ವೆಬ್ ಸೀರಿಸ್ ನೋಡಿ ಬ್ಯಾಂಕ್ ದರೋಡೆ; 6 ಮಂದಿ ಬಂಧನ, 13 ಕೋಟಿ ಮೌಲ್ಯದ ಚಿನ್ನಾಭರಣ ವಶ
Nyamati SBI bank robbery: ಅಕ್ಟೋಬರ್ 24 ರಂದು ನ್ಯಾಮತಿ ಎಸ್‍ಬಿಐ ಬ್ಯಾಂಕ್ ದರೋಡೆ ನಡೆದಿತ್ತು. ಪ್ರಕರಣದ ತನಿಖೆಗಾಗಿ ಐದು ತಂಡಗಳನ್ನು ರಚನೆ ಮಾಡಲಾಗಿತ್ತು. ಇದೀಗ ಆರು ತಿಂಗಳ ಬಳಿಕ ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿನ ಪೊಲೀಸರ ತಂಡ ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಬಂಧಿಸಿದೆ.


ದಾವಣಗೆರೆ: ನ್ಯಾಮತಿ ಎಸ್‍ಬಿಐ ಬ್ಯಾಂಕ್ ದರೋಡೆ ಪ್ರಕರಣವನ್ನು (Nyamati SBI bank robbery) ಭೇದಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಆರು ಆರೋಪಿಗಳನ್ನು ಬಂಧಿಸಿ, ಅವರಿಂದ 13 ಕೋಟಿ ರೂ. ಮೌಲ್ಯದ 17 ಕೆ.ಜಿ. ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ಟೋಬರ್ 24 ರಂದು ನ್ಯಾಮತಿ ಎಸ್‍ಬಿಐ ಬ್ಯಾಂಕ್ ದರೋಡೆ ನಡೆದಿತ್ತು. ಆಗ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಇದೀಗ ಆರು ತಿಂಗಳ ಬಳಿಕ ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿನ ಪೊಲೀಸರ ತಂಡ ಪ್ರಕರಣವನ್ನು ಭೇದಿಸಿ, ಆರೋಪಿಗಳ ಹೆಡೆಮುರಿಕಟ್ಟಿದೆ.
ಪ್ರಕರಣದ ತನಿಖೆಗಾಗಿ ಐದು ತಂಡಗಳನ್ನು ರಚನೆ ಮಾಡಲಾಗಿತ್ತು. ದರೋಡೆಕಾರರ ಗ್ಯಾಂಗ್ ಪತ್ತೆಗಾಗಿ ಉತ್ತರ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಕೊನೆಗೂ ಎಲ್ಲಾ ಆರು ಆರೋಪಿಗಳು ಸಿಕ್ಕಿ ಬಿದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ವಿಜಯ್ ಕುಮಾರ್, ನ್ಯಾಮತಿಯಲ್ಲಿ ಬೇಕರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಬ್ಯಾಂಕ್‍ನಲ್ಲಿ ಲೋನ್ ಪಡೆಯಲು ಎರಡು ಬಾರಿ ಅರ್ಜಿ ಹಾಕಿದ್ದ, ಈ ಅರ್ಜಿ ತಿರಸ್ಕಾರವಾಗಿತ್ತು. ಇದರಿಂದ ರೋಸಿ ಹೋಗಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಬ್ಯಾಂಕ್ ದರೋಡೆಗೆ ಹಿಂದಿ ವೆಬ್ ಸೀರಿಸ್ ನೋಡಿ ದರೋಡೆಗೆ ಸಂಚು ರೂಪಿಸಿದ್ದ.
ಆರೋಪಿಗಳು ಮೊಬೈಲ್ ವಾಹನ ಬಳಸದೇ, ಯಾವ ಸಾಕ್ಷಿಯನ್ನೂ ಬಿಡದೆ ದರೋಡೆ ಮಾಡಿದ್ದರು. ದರೋಡೆ ಮಾಡಿದ 17 ಕೆಜಿ ಚಿನ್ನವನ್ನು ತಮಿಳುನಾಡಿನ ಮಧುರೈನಲ್ಲಿರುವ ತೋಟದ ಮನೆಯ ಪಾಳು ಬಿದ್ದ ಬಾವಿಯಲ್ಲಿ ಲಾಕರ್‌ನಲ್ಲಿ ಇಟ್ಟಿದ್ದರು.
ಈ ಬಗ್ಗೆ ಸುಳಿವು ಸಿಕ್ಕ ಬಳಿಕ ನಮ್ಮ ತಂಡ ಅಲ್ಲಿಗೆ ತೆರಳಿ ಚಿನ್ನವನ್ನು ವಶಪಡಿಸಿಕೊಂಡಿದೆ. ಚಿನ್ನವೆಲ್ಲ ಸಾಮಾನ್ಯ ಜನರಿಗೆ ಸೇರಿದ್ದು ಎಂದು ಐಜಿಪಿ ಡಾ.ಬಿ. ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | ಬಂಧಿತ ಆರೋಪಿಗಳಿಂದ 60 ಸಾವಿರ ಮೌಲ್ಯದ ಗಾಂಜಾ ವಶ
Gadag News: ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನ; ಆರೋಪಿ ಕಾಲಿಗೆ ಗುಂಡೇಟು
ಗದಗ: ಪೊಲೀಸರ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ದರೋಡೆಕೋರನ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ (Gadag News) ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಮತ್ತು ಡೋಣಿ ಗ್ರಾಮದಲ್ಲಿ ನಡೆದಿದೆ. ಆರೋಪಿ ಜಯಸಿಂಹ ಮೊಡಕೆರ್ ಕಾಲಿಗೆ ಗುಂಡೇಟು ಬಿದ್ದಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಆರೋಪಿ ಜಯಸಿಂಹ ಮೊಡಕೆರ್‌ನ ಕರೆದುಕೊಂಡು ಬರುವಾಗ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿದ್ದು, ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಆರೋಪಿಗಳಾದ ಜಯಸಿಂಹ ಮೊಡಕೆರ್, ಮಂಜುನಾಥ ಮೊಡಕೆರ್ ರಾಜ್ಯ ಮತ್ತು ಅಂತಾರಾಜ್ಯ ಪೊಲೀಸರಿಗೆ ಬೇಕಾಗಿದ್ದ ದರೋಡೆಕೋರರು. ನೆನ್ನೆ ವಿಜಯನಗರ ಜಿಲ್ಲೆಯ ಬಳಿ ಜಯಸಿಂಹನನ್ನು ವಶಕ್ಕೆ ಪಡೆಯಲಾಗಿತ್ತು. ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತಿರುವಾಗ ಪೊಲೀಸ್ ವಾಹನದಲ್ಲಿ ಕೈಗೆ ಹಾಕಿದ್ದ ಬೇಡಿಯಿಂದ ಪೊಲೀಸ್ ಸಿಬ್ಬಂದಿ ವೀರೇಶ್ ಬಿಸ್ನಳ್ಳಿ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ್ದ. ಈ ವೇಳೆ ಸಿಪಿಐ ಮಂಜುನಾಥ ಕುಸುಗಲ್, ಆರೋಪಿ ಜಯಸಿಂಹ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಮನೆ ಕಳ್ಳತನ, ದರೋಡೆ ಸೇರಿ ಹಲವು ಪ್ರಕರಣಗಳಲ್ಲಿ ಈ ನಟೋರಿಯಸ್ ದರೋಡೆಕೋರರು ಭಾಗಿಯಾಗಿದ್ದರು. ಇನ್ನು ಗದಗ ಎಸ್‌ಪಿ ಬಿಎಸ್ ನೇಮಗೌಡ ಆಸ್ಪತ್ರೆಗೆ ಭೇಟಿ ನೀಡಿ, ಆರೋಪಿ ಜಯಸಿಂಹ ಮೊಡಕೆರ್ ಹಾಗೂ ಪೊಲೀಸ್ ಸಿಬ್ಬಂದಿ ವೀರೇಶ್ ಬಿಸ್ನಳ್ಳಿ ಆರೋಗ್ಯ ವಿಚಾರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Viral Video: ಮಸೀದಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ಗೆ ಮಹಿಳೆಯಿಂದ ಕಪಾಳಮೋಕ್ಷ; ಮುಂದೇನಾಯ್ತು? ವಿಡಿಯೊ ನೋಡಿ