ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ST status for Kurubas: ಕುರುಬ ಸಮುದಾಯ ಎಸ್‌ಟಿ ಪಟ್ಟಿಗೆ: ಸೆ.16ಕ್ಕೆ ವಿಶೇಷ ಸಭೆ ಕರೆದ ರಾಜ್ಯ ಸರ್ಕಾರ

ST status for Kurubas: ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸೆ.16 ಮಧ್ಯಾಹ್ನ 3 ಗಂಟೆಗೆ ಬಹುಮಹಡಿಗಳ ಕಟ್ಟಡದಲ್ಲಿ ಸಭೆ ನಡೆಯಲಿದೆ. ಈ ಸಭೆಗೆ ಅಗತ್ಯ ಮಾಹಿತಿ ಅಥವಾ ದಾಖಲೆಗಳೊಂದಿಗೆ ಹಾಜರಾಗುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ನಿರ್ದೇಶಕರು ಸೇರಿ ವಿವಿಧ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕುರುಬ ಸಮುದಾಯ ಎಸ್‌ಟಿ ಪಟ್ಟಿಗೆ: ಸೆ.16ಕ್ಕೆ ವಿಶೇಷ ಸಭೆ ಕರೆದ ಸರ್ಕಾರ

-

Prabhakara R Prabhakara R Sep 14, 2025 9:09 PM

ಬೆಂಗಳೂರು: ರಾಜ್ಯದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು (ST status for Kurubas) ಚರ್ಚಿಸಲು ರಾಜ್ಯ ಸರ್ಕಾರವು ಸೆಪ್ಟೆಂಬರ್ 16ರಂದು ವಿಶೇಷ ಸಭೆ ಕರೆದಿದೆ. ಈ ಕುರಿತಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಸಭಾ ಸೂಚನಾ ಪತ್ರವನ್ನು ಹೊರಡಿಸಿದ್ದಾರೆ.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸೆ.16 ಮಧ್ಯಾಹ್ನ 3 ಗಂಟೆಗೆ ಬಹುಮಹಡಿಗಳ ಕಟ್ಟಡದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 331ರಲ್ಲಿ ಸಭೆ ನಡೆಯಲಿದೆ. ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಚರ್ಚಿಸಲು ಸಭೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಭೆಗೆ ಅಗತ್ಯ ಮಾಹಿತಿ ಅಥವಾ ದಾಖಲೆಗಳೊಂದಿಗೆ ಹಾಜರಾಗುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ನಿರ್ದೇಶಕರು, ರಾಜ್ಯ ಬುಡಕಟ್ಟು ಸಂಸೋಧನಾ ಸಂಸ್ಥೆ ನಿರ್ದೇಶಕರು, ಎಸ್‌ಸಿಎಸ್‌ಪಿ/ಟಿಎಸ್‌ಪಿ ನೋಡಲ್‌ ಏಜೆನ್ಸಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕೇಂದ್ರಕ್ಕೆ ಶಿಫಾರಸು ಮಾಡಿದ್ದ ರಾಜ್ಯ ಸರ್ಕಾರ

ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು 2023ರಲ್ಲಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿತ್ತು. ಮೈಸೂರು, ಚಾಮರಾಜನಗರ ಜಿಲ್ಲೆಯ ಕೆಲವು ಭಾಗಗಳಲ್ಲಿ ವಾಸಿಸುತ್ತಿರುವ ಕಾಡು ಕುರುಬರು, ಜೇನು ಕುರುಬರು ಎಸ್‌ಟಿ ಮೀಸಲಾತಿಯ ಸೌಲಭ್ಯ ಪಡೆಯುತ್ತಿದ್ದಾರೆ. ಉಳಿದ ಕುರುಬ ಸಮುದಾಯ ಪ್ರಸ್ತುತ ರಾಜ್ಯದ 2 'ಎ' ಪಟ್ಟಿಯಲ್ಲಿದೆ. ಹೀಗಾಗಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂದು ಶಿಫಾರಸು ಮಾಡಲಾಗಿತ್ತು.

ಇನ್ನು ಪರಿಶಿಷ್ಟ ಪಂಗಡದ ಮೀಸಲಾತಿಗೆ ಒತ್ತಾಯಿಸಿ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ 2022ರ ಜನವರಿ 15ರಂದು ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಫೆ.7ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ, ಎಸ್‌ಟಿಗೆ ಸೇರಿಸುವಂತೆ ಹಕ್ಕೊತ್ತಾಯ ಮಾಡಿದ್ದರು.

'ಕುರುಬರು ಭಾರತದ ಮೂಲ ನಿವಾಸಿಗಳು. 1868 ಮತ್ತು 1901ರ ಜನಗಣತಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿತ್ತು. ಸ್ವಾತಂತ್ರ್ಯಾ ನಂತರ ಕೈಬಿಡಲಾಗಿದೆ. ದೇವರಾಜ ಅರಸು ಆಡಳಿತದ ಅವಧಿಯಲ್ಲಿ ಜೇನು ಕುರುಬ ಮತ್ತು ಕಾಡು ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರು. ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಸೌಲಭ್ಯ ಸಿಗುತ್ತಿದೆ. ಹೀಗಾಗಿ ರಾಜ್ಯದಲ್ಲೂ ಕುರುಬರನ್ನೂ ಎಸ್‌ಟಿ ಪಟ್ಟಿಗೆ ಸೇರಿಸಬೇಕು ಎಂಬುವುದು ಸಮುದಾಯದ ಬೇಡಿಕೆಯಾಗಿದೆ.