ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hasanamba Jathra 2025: ನಾಳೆಯಿಂದ ಹಾಸನಾಂಬ ಜಾತ್ರೆ; ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

Hasanamba Utsav 2025: ಹಾಸನಾಂಬ ದರ್ಶನೋತ್ಸವಕ್ಕೆ ಈ ಬಾರಿ 25 ಲಕ್ಷಕ್ಕೂ ಹೆಚ್ಚು ಮಂದಿ ಬರುವ ನಿರೀಕ್ಷೆ ಇದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ದೇವಿ ದರ್ಶನಕ್ಕೆ 80 ವರ್ಷಕ್ಕಿಂತ ಮೇಲಿನವರು ಹಾಗೂ ಅಂಗವಿಕಲರಿಗೆ ನೇರದರ್ಶನ ವ್ಯವಸ್ಥೆ ಮಾಡಲಾಗಿದೆ. ಗಂಟೆಗೆ 6 ಸಾವಿರ ಮಂದಿಯಂತೆ ಪ್ರತಿದಿನ ಒಂದೂವರೆ ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ನಾಳೆಯಿಂದ ಹಾಸನಾಂಬ ಜಾತ್ರೆ; ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

-

Prabhakara R Prabhakara R Oct 8, 2025 5:18 PM

ಹಾಸನ, ಅ.08: ಹಾಸನದ ಅಧಿದೇವತೆ ಶ್ರೀ ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ (Hasanamba Jathra 2025) ಗುರುವಾರದಿಂದ (ಅ.9) ಆರಂಭವಾಗಲಿದ್ದು, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆಯ ದರ್ಶನೋತ್ಸವ ಅಕ್ಟೋಬರ್​ 9ರಿಂದ 23ರವರೆಗೆ ನಡೆಯಲಿದೆ. ಅ.10ರಿಂದ 22ರ ತನಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರಲಿದೆ. ಈ ಬಾರಿ ರಾಜ್ಯ ಸೇರಿ ದೇಶದ ವಿವಿಧ ಭಾಗಗಳಿಂದ 25 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನಕ್ಕೆ ಬರುವ ನಿರೀಕ್ಷೆ ಇದ್ದು, ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ದೇಗುಲದ ಇತಿಹಾಸ

ಶ್ರೀ ಸಿದ್ದೇಶ್ವರ ಮತ್ತು ಶ್ರೀ ಹಾಸನಾಂಬ ದೇವಿಯ ದೇಗುಲವು ಸುಮಾರು ೧೨ನೇ ಶತಮಾನದಲ್ಲಿ ಪಾಳೆಗಾರ ಕೃಷ್ಣಪ್ಪ ನಾಯಕ ಹಾಗೂ ಸಂಜೀವ ನಾಯಕ ಅವರ ಕಾಲದಲ್ಲಿ ಸ್ಥಾಪಿತವಾಗಿದೆ ಎಂದು ಈ ಸ್ಥಳದಲ್ಲಿ ದೊರೆತ ಶಿಲಾಶಾಸನಗಳಿಂದ ತಿಳಿದು ಬರುತ್ತದೆ.

ಶ್ರೀ ಹಾಸನಾಂಬ ದೇವಿಯು ಶಕ್ತಿ ಸ್ವರೂಪಿಣಿಯಾಗಿದ್ದು ಸ್ಥಳ ಪುರಾಣದ ಪ್ರಕಾರ ಸಪ್ತ ಮಾತೃಕೆಯರು ವಾರಣಾಸಿಯಿಂದ ವಾಯು ವಿಹಾರಕ್ಕಾಗಿ ಹಾಸನಕ್ಕೆ ಬಂದರು, ಅವರಲ್ಲಿ ವೈಷ್ಣವಿ, ಮಹೇಶ್ವರಿ, ಕೌಮಾರಿ ದೇವತೆಯರು ದೇವಸ್ಥಾನದ ಸುತ್ತಲಿನ ಹುತ್ತದಲ್ಲಿ ನೆಲೆಸಿದ್ದಾರೆಂಬುದು ಸ್ಥಳೀಯ ಜನರ ನಂಬಿಕೆಯಾಗಿದೆ. ಹಾಗೆಯೇ ಕೆಂಚಮ್ಮ, ಬ್ರಾಹ್ಮಿಯಂತ ಸಪ್ತ ಮಾತೃಕೆಯರು ಆಲೂರು ಹಾಗೂ ಹಾಸನದ ವಿವಿಧ ಸ್ಥಳಗಳಲ್ಲಿ ನೆಲೆಸಿದ್ದಾರೆಂದು ಪುರಾಣ ಹೇಳುತ್ತದೆ.

ಪೌರಾಣಿಕ ಕಥೆಯನುಸಾರ ಶ್ರೀ ಹಾಸನಾಂಬ ದೇವಿಯ ಸ್ವರೂಪವು, ಭಕ್ತಿಯ ಪಾವಿತ್ರ್ಯತೆ ಹಾಗೂ ಮೈತ್ರಿಯ ಸಂಕೇತವಾಗಿದೆ. ಈ ಪ್ರಾಂತದಲ್ಲಿ ಅಂದು ಅಂಧಕಾಸುರ ಎಂಬ ರಾಕ್ಷಸ ಜನ ಸಾಮಾನ್ಯರಿಗೆ ಉಪಟಳ ನೀಡುತ್ತಿದ್ದನು. ಅವನನ್ನು ನಿಗ್ರಹಿಸಲು ಶಕ್ತಿ ಸ್ವರೂಪಿಣಿಯಾಗಿ ಬಂದ ಶ್ರೀ ಹಾಸನಾಂಬ ದೇಪರಾಕ್ರಮ ಮೆರೆದು ಈ ಪ್ರಾಂತ್ಯದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಿದರು ಎನ್ನುತ್ತದೆ. ಈ ದೇಗುಲದ ಕೆತ್ತನೆ, ದ್ರಾವಿಡ ಶೈಲಿಯ ರಾಜಗೋಪುರ ಇರುವುದನ್ನು ಕಾಣಬಹುದು.

ಇನ್ನು ಈ ಹಿಂದೆ ಹಾಸನಕ್ಕೆ ಸಿಂಹಾಸನಪುರಿ ಎಂಬ ಹೆಸರಿತ್ತು. ಅದು ಕಾಲಾನಂತರದಲ್ಲಿ ಹಾಸನ ಎಂದಾಗಿದೆ. ಹಿಂದೆ ಸುಮಾರು 12 ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ಒಂದು ವಿಗ್ರಹ ಸಿಕ್ಕಿತು. ಅದರ ಮುಖ ಮಂದಸ್ಮಿತವನ್ನು ಹೊಂದಿದ್ದರಿಂದ ಹಸನ ಅಂದರೆ ಹಾಸನ ಎಂಬ ಹೆಸರು ಬಂದಿತು ಎಂತಲೂ ಹೇಳುತ್ತಾರೆ.

ಈ ದೇವಾಲಯದ ಪ್ರಾಂಗಣದಲ್ಲಿ ಮುಖ್ಯವಾಗಿ ಮೂರು ದೇಗುಲಗಳಿವೆ. ಅವುಗಳೆಂದರೆ ದರ್ಬಾರ್ ಗಣಪತಿ ದೇವಾಲಯ, ಹಾಸನಾಂಬ ದೇವಾಲಯ ಹಾಗೂ ಸಿದ್ಧೇಶ್ವರ ದೇವಾಲಯ. ಇಲ್ಲಿ ಇನ್ನೊಂದು ಮುಖ್ಯವಾದ ಸ್ಥಳವೆಂದರೆ ಕಳ್ಳಪ್ಪನ ಗುಡಿ. ಇಲ್ಲಿ 3 ವಿಗ್ರಹಗಳಿದ್ದು ಅವುಗಳು ದೇವಾಲಯವನ್ನು ಕಳ್ಳತನ ಮಾಡಲು ಬಂದು ದೇವಿಯ ಅವಕೃಪೆಗೆ ಒಳಗಾದ ಕಳ್ಳರದ್ದು ಎಂದು ಹೇಳುತ್ತಾರೆ. ಹಾಸನಾಂಬ ದೇಗುಲವನ್ನು ದೀಪಾವಳಿಯ ಸಂದರ್ಭದಲ್ಲಿ ಕೆಲವೇ ದಿನಗಳ ಕಾಲ ಮಾತ್ರ ದೇವಾಲಯವನ್ನು ತೆರೆಯಲಾಗುತ್ತದೆ.

ಹಾಸನಾಂಬೆಯ ಪವಾಡ

ಪ್ರತಿ ವರ್ಷ ದೇವಾಲಯ ಮುಚ್ಚುವ ಮೊದಲು, ಒಂದು ದೈವಿಕ ಆಚರಣೆ ಮಾಡಲಾಗುತ್ತದೆ. ಗರ್ಭಗುಡಿಯಲ್ಲಿ ತುಪ್ಪದ ದೀಪವನ್ನು ಬೆಳಗಿಸಿ, ನೈವೇಧ್ಯೆ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ದೇವಿಯನ್ನು ಕೊನೆಯ ಬಾರಿಗೆ ಕಣ್ತುಂಬಿಕೊಂಡು ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುತ್ತದೆ. ಅಚ್ಚರಿ ಸಂಗತಿ ಏನೆಂದರೆ, ಒಂದು ವರ್ಷದ ಬಳಿಕ ಅಂದರೆ ಮುಂದಿನ ವರ್ಷ ದೀಪಾವಳಿಯ ಅವಧಿಯಲ್ಲಿ ಗರ್ಭಗುಡಿಯ ಬಾಗಿಲು ತೆರೆದಾಗ ಆಶ್ಚರ್ಯಕರವಾಗಿ ತುಪ್ಪದ ದೀಪವು ಆಗಲೂ ಉರಿಯುತ್ತಿರುವುದು ಕಂಡುಬರುತ್ತದೆ. ಇದಲ್ಲದೆ, ಹೂವುಗಳು ಬಾಗಿಲು ಮುಚ್ಚುವಾಗ ಎಷ್ಟು ತಾಜಾವಾಗಿರುತ್ತದೆಯೋ ಅಷ್ಟೇ ತಾಜಾತನದಿಂದ ಕೂಡಿರುತ್ತದೆ. ಪ್ರಸಾದವು ಕೆಟ್ಟಿರುವುದಿಲ್ಲ. ಇದು ಹಾಸನಾಂಬೆಯ ಪವಾಡ ಎಂದು ಭಕ್ತರು ನಂಬುತ್ತಾರೆ.

ಈ ಸುದ್ದಿಯನ್ನೂ ಓದಿ | Dasara Holidays: ಜಾತಿ ಸಮೀಕ್ಷೆ ಹಿನ್ನೆಲೆ ಶಾಲೆಗಳ ದಸರಾ ರಜೆ 10 ದಿನ ವಿಸ್ತರಿಸಿದ ಸರ್ಕಾರ

25 ಲಕ್ಷಕ್ಕೂ ಹೆಚ್ಚು ಮಂದಿ ಬರುವ ನಿರೀಕ್ಷೆ

Hasanamba Utsav 2025 (1)

ಹಾಸನಾಂಬ ದರ್ಶನೋತ್ಸವ ಹಿನ್ನೆಲೆಯಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಬುಧವಾರ ದೇವಸ್ಥಾನದಲ್ಲಿ ಸಿದ್ಧತೆ ಪರಿಶೀಲಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಹಾಸನಾಂಬ ದರ್ಶನೋತ್ಸವಕ್ಕೆ ಈ ಬಾರಿ 25 ಲಕ್ಷಕ್ಕೂ ಹೆಚ್ಚು ಮಂದಿ ಬರುವ ನಿರೀಕ್ಷೆ ಇದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ದೇವಿ ದರ್ಶನಕ್ಕೆ 80 ವರ್ಷಕ್ಕಿಂತ ಮೇಲಿನವರು ಹಾಗೂ ಅಂಗವಿಕಲರಿಗೆ ನೇರದರ್ಶನ ವ್ಯವಸ್ಥೆ ಮಾಡಲಾಗಿದೆ. ಗಂಟೆಗೆ 6 ಸಾವಿರ ಮಂದಿಯಂತೆ ಪ್ರತಿದಿನ ಒಂದೂವರೆ ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ವಿಐಪಿ, ವಿವಿಐಪಿ ಪಾಸ್ ರದ್ದುಪಡಿಸಿದ್ದು, ಶಿಷ್ಟಾಚಾರ ದರ್ಶನ ವ್ಯವಸ್ಥೆಯಲ್ಲಿಯೂ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.