ್ಯಕ್ರಮದಡಿ ಕಾನೂನುಬದ್ದವಾಗಿ ಮಗುವನ್ನು ದತ್ತು ಕೊಡುವ ವ್ಯವಸ್ಥೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮಾಡುತಿದ್ದು, ಕಳೆದ ೨ ವರ್ಷಗಳಲ್ಲಿ ೧೬ ಮಕ್ಕಳನ್ನು ವಿವಿಧ ಜಿಲ್ಲೆ, ರಾಜ್ಯ ಹಾಗೂ ವಿದೇಶದ ದಂಪತಿಗಳಿಗೆ ದತ್ತು ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್.ವೆಂಕಟೇಶರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೆಂಕಟೇಗೌಡ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿ.ನೌತಾಜ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸ್ವ-ಸಹಾಯ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.