Dharmasthala Case: ಬಂಗ್ಲೆಗುಡ್ಡದಲ್ಲಿ ಸಿಕ್ಕ ಮಾನವ ಅವಶೇಷ ಯಾರದ್ದು? ಎಸ್‌ಐಟಿ ತಂಡ ಹೇಳಿದ್ದೇನು?
ಧರ್ಮಸ್ಥಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ವಿಶೇಷ ತನಿಖಾ ತಂಡ ಇದೀಗ ಬಂಗ್ಲೆಗುಡ್ಡೆಯಲ್ಲಿ ಶೋಧ ಕಾರ್ಯ ನಡೆಸಿದೆ. ಸೌಜನ್ಯಾ ಮಾವ ವಿಠ್ಠಲ್ ಗೌಡ ಅವರ ಹೇಳಿಕೆ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು 13 ಎಕ್ರೆ ವ್ಯಾಪ್ತಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ತನಿಖೆ ನಡೆಸಿದ್ದಾರೆ. ಈ ವೇಳೆ ಕೆಲವು ಮಾನವ ಶರೀರದ ಅವಶೇಷ, ವಿಷದ ಬಾಟಲ್, ಹಗ್ಗದ ತುಂಡು ಇತ್ಯಾದಿ ಪತ್ತೆಯಾಗಿದೆ.

-

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣ (Dharmasthala Case)ಕ್ಕೆ ದಿನಕ್ಕೊಂದು ತಿರುವು ಲಭಿಸುತ್ತಿದ್ದು, ವಿಶೇಷ ತನಿಖಾ ತಂಡ (SIT) ಇದೀಗ ಬಂಗ್ಲೆಗುಡ್ಡೆಯಲ್ಲಿ ಶೋಧ ಕಾರ್ಯ ನಡೆಸಿದೆ. ಸೌಜನ್ಯಾ ಮಾವ ವಿಠ್ಠಲ್ ಗೌಡ ಅವರ ಹೇಳಿಕೆ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು 13 ಎಕ್ರೆ ವ್ಯಾಪ್ತಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ತನಿಖೆ ನಡೆಸಿದ್ದಾರೆ. ಈ ವೇಳೆ ಕೆಲವು ಮಾನವ ಶರೀರದ ಅವಶೇಷ, ವಿಷದ ಬಾಟಲ್, ಹಗ್ಗದ ತುಂಡು ಇತ್ಯಾದಿ ಪತ್ತೆಯಾಗಿದೆ. ಇದೀಗ ವಶಪಡಿಸಿಕೊಳ್ಳಲಾದ ಮಾನವ ಅವಶೇಷದ ಹಿನ್ನೆಲೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಮಧ್ಯೆ ಎಸ್‌ಐಟಿ ಮೂಲಗಳು, ಬಂಗ್ಲೆಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ಮಹಜರು ಸಮಯದಲ್ಲಿ ಪತ್ತೆಯಾಗಿದ್ದ ತಲೆಬುರುಡೆಗಳು ಪುರುಷರದ್ದಾಗಿದ್ದು, ಅವು ಇತ್ತೀಚಿನವುಗಳಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿವೆ.
ಬಂಗ್ಲೆಗುಡ್ಡದಲ್ಲಿ ಪತ್ತೆಯಾಗಿರುವ 5 ತಲೆಬುರುಡೆಗಳು ಮತ್ತು ಇತರ ಅಸ್ಥಿಪಂಜರದ ಅವಶೇಷಗಳು ಇತ್ತೀಚಿನವುಗಳಾಗಿದ್ದು, ಅವು ಪುರುಷರದ್ದಾಗಿರುವ ಸಾಧ್ಯತೆ ಇದೆ. ಪ್ರಾಥಮಿಕವಾಗಿ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ವಿಧಿವಿಜ್ಞಾನ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನಷ್ಟೇ ಹೊರ ಬೀಳಬೇಕಿದೆ.
'ʼಬಂಗ್ಲೆಗುಡ್ಡದೊಳಗಿನ ಅರಣ್ಯದಲ್ಲಿ ನಮ್ಮ ತಂಡಗಳು ಶೋಧ ಮುಗಿಸಿವೆ. ಅವಶೇಷಗಳ ಹುಡುಕಾಟ ಮತ್ತು ಅವುಗಳನ್ನು ವಶಪಡಿಸಿಕೊಳ್ಳಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ತಲೆಬುರುಡೆ, ದವಡೆ, ಮೂಳೆಗಳು ಎಲ್ಲವೂ ಆ ಪ್ರದೇಶದಲ್ಲಿ ಹರಡಿದ್ದವು. ಅವಶೇಷಗಳು ಪತ್ತೆಯಾದ ಪ್ರದೇಶದ ಸುತ್ತಲೂ ನಾವು ಪುರಾವೆ ಗೆರೆಗಳನ್ನು ಹಾಕಿದ್ದೇವೆ'ʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Dharmasthala Case: ಧರ್ಮಸ್ಥಳ ಪ್ರಕರಣ; ಬಂಗ್ಲೆಗುಡ್ಡ ಅರಣ್ಯದಲ್ಲಿ ಮೂಳೆಗಳು, ಬಟ್ಟೆ ತುಂಡುಗಳು ಪತ್ತೆ!
ಸ್ಥಳೀಯರ ಪ್ರಕಾರ ಬಂಗ್ಲೆಗುಡ್ಡವನ್ನು ಸೂಸೈಡ್ ಪಾಯಿಂಟ್ ಎಂದು ಕರೆಯಲಾಗುತ್ತದೆ. ಕೆಲವರು ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹೀಗಾಗಿ ಇದೀಗ ಭೂಮಿಯ ಮೇಲ್ಮೈಯಲ್ಲಿ ಕಂಡುಬಂದಿರುವ ಮಾನವ ಅವಶೇಷಗಳು ಆತ್ಮಹತ್ಯೆಗೆ ಮಾಡಿಕೊಂಡವರದ್ದಿರಬಹುದು ಎಂದು ಊಹಿಸಲಾಗಿದೆ.
ಕೆಲವು ದಿನಗಳ ಹಿಂದೆ ವಿಠ್ಠಲ್ ಗೌಡ ವಿಡಿಯೊ ಮಾಡಿ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಮಾನವ ಅವಶೇಷಗಳು ಮತ್ತು ಮಾಟ ಮಾಡಿರುವ ಕುರುಹು ಪತ್ತೆಯಾಗಿತ್ತು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.
ಅರಣ್ಯದಲ್ಲಿ ಭೂಮಿಯ ಮೇಲ್ಮೈನಲ್ಲೇ ಮೂಳೆಗಳು, ಬಟ್ಟೆ ತುಂಡುಗಳು ಪತ್ತೆಯಾಗಿದ್ದು, ಸೋಕೋ ತಂಡ ಮೂಳೆ ಪತ್ತೆಯಾದ ಭಾಗದ ಮಣ್ಣಿನ ಸ್ಯಾಂಪಲ್ ಪಡೆದಿದೆ. ಬುಧವಾರ ಬಂಗ್ಲೆಗುಡ್ಡ ಅರಣ್ಯಕ್ಕೆ ಹೋದ ಅರ್ಧಗಂಟೆಯಲ್ಲೇ ಮೂಳೆಗಳು ಹಾಗೂ ಪುರುಷನ ಬಟ್ಟೆ ಪತ್ತೆಯಾಗಿದೆ ಎನ್ನಲಾಗಿದೆ. ಧರ್ಮಸ್ಥಳದ ಸುತ್ತ-ಮುತ್ತ ಭಾರಿ ಮಳೆಯಾಗಿದ್ದು, ನೆನೆದುಕೊಂಡೇ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. 50ಕ್ಕೂ ಹೆಚ್ಚು ಅಧಿಕಾರಿಗಳು ಕಾಡಿನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಮಹೇಶ್ ತಿಮರೋಡಿ ವಿರುದ್ಧ ಎಫ್‌ಐಆರ್ ದಾಖಲು
ಈ ಮಧ್ಯೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ (ಆರ್ಮ್ಸ್ ಆಕ್ಟ್) ಎಫ್‌ಐಆರ್ ದಾಖಲಾಗಿದೆ. ಬುರುಡೆ ಚಿನ್ನಯ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.