KV Prabhakar: ರಾಷ್ಟ್ರೀಯ ಬ್ಯಾಂಕ್‌ಗಳ ಪಾಲಿಗೆ ಪತ್ರಕರ್ತರು ಹೊರಗಿನವರು: ಕೆ.ವಿ.ಪ್ರಭಾಕರ್
KV Prabhakar: ಪತ್ರಕರ್ತರ ಸಹಕಾರಿ ಸಂಘಕ್ಕೆ 75 ವರ್ಷಗಳು ತುಂಬಿದ ಸಂದರ್ಭದಲ್ಲಿ ಆಯೋಜಿಸಿದ್ದ "ಅಮೃತ ಸಂಭ್ರಮ" ಕಾರ್ಯಕ್ರಮ ಉದ್ಘಾಟಿಸಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ಮಾತನಾಡಿದ್ದಾರೆ. ದುಡಿಯುವ ವರ್ಗಗಳ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ನಡೆದ ಸಹಕಾರ ಚಳವಳಿಯ ಭಾಗವಾಗಿ ಪತ್ರಕರ್ತರ ಸಹಕಾರ ಸಂಘವೂ ಜನ್ಮ ತಾಳಿದೆ. ಈ ಸಂಘದ ಸ್ಥಾಪನೆಗೆ ಮುನ್ನುಡಿ ಬರೆದ ಎಲ್ಲಾ ಹಿರಿಯರನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದರು.


ಬೆಂಗಳೂರು: 2016ರಲ್ಲಿ ನೋಟು ನಿಷೇಧ ಜಾರಿ ಆದಾಗ ದೇಶದ ನಗರ ಆರ್ಥಿಕತೆ ಪಾತಾಳ ಸೇರಿತು. ಆದರೆ, ಗ್ರಾಮೀಣ ಭಾರತದ ಆರ್ಥಿಕತೆ ಕುಸಿಯದಂತೆ ತಡೆದದ್ದು ಸಹಕಾರಿ ತತ್ವ ಮತ್ತು ಸಹಕಾರಿ ಚಳವಳಿಯ ಮೌಲ್ಯ ಎನ್ನುವುದನ್ನು ನಾವು ಮರೆಯಬಾರದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ (KV Prabhakar) ಅಭಿಪ್ರಾಯಪಟ್ಟರು. ಪತ್ರಕರ್ತರ ಸಹಕಾರಿ ಸಂಘಕ್ಕೆ 75 ವರ್ಷಗಳು ತುಂಬಿದ ಸಂದರ್ಭದಲ್ಲಿ ಆಯೋಜಿಸಿದ್ದ "ಅಮೃತ ಸಂಭ್ರಮ" ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯ ಚಳವಳಿಕ ಜತೆ ಜತೆಗೇ ನಡೆದದ್ದು ನಮ್ಮ ದೇಶದ ಸಹಕಾರ ಚಳವಳಿ. ಮಹಾತ್ಮಗಾಂಧಿ ದೇಶದ ಸ್ವಾತಂತ್ರ್ಯಕ್ಕಾಗಿ 1920 ರಲ್ಲಿ "ಅಸಹಾಕಾರ ಚಳವಳಿಗೆ" ಕರೆ ಕೊಡುವ ಮೊದಲೇ ರಾಜ್ಯದಲ್ಲಿ 1904 ರಲ್ಲಿ ಸಹಕಾರ ಕಾಯ್ದೆ ಜಾರಿ ಆಗಿತ್ತು. ದುಡಿಯುವ ವರ್ಗಗಳ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ನಡೆದ ಸಹಕಾರ ಚಳವಳಿಯ ಭಾಗವಾಗಿ "ಪತ್ರಕರ್ತರ ಸಹಕಾರ ಸಂಘವೂ ಜನ್ಮ ತಾಳಿದೆ". ಈ ಸಂಘದ ಸ್ಥಾಪನೆಗೆ ಮುನ್ನುಡಿ ಬರೆದ ಎಲ್ಲಾ ಹಿರಿಯರನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದರು.
ಸಹಕಾರಿ ಸಂಘಗಳು, ಸ್ವ-ಸಹಾಯ ಸಂಘಗಳ ಚಳವಳಿಗಳು ಇಂದಿರಾಗಾಂಧಿಯವರ ಬ್ಯಾಂಕ್‌ಗಳ ರಾಷ್ಟ್ರೀಕರಣಕ್ಕೆ ಪ್ರೇರಣೆ ಆಗಿದ್ದವು ಎಂದ ಅವರು, ʼಪರಸ್ಪರʼ ಎನ್ನುವುದು ಸಹಕಾರ ತತ್ವದ ಮೂಲ ಮೌಲ್ಯ ಆಗಿರುವಂತೆಯೇ ಪತ್ರಿಕೋದ್ಯಮದ ಮೂಲ ಮಂತ್ರವೂ ಇದೇ ಆಗಿದೆ. ಪತ್ರಕರ್ತರು ಸಹಕಾರ ಸಂಘ ಸ್ಥಾಪಿಸುವ ಮೊದಲೇ ಕೃಷಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮೀನುಗಾರರ ಸಹಕಾರ ಸಂಘಗಳು ಸ್ಥಾಪನೆ ಆಗಿದ್ದವು. ದುಡಿಯುವ ವರ್ಗಗಳನ್ನು, ಶ್ರಮಿಕ ಸಮುದಾಯಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಸಹಕಾರಿ ಮನೋಭಾವದಿಂದಲೇ ಪತ್ರಕರ್ತರ ಸಹಕಾರ ಸಂಘವನ್ನೂ ನಮ್ಮ ಹಿರಿಯರು ಸ್ಥಾಪಿಸಿದರು ಎಂದರು.
ಪತ್ರಕರ್ತರು ಮತ್ತು ಪತ್ರಿಕಾ ಕಾರ್ಮಿಕರು ರಾಷ್ಟ್ರೀಯ ಬ್ಯಾಂಕ್‌ಗಳ ಪಾಲಿಗೆ ಹೊರಗಿನವರು. ನಾನೂ ಸಹ ಗೃಹ ಸಾಲ ಪಡೆಯುವಾಗ ಸಿಕ್ಕಾಪಟ್ಟೆ ರಗಳೆ ಅನುಭವಿಸಿದೆ. ಪತ್ರಕರ್ತರಿಗೆ ಖಾಸಗಿಯಾಗಿ ಸಾಲ ಕೊಡುವವರೂ ಇಲ್ಲ. ವಾಪಸ್ ಕೇಳೋದು ಕಷ್ಟ ಎನ್ನುವ ಭಯ ಖಾಸಗಿಯವರಿಗೆ ಇದ್ದೇ ಇದೆ. ಹೀಗಾಗಿ ಈ ಸಂಘದಲ್ಲಿ ನಾವೇ ಪರಸ್ಪರ ಒಬ್ಬರಿಗೊಬ್ಬರು ಜಾಮೀನು ಆಗುವ ಮೂಲಕ ಪರಸ್ಪರರ ಅಗತ್ಯಗಳಿಗೆ ಸ್ಪಂದಿಸುತ್ತಿದ್ದೇವೆ. ಕಷ್ಟದಲ್ಲಿದ್ದಾಗ ಜಾಮೀನು ಹಾಕಿಸಿಕೊಂಡವರು, ಜಾಮೀನು ಹಾಕಿದವರಿಗೆ ವಂಚಿಸಬಾರದು ಎಂದು ನನ್ನ ವಿನಂತಿ. ʼಪರಸ್ಪರತೆʼ ಮೌಲ್ಯ ಕಾಪಾಡದಿದ್ದರೆ ಸಹಕಾರ ಬ್ಯಾಂಕ್‌ಗಳು ಯಶಸ್ವಿಯಾಗುವುದು ಕಷ್ಟ ಎಂದು ಹೇಳಿದರು.
ನಿವೇಶನ ಖರೀದಿ ಮತ್ತು ಗೃಹ ನಿರ್ಮಾಣಕ್ಕೆ ನೆರವಾಗುವ ಉದ್ದೇಶದಿಂದ 1949ರಲ್ಲಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಕೇವಲ ರೂ. 353.12 ದುಡಿಯುವ ಬಂಡವಾಳ ದೊಂದಿಗೆ ಆರಂಭವಾಗಿ ಈಗ ರೂ. 10ಕೋಟಿಗೂ ಮೀರಿದ ದುಡಿಯುವ ಬಂಡವಾಳ ಹೊಂದಿ, ನಿರಂತರ ನಿವ್ವಳ ಲಾಭವನ್ನೂ ಗಳಿಸುತ್ತಿರುವುದು ಸಂತೋಷದ ವಿಷಯ. ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ 'ಎ' ಶ್ರೇಣಿಯನ್ನು ಪಡೆದು ಮುನ್ನಡೆಯುತ್ತಿರುವುದು ಸಂಘದ ವಹಿವಾಟು ಪಾರದರ್ಶಕವಾಗಿರುವುದು, ಸಂಘ ಒಂದು ಕುಟುಂಬದಂತೆ ಪತ್ರಕರ್ತರ ನೋವು ನಲಿವುಗಳಿಗೆ ಸ್ಪಂದಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿ ಎಂದರು.
ಪ್ರತಿ ವರ್ಷ ಸದಸ್ಯರ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವುದು, ಕೊಡಗು ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರ ನಿಧಿಗೆ ದೇಣಿಗೆ ನೀಡಿರುವುದು ಸಂಘದ ಸಾಮಾಜಿಕ ಹೊಣೆಗಾರಿಕೆಗೆ ಸಾಕ್ಷಿ. ಪ್ರಸಕ್ತ ಆಡಳಿತ ಮಂಡಳಿ ಸೆಪ್ಟೆಂಬರ್ 2023ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಸಂಘದ ಚಟುವಟಿಕೆಗಳನ್ನು ವಿಸ್ತರಿಸಲು ಅವಿರತ ಶ್ರಮವಹಿಸುತ್ತಿರುವುದು ಶ್ಲಾಘನೀಯ. ಸದಸ್ಯರಿಗೆ ಮನೆ ಮತ್ತು ನಿವೇಶನ ಖರೀದಿಗಾಗಿ ರೂ. 30 ಲಕ್ಷದವರೆಗೆ ಭದ್ರತಾ ಸಾಲ ಸೌಲಭ್ಯ ನೀಡಲು ನಿರ್ಧರಿಸಿರುವುದು ಸಂಘವು ಸುಭದ್ರವಾಗಿರುವುದರ ಸೂಚಕವಾಗಿದೆ. ಕಡಿಮೆ ಬಡ್ಡಿ ದರದಲ್ಲಿ ರೂ.3 ಲಕ್ಷಗಳ ವರೆಗೆ ವೈಯಕ್ತಿಕ ಸಾಲ, ರೂ.25 ಸಾವಿರದ ವರೆಗೆ ವೈದ್ಯಕೀಯ ನೆರವು ಹಾಗೂ 2 ಲಕ್ಷ ಮೌಲ್ಯದ ಅಪಘಾತ ವಿಮಾ ರಕ್ಷಣೆ ಒದಗಿಸುತ್ತಿದೆ ಎಂದು ತಿಳಿಸಿದರು.
ಸಹಕಾರ ಸಂಘ ಮುಂದಿಟ್ಟಿರುವ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಕಾರಾತ್ಮಕವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ | KV Prabhakar: ವಿಶೇಷ ಚೇತನರು ಹುಟ್ಟುತ್ತಲೇ ಮನುಷ್ಯ ಜಗತ್ತಿನ ಸಣ್ಣತನಗಳಿಂದ ಮುಕ್ತರಾದವರು: ಕೆ.ವಿ. ಪ್ರಭಾಕರ್
ಈ ಸಂದರ್ಭದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಸಂಘದ ಅಧ್ಯಕ್ಷ ರಮೇಶ್ ಪಾಳ್ಯ, ಕಾರ್ಯದರ್ಶಿ ರಮೇಶ್, ಹಿರೇಜಂಬೂರು ಸೇರಿದಂತೆ ಪದಾಧಿಕಾರಿಗಳು ಮತ್ತು ನಿರ್ದೇಶಕರು ಉಪಸ್ಥಿತರಿದ್ದರು.