ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sigandur bridge: ಸಿಗಂದೂರು ಸೇತುವೆ; ಕರ್ನಾಟಕದ ಅತಿ ಉದ್ದದ ಕೇಬಲ್‌ ಬ್ರಿಡ್ಜ್‌ನ ವಿಶೇಷತೆಗಳೇನು?

Sigandur bridge: ಸಿಗಂದೂರು ಸೇತುವೆ ದೇಶದ ಎರಡನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆ ಆಗಿದೆ. ಈ ಸೇತುವೆಯು ಸಾಗರ ಮತ್ತು ಸಿಗಂದೂರು ನಡುವಿನ ಪ್ರಯಾಣದ ಅವಧಿಯನ್ನು 2 ಗಂಟೆಗಳಷ್ಟು ಕಡಿಮೆ ಮಾಡಲಿದೆ. ಜತೆಗೆ ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಗಳಿಗೆ ಉತ್ತೇಜನ ನೀಡಲಿದೆ.

ಸಿಗಂದೂರು ಸೇತುವೆ; ರಾಜ್ಯದ ಅತಿ ಉದ್ದದ ಕೇಬಲ್‌ ಬ್ರಿಡ್ಜ್‌ನ ವಿಶೇಷತೆಗಳೇನು?

Profile Prabhakara R Jul 14, 2025 2:56 PM

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನಲ್ಲಿ ಶರಾವತಿ ನದಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಂಬಾರಗೋಡ್ಲು – ಕಳಸವಳ್ಳಿ ಸೇತುವೆಯನ್ನು (Sigandur bridge) ಕೇಂದ್ರ ಸಚಿವೆ ನಿತಿನ್‌ ಗಡ್ಕರಿ ಅವರು ಲೋಕಾರ್ಪಣೆ ಮಾಡಿದ್ದಾರೆ. ಸುಮಾರು 2.1 ಕಿಲೋಮೀಟರ್​​ ಉದ್ದವಿರುವ ಈ ಸೇತುವೆ ದೇಶದ ಎರಡನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆ ಆಗಿದೆ. ಈ ಸೇತುವೆಯು ಸಾಗರ ಮತ್ತು ಸಿಗಂದೂರು ನಡುವಿನ ಪ್ರಯಾಣದ ಅವಧಿಯನ್ನು 2 ಗಂಟೆಗಳಷ್ಟು ಕಡಿಮೆ ಮಾಡಲಿದೆ. ಜತೆಗೆ ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಗಳಿಗೆ ಉತ್ತೇಜನ ನೀಡಲಿದೆ.

ಲಿಂಗನಮಕ್ಕಿ ಜಲಾಶಯದ ನಿರ್ಮಾಣದಿಂದ 1960ರ ದಶಕದಲ್ಲಿ ಸಾಗರ ತಾಲೂಕಿನ ಹಲವು ಗ್ರಾಮಗಳು ಶರಾವತಿ ಹಿನ್ನೀರಿನಿಂದ ಸಂಪರ್ಕ ಕಳೆದುಕೊಂಡಿದ್ದವು. ಈ ಸೇತುವೆಯ ಬೇಡಿಕೆ ಆರಂಭದಿಂದಲೂ ಇದ್ದರೂ, 2018ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಉದ್ಘಾಟನೆ ಮಾಡಿದ್ದಾರೆ. ಸಿಗಂದೂರು ಸೇತುವೆಯ ವಿಶೇಷತೆಗಳ ಬಗ್ಗೆ ವಿವರ ಇಲ್ಲಿದೆ.



ಸಿಗಂದೂರು ಸೇತುವೆಯ ವಿಶೇಷತೆಗಳು:

ಉದ್ದ ಮತ್ತು ವಿನ್ಯಾಸ: 2.1 ಕಿ.ಮೀ ಉದ್ದ ಮತ್ತು 16 ಮೀಟರ್ ಅಗಲವಿರುವ ಈ ಸೇತುವೆಯು 740 ಮೀಟರ್ ಕೇಬಲ್ ಆಧಾರಿತ ಸೇತುವೆ ಹೊಂದಿದೆ. ಇದು ಎಕ್ಸ್ಟ್ರಾಡೋಸ್ಟ್ ಬ್ಯಾಲೆನ್ಸ್ ಕ್ಯಾಂಟಿಲಿವರ್ ವಿನ್ಯಾಸವನ್ನು ಒಳಗೊಂಡಿದ್ದು, ಸಾಂಪ್ರದಾಯಿಕ ಸೇತುವೆಗಳಿಗಿಂತ ಹೆಚ್ಚಿನ ಸ್ಥಿರತೆಯನ್ನು ಒದಗಿಸುತ್ತದೆ.

ನಿರ್ಮಾಣ ವೆಚ್ಚ: 473 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ 378.3 ಕೋಟಿ ರೂ.ಗಳನ್ನು ಸೇತುವೆಯ ನಿರ್ಮಾಣಕ್ಕೆ ಮಾತ್ರ ಬಳಸಲಾಗಿದೆ.

ತಾಂತ್ರಿಕ ವಿಶೇಷತೆ: 17 ಪಿಯರ್‌ಗಳು ಮತ್ತು ಎರಡು ಅಬಟ್‌ಮೆಂಟ್‌ಗಳನ್ನು ಬಳಸಿಕೊಂಡು ನಿರ್ಮಿಸಲಾಗಿದ್ದು, ಸಾಮಾನ್ಯ ಸೇತುವೆಗೆ 100 ಪಿಯರ್‌ಗಳ ಅಗತ್ಯವಿರುತ್ತದೆ. ಕೇಬಲ್‌ಗಳು ಡೆಕ್‌ ಲಂಬ ಭಾರವನ್ನು ಗೋಪುರಗಳಿಗೆ ವರ್ಗಾಯಿಸುತ್ತವೆ.

ಗಟ್ಟಿತನದ ಗುಣಮಟ್ಟ: ಶರಾವತಿ ನದಿಯ ಭೋರ್ಗರೆವ ಪ್ರವಾಹವನ್ನು ತಡೆದುಕೊಳ್ಳಲು ಸೇತುವೆ ವಿನ್ಯಾಸಗೊಳಿಸಲಾಗಿದ್ದು, 100 ವರ್ಷಗಳ ಆಯುಷ್ಯವನ್ನು ಖಾತ್ರಿಪಡಿಸಲು ಲೋಡ್ ಟೆಸ್ಟಿಂಗ್‌ನಲ್ಲಿ 22 ಮಿಮೀ ವಿಚಲನದೊಂದಿಗೆ 100 ಟನ್ ಭಾರವನ್ನು ಯಶಸ್ವಿಯಾಗಿ ತಡೆದುಕೊಂಡಿದೆ.



ಸೇತುವೆಯ ಪ್ರಯೋಜನಗಳು:

  • ಸಾಗರದಿಂದ ಸಿಗಂದೂರಿಗೆ 80 ಕಿಮೀ ರಸ್ತೆ ಪ್ರಯಾಣವನ್ನು ಸುಮಾರು 16 ಕಿಮೀಗೆ ಇಳಿಸುವ ಮೂಲಕ 2 ಗಂಟೆಗಳಷ್ಟು ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ.
  • ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ಸುಗಮಗೊಳಿಸುವುದರ ಜತೆಗೆ ಕೊಲ್ಲೂರು ಮತ್ತು ಸಿಗಂದೂರು ದೇವಸ್ಥಾನಗಳನ್ನು ಸಂಪರ್ಕಿಸುತ್ತದೆ, ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ.
  • ಶರಾವತಿ ಹಿನ್ನೀರಿನಿಂದ ಬೇರ್ಪಟ್ಟ 40ಕ್ಕೂ ಹೆಚ್ಚು ಗ್ರಾಮಗಳಿಗೆ ಸಾಗರ ಮತ್ತು ಇತರ ಊರುಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ 60 ವರ್ಷಗಳ ದೀರ್ಘಕಾಲದ ಬೇಡಿಕೆ ಈಡೇರಿದೆ.
  • ದೀರ್ಘಕಾಲದಿಂದ ಬಳಸಲಾಗುತ್ತಿದ್ದ ದೋಣಿ ಸಾರಿಗೆ ವ್ಯವಸ್ಥೆಯನ್ನು ಬದಲಿಸುವುದರ ಜತೆಗೆ ತುರ್ತು ಸಂದರ್ಭಗಳಿಗಾಗಿ ದೋಣಿಗಳನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಗುವುದು.

ಈ ಸುದ್ದಿಯನ್ನೂ ಓದಿ | Sigandur Bridge: ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆ ಮಾಡಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ