Hampi Utsav 2025: ಹಂಪಿ ಉತ್ಸವಕ್ಕೆ ದಿನಗಣನೆ; ಫೆ.28 ರಂದು ಸಿಎಂ ಸಿದ್ದರಾಮಯ್ಯ ಚಾಲನೆ
Hampi Utsav 2025: ಫೆ.28 ಹಾಗೂ ಮಾರ್ಚ್ 1 ಮತ್ತು 2 ರಂದು ಮೂರು ದಿನಗಳ ಕಾಲ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ನಿಟ್ಟಿನಲ್ಲಿ ಹಂಪಿ ಉತ್ಸವ ಜರುಗಲಿದೆ. ಫೆ.28 ರಂದು ಶುಕ್ರವಾರ ಸಂಜೆ 6 ಗಂಟೆಗೆ ಗಾಯತ್ರಿ ಪೀಠದ ಬಳಿ ನಿರ್ಮಿಸಲಾಗಿರುವ ಎಂ.ಪಿ. ಪ್ರಕಾಶ್ ಪ್ರಧಾನ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ಹೊಸಪೇಟೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವಿಜಯನಗರ ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಲಾಗುತ್ತಿರುವ ಹಂಪಿ ಉತ್ಸವ-2025ಕ್ಕೆ ದಿನಗಣನೆ ಆರಂಭವಾಗಿದೆ. ಫೆ.28 ಹಾಗೂ ಮಾರ್ಚ್ 1 ಮತ್ತು 2 ರಂದು ಮೂರು ದಿನಗಳ ಕಾಲ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ನಿಟ್ಟಿನಲ್ಲಿ ಹಂಪಿ ಉತ್ಸವ (Hampi Utsav 2025) ಜರುಗಲಿದೆ. ಫೆ.28 ರಂದು ಶುಕ್ರವಾರ ಸಂಜೆ 6 ಗಂಟೆಗೆ ಗಾಯತ್ರಿ ಪೀಠದ ಬಳಿ ನಿರ್ಮಿಸಲಾಗಿರುವ ಎಂ.ಪಿ. ಪ್ರಕಾಶ್ ಪ್ರಧಾನ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ( CM Siddaramaiah) ಹಂಪಿ ಉತ್ಸವ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘನ ಉಪಸ್ಥಿತರಿರುವರು. ಶಾಸಕ ಎಚ್.ಆರ್. ಗವಿಯಪ್ಪ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ್, ಸಾರಿಗೆ ಮತ್ತು ಮುಜುರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ ಗೌರವ ಉಪಸ್ಥಿತರಿರುವರು.
ಉತ್ಸವದಲ್ಲಿ ವಿಶೇಷ ಕಾರ್ಯಕ್ರಮಗಳ ಆಕರ್ಷಣೆ
ಹಂಪಿ ಉತ್ಸವದ ಅಂಗವಾಗಿ ಫೆ.25 ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಹೊಸಪೇಟೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ಬೈಕ್ ರ‍್ಯಾಲಿ ನಡೆಯಲಿದೆ. ಫೆ.26 ಬುಧವಾರ ಸಂಜೆ 6 ಗಂಟೆಗೆ ಹಂಪಿ ವಿರೂಪಾಕ್ಷ ದೇವಸ್ಥಾನದ ಹತ್ತಿರದ ತುಂಗಭದ್ರ ನದಿ ತಟದಲ್ಲಿ ತುಂಗಾರತಿ ನಡೆಯಲಿದೆ. ಫೆ.27 ಗುರುವಾರ ಬೆಳಿಗ್ಗೆ 10.30 ಕ್ಕೆ ದೋಣಿ ವಿಹಾರಕ್ಕೆ ಚಾಲನೆ ನೀಡಲಾಗುವುದು. ಅಂದು ಮಧ್ಯಾಹ್ನ 3 ಗಂಟೆಗೆ ಹೊಸಪೇಟೆ ನಗರದ ವಡಕರಾಯನ ದೇವಸ್ಥಾನದ ರಥ ಬೀದಿಯಲ್ಲಿ ವಿಜಯನಗರ ವಸಂತ ವೈಭವ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಅಂಬಾರಿ ಹೊತ್ತ ಆನೆ ಮೆರವಣಿಗೆಯಲ್ಲಿ ಸಾಗಲಿದೆ. ಫೆ.28 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಹಂಪಿ ಬೈ ಸ್ಕೈಗೆ ಚಾಲನೆ ದೊರೆಯಲಿದೆ.
ಫೆ.28 ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕಮಲಾಪುರ ಹವಾಮಾ ಕಚೇರಿ ಮೈದಾನದಲ್ಲಿ ಎತ್ತುಗಳ ಪ್ರದರ್ಶನ, ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಭಾಗದಲ್ಲಿ ರಂಗೋಲಿ ಸ್ಪರ್ಧೆ, ಮಾತಂಗ ಪರ್ವತ ಮೈದಾನದಲ್ಲಿ ಫಲ ಪುಷ್ಪ ಪ್ರದರ್ಶನ, ಸಾವಯವ ಮತ್ತು ಸಿರಿಧಾನ್ಯಗಳ ವಸ್ತು ಪ್ರದರ್ಶನ, ಸಿರಿಧಾನ್ಯಗಳ ಪಾಕ ಸ್ಪರ್ಧೆ, ಆಹಾರ ಮೇಳ, ವಿಜ್ಞಾನಿಗಳಿಂದ ಉಪನ್ಯಾಸ ಹಾಗೂ ಸಂವಾದ, ಪುಸ್ತಕ ಪ್ರದರ್ಶನ, ಚಿತ್ರಕಲಾ ಶಿಬಿರ, ಶಿಲ್ಪಕಲಾ ಶಿಬಿರ, ಚಿತ್ರ ಸಂತೆ, ಮತ್ಸ್ಯ ಮೇಳಕ್ಕೆ ಚಾಲನೆ ನೀಡಲಾಗುವುದು. ಸಂಜೆ 6 ಗಂಟೆಗೆ ಹಂಪಿಯ ಆನೆ ಮತ್ತು ಕುದರೆ ಲಾಯ ಆವರಣದಲ್ಲಿ ವಿಜಯನಗರ ವೈಭವ ಸಾರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಉದ್ಘಾಟನೆಯಾಗಲಿದೆ.
ಮಾರ್ಚ್ 1 ರಂದು ಶುಕ್ರವಾರ ಬೆಳಗ್ಗೆ 7 ಗಂಟೆಗೆ ಹಂಪಿಯ ವಿಜಯ ವಿಠಲ ದೇವಾಲಯ ಆವರಣದಲ್ಲಿ ಯೋಗಾಸನ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಹೊಸ ಮಲಪನಗುಡಿಯ ವಿದ್ಯಾರಣ್ಯ ಪೀಠ ಹೈಸ್ಕೂಲ್ ಮೈದಾನದಲ್ಲಿ ಕುಸ್ತಿ ಸೇರಿದಂತೆ ಗ್ರಾಮೀಣ ಕ್ರೀಡೆಗಳಿಗೆ ಚಾಲನೆ ನೀಡಲಾಗುವುದು. ಕಮಲಾಪುರ ಹವಾಮಾ ಕಚೇರಿ ಮೈದಾನದಲ್ಲಿ ಕುರಿಗಳ ಪ್ರದರ್ಶನ ಜರುಗಲಿದೆ.
ಮಾರ್ಚ್ 2 ರಂದು ಭಾನುವಾರ ಕಮಲಾಪುರ ಹವಾಮಾ ಕಚೇರಿ ಮೈದಾನದಲ್ಲಿ ಶ್ವಾನ ಪ್ರದರ್ಶನ ಜರುಗಲಿದೆ. ಅಂದು ಮಧ್ಯಾಹ್ನ 3 ಗಂಟೆಗೆ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದ ಬಳಿ ಜಾನಪದ ವಾಹಿನಿ ಮೆರವಣಿಗೆ ಚಾಲನೆ ನೀಡಲಾಗುವುದು.
6 ವೇದಿಕೆಯಲ್ಲಿ ಮೈದಳೆಯಲಿದೆ ಹಂಪಿ ಮೆರಗು
2025 ರ ಹಂಪಿ ಉತ್ಸವದ ಅಂಗವಾಗಿ ಗಾಯತ್ರಿ ಪೀಠದ ಬಳಿಯ ಮುಖ್ಯ ವೇದಿಕೆಗೆ ಮಾಜಿ ಉಪಮಖ್ಯಮಂತ್ರಿ ಎಂ.ಪಿ. ಪ್ರಕಾಶ್ ಹೆಸರು ಇಡಲಾಗಿದೆ. ಇದರೊಂದಿಗೆ ಪ್ರತಿ ಬಾರಿಯಂತೆ ಎದುರು ಬಸವಣ್ಣ, ವಿರೂಪಾಕ್ಷೇಶ್ವರ ದೇವಸ್ಥಾನ, ಸಾಸುವೆ ಕಾಳು ಗಣಪ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹಂಪಿಯ ಆನೆ ಮತ್ತು ಕುದರೆ ಲಾಯ ಆವರಣದಲ್ಲಿ ವಿಜಯನಗರ ವೈಭವ ಸಾರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಾರಿ ಹೊಸದಾಗಿ ಮಹಾನವಮಿ ದಿಬ್ಬದ ಬಳಿ 6ನೇ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಇತರೆ ಹಾಗೂ ಸ್ಥಳೀಯ ಕಲಾವಿದರಿಗೆ ಹೆಚ್ಚು ಅವಕಾಶ ಲಭಿಸಿದ್ದು, ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಉತ್ಸವದಲ್ಲಿ ಚಲನಚಿತ್ರ ಕಲಾವಿದರ ದಂಡು
ಗಾಯತ್ರಿ ಪೀಠದ ಬಳಿಯ ಎಂ.ಪಿ. ಪ್ರಕಾಶ್ ಪ್ರಧಾನ ವೇದಿಕೆಯಲ್ಲಿ ಫೆ.28 ರಿಂದ ಮಾರ್ಚ್ 1 ಹಾಗೂ 2 ಸೇರಿ ಮೂರು ದಿನಗಳ ಕಾಲ ಸಂಜೆ 6 ಗಂಟೆಯಿಂದ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚಲನಚಿತ್ರ ಕಲಾವಿದರ ದಂಡು ಪಾಲ್ಗೊಳ್ಳಲಿದೆ.
ಮೊದಲ ದಿನ ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್, ಚಲನಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ನಿರ್ದೇಶಕ ತರುಣ್ ಸುಧೀರ್, ನಟಿಯರಾದ ಪ್ರೇಮ, ವೈಷ್ಣವಿ ಗೌಡ, ಬೇಬಿ ಸಿಹಿ, ಸೋನಲ್ ಮೊಂಥೆರೋ ಭಾಗವಹಿಸುವರು. ಗಾಯಕ ರಾಜೇಶ್ ಕೃಷ್ಣನ್ ಅವರ ತಂಡ ರಸಮಂಜರಿ ಕಾರ್ಯಕ್ರಮ ಪ್ರಸ್ತುತ ಪಡಿಸುವರು. ಇವರೊಂದಿಗೆ ಬಿಗ್ ಬಾಸ್ 11 ಸಂಚಿಕೆ ವಿಜೇತ ಹನುಮಂತು ಭಾಗವಹಿಸುವರು. ಖ್ಯಾತ ಮಿಮಿಕ್ರಿ ಕಲಾತಂಡದಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ.
ಎರಡನೇ ದಿನದ ಕಾರ್ಯಕ್ರಮದಲ್ಲಿ ನಟ ನಟಿಯರಾದ ಉಪೇಂದ್ರ, ಪ್ರಿಯಾಂಕ ಉಪೇಂದ್ರ, ವಸಿಷ್ಠ ಸಿಂಹ, ರ‍್ಯಾಪರ್ ರಚ್ಚು, ಶರಣ್ಯ ಶೆಟ್ಟಿ, ಮೋಕ್ಷ ಕುನಾಲ್, ಅನುಶ್ರೀ, ದಿವ್ಯಾ ಆಲೂರ್, ರಜನಿ ಬೀಟ್ ಗುರು ಭಾಗವಹಿಸುವರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನೇತೃತ್ವದ ತಂಡ ರಸಮಂಜರಿ ಕಾರ್ಯಕ್ರಮ ಪ್ರಸ್ತುತ ಪಡಿಸುವರು. ಸರಿಗಮಪ 21ರ ಸ್ಪರ್ಧಿ ಬಾಳು ಬೆಳಗುಂದಿ ಭಾಗವಹಿಸುವರು. ಕಾಮಿಡಿ ಕಿಲಾಡಿ ತಂಡ ಹ್ಯಾಸ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದೆ.
ಈ ಸುದ್ದಿಯನ್ನೂ ಓದಿ | ELECRAMA 2025: ಎಲೆಕ್ರಾಮಾ 2025ನಲ್ಲಿ ಹೊಸ ರೋಬೋಟ್‌ಗಳನ್ನು ಪರಿಚಯಿಸಿದ ಡೆಲ್ಟಾ
ಮೂರನೆಯ ದಿನ ನಟ ನಟಿಯರಾದ ವಿಜಯ್ ರಾಘವೇಂದ್ರ, ರಮ್ಯಾ, ಅನು ಪ್ರಭಾಕರ್, ದಿಗಂತ್, ಐಂದ್ರಿತಾ ರೈ, ರಾಗಿಣಿ ದ್ವಿವೇದಿ, ಶೃತಿ ಹರಿಹರನ್, ಭಾವನಾ ರಾವ್ ಭಾಗವಹಿಸುವರು. ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ರಸಮಂಜರಿ ಕಾರ್ಯಕ್ರಮ ಪ್ರಸ್ತುತ ಪಡಿಸುವರು. ಮಾಳೂ ನಿಪನಾಳ ಗೀತ ಗಾಯನ ನಡೆಸಿಕೊಡುವರು. ಗಿಚ್ಚಿ ಗಿಲಿಗಲಿ ತಂಡ ಹ್ಯಾಸ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದೆ.