Digital Arrest: ಬೆಂಗಳೂರು ಪೊಲೀಸರ ಲೋಗೋ ತೋರಿಸಿ ನಿವೃತ್ತ ವೈದ್ಯೆಗೆ 70 ಗಂಟೆ ಡಿಜಿಟಲ್ ಆರೆಸ್ಟ್, ಹೃದಯಾಘಾತದಿಂದ ಸಾವು
Cyber Crime: ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ಸೈಬರ್ ವಂಚಕರು ಮೂರು ದಿನಗಳ ಕಾಲ ಈ ವೃದ್ಧೆಗೆ ನಿರಂತರ ಕಿರುಕುಳ ನೀಡಿದ್ದರು. ಇದಾದ ನಂತರ 76 ವರ್ಷದ ನಿವೃತ್ತ ವೈದ್ಯೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

-

ಹೈದರಾಬಾದ್ : ಬೆಂಗಳೂರು ಪೊಲೀಸರ (Bengaluru police) ಲೋಗೋ ಪ್ರದರ್ಶಿಸಿ ನಿವೃತ್ತ ಸರಕಾರಿ ವೈದ್ಯೆಯೊಬ್ಬರನ್ನು ಆನ್‌ಲೈನ್ ದುಷ್ಕರ್ಮಿಗಳು (Cyber crime) ತೆಲಂಗಾಣದ ಹೈದರಾಬಾದ್‌ನಲ್ಲಿ (Hyderabad) ಡಿಜಿಟಲ್ ಆರೆಸ್ಟ್‌ನಲ್ಲಿ (Digital Arrest) ಸುಮಾರು 70 ಗಂಟೆಗಳ ಕಾಲ ಸಿಲುಕಿಸಿದ್ದು, ಇದರಿಂದ ಬಳಲಿ ಹೃದಯಾಘಾತಕ್ಕೀಡಾಗಿ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರಿಗೆ 76 ವರ್ಷವಾಗಿತ್ತು, ಇವರು ನಿವೃತ್ತ ಸರ್ಕಾರಿ ವೈದ್ಯೆಯಾಗಿದ್ದರು ಎಂದು ಗೊತ್ತಾಗಿದೆ.
ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ಸೈಬರ್ ವಂಚಕರು ಮೂರು ದಿನಗಳ ಕಾಲ ಈ ವೃದ್ಧೆಗೆ ನಿರಂತರ ಕಿರುಕುಳ ನೀಡಿದ್ದರು. ಇದಾದ ನಂತರ 76 ವರ್ಷದ ನಿವೃತ್ತ ವೈದ್ಯೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ವಂಚಕರು 6.6 ಲಕ್ಷ ರೂ.ಗಳನ್ನು ಈಕೆಯಿಂದ ಸುಲಿಗೆ ಮಾಡಿದ್ದಾರೆ. ಅವರ ಸಾವಿನ ನಂತರವೂ ದುಷ್ಟರು ಬೆದರಿಕೆಗಳನ್ನು ಕಳುಹಿಸುತ್ತಲೇ ಇದ್ದರು ಎಂದು ವರದಿ ತಿಳಿಸಿದೆ.
ಮಲಕ್‌ಪೇಟೆಯ ಮಾಮಿಡಿಪುಡಿ ನಾಗಾರ್ಜುನ ಏರಿಯಾ ಆಸ್ಪತ್ರೆಯಲ್ಲಿ ಮುಖ್ಯ ಹಿರಿಯ ನಿವಾಸಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸಂತ್ರಸ್ತೆಯನ್ನು ಸೆಪ್ಟೆಂಬರ್ 5 ರಂದು 765******2 ಸಂಖ್ಯೆಯಿಂದ ವಾಟ್ಸಾಪ್ ವೀಡಿಯೊ ಕರೆಗಳ ಮೂಲಕ ಖೂಳರು ಸಂಪರ್ಕಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳ ಪ್ರೊಫೈಲ್ ಬೆಂಗಳೂರು ಪೊಲೀಸ್ ಲೋಗೋವನ್ನು ಪ್ರದರ್ಶಿಸಿತ್ತು.
ಸೆಪ್ಟೆಂಬರ್ 6ರಂದು, ತೀವ್ರ ಒತ್ತಡದಿಂದ, ವೈದ್ಯರು ತಮ್ಮ ಪಿಂಚಣಿ ಖಾತೆಯಿಂದ 6.6 ಲಕ್ಷ ರೂ.ಗಳನ್ನು ಮಹಾರಾಷ್ಟ್ರ ಮೂಲದ ಶೆಲ್ ಕಂಪನಿಗೆ ಸಂಬಂಧಿಸಿದ ಖಾತೆಗೆ ವರ್ಗಾಯಿಸಿದರು. ಇದರ ನಡುವೆಯೂ ಅವರಿಗೆ ಪದೇ ಪದೇ ಕರೆಗಳು, ವೀಡಿಯೊ ಸೆಷನ್‌ಗಳು ಮತ್ತು ನಕಲಿ ನೋಟಿಸ್‌ಗಳ ಮೂಲಕ ಕಿರುಕುಳ ಮುಂದುವರೆಯಿತು. ಸುಮಾರು ಮೂರು ದಿನಗಳ ನಿರಂತರ ಮಾನಸಿಕ ಒತ್ತಡದ ನಂತರ, ನಿವೃತ್ತ ವೈದ್ಯರು ಸೆಪ್ಟೆಂಬರ್ 8 ರಂದು ತಮ್ಮ ನಿವಾಸದಲ್ಲಿ ತೀವ್ರ ಎದೆನೋವಿನಿಂದ ಕುಸಿದು ಬಿದ್ದರು. ಅವರನ್ನು ಚಿಕಿತ್ಸಾಲಯಕ್ಕೆ ಕರೆದೊಯ್ಯಲಾಯಿತು. ಆದರೆ ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಅವರ ಅಂತ್ಯಕ್ರಿಯೆಯ ನಂತರವೇ ಕುಟುಂಬ ಸದಸ್ಯರಿಗೆ ವಂಚನೆಯ ಪೂರ್ಣ ಪ್ರಮಾಣದ ಬಗ್ಗೆ ಅರಿವಾಯಿತು. ವಂಚಕರು ಅವರ ಮರಣದ ನಂತರವೂ ಅವರ ಸಂಖ್ಯೆಗೆ ಸಂದೇಶಗಳು ಮತ್ತು ಕರೆಗಳನ್ನು ಕಳುಹಿಸುತ್ತಲೇ ಇದ್ದರು.
ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖಾಧಿಕಾರಿಗಳು ಹಣದ ಜಾಡನ್ನು ಅನುಸರಿಸುತ್ತಿದ್ದಾರೆ ಮತ್ತು ಆರೋಪಿಗಳನ್ನು ಗುರುತಿಸಲು ಮತ್ತು ಶೆಲ್ ಕಂಪನಿ ಖಾತೆಯನ್ನು ಪತ್ತೆಹಚ್ಚಲು ಕರೆ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: Cyber Crime: ಡಿಜಿಟಲ್ ಆರೆಸ್ಟ್ ಮೂಲಕ ಮಾಜಿ ಶಾಸಕರಿಗೇ 30 ಲಕ್ಷ ರೂ. ವಂಚನೆ!