ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Spoorthi Vani: ಈ ಜಗತ್ತಿನಲ್ಲಿ ಎಲ್ಲವೂ ಪ್ರತಿಫಲನ, ಪ್ರತಿಕ್ರಿಯೆ ಹಾಗೂ ಪ್ರತಿಧ್ವನಿಯೇ ಆಗಿದೆ

Sadguru Sri Madhusudan Sai: ನೀವು ದೇವರಿಂದ ಏನನ್ನು ಪಡೆದುಕೊಳ್ಳುತ್ತೀರೋ, ಅದು ನಿಮ್ಮನ್ನೇ ಅವಲಂಬಿಸಿದೆಯೇ ಹೊರತು ದೇವರನ್ನು ಅವಲಂಬಿಸಿಲ್ಲ. ದೇವರು ನಿಮ್ಮೊಂದಿಗೆ ಹೇಗೆ ವರ್ತಿಸುತ್ತಾನೆ ಎನ್ನುವುದು ನೀವು ದೇವರ ಜೊತೆಗೆ ಯಾವ ರೀತಿ ವರ್ತಿಸುವಿರಿ ಎನ್ನುವುದನ್ನು ಅವಲಂಬಿಸಿದೆ. ಇದಕ್ಕೆ ಪ್ರಹ್ಲಾದನ ಕಥೆ ಉತ್ತಮ ಉದಾಹರಣೆಯಾಗಿದೆ. ಈ ಬಗ್ಗೆ ಆಧ್ಯಾತ್ಮಕ ಚಿಂತಕ ಸದ್ಗುರು ಶ್ರೀಮಧುಸೂದನ ಸಾಯಿ ಅವರ ಬರಹ ಇಲ್ಲಿದೆ.

ಎಲ್ಲವೂ ಪ್ರತಿಫಲನ, ಪ್ರತಿಕ್ರಿಯೆ ಹಾಗೂ ಪ್ರತಿಧ್ವನಿಯೇ ಆಗಿದೆ

Prabhakara R Prabhakara R Aug 27, 2025 6:00 AM
  • ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸ್ಫೂರ್ತಿ ವಾಣಿ ಅಂಕಣ

ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರು ರಚಿಸಿ ಹಾಡಿದ ತೆಲುಗು ಪದ್ಯವೊಂದು ಸೊಗಸಾಗಿದೆ. “ಪಾಪಭೀತಿ, ದೈವಪ್ರೀತಿ ಇಲ್ಲದೆ, ಮಾನವೀಯತೆಯ ಅವನತಿಯಿಂದ ಇಂದು ವಿಶ್ವಶಾಂತಿಯು ಚೂರು ಚೂರಾಗಿದೆ” ಎನ್ನುವುದು ಆ ಪದ್ಯದ ಭಾವ.

ಪಾಪಭೀತಿ ಎಂದರೆ ಪಾಪದ ಕುರಿತು ಇರುವ ಭಯ ಎಂದು ಅರ್ಥ. ಇತ್ತೀಚಿನ ದಿನಗಳಲ್ಲಿ ಜನರಿಗೆ ತಪ್ಪು ಮಾಡುವ ಕುರಿತು ಭಯವೇ ಇಲ್ಲವಾಗಿದೆ. ಮನುಷ್ಯರಲ್ಲಿ ಮಾನವೀಯತೆ ಕಡಿಮೆಯಾಗುತ್ತಿದೆ. ಇದರ ಜೊತೆಗೆ ದೇವರ ಮೇಲೆ ಪ್ರೇಮ ಇಲ್ಲದಿರುವ ಕಾರಣದಿಂದಾಗಿ ಶಾಂತಿಯು ಹೊರಟುಹೋಗಿದೆ. ಇದೇ ಸಂದರ್ಭದಲ್ಲಿ ಜನರು ಪಾಪಕಾರ್ಯಗಳನ್ನು ಹೆಚ್ಚು ಪ್ರೀತಿಸುತ್ತಿದ್ದಾರೆ. ಜನರಲ್ಲಿ ದೇವರ ಕುರಿತು ಭಯವಿದೆಯೇ ಹೊರತು ಪ್ರೇಮವಿಲ್ಲ. ಇದು ತಿರುವುಮುರುವಾಗಬೇಕು. ದೇವರು ನಮ್ಮನ್ನು ಶಿಕ್ಷಿಸುತ್ತಾನೆ ಎಂಬ ಭಯ ನಮಗಿದ್ದರೂ ನಾವು ತಪ್ಪುಗಳನ್ನು ಮಾಡುತ್ತಲೇ ಹೋಗುತ್ತೇವೆ. ಆದರೆ, ನಿಮಗೆ ಒಂದು ವಿಷಯ ಗೊತ್ತೇ?

ದೇವರು ಯಾರನ್ನೂ ಶಿಕ್ಷಿಸುವುದಿಲ್ಲ ಅಥವಾ ಪುರಸ್ಕರಿಸುವುದಿಲ್ಲ. ನೀವು ಪರೀಕ್ಷೆಯಲ್ಲಿ ಹೇಗೆ ಬರೆದಿರುತ್ತೀರೋ, ಹಾಗೆ ನಿಮಗೆ ಅಂಕಗಳು ಬರುತ್ತವೆ ಅಲ್ಲವೇ? ನೀವು ಚೆನ್ನಾಗಿ ಬರೆದರೆ, ನಿಮ್ಮ ಮೇಲೆ ಗುರುಗಳಿಗೆ ವಿಶೇಷವಾದ ಅನುಗ್ರಹವಿದ್ದರೆ, ನಿಮಗೆ ಸ್ವಲ್ಪ ಗ್ರೇಸ್ ಮಾರ್ಕ್ಸ್‌ ಸಿಗಬಹುದು. ಹಾಗೆಯೇ ದೇವರೂ ಕೂಡ ಯಾರನ್ನೂ ಶಿಕ್ಷಿಸುವುದಿಲ್ಲ. ನಿಮ್ಮ ವರ್ತನೆಗೆ ಅನುಗುಣವಾಗಿ ಫಲಿತಾಂಶಗಳು ಸಿಗುತ್ತವೆ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಇದನ್ನೇ ಹೇಳಿದ್ದಾನೆ. "ನಾನು ಯಾರಿಗೂ ಪಾಪವನ್ನಾಗಲೀ ಮತ್ತು ಪುಣ್ಯವನ್ನಾಗಲೀ ಕೊಡುವುದಿಲ್ಲ. ಅವರೆಲ್ಲ ತಮ್ಮ ಕರ್ಮಗಳಿಗನುಸಾರವಾಗಿಯೇ ಎಲ್ಲವನ್ನೂ ಅನುಭವಿಸುತ್ತಾರೆ”. ನೀವು ದೇವರಿಂದ ಏನನ್ನು ಪಡೆದುಕೊಳ್ಳುತ್ತೀರೋ, ಅದು ನಿಮ್ಮನ್ನೇ ಅವಲಂಬಿಸಿದೆಯೇ ಹೊರತು ದೇವರನ್ನು ಅವಲಂಬಿಸಿಲ್ಲ. ದೇವರು ನಿಮ್ಮೊಂದಿಗೆ ಹೇಗೆ ವರ್ತಿಸುತ್ತಾನೆ ಎನ್ನುವುದು ನೀವು ದೇವರ ಜೊತೆಗೆ ಯಾವ ರೀತಿ ವರ್ತಿಸುವಿರಿ ಎನ್ನುವುದನ್ನು ಅವಲಂಬಿಸಿದೆ.

ನಿಮಗೆ ಆಗುವ ಅನುಭವಗಳನ್ನು ಅವಲೋಕಿಸಿದರೆ ದೇವರ ಜೊತೆಗಿನ ನಿಮ್ಮ ಬಾಂಧವ್ಯ ಹೇಗಿದೆ ಎನ್ನುವುದನ್ನು ವ್ಯಾಖ್ಯಾನಿಸಬಹುದು. ಈ ಜಗತ್ತಿನಲ್ಲಿ ಎಲ್ಲವೂ ಪ್ರತಿಫಲನ, ಪ್ರತಿಕ್ರಿಯೆ ಹಾಗೂ ಪ್ರತಿಧ್ವನಿಯೇ ಆಗಿದೆ. ನೀವು ದೇವರನ್ನು ಪ್ರೇಮದಿಂದ ನೋಡಿದರೆ, ನಿಮಗೆ ಅವನಲ್ಲಿ ಪ್ರೇಮವೇ ಕಂಡು ಬರುತ್ತದೆ. ನೀವೇ ದೇವರನ್ನು ಸಿಟ್ಟಿನಿಂದ ನೋಡಿದರೆ, ನಿಮ್ಮ ಕೋಪವನ್ನೇ ದೇವರಲ್ಲಿ ಕಾಣುತ್ತೀರಿ. ನೀವು ದೇವರನ್ನು ದ್ವೇಷದಿಂದ ನೋಡಿದರೆ, ದೇವರಲ್ಲೂ ನಿಮಗೆ ದ್ವೇಷವೇ ಕಾಣಿಸುತ್ತದೆ.

ಪ್ರಹ್ಲಾದನು ನಾರಾಯಣನನ್ನು ಆರಾಧಿಸಿದ. ಆದರೆ, ಅವನ ತಂದೆ ಹಿರಣ್ಯಕಶಿಪುವು ನಾರಾಯಣನನ್ನು ದ್ವೇಷಿಸಿದ. ಹಿರಣ್ಯಕಶಿಪುವು ಪ್ರಹ್ಲಾದನಿಗೆ ನಾರಾಯಣನ ಜಪ ಮಾಡಬಾರದೆಂದು ಆದೇಶಿಸಿದ. ಆದರೆ, ಪ್ರಹ್ಲಾದನು ತಂದೆಯ ಮಾತನ್ನು ಧಿಕ್ಕರಿಸಿ, ನಾರಾಯಣನ ನಾಮಜಪವನ್ನು ಮುಂದುವರಿಸಿದ. ನಾರಾಯಣನನ್ನು ದ್ವೇಷಿಸಿದ ಹಿರಣ್ಯಕಶಿಪುವಿನಲ್ಲಿ ದ್ವೇಷದ ಭಾವನೆಯೇ ಬೆಳೆಯಿತು. ಇತ್ತ ಪ್ರಹ್ಲಾದನಿಗೆ ನಾರಾಯಣನ ಕುರಿತು ಪ್ರೇಮಭಾವನೆ ಇದ್ದುದರಿಂದ, ಅವನು ಪ್ರೇಮವನ್ನೇ ಅನುಭವಿಸಿದ. ದೇವರು ಪ್ರತಿಫಲನ, ಪ್ರತಿಕ್ರಿಯೆ ಹಾಗೂ ಪ್ರತಿಧ್ವನಿಯೇ ಆಗಿದ್ದಾನೆ ಎಂಬುದರ ಅರ್ಥವೇ ಇದು. ನಾವು ಹೇಗಿದ್ದೇವೋ ಹಾಗೆ ದೇವರು ನಮ್ಮನ್ನು ನೋಡುತ್ತಾನೆ. ನೀವು ಒಳ್ಳೆಯವರಾಗಿದ್ದರೆ, ಎಲ್ಲೆಲ್ಲಿಯೂ ಒಳ್ಳೆಯದನ್ನೇ ಕಾಣುತ್ತೀರಿ ಮತ್ತು ನೀವು ಒಳ್ಳೆಯತನದಲ್ಲಿಯೇ ದೇವರನ್ನು ಕಾಣುತ್ತೀರಿ.

(ಲೇಖಕರು ಆಧ್ಯಾತ್ಮಿಕ ಚಿಂತಕರು)

ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ

ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.