ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿಗಾಗಿ ಮಾಡು ಇಲ್ಲವೇ ಮಡಿ ಹೋರಾಟವಿಲ್ಲದೆ ಅನ್ಯ ಮಾರ್ಗ ವಿಲ್ಲ. ನಮ್ಮ ಹೋರಾಟಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಲುಪುವ ರೀತಿಯಲ್ಲಿ ಕಟ್ಟಿ ಬೆಳಸಬೇಕು' ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ( Retired Supreme Court Justice V. Gopalagowda) ತಿಳಿಸಿದರು.
ನಗರದ ಕೆಇಬಿ ಸಮುದಾಯಭವನದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಾಗೂ ಯುವಶಕ್ತಿಯು ಹಮ್ಮಿಕೊಂಡಿದ್ದ, 'ಜಲಾಗ್ರಹ' ಜಂಟಿ ಕ್ರಿಯಾ ಸಮಿತಿಗೆ ಚಾಲನೆ ಸಮಾವೇಶ ಉಧ್ಘಾಟಿಸಿ ಮಾತನಾಡಿ, ನೀರಾವರಿ ವಿಚಾರವಾಗಿ ಬಯಲು ಸೀಮೆಯ ಜಿಲ್ಲೆಗಳಲ್ಲಿ ಮೂರು ದಶಕಗಳಿಂದ ಹೋರಾಟ ನಡೆದಿದೆ. ಆದರೆ ಇನ್ನು ಮುಂದೆ ಮತ್ತೊಂದು ರೀತಿಯ ಬೇರೆ ಮಾರ್ಗದ ಹೋರಾಟವು ನಡೆಯಲಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಸುವೆ. ರೈತರು, ಕೃಷಿ ಕಾರ್ಮಿಕರು,ಕನ್ನಡ ಪರ ಹೋರಾಟಗಾರರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರೂ ಈ ಹೋರಾಟದಲ್ಲಿ ಜೊತೆಯಾಗಬೇಕು ಎಂದರು.
ಇದನ್ನೂ ಓದಿ: RSS Chief Mohan Bhagwat: ಆಯುಧ ಪೂಜೆ ನೆರವೇರಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಕಳೆದ ಮೂರು ದಶಕಗಳಿಂದ ನಾನಾ ರೀತಿಯ ಹೋರಾಟ ಮಾಡಿದ್ದೇವೆ ಇದರಿಂದ ಬೆಂಗಳೂರಿನ ತ್ಯಾಜ್ಯ ನೀರು, ಎತ್ತಿನ ಹೊಳೆ ಯೋಜನೆಯ ಖಾಲಿ ಪೈಪುಗಳ ಪ್ರದರ್ಶನವಾಗುತ್ತಿದೆ.ಪೈಪುಗಳ ಮೂಲಕ ಬಂದ ಸರ್ಕಾರಗಳ ಜನ ಪ್ರತಿನಿಧಿಗಳು ಹಣ ಹೊಳೆ ಹರಿಸಿಕೊಳ್ಳುತಿದ್ದಾರೆ. ಇಂತಹ ದಪ್ಪ ಚರ್ಮದ ಸರ್ಕಾರಗಳನ್ನ ಬಡಿದೆಬ್ಬಿಸಲು ನಮ್ಮ ಹೋರಾಟದ ಹಾದಿಯನ್ನ ಬದಲಾಯಿಸಬೇಕು ಕಣ್ಣು ಕಿವಿ ಮುಚ್ವಿದ ಸರ್ಕಾರಗಳಿಗೆ ಬಿಸಿಮುಟ್ಟಿಸಲು ನಮ್ಮ ಮುಂದಿನ ದಾರಿ ಕ್ರಾಂತಿ ಕಾರಿ ಹೋರಾಟದ ಮೂಲಕ ಸಂಘರ್ಷದ ಹಾದಿ ಹಿಡಿಯಬೇಕಾಗುತ್ತದೆ. ಕೆ.ಸಿ ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ನೀರು ಮೂರು ಹಂತದಲ್ಲಿ ಶುದ್ದೀಕರಣ ಆಗಬೇಕು. ಶುದ್ದೀಕರಣವಾಗದ ಕಾರಣ ನಾನಾ ಸಮಸ್ಯೆಗಳು ಆವರಿಸಿವೆ ಎಂದು ಹೇಳಿದರು.
ದೇವನಹಳ್ಳಿ ಸುತ್ತ ರಾಜಕಾರಣಿಗಳ ಎಷ್ಟು ಎಕರೆ ಜಮೀನು ಇದೆ ಎನ್ನುವ ಮಾಹಿತಿ ಇದೆ. ಪಿಡಿಒ ಗಳು, ತಹಶೀಲ್ದಾರರು, ಉಪನೋಂದಣಾಧಿಕಾರಿಗಳು ರೈತರನ್ನು ಶೋಷಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕೈಗಾರಿಕೆಗಳು ರೈತರಿಗೆ ಅನ್ನ, ಶಿಕ್ಷಣ ಕೊಡುತ್ತದೆಯೇ? ದೇವನಹಳ್ಳಿ ತಾಲ್ಲೂಕಿನ ಚನ್ನರಾಯ ಪಟ್ಟಣ ಹೋಬಳಿಯಲ್ಲಿ ಕೈಗಾರಿಕೆಗೆ ಭೂಮಿ ಸ್ವಾಧೀನ ವಿರೋಧಿಸಿ ರೈತರು ಮೂರು ವರ್ಷ ಹೋರಾಟ ನಡೆಸಿದರು. ರೈತ ನಾಯಕರ ಸಮಕ್ಷಮದಲ್ಲಿಯೇ ಈ ಅಧಿಸೂಚನೆ ವಾಪಸ್ ಪಡೆಯುತ್ತೇವೆ ಎಂದು ಹೇಳಿ ಸರ್ಕಾರ ಎರಡು ತಿಂಗಳಾಯಿತು. ಆದರೂ ಅಧಿಸೂಚನೆ ವಾಪಸ್ ಪಡೆದಿಲ್ಲ. ನಾಚಿಕೆ ಆಗಬೇಕು ಈ ಸರ್ಕಾರಕ್ಕೆ. ಬಂಡವಾಳಶಾಹಿಗಳಿಗೆ, ರಿಯಲ್ ಎಸ್ಟೇಟ್‌ನವರಿಗೆ ಗುಲಾಮಗಿರಿ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಚೀನಾದಲ್ಲಿ ಒಬ್ಬ ಭ್ರಷ್ಟ ಕೃಷಿ ಸಚಿವನಿಗೆ ಸಂಬAಧಿಸಿದ ಪ್ರಕರಣದಲ್ಲಿ ಆರೇ ತಿಂಗಳಲ್ಲಿ ವಿಚಾರಣೆ ನಡೆದು ಜೀವಾವಧಿ ಶಿಕ್ಷೆ ವಿಧಿಸುವರು. ಆದರೆ ನಮ್ಮಲ್ಲಿ ಮಾಜಿ ಮುಖ್ಯಮಂತ್ರಿ ವಿಚಾರಣೆಗಾಗಿ ವರ್ಷಗಳೇ ಕಳೆದರೂ ನ್ಯಾಯಾಲಯಕ್ಕೆ ಹೋಗದ ಪರಿಸ್ಥಿತಿ ಇದೆ. ಸಚಿವರು, ತಹಶೀಲ್ದಾರರು, ನೋಂದಣಾಧಿಕಾರಿ, ಉಪವಿಭಾಗಾಧಿಕಾರಿ ಸೇರಿದಂತೆ ನೌಕರಶಾಹಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ' ಎಂದರು.
ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, 'ನೀರಿನ ರಕ್ಷಣೆ, ಬಳಕೆಯ ಬಗ್ಗೆ ಪ್ರಜ್ಞೆ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ನಾವು ಹೋರಾಟದ ಅಂಶಗಳನ್ನು ಕಳೆದುಕೊಳ್ಳುತ್ತೇವೆ. ಈ ಸಭೆಯು ಒಂದು ಸಂಗಮ. ಹೋರಾಟಕ್ಕೆ ಅಗತ್ಯವಾದ ಯುವಶಕ್ತಿಯನ್ನು ಎಲ್ಲರೂ ಸಂಘಟಿಸಬೇಕು'. “ನಮ್ಮ ಕೆರೆ, ನದಿಗಳು ಬತ್ತಿರಬಹುದು. ಆದರೆ ಹೋರಾಟದ ಪ್ರಜ್ಞೆ ಬತ್ತಿಲ್ಲ. ಅದನ್ನು ಮತ್ತೆ ಪುನಶ್ಚತನಗೊಳಿಸಬೇಕು. ಕಳೆದ ೫೦ ವರ್ಷಗಳ ಹೋರಾಟದಲ್ಲಿ ಸಾಕಷ್ಟು ಅನುಭವ ಪಡೆದವರು ಇಲ್ಲಿ ಇದ್ದೀರಿ. ಎಲ್ಲರೂ ಸೇರಿ ಈ ಜಿಲ್ಲೆಗಳ ನೀರಾವರಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯೋಣ' ಎಂದು ಆಶಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಮಾತನಾಡಿ, ಬಯಲು ಸೀಮೆಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಬರಗಾಲಕ್ಕೆ ತುತ್ತಾಗಿ ಶಾಶ್ವತ ನೀರಾವರಿ ಇಲ್ಲದೆ ಸಾವಿರಾರು ಅಡಿ ಆಳಕ್ಕೆ ಕೊಳವೆ ಬಾವಿ ಕೊರೆದು ಅದರಲ್ಲಿ ಬರುವ ಅಂತರ್ಜಲದಲ್ಲಿ ಯುರೇನಿಯಂ,ನೈಟ್ರೇಟ್ ಅಂಶ ಉಳ್ಳ ನೀರನ್ನ ಬಳಸಿ ಜೀವವಿರುವ ಶವಗಳಂತೆ ಬದುಕುತಿದ್ದೇವೆ. 'ಬೇರೆ ಬೇರೆಯಾಗಿ ಹೋರಾಟ ಮಾಡಿದರೆ ಖಂಡಿತ ನಾವು ನೀರಿನ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ. ಮೂರು ಜಿಲ್ಲೆಗಳ ಜನರು ಪೆನ್ನಾರು ನದಿಕೊಳ್ಳದ ವ್ಯಾಪ್ತಿಗೆ ಒಳಪಡುತ್ತೇವೆ. ಇಲ್ಲಿಂದ ನಮಗೆ ನೀರು ಕೊಡಬೇಕು ಎನ್ನುವ ಆಲೋಚನೆ ಯನ್ನು ಯಾವುದೇ ಸರ್ಕಾರಗಳು ಮಾಡಿಲ್ಲ' ಎಂದು ಕಿಡಿಕಾರಿದರು.
ಈ ಸಂಧರ್ಭದಲ್ಲಿ ಸಾಮಾಜಿಕ ಹೋರಾಟಗಾರ ಎಚ್.ವಿ.ವಾಸು,ಕೃಷಿ ವಿಜ್ಞಾನಿ ವೆಂಕಟರೆಡ್ಡಿ, ಸಿಪಿಎಂನ ಅನಿಲ್ ಕುಮಾರ್, ಆವುಲಪ್ಪ, ಕಾಂಮ್ರೇಡ್ ಲಕ್ಷ್ಮಯ್ಯ, ಹೋರಾಟಗಾರರಾದ ಸುಲೋ ಚನಾ, ಎಂ.ಆರ್.ಲಕ್ಷ್ಮಿನಾರಾಯಣ್, ಹೊಳಲಿ ಪ್ರಕಾಶ್, ಅಬ್ಬಣಿ ಶಿವಪ್ಪ,ಬಾಗೇಪಲ್ಲಿ ರಾಜ್ಯ ರೈತಸಂಘದ ಅಧ್ಯಕ್ಷ ಜಿಜಿ ಹಳ್ಳಿ ನಾರಾಯಣಸ್ವಾಮಿ, ರೈತ ಜನಸೇನಾ ಸಂಸ್ಥಾಪಕಿ ಸಿ.ಎನ್.ಸುಷ್ಮಾ ಶ್ರೀನಿವಾಸ್, ನಿರಾವರಿ ಹೋರಾಟಗಾರರಾದ ಮಳ್ಳೂರು ಹರೀಶ್, ರಾಮೇಗೌಡ, ಲೋಕೇಶ್, ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಮುನಿವೆಂಕಟರೆಡ್ಡಿ ಮತ್ತಿತರರು ಇದ್ದರು.