SBI Recruitment 2025: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 6,589 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ನೇಮಕಾತಿ; ಹೀಗೆ ಅಪ್ಲೈ ಮಾಡಿ
Bank Jobs: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೂನಿಯರ್ ಅಸೋಸಿಯೇಟ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಬ್ಯಾಂಕ್ ಗ್ರಾಹಕರ ಸಹಾಯ ಮತ್ತು ಮಾರಾಟ ವಿಭಾಗದಲ್ಲಿ ಒಟ್ಟು 6,589 ಹುದ್ದೆಗಳಿಗೆ ನೇಮಕ ನಡೆಯಲಿದೆ. ಇದರಲ್ಲಿ ಕರ್ನಾಟಕದಲ್ಲಿ 198 ಬ್ಯಾಕ್‌ಲಾಗ್ ಹುದ್ದೆಗಳೂ ಸೇರಿದಂತೆ ಒಟ್ಟು 270 ಹುದ್ದೆಗಳಿಗೆ ನೇಮಕ ಮಾಡಿ ಕೊಳ್ಳಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.


ಆರ್.ಕೆ. ಬಾಲಚಂದ್ರ
ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜೂನಿಯರ್ ಅಸೋಸಿಯೇಟ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಬ್ಯಾಂಕ್ ಗ್ರಾಹಕರ ಸಹಾಯ ಮತ್ತು ಮಾರಾಟ ವಿಭಾಗದಲ್ಲಿ ಒಟ್ಟು 6,589 ಹುದ್ದೆಗಳಿಗೆ ನೇಮಕ ನಡೆಯಲಿದೆ (SBI Recruitment 2025). ಇದರಲ್ಲಿ ಕರ್ನಾಟಕದಲ್ಲಿ 198 ಬ್ಯಾಕ್‌ಲಾಗ್ ಹುದ್ದೆಗಳೂ ಸೇರಿದಂತೆ ಒಟ್ಟು 270 ಹುದ್ದೆಗಳಿಗೆ ನೇಮಕ ಮಾಡಿ ಕೊಳ್ಳಲಾಗುತ್ತದೆ. ಕಳೆದ ವರ್ಷ 13,735 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಎಸ್‌ಬಿಐ ನೇಮಕಾತಿ ನಡೆಸಿತ್ತು (Bank Jobs). ಈ ವರ್ಷ ಅದರ ಅರ್ಥಕ್ಕೂ ಹೆಚ್ಚು ಹುದ್ದೆಗಳನ್ನು ಕಡಿತಗೊಳಿಸಲಾಗಿದೆ ಎಂಬುದನ್ನ ಮರೆಯದಿರಿ. ರಾಜ್ಯದ ಅಭ್ಯರ್ಥಿಗಳು ಕನ್ನಡದಲ್ಲಿಯೇ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ಬರೆಯುವ ಅವಕಾಶ ಇದೆ.
ರಾಜ್ಯದಲ್ಲಿ ಹುದ್ದೆಗಳ ಸಂಖ್ಯೆ
ಕರ್ನಾಟಕ – 270 ಹುದ್ದೆಗಳು (ಬ್ಯಾಕ್‌ಲಾಗ್ ಹುದ್ದೆಗಳು 198)
ಒಂದಿಷ್ಟು ಗಮನಿಸಿ
- ಅಧಿಸೂಚನೆಯ ಪ್ರಕಾರ, ಒಬ್ಬ ಅಭ್ಯರ್ಥಿಯು ಒಂದು ರಾಜ್ಯಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು. ನೇಮಕಗೊಂಡ ಅಭ್ಯರ್ಥಿಗಳಿಗೆ ಆರು ತಿಂಗಳ ಪ್ರೋಬೇಷನರಿ ಅವಧಿ ಇರುತ್ತದೆ. ಈ ವೇಳೆ ಬ್ಯಾಂಕ್ ನೀಡುವ ಇ-ಪಾಠಗಳನ್ನು ಪೂರ್ಣಗೊಳಿಸತಕ್ಕದ್ದು. ಇಲ್ಲದಿದ್ದಲ್ಲಿ ನಿರೀಕ್ಷಣಾ ಅವಧಿ ಮುಂದುವರೆಯಲಿದೆ.
- ಭಾಷಾ ಪರೀಕ್ಷೆಗೆ ಬ್ಯಾಂಕ್ ಸೂಚಿಸಿದ ಸ್ಥಳದಿಂದಲೇ ಹಾಜರಾಗತಕ್ಕದ್ದು. ಮೆರಿಟ್ ಪಟ್ಟಿಯನ್ನು ರಾಜ್ಯವಾರು, ವರ್ಗವಾರು ತಯಾರಿಸ ಲಾಗುತ್ತದೆ.
- ನೇಮಕ ಸಂಬಂಧ ಎಲ್ಲ ಮಾಹಿತಿಯನ್ನು ಎಸ್ ಬಿ ಐ ವೆಬ್ ಸೈಟ್ನಲ್ಲೇ ಪ್ರಕಟಿಸುತ್ತದೆ.
- ಈಗಾಗಲೇ ಎಸ್‌ಬಿಐ ಕ್ಲರಿಕಲ್ ಕೇಡರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವವರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
- ಸ್ಥಳೀಯ ಭಾಷಾ ಪರೀಕ್ಷೆ ನಡೆಸುವಾಗ ನಾನ್ ವರ್ಬಲ್ ಅಬ್ಜೆಕ್ಟೀವ್-3 ಪ್ಯಾಸೇಜ್‌ಗೆ 15 ಪ್ರಶ್ನೆ ಗಳು ಹಾಗೂ ಸಬ್ಜೆಕ್ಟಿವ್ 3 ಪ್ಯಾಸೇಜ್‌ಗಳಿಗೆ 15 ಪ್ರಶ್ನೆ ಗಳಿದ್ದು ಒಟ್ಟಾರೆ 30 ಅಂಕಗಳ ಪ್ರಶ್ನೆಗಳು, ಮತ್ತು ವರ್ಬಲ್ ವಿಭಾಗದಲ್ಲಿ 20 ಅಂಕಗಳ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕು. ಅಭ್ಯರ್ಥಿಗಳಿಗೆ ಮುದ್ರಿತ ಪ್ರವೇಶಪತ್ರ ಕಳಿಸಲಾಗುವುದಿಲ್ಲ ಹಾಗಾಗಿ, ಬ್ಯಾಂಕ್ ವೆಬ್ಸೈಟ್ನಿಂದಲೇ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಈ ಸುದ್ದಿಯನ್ನೂ ಓದಿ: IBPS Recruitment: ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆಯಿಂದ 10,277 ಗ್ರಾಹಕ ಸೇವಾ ಸಹಾಯಕ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
ಪರೀಕ್ಷೆ ಯಾವಾಗ ನಡೆಯಲಿದೆ?
ಈ ವರ್ಷದ ಸೆಪ್ಟೆಂಬರ್ ಮತ್ತು ನವೆಂಬರ್‌ನಲ್ಲಿ ಕ್ರಮವಾಗಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಪರೀಕ್ಷಾ ಕೇಂದ್ರಗಳು ಎಲ್ಲೆಲ್ಲಿ?
ಬೆಂಗಳೂರು, ಬೆಳಗಾವಿ, ದಾವಣಗೆರೆ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು,ಮೈಸೂರು, ಶಿವಮೊಗ್ಗ ಹಾಗೂ ಉಡುಪಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಆಗಸ್ಟ್ 26, 2025.
ಶೈಕ್ಷಣಿಕ ಅರ್ಹತೆಗಳೇನು?
ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಪದವಿ ಹೊಂದಿರಬೇಕು. ಇದಲ್ಲದೆ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಸಹ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಅದರೆ 2025ರ ಡಿಸೆಂಬರ್ 31ರೊಳಗಾಗಿ ಉತ್ತೀರ್ಣರಾಗಿರಬೇಕು.
ವಯೋಮಿತಿ ಎಷ್ಟು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 20ರಿಂದ 28 ವರ್ಷ ವಯಸ್ಸಿನವರಾಗಿರಬೇಕು. ಅಂದರೆ ಅಭ್ಯರ್ಥಿಗಳು 1997ರ ಏಪ್ರಿಲ್ 2 ಮತ್ತು 2005ರ ಏಪ್ರಿಲ್ 1ರ ನಡುವೆ ಜನಿಸಿರಬೇಕು. ಸರ್ಕಾರಿ ನಿಯಮಾನುಸಾರ, ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು. ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷದ ಸಡಿಲಿಕೆ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕವೆಷ್ಟು?
ಸಾಮಾನ್ಯ, ಇಡಬ್ಲ್ಯುಎಸ್ ಮತ್ತು ಒಬಿಸಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ಎಸ್/ಎಸ್‌ಟಿ ಮತ್ತು ವಿಶೇಷ ಚೇತನ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಿರುತ್ತಾರೆ. ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.
ಪರೀಕ್ಷಾ ಪೂರ್ವ ತರಬೇತಿ
ಎಸ್‌ಸಿ/ಎಸ್‌ಟಿ/ ಒಬಿಸಿ/ವಿಶೇಷ ಚೇತನರು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಬ್ಯಾಂಕ್ ವತಿಯಿಂದ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ. ಆನ್‌ಲೈನ್ ಮೂಲಕವೇ ತರಬೇತಿ ಕಾರ್ಯಕ್ರಮ ನಡೆಯುತ್ತದೆ. ಇದರ ಅಗತ್ಯವಿದ್ದರೆ ಅರ್ಜಿ ಭರ್ತಿ ಮಾಡುವಾಗಲೇ ಮಾಹಿತಿ ಸಲ್ಲಿಸಬೇಕು.
ಆಯ್ಕೆ ಪ್ರಕ್ರಿಯೆ ಹೇಗೆ?
ಎಸ್‌ಬಿಐ ಕ್ಲರ್ಕ್ ಆಗಲು, ಅಭ್ಯರ್ಥಿಗಳು ಮೂರು ಹಂತದ ಆಯ್ಕೆ ಪ್ರಕ್ರಿಯೆಯ ಮೂಲಕ ಸಾಗಬೇಕಾಗುತ್ತದೆ. ಮೊದಲ ಹಂತದಲ್ಲಿ, ಪ್ರಾಥಮಿಕ ಪರೀಕ್ಷೆ ಇರುತ್ತದೆ. ಅದರಲ್ಲಿ ಉತ್ತೀರ್ಣರಾದ ನಂತರ ಅಭ್ಯರ್ಥಿಗಳು ಎರಡನೇ ಹಂತದಲ್ಲಿ ಮುಖ್ಯ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತದೆ. ನಂತರ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸ್ಥಳೀಯ ಭಾಷೆಯ ಪರೀಕ್ಷೆಯನ್ನು ನೀಡಬೇಕಾಗುತ್ತದೆ. ಆದಾಗ್ಯೂ, ಈ ಪರೀಕ್ಷೆಯು 10 ಅಥವಾ 12 ನೇ ಹಂತದಲ್ಲಿ ರಾಜ್ಯದ ಸ್ಥಳೀಯ ಭಾಷೆಯನ್ನು ಅಧ್ಯಯನ ಮಾಡದ ಅಭ್ಯರ್ಥಿಗಳಿಗೆ ಮಾತ್ರ ಇರುತ್ತದೆ.
ಪರೀಕ್ಷೆ ಹೇಗಿರುತ್ತದೆ?
ಎಸ್‌ಬಿಐ ಕ್ಲರ್ಕ್ ಪೂರ್ವಭಾವಿ ಪರೀಕ್ಷೆಯು 1 ಗಂಟೆಯದ್ದಾಗಿದ್ದು, ಒಟ್ಟು 100 ವಸ್ತುನಿಷ್ಠ ಪ್ರಶ್ನೆಗಳನ್ನು 100 ಅಂಕಗಳಿಗೆ ಕೇಳಲಾಗುತ್ತದೆ. ಇದು ಸಂಖ್ಯಾತ್ಮಕ ಸಾಮರ್ಥ್ಯ, 35 ಪ್ರಶ್ನೆಗಳು, ತಾರ್ಕಿಕ ಸಾಮರ್ಥ್ಯದ 35 ಪ್ರಶ್ನೆಗಳು ಮತ್ತು ಇಂಗ್ಲಿಷ್ ಭಾಷೆಯ 30 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಆಯಾ ವರ್ಗಗಳಿಗೆ ಮೀಸಲಾಗಿರುವ ಹುದ್ದೆಗಳಿಗೆ ಅನುಗುಣವಾಗಿ 10 ಪಟ್ಟು ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಪರಿಗಣಿಸಲಾಗುತ್ತದೆ. ಮೂರು ಪರೀಕ್ಷೆಗೆ ಯಾವುದೇ ಕನಿಷ್ಠ ಅರ್ಹತಾ ಅಂಕಗಳನ್ನು ನಿಗದಿಪಡಿಸಲಾಗಿಲ್ಲ. ಹಾಗೂ ವಿಭಾಗವಾರು ಅಂಕಗಳನ್ನು ಕಾಯ್ದು ಕೊಳ್ಳಲಾಗುವುದಿಲ್ಲ. ಮುಖ್ಯ ಪರೀಕ್ಷೆಯು ಒಟ್ಟು 200 ಅಂಕಗಳಿಗೆ ಆಗಿರುತ್ತದೆ. ಇದರಲ್ಲಿ ಒಟ್ಟು 190 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪರೀಕ್ಷೆಯು 2 ಗಂಟೆ 40 ನಿಮಿಷಗಳಾಗಿರುತ್ತದೆ. ಇದರಲ್ಲಿ, ಸಾಮಾನ್ಯ ಹಾಗೂ ಹಣಕಾಸಿನ ಜ್ಞಾನಕ್ಕೆ ಸಂಬಂಧಿಸಿದ 50 ಪ್ರಶ್ನೆಗಳಿಗೆ 50 ಅಂಕಗಳಿರುತ್ತವೆ. ಜನರಲ್ ಇಂಗ್ಲಿಷ್ನ 40 ಪ್ರಶ್ನೆಗಳಿಗೆ 40 ಅಂಕ, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್‌ನ 50 ಪ್ರಶ್ನೆಗಳಿಗೆ 50 ಹಾಗೂ ರೀಸನಿಂಗ್ ಎಬಿಲಿಟಿ ಹಾಗೂ ಕಂಪ್ಯೂಟರ್ ಆಪ್ಟಿಟ್ಯೂಡ್‌ಗೆ ಸಂಬಂಧಿಸಿದ 50 ಪ್ರಶ್ನೆಗಳಿಗೆ 60 ಅಂಕಗಳಿರುತ್ತದೆ.
ಅಭ್ಯರ್ಥಿಗಳು ಸರಾಸರಿ ಅಂಕಗಳಲ್ಲಿ ಕನಿಷ್ಠ ಶೇಕಡಾವಾರು ಅಂಕಗಳನ್ನು ಗಳಿಸಬೇಕಾಗುತ್ತದೆ (SC/ST/OBC/PwBD/XS/DXS ಅಭ್ಯರ್ಥಿಗಳಿಗೆ, ಅದರಲ್ಲಿ ಶೇ. 5 ವಿನಾಯಿತಿ ಲಭ್ಯವಿದೆ. ಸರಾಸರಿ ಅಂಕಗಳಲ್ಲಿ ಕನಿಷ್ಠ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸುತ್ತದೆ. ವೈಯಕ್ತಿಕ ವಿಭಾಗಕ್ಕೆ ಯಾವುದೇ ಕನಿಷ್ಠ ಅರ್ಹತಾ ಅಂಕಗಳನ್ನು ನಿಗದಿಪಡಿಸಲಾಗಿಲ್ಲ. ವಿಭಾಗವಾರು ಅಂಕಗಳನ್ನು ಕಾಯ್ದುಕೊಳ್ಳಲಾಗುವುದಿಲ್ಲ. ಪೂರ್ವ ಭಾವಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಗಳಿಗೆ 1/4 ಅಂಕಗಳನ್ನು ಕಳೆಯಲಾಗುತ್ತದೆ.
ವೇತನ ಎಷ್ಟಿರುತ್ತದೆ?
24,050 ರೂ. - 64,480 ರೂ. ವೇತನ ಶ್ರೇಣಿ ಆರಂಭಿಕ ಮೂಲ ವೇತನ 26,730 ರೂ. ಎರಡು ಮುಂಗಡ ವೇತನ ಹೆಚ್ಚಳ (ಪದವೀಧರರಿಗೆ ಅನುಮತಿಸಲಾಗಿದೆ). ನೀಡಲಾಗುತ್ತದೆ. ಮುಂಬೈಯಂತಹ ಮಹಾನಗರಗಳಲ್ಲಿ ಆರಂಭಿಕ ವೇತನವು ಡಿಎ ಹಾಗೂ ಇತರ ಭತ್ಯೆಗಳನ್ನು ಒಳಗೊಂಡು 46,000 ರೂ.ವರೆಗೆ ಇರಲಿದೆ. ಇತರ ಭತ್ಯೆಗಳಿಗೂ ಅರ್ಹರಾಗಿರುತ್ತಾರೆ. ಕಾಯ್ದಿರಿಸುವ ಪಟ್ಟಿ(ವೈಟ್ ಲಿಸ್ಟ್): ಖಾಲಿ ಹುದ್ದೆಗಳ (ರಾಜ್ಯ-ವರ್ಗವಾರು) 50% ವರೆಗಿನ ವೈಟ್‌ಲಿಸ್ಟ್ ಪಟ್ಟಿ ತಯಾರಿಸಲಿದ್ದು, ಅಭ್ಯರ್ಥಿಗಳು ಅಭ್ಯರ್ಥಿಗಳು ಪ್ರಸ್ತುತ ಬ್ಯಾಚ್‌ಗೆ ಸೇರದಿದ್ದರೆ ಮತ್ತು ರಾಜೀನಾಮೆ ನೀಡಿದ್ದರೆ ಮಾತ್ರ ಈ ಪಟ್ಟಿಯಿಂದ ತ್ರೈಮಾಸಿಕ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದು.
ಅಧಿಕೃತ ಜಾಲತಾಣ: https://sbi.co.in/ ಅರ್ಜಿ ಸಲ್ಲಿಕೆಗೆ ಲಿಂಕ್: https://bank.sbi/web/careers/current-openings ಅಥವಾ ಸಹಾಯವಾಣಿ: 022-22820427.