Davanagere News: ಕನಕನ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ. ಪ್ರಭಾಕರ್
ಕನಕದಾಸರ ಬದುಕಿನ ಸಂದೇಶ ಕೇವಲ ಅವರನ್ನು ಭಕ್ತಿಯಿಂದ ಪೂಜಿಸುವುದಾಗಿರಲಿಲ್ಲ. ಅವರು ಕೀಳರಿಮೆ ಮತ್ತು ಕುಲದ ಅವಮಾನವನ್ನು ಮೆಟ್ಟಿನಿಂತ ಹೋರಾಟ ಮತ್ತು ಬಂಡಾಯ ಎನ್ನುವುದನ್ನು ನಾವು ಮರೆಯಬಾರದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.


ದಾವಣಗೆರೆ, ಜು. 13: ಹಿಂದುಳಿದ ವರ್ಗಗಳ ಮಕ್ಕಳು ಮತ್ತು ಕನಕನ ಮಕ್ಕಳು ಕೀಳರಿಮೆಯಿಂದ ಹೊರಗೆ ಬರಬೇಕಿದೆ. ಕೀಳರಿಮೆ ಮೆಟ್ಟಿ ಮೇಲೇಳುವುದಕ್ಕೆ ದಾಸಶ್ರೇಷ್ಠ ಕನಕದಾಸರ ಬಂಡಾಯದ ಮಾದರಿ ನಮ್ಮ ಅಂಗೈಯಲ್ಲಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಹೇಳಿದರು. ಕನಕ ನೌಕರರ ಬಳಗ ಮತ್ತು ಜಿಲ್ಲಾ ಕುರುಬರ ವಿದ್ಯಾವರ್ದಕ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
"ಇತಿಹಾಸ ಅರಿಯದವರು ಭವಿಷ್ಯ ರೂಪಿಸಲಾರರು" ಎನ್ನುವ ಮಾತಿದೆ. ಇವತ್ತು ನಮ್ಮ ಸಮುದಾಯದ ನಾನು ಮತ್ತು ಈ ಮಕ್ಕಳು ಪ್ರತಿಭಾವಂತರಾಗಿ ಇಲ್ಲಿ ಗೌರವಿಸಲ್ಪಡುತ್ತಿದ್ದೇವೆ ಎಂದರೆ ಇದಕ್ಕೆ ನಮ್ಮ ಹಿರಿಯರು ಮತ್ತು ಹಿಂದಿನವರು ನಡೆಸಿದ ಹೋರಾಟಗಳು ಕಾರಣ.
ಅಕ್ಷರ ಕಲಿತರೆ ಕಿವಿಗೆ ಕಾದ ಸೀಸ ಸುರಿಯುವ ಶಿಕ್ಷೆ ವಿಧಿಸುತ್ತಿದ್ದ ಕಾಲದಿಂದ ನಮ್ಮದೇ ಆದ ವಿದ್ಯಾವರ್ಧಕ ಸಂಘ ಕಟ್ಟಿಕೊಂಡು SSLC ಯಿಂದ MBBS ವರೆಗೂ ಸಾವಿರಾರು ಪ್ರತಿಭಾವಂತರನ್ನು ಪುರಸ್ಕರಿಸುವ ಮಟ್ಟಕ್ಕೆ ಪ್ರಗತಿ ಸಾಧಿಸಿದ್ದೇವೆ. ಈ ಸಾಧನೆಯ ಹಿಂದೆ ಇರುವ ಪ್ರತೀ ಹೆಜ್ಜೆ ಗುರುತುಗಳನ್ನೂ ನಾವು ಅರಿತುಕೊಳ್ಳಬೇಕಿದೆ ಎಂದರು.
ದಾಸಶ್ರೇಷ್ಠ ಕನಕದಾಸರು ಅಂದರೆ ನಮಗೆಲ್ಲಾ ಭಕ್ತಿ ಬರುತ್ತದೆ. ಆದರೆ ಕನಕದಾಸರ ಬದುಕಿನ ಸಂದೇಶ ಕೇವಲ ಅವರನ್ನು ಭಕ್ತಿಯಿಂದ ಪೂಜಿಸುವುದಾಗಿರಲಿಲ್ಲ. ಎಳೆಯ ವಯಸ್ಸಿನಿಂದಲೂ ಕನಕರ ಬಗ್ಗೆ ಮಾತನಾಡುವಾಗ ಕನಕರ ಹೋರಾಟವನ್ನು ತಿಳಿಯುವುದರ ಬದಲಾಗಿ ಕನಕನ ಕಿಂಡಿಯ ಬಗ್ಗೆ ತಿಳಿಯುವುದರಲ್ಲಿ ನಮಗೆ ಹೆಚ್ಚು ಉತ್ಸಾಹ ಮೂಡಿಸಿರುವುದರ ಹಿಂದೆಯೂ ಒಂದು ಸಾಂಸ್ಕೃತಿಕ ರಾಜಕಾರಣ ಇದೆಯಲ್ಲವೇ ಎಂದು ಪ್ರಶ್ನಿಸಿದರು.

ದೇವರು ಸಂಸ್ಕೃತದಲ್ಲಿ ಮಾಡುವ ಭಕ್ತಿ, ಪ್ರಾರ್ಥನೆಯನ್ನು ಮಾತ್ರ ಸ್ವೀಕರಿಸುತ್ತಾನೆ ಎನ್ನುವ ʼಅಹಂʼ ಜಾರಿಯಲ್ಲಿದ್ದ ಸಂದರ್ಭದಲ್ಲಿ ಕನಕದಾಸರು ತಾಯಿ ಭಾಷೆಯಲ್ಲಿ ವಚನಗಳನ್ನು, ಕೀರ್ತನೆಗಳನ್ನು ರಚಿಸಿ, ಕೃಷ್ಣನನ್ನು ತನ್ನ ಕಡೆಗೆ ತಿರುಗಿಸಿಕೊಂಡರು ಎನ್ನುವುದು ಕೇವಲ ಕತೆಯಲ್ಲ. ಕೀಳರಿಮೆ ಮತ್ತು ಕುಲದ ಅವಮಾನವನ್ನು ಮೆಟ್ಟಿನಿಂತ ಹೋರಾಟ ಮತ್ತು ಬಂಡಾಯ ಎನ್ನುವುದನ್ನು ನಾವು ಮರೆಯಬಾರದು ಎಂದರು.
ಕನಕದಾಸರು ಸಮಾಜದ ನೋವನ್ನು ಹಾಡಾಗಿ ಹಾಡಿದರು ಎಂದು ನಾನು ಹಿಂದೊಮ್ಮೆ ಹೇಳಿದ್ದೆ. "ಕುಲ ಕುಲವೆಂದು ಬಡಿದಾಡದಿರಿ..." ಎಂದು ಕನಕರು ಹಾಡುವ ಮೊದಲು ಕುಲದ ಅವಮಾನವನ್ನು ಅನುಭವಿಸಿದ್ದರು. ಈ ಅವಮಾನವನ್ನು ಅಳಿಸಲು ಬದುಕಿನುದ್ದಕ್ಕೂ ಶ್ರಮಿಸಿದ ಬಂಡಾಯಗಾರರು. ಆದರೆ, ಕನಕರ ಹೋರಾಟದ ಪರಂಪರೆಯನ್ನೇ ನಾಶಮಾಡುವ ಹುನ್ನಾರದ ಭಾಗವಾಗಿ ಅವರನ್ನು ಕೇವಲ ಭಕ್ತಿಗೆ ಸೀಮಿತಗೊಳಿಸುತ್ತಿದ್ದಾರೆ. ಇದು ನಮ್ಮ ಇವತ್ತಿನ ಮತ್ತು ಮುಂದಿನ ಪೀಳಿಗೆಯಲ್ಲಿ ಹೋರಾಟವನ್ನು ಮರೆಸುವ ತಂತ್ರವೇ ಆಗಿದೆ. ಹೀಗಾಗಿ ಭಕ್ತಿಯ ಜತೆಗೆ ಕನಕರ ಬಂಡಾಯವನ್ನು ನಾವು ಅರಿಯೋಣ ಎಂದು ಸಲಹೆ ನೀಡಿದರು.
ನಾವು ಪೋಷಕರು ಮಕ್ಕಳಿಗೆ ಶಿಕ್ಷಣದ ಜತೆಗೆ ಬದುಕಿನ ಮೌಲ್ಯಗಳನ್ನು ಕೊಡಬೇಕು. ಆಗ ಸಮಾಜ ಮೌಲ್ಯಯುತವಾಗುತ್ತದೆ ಎಂದ ಅವರು, ಇವತ್ತಿನ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಿಂದುಳಿದ ಸಮುದಾಯಗಳ ಮಕ್ಕಳಲ್ಲಿನ ಕೀಳರಿಮೆ ಅಳಿಸಿ ಆತ್ಮವಿಶ್ವಾಸ ಎನ್ನುವ ʼರಕ್ತದಾನʼ ಮಾಡಿದಂತೆ ಎಂದು ಭಾವಿಸುತ್ತೇನೆ. ಆತ್ಮವಿಶ್ವಾಸದ ರಕ್ತದಾನದಿಂದ ಇಡೀ ನಮ್ಮ ಸಮಾಜ ಬಲಿಷ್ಠಗೊಳ್ಳುತ್ತದೆ ಎನ್ನುವ ಭರವಸೆ ವ್ಯಕ್ತಪಡಿಸುತ್ತಾ ನನ್ನ ಮಾತುಗಳನ್ನು ಮುಗಿದುತ್ತೇನೆ.
ಇವತ್ತು ಎಲ್ಲಾ ಮಕ್ಕಳೂ ವಿದ್ಯಾವಂತರೇ. ಆದರೆ ಹೃದಯವಂತರಾಗುವ ಅಗತ್ಯವಿದೆ. ವೃದ್ಧಾಶ್ರಮಗಳಿಲ್ಲದ ಮಾನವೀಯ ಮತ್ತು ಜವಾಬ್ದಾರಿಯುತ ಸಮಾಜ ನಿರ್ಮಾಣ ನಮ್ಮ ಆದ್ಯತೆಯಾಗಲಿ ಎಂದು ಕರೆ ನೀಡಿದರು.
ಪ್ರಭಾ ಮಲ್ಲಿಕಾರ್ಜುನ್ ಅತ್ಯುತ್ತಮ ಆಯ್ಕೆ
ಸಂಸದರಾದ ಪ್ರಭಾ ಮಲ್ಲಿಕಾರ್ಜುನ್ ಅವರು ರಾಜಕಾರಣದಲ್ಲಿ ಕಳೆದು ಹೋಗದೆ, ಅಭಿವೃದ್ಧಿ ರಾಜಕಾರಣದಲ್ಲಿ ಮುಳುಗಿ ಹೋಗಿದ್ದಾರೆ. ಇವರನ್ನು ಆಯ್ಕೆ ಮಾಡಿದ್ದು ದಾವಣಗೆರೆಯ ಜನತೆಯ ಅತ್ಯುತ್ತಮ ಆಯ್ಕೆ ಎಂದು ಕೆವಿಪಿ ನುಡಿದರು.
ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠದ ಪೂಜ್ಯರಾದ ಜಗದ್ಗುರು ಶ್ರೀ ಡಾ.ನಿರಂಜನಾನಂದಪುರಿ ಮಹಾ ಗುರುಗಳು ದಿವ್ಯ ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ, ಸಂಸದರಾದ ಪ್ರಭಾ ಮಲ್ಲಿಕಾರ್ಜುನ್, ಕೊಪ್ಪಳ ವಿವಿ ಕುಲಪತಿಗಳಾದ ಡಾ.ಬಿ.ಕೆ.ರವಿ, ಬಾಲ ಭವನ ಅಧ್ಯಕ್ಷರಾದ ಬಿ.ಆರ್. ನಾಯ್ಡು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.