ಚಿಕ್ಕಬಳ್ಳಾಪುರ: ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ದೇಶದಲ್ಲಿ ಎಲ್ಲೆಲ್ಲಿ ಆಡಳಿತ ನಡೆಸುತ್ತಿದೆಯೋ ಅಲ್ಲೆಲ್ಲಾ ಓಟ್ ಚೋರಿ ಮೂಲಕವೇ ಅಧಿಕಾರಕ್ಕೆ ಬಂದಿರುವುದು ಸ್ಪಷ್ಟವಾಗಿದೆ. ಇದನ್ನು ನಮ್ಮ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ದೇಶದ ಜನತೆಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ ಸಹೈೋಗದಲ್ಲಿ ಆಯೋಜಿಸಿದ್ದ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಕಾರ್ಯಕ್ರಮದ ನಂತರ ಮಾಧ್ಯಮದೊಂದಿಗೆ ಸಚಿವರು ಮಾತನಾಡಿದರು.
ಯಾವಾಗ ಚುನಾವಣೆಗಳು ಬರುತ್ತವೆಯೋ ಆಗೆಲ್ಲಾ ಬಿಜೆಪಿಯವರು ಮುಸಲ್ಮಾನ, ಪಾಕಿಸ್ತಾನ, ಹಿಂದು ಇಂತವೇ ಚರ್ಚೆ ಮಾಡುತ್ತಾರೆ ವಿನಾ, ಅವರಿಗೆ ದೇಶದ ಅಭಿವೃದ್ದಿ ಬೇಕಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಮೋಸದಿಂದ, ವಿರೋಧ ಪಕ್ಷದವರು ಈ ಬಗ್ಗೆ ಪ್ರಶ್ನಿಸಿದರೆ ಉತ್ತರ ಹೇಳಲು ಆಗದೆ, ಇಂತವೆಲ್ಲಾ ಚರ್ಚೆಗೆ ತರುತ್ತಾರೆ. ಇವರು ವೋಟ್ ಚೋರಿ ಮಾಡಿಲ್ಲವೇನ್ರಿ? ನೂರಕ್ಕೆ ನೂರು ಬಿಜೆಪಿ ಓಟ್ ಚೋರಿ ಮಾಡಿದೆ. ಒಡಿಶಾ, ಮಹಾರಾಷ್ಟ್ರ, ಹರಿಯಾಣ ಚುನಾವಣೆಯಲ್ಲಿ, ಪಾರ್ಲಿಮೆಂಟ್ ಚುನಾವಣೆಯಲ್ಲಿ 78 ಸೀಟ್ ಫ್ರಾಡ್ ಆಗಿದೆ. ನಾವು ದಾಖಲೆ ಕೊಟ್ಟು ಆರೋಪ ಮಾಡುತ್ತಿದ್ದೇವೆ. ಇಡೀ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಾಳಿಗೆ ತೂರಿ, ಅರಾಜಕ ಆಡಳಿತ ನಡೆಸುತ್ತಿದ್ದಾರೆ ಅಷ್ಟೆ ಎಂದು ದೂರಿದರು.
ಅಶೋಕ್ ಯಾರ‍್ರೀ...?
ಮುಖ್ಯಮಂತ್ರಿಗಳನ್ನು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಲು ವಿರೋಧ ಪಕ್ಷದ ನಾಯಕ ಅಶೋಕ್ ಯಾರ‍್ರೀ? ಬಿಜೆಪಿ ಅವರಿಗೆ ಮುಸಲ್ಮಾನ್, ಪಾಕಿಸ್ತಾನ್ ಈ ಎರಡು ಶಬ್ದಗಳನ್ನು ಬಿಟ್ಟರೆ ಬೇರೆ ಆಯಾಮಗಳೇ ಗೊತ್ತಿಲ್ಲ. ಅಡ್ವಾಣಿ, ಮೋದಿ ಅವರಂತೆ ಪಾಕಿಸ್ಥಾನಕ್ಕೆ ಹೋಗಿ ಕೇಕ್ ತಿಂದು ಬದವರು ನಾವಲ್ಲ. ಸಂವಿಧಾನದ ಪ್ರಕಾರ ಈ ದೇಶ ಎಲ್ಲರಿಗೂ ಸೇರಿದೆ. ಇಲ್ಲಿ ವಾಸಿಸಲು ಹಿಂದುಗಳಿಗೆ ಹಕ್ಕಿರುವಂತೆ ಬುದ್ಧ, ಸಿಖ್, ಗೋಸಾಯಿ, ಮುಸಲ್ಮಾನ, ದಲಿತ, ಅಹಿಂದ ಸೇರಿ ಎಲ್ಲರಿಗೂ ಇದೆ ಎಂದು ಹರಿಹಾಯ್ದರು.
ಓಲೈಕೆ ಮಾಡಿಲ್ಲ
ಬಿಜೆಪಿ ಬಾಯಿಬಿಟ್ಟರೆ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಹೇಳುತ್ತಿದೆ. ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಂಡರೆ ಓಲೈಕೆ ಹೇಗಾಗುತ್ತದೆ. ಮದ್ದೂರಿನಲ್ಲಿ ನಡೆದಿರುವ ಘಟನೆಯ ಹಿಂದೆ ಬಿಜೆಪಿ ಜೆಡಿಎಸ್ ಕೈವಾಡವಿದೆ. ಸುಖಾಸುಮ್ಮನೆ ನಮ್ಮ ಸರಕಾರದ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಕಾಂಗ್ರೆಸ್ ಎಲ್ಲ ವರ್ಗಗಳನ್ನೂ ಸಮಾನವಾಗಿ ಕಾಣುವ ಪಕ್ಷವಾಗಿದೆ. ಮುಸ್ಲಿಂ ಓಲೈಕೆ ಎನ್ನುವುದು ಬಿಟ್ಟರೆ ಇವರು ಬೇರೇನು ಮಾಡುತ್ತಿದ್ದಾರೆ ಮಾಧ್ಯಮದವರು ನೀವೇ ಹೇಳಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಜರಿಯುವುದು ಚಾಳಿ
ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿ ಎನ್ನುವ ಬಿಜೆಪಿ ಪಕ್ಷದವರು ಹಿಂದುಗಳಿಗಾಗಿ ಏನು ಮಾಡಿದ್ದಾರೆ ಹೇಳಿ ನೋಡೋಣ? ಎಂದು ಪ್ರಶ್ನಿಸಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗಲೆಲ್ಲಾ ದೇಶವನ್ನು ಅಭಿವೃದ್ಧಿ ಹಾದಿಯಲ್ಲಿ ತೆಗೆದುಕೊಂಡು ಹೋಗಿದೆ. ಇವರ ಅಧಿಕಾರದಲ್ಲಿ ಎಷ್ಟು ಡ್ಯಾಂ ಕಟ್ಟಿದ್ದಾರೆ, ಗುಡಿ ಗುಂಡಾರ ಕಟ್ಟಿದ್ದಾರೆ ತೋರಿಸಲಿ ಎಂದು ಸವಾಲು ಹಾಕಿದರು.
ದೇಶಕ್ಕೆ ದೇಶದ ಅಭಿವೃದ್ಧಿಗೆ ಅತಿಹೆಚ್ಚು ದಾನ ನೀಡಿದ ಅಜೀಂ ಪ್ರೇಮ್‌ಜಿ ಯಾವ ಧರ್ಮದವರು? 2 ಲಕ್ಷ ಕೋಟಿ ಹಣ ನೀಡಿರುವ ಉದ್ಧಿಮೆದಾರ aವರು. ಮಧ್ಯ ಪ್ರಾಚ್ಯ ಭಾಗದಲ್ಲಿ ಭಾರತದ ಸುಮಾರು 50 ಲಕ್ಷ ಮಂದಿ ಇದ್ದಾರೆ. ಅವರನ್ನು ವಾಪಸ್ ಕರೆಸುತ್ತಾರಾ? 50 ಬಿಲಿಯನ್ ಡಾಲರ್ ಅಲ್ಲಿಂದ ದೇಶಕ್ಕೆ ಬರುತ್ತದೆ. ಅರಬ್ ದೇಶಗಳಿಂದ ತೈಲ ಸರಬರಾಜು ಆಗುತ್ತಿದೆಯಲ್ಲಾ? ವಸ್ತುಸ್ಥಿತಿ ಹೀಗಿದ್ದರೂ ಮುಸ್ಲಿಂ ಅಂಗಡಿಗಳಿಂದ ಏನೂ ಖರೀದಿಸಬೇಡಿ ಎಂದು ಹೇಳಿದರೆ ಎಲ್ಲಾ ಸರಿಹೋಗುತ್ತಾ? ಇದೆಲ್ಲಾ ಬೇಡ ಪಹಲ್ಗಾಮ್ ಬಗ್ಗೆ ಅಶೋಕ್ ಅವರು ಚರ್ಚೆಗೆ ಬರುತ್ತಾರಾ? ಕೇಳಿ ನಾನು ಸಿದ್ಧ. ಅಲ್ಲಿ ನೆತ್ತರು ಹರಿಸಿದ ಹಂತಕರನ್ನು ಯಾಕೆ ಇಲ್ಲಿತನಕ ಬಂಧಿಸಿಲ್ಲ. ಉತ್ತರ ಹೇಳುತ್ತಾರಾ? ಎಲ್ಲೋ ಏನೋ ಸಣ್ಣ ಘಟನೆ ಆದರೆ ಸಾಕು, ಹಿಂದೂ -ಮುಸ್ಲಿಂ ಜಗಳದಂತೆ ಬಿಂಬಿಸಿಬಿಡುವುದು ಬಿಟ್ಟು ದೇಶವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಎಂದು ಸವಾಲು ಹಾಕಿದರು.
ಬಿಜೆಪಿಯವರಿಗೆ ಹಿಂದುಗಳ ಮೇಲೆ ನಿಜವಾದ ಕಾಳಜಿ ಕಳಕಳಿ ಇದೆ ಎನ್ನುವುದಾದರೆ ಜಾತಿ ಪದ್ಧತಿ ಹೋಗಲಾಡಿಸಿ, ಅಂತರ್ಜಾತಿ ಮದುವೆಗಳಿಗೆ ಪ್ರೋತ್ಸಾಹ ನೀಡಿ, ಶ್ರೀಮಂತರ ಆಸ್ತಿಯನ್ನು ಬಡವರಿಗೆ ಹಂಚಿ, ಸಣ್ಣ ಸಣ್ಣ ಹಿಂದು ಸಮಾಜಗಳನ್ನು ಒಳಗೊಳ್ಳುವ ಕೆಲಸ ಮಾಡಲಿ ಎಂದು ಸವಾಲು ಹಾಕಿದರು.
ಈ ಸುದ್ದಿಯನ್ನೂ ಓದಿ | Upper Krishna Project Stage-III: ಯುಕೆಪಿ ಹಂತ 3; ಸಚಿವ ಸಂಪುಟದಲ್ಲಿ ಭೂಸ್ವಾಧೀನ ದರ ನಿಗದಿ ಎಂದ ಡಿಕೆಶಿ
ನೇಪಾಳದಲ್ಲಿರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಕ್ರಮ
ನೇಪಾಳದಲ್ಲಿ ಕರ್ನಾಟಕದ ಮಂದಿ ಎಷ್ಟಿದ್ದಾರೆ ಎಂಬ ಬಗ್ಗೆ ಸರಿಯಾದ ಮಾಹಿತಿ ನನ್ನಬಳಿಯಿಲ್ಲ, ಎಲ್ಲವನ್ನೂ ಖಚಿತಪಡಿಸಿಕೊಂಡು ಕನ್ನಡಿಗರ ರಕ್ಷಣೆಗೆ ಸರಕಾರ ಮುಂದಾಗಲಿದೆ ಎಂದು ಸಚಿವ ಲಾಡ್ ತಿಳಿಸಿದರು.
ಈ ವೇಳೆ ಶಾಸಕ ಪ್ರದೀಪ್ ಈಶ್ವರ್, ಕುಡಾ ಅಧ್ಯಕ್ಷ ಕೇಶವರೆಡ್ಡಿ, ಕೆ.ಎಂ. ಮುನೇಗೌಡ ಮತ್ತಿತರರು ಇದ್ದರು.