ರಾಮನಗರ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಒಬ್ಬ ಯುವಕ ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಯುವಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚನ್ನಪಟ್ಟಣ ತಾಲೂಕಿನ ಪಾಂಡುಪುರ ಗ್ರಾಮದ ಸಮೀಪ ನಡೆದಿದೆ.
ಬೆಂಗಳೂರಿನ ಹೆಬ್ಬಾಳ ಮೂಲದ ಮೋಹನ್ ಮೃತರು. ಬೆಂಗಳೂರಿನಿಂದ ಕಬ್ಬಾಳು ದೇವಸ್ಥಾನಕ್ಕೆ ಐವರು ಸ್ನೇಹಿತರು ಬರುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಮೋಹನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ.
ಸ್ಥಳಕ್ಕೆ ಅಕ್ಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತಾಲೂಕು ಆಸ್ಪತ್ರೆಗೆ ರವಾನಿಸಿದ್ದು, ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ಯಾಸ್ ಸಿಲಿಂಡರ್ ಸ್ಫೋಟ; ತಾಯಿ, ಮೂವರು ಮಕ್ಕಳಿಗೆ ಗಂಭೀರ ಗಾಯ
ಚಿಂತಾಮಣಿ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು, ತಾಯಿ, ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ (Gas Cylinder Blast) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಯಪಲ್ಲಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ನಗರದ ಹೊರವಲಯದ ಕರಿಯಪಲ್ಲಿಯ ವೆಂಕಟೇಶ್ವರ ಶಾಲೆ ಸಮೀಪ ಲಕ್ಷ್ಮಿದೇವಮ್ಮ ಎಂಬುವರ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಅವಘಡ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಮನೆಯ ಚಾವಣಿ ಹಾನಿಯಾಗಿ, ಮನೆಯಲ್ಲಿದ್ದ ತಾಯಿ ಲಕ್ಷ್ಮೀದೇವಿ (32), ಮಕ್ಕಳಾದ ಹರ್ಷವರ್ಧನ್ (14), ಸಂಜಯ್ (13) ಹರಿಪ್ರಿಯ (11) ಗಾಯಗೊಂಡಿದ್ದು, ಇವರನ್ನು ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಯಿ ಲಕ್ಷ್ಮೀದೇವಿ ಹಾಗೂ ಮಗ ಹರ್ಷವರ್ಧನ್ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಇಬರು ಮಕ್ಕಳು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ಯಾಸ್ ಸಿಲಿಂಡರ್ ಸ್ಫೋಟದ ತೀವ್ರತೆಗೆ ಮನೆಯ ಗೃಹಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ. ವಿಷಯ ತಿಳಿದ ತಕ್ಷಣ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆಟವಾಡುತ್ತಿದ್ದ ಮಗು ಬಾವಿಗೆ ಬಿದ್ದು ಮೃತ್ಯು
ವಿಜಯಪುರ: ಆಟವಾಡುತ್ತಿದ್ದ ಮಗು ತೆರೆದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ಮೂರು ವರ್ಷದ ಹರ್ಷಿತ್ ಪಾಟೀಲ್ ಬಾವಿಗೆ ಬಿದ್ದು ಮೃತಪಟ್ಟ ಮಗು. ಶುಕ್ರವಾರದಂದು ಮನೆಯಿಂದ ಮಗು ನಾಪತ್ತೆಯಾಗಿತ್ತು. ಮಗು ಎಲ್ಲಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಕಂಗಾಲಾದ ಕುಟುಂಬಸ್ಥರು ಹರ್ಷಿತ್ ಹುಡುಕಾಟದಲ್ಲಿ ತೊಡಗಿದ್ದರು. ಇಂದು ಸ್ಥಳೀಯರು ಬಾವಿಯಲ್ಲಿ ಇಳಿದು ನೋಡಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ.
ಈ ಸುದ್ದಿಯನ್ನೂ ಓದಿ | Dr Ayyappan: ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ. ಅಯ್ಯಪ್ಪನ್ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆ
ಕುಟುಂಬಸ್ಥರು ಮಗುವನ್ನು ತೆರೆದ ಬಾವಿಯ ಆಸುಪಾಸಲ್ಲಿ ಆಡಲು ಬಿಟ್ಟಾಗ ಅನಾಹುತ ನಡೆದಿದೆ ಎನ್ನಲಾಗಿದೆ. ಘಟನೆ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.