ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಚುಣಾವಣಾ ಆಯೋಗದ ನೋಟಿಸ್‌ಗೆಲ್ಲ ನಾವು ಹೆದರೋದಿಲ್ಲ: ಡಿ.ಕೆ. ಶಿವಕುಮಾರ್

DK Shivakumar: ಚುನಾವಣೆಗಳಲ್ಲಿ ಏನು ತಪ್ಪಾಗಿದೆ ಎಂದು ರಾಜಕೀಯ ನಾಯಕರಾದ ನಾವುಗಳು ಚುನಾವಣಾ ಆಯೋಗಕ್ಕೆ ತಿಳಿಸಿದ್ದೇವೆ. ಅವರೇ ಈ ತಪ್ಪುಗಳನ್ನು ಬಗೆಹರಿಸಬೇಕು ಹಾಗೂ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಈ ಕೆಲಸ ಮಾಡುವುದು ನಾವಲ್ಲ. ಅವರು ನೀಡಿರುವ ನೋಟಿಸ್‌ಗೆಲ್ಲ ನಾವು ಹೆದರುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಚುಣಾವಣಾ ಆಯೋಗದ ನೋಟಿಸ್‌ಗೆಲ್ಲ ನಾವು ಹೆದರೋದಿಲ್ಲ: ಡಿ.ಕೆ. ಶಿವಕುಮಾರ್

ಡಿಸಿಎಂ ಡಿ.ಕೆ. ಶಿವಕುಮಾರ್.

Profile Siddalinga Swamy Aug 11, 2025 5:34 PM

ಬೆಂಗಳೂರು: ಚುನಾವಣೆಗಳಲ್ಲಿ ಏನು ತಪ್ಪಾಗಿದೆ ಎಂದು ರಾಜಕೀಯ ನಾಯಕರಾದ ನಾವುಗಳು ಚುನಾವಣಾ ಆಯೋಗಕ್ಕೆ ತಿಳಿಸಿದ್ದೇವೆ. ಅವರೇ ಈ ತಪ್ಪುಗಳನ್ನು ಬಗೆಹರಿಸಬೇಕು ಹಾಗೂ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಈ ಕೆಲಸ ಮಾಡುವುದು ನಾವಲ್ಲ. ಅವರು ನೀಡಿರುವ ನೋಟಿಸ್ ಗೆಲ್ಲ ನಾವು ಹೆದರುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ನಗರದ ಖಾಸಗಿ ಹೋಟೆಲ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಸೋಮವಾರ ಉತ್ತರಿಸಿದರು.

ಮತಗಳ್ಳತನ ವಿಚಾರವಾಗಿ ಆಯೋಗವು ರಾಹುಲ್ ಗಾಂಧಿ ಅವರಿಗೆ ನೋಟೀಸ್ ನೀಡಿರುವ ವಿಚಾರವಾಗಿ ಕೇಳಿದಾಗ ‘ನಾವು ತಪ್ಪು ಹೇಳಿದ್ದರೆ ನಮ್ಮ ಮೇಲೆ ಚುನಾವಣಾ ಆಯೋಗ ಪ್ರಕರಣ ದಾಖಲಿಸಲಿ. ಚುನಾವಣಾ ಪ್ರಕ್ರಿಯೆಯಲ್ಲಿ ಏನೇನು ತಪ್ಪು ನಡೆದಿದೆ ಎಂದು ನಾವು ತಿಳಿಸಿದ್ದೇವೆ. ಇನ್ನೊಂದು ದೊಡ್ಡ ಅವಕಾಶ ನನಗಿದೆ. ಆದರೆ ಆ ವಿಚಾರವನ್ನು ನಾನು ಈಗ ಬಹಿರಂಗಪಡಿಸುವುದಿಲ್ಲ. ದಾಖಲೆಗಳನ್ನು ಪಡೆಯುವ ಜವಾಬ್ದಾರಿ ಅವರದ್ದು. ನಾವು ತಪ್ಪು ನಡೆದಿದೆ ಎಂದು ತಿಳಿಸಿದ್ದೇವೆ. ನಾವೇನು ಶಾಲಾ ಮಕ್ಕಳಲ್ಲ’ ಎಂದು ಹೇಳಿದರು.

ಆಯೋಗದಿಂದ ಒಂದಷ್ಟು ಮಾಹಿತಿ ಬರಬೇಕಿದೆ

‘ರಾಹುಲ್ ಗಾಂಧಿ ಅವರು ಇಡೀ ದೇಶಕ್ಕೆ ಎಲ್ಲಾ ಮಾಹಿತಿ ನೀಡಿದ್ದಾರೆ. ನಾವು ಕರ್ನಾಟಕದ ಚುನಾವಣಾ ಆಯೋಗದ ಆಯುಕ್ತರನ್ನು ಭೇಟಿ ಮಾಡಿದ ವೇಳೆಯಲ್ಲಿ ಅವರು ರಾಹುಲ್ ಗಾಂಧಿ ಅವರು ಮಾಡಿದ ಆರೋಪಗಳ ಮೇಲೆ ತನಿಖೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. ನಾವು ಸಹ ಒಂದಷ್ಟು ಮಾಹಿತಿಗಳನ್ನು ಕೇಳಿದ್ದೇವೆ’ ಎಂದು ಹೇಳಿದರು.

ರಾಹುಲ್ ಗಾಂಧಿ ಅವರು ದೇಶದ ಪ್ರಜಾಪ್ರಭುತ್ವ ಉಳಿಸಲು, ಎಲ್ಲರಿಗೂ ನ್ಯಾಯ ದೊರಕಿಸಿಕೊಡಲು ಹೋರಾಟ ಮಾಡುತ್ತಿದ್ದಾರೆ. ಒಂದು ಮತವೂ ಸಹ ದುರುಪಯೋಗವಾಗಬಾರದು ಜತೆಗೆ ಯಾವುದೇ ರಾಜಕೀಯ ಪಕ್ಷಗಳು ಅಕ್ರಮ ಮಾಡಿಕೊಳ್ಳಬಾರದು ಎಂದು ಈ ಹೋರಾಟ ಮಾಡಿದ್ದಾರೆ ಎಂದರು.

ಆಯೋಗವು ನಿಮಗೂ ನೋಟಿಸ್ ನೀಡಿರುವ ಬಗ್ಗೆ ಕೇಳಿದಾಗ, ‘ನಾನು ಆಯೋಗದ ಬಳಿ ಒಂದಷ್ಟು ಮಾಹಿತಿಗಳನ್ನು ಕೇಳಿದ್ದೇನೆ. ನನಗೆ ಇನ್ನೂ ಕೊಟ್ಟಿಲ್ಲ. ನನಗೆ ವಾಟ್ಸ್ ಆಪ್‌ನಲ್ಲಿ ಕಳುಹಿಸಿದ್ದಾರೆ. ನಾನು ಅದನ್ನು ಇನ್ನು ಗಮನಿಸಿಲ್ಲ. ಅವರಿಗೆ ಏನು ಬೇಕೋ ಅದೆಲ್ಲವನ್ನು ನೀಡೋಣ. ನಮ್ಮ ಸಂಶೋಧನಾ ತಂಡ ಯಾವ ವಿಚಾರಗಳನ್ನು ಶೋಧಿಸಿದ್ದಾರೋ ಅದೆಲ್ಲವನ್ನು ನಾವು ನೀಡುತ್ತೇವೆ. ಮಾಧ್ಯಮದವರು ಸಹ ಅಕ್ರಮ ನಡೆದ ಜಾಗಗಳಿಗೆ ತೆರಳಿ ಮನೆ ಸಂಖ್ಯೆ, ವಾಸವಿರುವ ಜನರ ಬಗೆಗಿನ ವಾಸ್ತವಾಂಶ ತಿಳಿಸಿದ್ದಾರೆʼ ಎಂದು ಹೇಳಿದರು.

ʼಬಿಹಾರದ ಡಿಸಿಎಂ ಅವರು ಸಹ ಎರಡು ಎಪಿಕ್ ನಂಬರ್ ಹೊಂದಿದ್ದಾರೆ ಎಂದು ಬಿಹಾರದ ತೇಜಸ್ವಿ ಯಾದವ್ ತಿಳಿಸಿದ್ದಾರೆ. ಇದನ್ನು ಚುನಾವಣಾ ಆಯೋಗ ನೋಡಲು ಆಗುವುದಿಲ್ಲವೇ? ಜವಾಬ್ದಾರಿ ಇಲ್ಲವೇ? ಬೇಕಾದಷ್ಟು ತಪ್ಪುಗಳಾಗಿವೆ. ನಾವು ಇದರ ಬಗ್ಗೆ ಹೋರಾಟ ಮುಂದುವರೆಸುತ್ತೇವೆʼ ಎಂದರು.‌

ಈ ಸುದ್ದಿಯನ್ನೂ ಓದಿ | BRBNMPL Recruitment 2025: ರಿಸರ್ವ್‌ ಬ್ಯಾಂಕ್‌ ನೋಟ್‌ ಮುದ್ರಣ ಪ್ರೈವೇಟ್‌ ಲಿಮಿಟೆಡ್‌ನಲ್ಲಿದೆ 88 ಹುದ್ದೆ; ಐಟಿಐ ಪಾಸಾದವರು ಅಪ್ಲೈ ಮಾಡಿ

ತಪ್ಪು ಮಾಹಿತಿ ನೀಡಿದ್ದರೆ ಚುನಾವಣಾ ಆಯೋಗ ಪ್ರಕರಣ ದಾಖಲಿಸುವುದಾದರೆ ದಾಖಲಿಸಲಿ. ನಾವು ಈ ದೇಶದ ಜನರಿಗೆ ನಡೆದಿರುವ ಸಂಗತಿಗಳನ್ನು ತಿಳಿಸಿದ್ದೇವೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ಕೂಡ ಈ ಬಗ್ಗೆ ಜನರಿಗೆ ಹೆಚ್ಚು, ಹೆಚ್ಚು ಅರಿವು ಮೂಡಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.