ಬೆಂಗಳೂರು : ರಾಜ್ಯದಲ್ಲಿ ಶಿಕ್ಷಕರನ್ನು ಬಳಸಿಕೊಂಡು ಮತ್ತೊಮ್ಮೆ ಜಾತಿ ಗಣತಿ (Caste census) ನಡೆಸಲು ಸರ್ಕಾರ (Karnataka gvernment) ತೀರ್ಮಾನಿಸಿದೆ ಎಂದು ಸಿಎಂ ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ (CM SIddaramaiah) ಅವರು ಈ ಕುರಿತು ರಾಜಧಾನಿಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದರು. 1.75 ಲಕ್ಷ ಮಂದಿ ಶಿಕ್ಷಕರನ್ನು ಬಳಸಿಕೊಂಡು ಸೆ.22ರಿಂದ ಅ.7ರವರೆಗೆ ಹೊಸ ಜಾತಿಗಣತಿ ನಡೆಸಲಾಗುತ್ತಿದೆ ಎಂದವರು ತಿಳಿಸಿದರು.
10 ವರ್ಷದ ಹಿಂದೆ ಜಾತಿಗಣತಿ ನಡೆಸಲಾಗಿತ್ತು. ಈಗ ಮತ್ತೆ ಜಾತಿಗಣತಿ ನಡೆಸಲಾಗುತ್ತಿದೆ. ಅಸಮಾನತೆ ಉಳಿಯಲು ನಾವು ಬಿಡಬಾರದು. ಹೀಗಾಗಿ ಸಾಮಾಜಿಕ, ಶೈಕ್ಷಣಿಕ ವಲಯದಲ್ಲಿ ಸಮಾನ ಅವಕಾಶ ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಎಲ್ಲಾ ಜನರಲ್ಲೂ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ ಎಂದರು.
ಡಿಸೆಂಬರ್ ಒಳಗಾಗಿ ಸಮೀಕ್ಷೆ ಪೂರ್ಣಗೊಳ್ಳಲಿದೆ. 1.75 ಲಕ್ಷ ಮಂದಿ ಶಿಕ್ಷಕರನ್ನು ಈ ಸಮೀಕ್ಷೆಗೆ ಬಳಸಿಕೊಳ್ಳಲಾಗುತ್ತಿದೆ. ಒಂದು ವೇಳೆ ಸಮೀಕ್ಷೆ ಸಮಯದಲ್ಲಿ ಮನೆಯಲ್ಲಿ ಇಲ್ಲದಿದ್ದರೆ ಆಯೋಗದ ಸಹಾಯವಾಣಿ 8050770004 ನ್ನು ಸಂಪರ್ಕಿಸಿ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಆಯೋಗದ ವೆಬ್‌ಸೈಟ್ ವಿಳಾಸ www.ksdckarnatakagovt.in ಮೂಲಕವೂ ಸಹ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
ಶಿಕ್ಷಕರು ಸಮೀಕ್ಷೆ ಮಾಡುವ ಮೊದಲೇ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆಯ ಅರ್ಜಿ ಫಾರಂ ನೀಡುತ್ತಾರೆ. ಬೆಸ್ಕಾಂ ಸಿಬ್ಬಂದಿ ಮನೆಮನೆಗೆ ಸ್ಟಿಕರ್ ಅಂಟಿಸುತ್ತಾರೆ. ಮಾದರಿ ಸಮೀಕ್ಷೆಯ ಅರ್ಜಿ ಮೊದಲೇ ದೊರಕುವುದರಿಂದ ಸಮೀಕ್ಷೆಯ ಪ್ರಶ್ನೆಗಳಿಗೆ ಉತ್ತರ ನೀಡಲು ಅನುಕೂಲವಾಗಲಿದೆ. ಸುಮಾರು 2 ಕೋಟಿ ಮನೆಗಳಿಗೆ ಸಮೀಕ್ಷಾ ಸಿಬ್ಬಂದಿ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.
ಕಾಂತರಾಜು ವರದಿಯನ್ನು ನಾವು ಒಪ್ಪಿಕೊಂಡಿಲ್ಲ. ಬಳಿಕ ಜಯಪ್ರಕಾಶ್ ಹೆಗಡೆ ಹಿಂದುಳಿದ ಆಯೋಗದ ಅಧ್ಯಕ್ಷರಾದರು. 2015 ರಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಆಗಿತ್ತು. 10 ವರ್ಷ ಆಗಿದೆ ಅಂತ ಹೊಸ ಸಮೀಕ್ಷೆಗೆ ತೀರ್ಮಾನ ಆಗಿದೆ. ಸಮೀಕ್ಷೆ ಜವಾಬ್ದಾರಿ ಹಿಂದುಳಿದ ಆಯೋಗಕ್ಕೆ ವಹಿಸಿದ್ದೇನೆ. ಜಾತಿ, ಧರ್ಮ ಹಾಗೂ ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಗೊತ್ತಾಗಬೇಕು. ಅವರ ಹಿನ್ನೆಲೆ ಗೊತ್ತಾದಾಗ ವಿಶೇಷ ಕಾರ್ಯಕ್ರಮ ರೂಪಿಸಬಹುದು. ಹಿಂದೆ ಕಾಂತರಾಜು ಅಧ್ಯಕ್ಷತೆಯಲ್ಲಿ ಸಮೀಕ್ಷೆ ಮಾಡಲು ಸೂಚಿಸಿದ್ದೆ. ಆ ವರದಿ ಹಳೆಯದು ಅಂತ ಪರಿಗಣನೆ ಮಾಡಲಿಲ್ಲ. ಈಗ ಹೊಸದಾಗಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಸೂಚಿಸಿದ್ದೇನೆ ಎಂದರು.
7 ಕೋಟಿ ಜನರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಸೂಚಿಸಿದ್ದೇನೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಮಧುಸೂದನ್ ನಾಯಕ ಅಧ್ಯಕ್ಷತೆಯಲ್ಲಿ ಸಮೀಕ್ಷೆ ನಡೆಯಲಿದೆ. ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ದಸರಾ ರಜೆ ಇದೆ. ಶಿಕ್ಷಕರಿಗೆ ಸಮೀಕ್ಷೆ ಜವಾಬ್ದಾರಿ ನೀಡಲಾಗಿದೆ. ಸರ್ಕಾರಿ ಶಾಲಾ ಶಿಕ್ಷಕರನ್ನು ಸರ್ವೆಗೆ ಬಳಕೆ ಮಾಡಲಾಗುತ್ತದೆ 1,75,000 ಉಪಾಧ್ಯಾಯರನ್ನು ನೇಮಕ ಮಾಡುತ್ತಿದ್ದೇವೆ. ಸರ್ವೆ ಮಾಡುವವರಿಗೆ ವೇತನ ನೀಡಲು 325 ಕೋಟಿ ಖರ್ಚು ಮಾಡಲಾಗುತ್ತಿದೆ. ತಾತ್ಕಾಲಿಕವಾಗಿ 420 ಕೋಟಿ ರೂಪಾಯಿ ಕೊಡುವುದಾಗಿ ಹೇಳಿದ್ದೇನೆ. ಡಿಸೆಂಬರ್ ಒಳಗೆ ಸಮೀಕ್ಷೆ ವರದಿ ನೀಡುವುದಾಗಿ ಹೇಳಿದ್ದಾರೆ ಎಂದರು.
ವೈಜ್ಞಾನಿಕವಾಗಿ ಜಾತಿಗಣತಿ ಆಗಬೇಕು. ಯಾರನ್ನೂ ತಪ್ಪಿಸಬಾರದು. ಎಲ್ಲರೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಸಮೀಕ್ಷೆ ವೇಳೆ 60 ಪ್ರಶ್ನೆಗಳನ್ನು ಕೇಳುತ್ತಾರೆ. ಈ ಹಿಂದೆ ಕಾಂತರಾಜ್ ವರದಿ ಸಮೀಕ್ಷೆಯ ವೇಳೆ 54 ಪ್ರಶ್ನೆಗಳನ್ನು ಕೇಳಿತ್ತು. ಉದ್ಯೋಗ, ಧರ್ಮ, ಶಿಕ್ಷಣ, ಜಮೀನು ಸೇರಿದಂತೆ ಅನೇಕ ಪ್ರಶ್ನೆ ಕೇಳುತ್ತಾರೆ. ಅರವತ್ತು ಪ್ರಶ್ನೆಗಳಿಗೂ ಜನರು ಉತ್ತರ ಕೊಡಬೇಕು. ಆ ವೇಳೆ ಮನೆಯಲ್ಲಿ ಇಲ್ಲದಿದ್ದರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು. 8050770004- ಈ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ: Caste Census Report: ಮುಸ್ಲಿಮರಲ್ಲಿ 99 ಜಾತಿ, ಕ್ರೈಸ್ತರಲ್ಲಿ 57 ಜಾತಿ: ಜಾತಿ ಗಣತಿ ವರದಿಯಲ್ಲಿ ಬಯಲು