Tumkur News: ಮಹಿಳೆಯ ದೇಹ ತುಂಡು, ತುಂಡಾಗಿ ಕತ್ತರಿಸಿದ ಪ್ರಕರಣ; ಕಿರುಕುಳಕ್ಕೆ ಬೇಸತ್ತು ಅತ್ತೆಯನ್ನೇ ಕೊಂದಿದ್ದ ಅಳಿಯ!
Tumkur News: ತುಮಕೂರು ತಾಲೂಕಿನ ಬೆಳ್ಳಾವಿಯ ಲಕ್ಷ್ಮಿದೇವಮ್ಮ (42) ಎಂಬಾಕೆಯನ್ನು ತುಂಡು ತುಂಡಾಗಿ ಕತ್ತರಿಸಿ ವಿವಿಧೆಡೆ ದೇಹದ ಅಂಗಾಂಗಗಳನ್ನು ವಿವಿಧ ಕಡೆ ಬಿಸಾಡಿದ ಆರೋಪದಡಿ ಲಕ್ಷ್ಮಿದೇವಮ್ಮ ಕಿರಿಯ ಮಗಳನ್ನು ವಿವಾಹವಾಗಿದ್ದ ಅಳಿಯ ದಂತ ವೈದ್ಯ ರಾಮಚಂದ್ರ ಸೇರಿ ಮೂವರನ್ನು ಕೊರಟಗೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.


ತುಮಕೂರು: ಮಹಿಳೆಯ ದೇಹ ತುಂಡು, ತುಂಡಾಗಿ ಕತ್ತರಿಸಿದ ಪ್ರಕರಣಕ್ಕೆ (Tumkur News) ಸಂಬಂಧಿಸಿ ಕೊಲೆಯಾದ ಮಹಿಳೆಯ ಅಳಿಯ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಬೆಳ್ಳಾವಿಯ ಲಕ್ಷ್ಮಿದೇವಮ್ಮ(42) ಅವರ ಕಿರುಕುಳ ತಾಳಲಾರದೆ ಅಳಿಯನೇ ಕೊಂದಿದ್ದ ಎಂಬ ವಿಚಾರ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಲಕ್ಷ್ಮಿದೇವಮ್ಮ ಕಿರಿಯ ಮಗಳನ್ನು ವಿವಾಹವಾಗಿದ್ದ ಅಳಿಯ, ದಂತ ವೈದ್ಯ ರಾಮಚಂದ್ರ ಸೇರಿ ಮೂವರನ್ನು ಕೊರಟಗೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಹೊಂಬಯ್ಯನಪಾಳ್ಯದ ಡಾ. ರಾಮಚಂದ್ರ (47), ತಾಲೂಕಿನ ಊರ್ಡಿಗೆರೆ ಹೋಬಳಿ ಕಲ್ಲಹಳ್ಳಿ ಗ್ರಾಮದ ಸತೀಶ್ (38), ಕಿರಣ್ (32) ಬಂಧಿತ ಆರೋಪಿಗಳು.
18 ಕಡೆ ದೇಹದ ತುಂಡು
ಇತ್ತೀಚೆಗೆ ಕೊರಟಗೆರೆಯ ಚಿಂಪುಗಾನಹಳ್ಳಿಯ ಮುತ್ಯಾಲಮ್ಮ ದೇವಸ್ಥಾನದ ಬಳಿಯಿಂದ ಸಿದ್ದರಬೆಟ್ಟದ ರಸ್ತೆವರೆಗೂ ಸರಿಸುಮಾರು 30 ಕಿಮೀ ವ್ಯಾಪ್ತಿಯ, 18 ಸ್ಥಳಗಳಲ್ಲಿ ಪತ್ತೆಯಾದ ಕಪ್ಪು, ಹಳದಿ ಕವರ್‌ಗಳಲ್ಲಿ ಮಹಿಳೆ ದೇಹದ ಅಂಗಾಂಗಳು ದೊರಕಿದ್ದವು. ಘಟನೆಯಿಂದ ಇಡೀ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದರು.
ಮೃತ ಲಕ್ಷ್ಮಿದೇವಮ್ಮ ತನ್ನ ಮಗಳನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಒತ್ತಾಯಿಸುತ್ತಿದ್ದಳಂತೆ. ಇದರಿಂದ ಬೇಸತ್ತ ಅಳಿಯ ದಂತ ವೈದ್ಯ ರಾಮಚಂದ್ರ, ತನ್ನ ಸ್ನೇಹಿತರಾದ ಸತೀಶ್ ಮತ್ತು ಕಿರಣ್ ಜತೆ ಸೇರಿ ಕೋಳಾಲ ಬಳಿಯ ಫಾರ್ಮ್‌ಹೌಸ್‌ನಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಂತರ ಆ.6ರಂದು ಯಾರಿಗೂ ಅನುಮಾನ ಬಾರದಿರಲಿ ಎಂದು ವಿವಿಧೆಡೆ ಅಂಗಾಂಗ ಎಸೆದಿದ್ದರು ಎನ್ನಲಾಗಿದೆ. ಮೃತರ ಗುರುತು ಪತ್ತೆ ಸಮಯದಲ್ಲಿ ರಾಮಚಂದ್ರ ಕಾಣಿಸಿರಲಿಲ್ಲ. ಕೊಲೆಯ ನಂತರ ಧರ್ಮಸ್ಥಳ ಪ್ರವಾಸಕ್ಕೆ ಹೋಗಿದ್ದರು. ಇದು ಅನುಮಾನಕ್ಕೆ ಕಾರಣವಾಗಿತ್ತು. ಆರೋಪಿಗಳನ್ನು ಧರ್ಮಸ್ಥಳದಲ್ಲಿ ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಕಾಣೆಯಾದ ಬಗ್ಗೆ ದೂರು ದಾಖಲು
ಆ. 3ರಂದು ಲಕ್ಷ್ಮಿದೇವಮ್ಮ ಮಗಳನ್ನು ನೋಡಿ ಬರಲು ಮನೆಯಿಂದ ಹೋಗಿದ್ದರು. ಆ. 7ರಂದು ತಾಲೂಕಿನ ಹೊಳವನಹಳ್ಳಿ ಹೋಬಳಿ ಚಿಂಪುಗಾನಹಳ್ಳಿ, ಕೋಳಾಲ ಹೋಬಳಿ ವ್ಯಾಪ್ತಿಯ ಮಧ್ಯವೆಂಕಟಾಪುರ ಹಾಗೂ ಚನ್ನರಾಯನದುರ್ಗಾ ಹೋಬಳಿ ವ್ಯಾಪ್ತಿಯ ಬೆಂಡೋಣೆ ಗ್ರಾಮದ ಬಳಿ ದೇಹದ ಕೆಲ ಅಂಗಾಂಗಗಳು ಪತ್ತೆಯಾಗಿದ್ದವು. ಅದೇ ದಿನ ರಾತ್ರಿ ಸಿದ್ಧರಬೆಟ್ಟದ ಸಮೀಪದಲ್ಲಿ ಕೊಳೆತ ಸ್ಥಿತಿಯಲ್ಲಿ ತಲೆ ಹಾಗೂ ಬಟ್ಟೆ ಸಿಕ್ಕಿತ್ತು.
ಲಕ್ಷ್ಮಿದೇವಮ್ಮ ಕಾಣೆಯಾದ ಬಗ್ಗೆ ಬೆಳ್ಳಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅವರ ಕುಟುಂಬಸ್ಥರನ್ನು ಕರೆದು ವಿಚಾರಿಸಿದ್ದು, ಕೈ ಮೇಲಿನ ಹಚ್ಚೆ, ಮುಖದ ಮೇಲಿನ ಕೆಲವು ಗುರುತು, ಉಡುಪುಗಳ ಆಧಾರದ ಮೇಲೆ ಕೊಲೆಯಾಗಿರುವುದು ಲಕ್ಷ್ಮಿದೇವಮ್ಮ ಎಂಬುವುದು ದೃಢಪಟ್ಟಿತ್ತು. 18 ಕಡೆಗಳಲ್ಲಿ ಅಂಗಾಂಗ ಎಸೆದಿದ್ದರಿಂದ ಆರೋಪಿಗಳ ಪತ್ತೆ ಸವಾಲಾಗಿತ್ತು. ಪ್ರಕರಣದ ತನಿಖೆಗೆ 8 ತಂಡಗಳನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Murder Case: ಮನೆಗೆ ಕರೆಸಿಕೊಂಡು ಯುವಕನ ಬರ್ಬರ ಹತ್ಯೆ! ದಂಪತಿ ಪೊಲೀಸ್ ಬಲೆಗೆ
ತನಿಖಾ ತಂಡದಲ್ಲಿ ಎಎಸ್‌ಪಿಗಳಾದ ಸಿ. ಗೋಪಾಲ್, ಎಂ.ಎಲ್. ಪುರುಷೋತ್ತಮ್, ಮಧುಗಿರಿ ಡಿವೈಎಸ್‌ಪಿ ಮಂಜುನಾಥ್, ಶಿರಾ ಡಿವೈಎಸ್‌ಪಿ ಬಿ.ಕೆ. ಶೇಖರ್, ತುಮಕೂರು ಡಿವೈಎಸ್‌ಪಿ ಚಂದ್ರಶೇಖರ್, ಕೊರಟಗೆರೆ ಸಿಪಿಐ ಅನಿಲ್, ಪಾವಗಡ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್, ಬಡವನಹಳ್ಳಿ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಕಾಂತರೆಡ್ಡಿ, ಮಧುಗಿರಿ ಸಿಪಿಐ ಹನುಮಂತರಾಯಪ್ಪ, ತುಮಕೂರು ನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಅವಿನಾಶ್ ಕಾರ್ಯನಿರ್ವಹಿಸಿದ್ದರು.