ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹಿಳೆಯರ ರಕ್ಷಣೆಗೆ ಧಾವಿಸಿದ ರಾಜ್ಯ ಸರ್ಕಾರ; ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತವಾಗಿ ವಿಡಿಯೊ ಚಿತ್ರೀಕರಣ ಮಾಡಿದರೆ ಕಠಿಣ ಕ್ರಮ ಎಂದ ಸಿದ್ದರಾಮಯ್ಯ

CM Siddaramaiah: ಸಾರ್ವಜನಿಕ ಸ್ಥಳಗಲಲ್ಲಿ ಗುಪ್ತವಾಗಿ ಕ್ಯಾಮೆರಾ ಇಟ್ಟು ಮಹಿಳೆಯರ ವಿಡಿಯೊ ಚಿತ್ರೀಕರಿಸುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದರ ನಿಯಂತ್ರನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅಂತಹ ಕೃತ್ಯದಲ್ಲಿ ಭಾಗಿಯಾಗುವವ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯಯ್ಯ ಎಚ್ಚರಿಸಿದ್ದಾರೆ.

ಗುಪ್ತವಾಗಿ ಮಹಿಳೆಯರ ವಿಡಿಯೊ ಚಿತ್ರೀಕರಣ ಮಾಡಿದರೆ ಕಠಿಣ ಕ್ರಮ

ಮುಖ್ಯಮಂತ್ರಿ ಸಿದ್ದರಾಮಯ್ಯ.

Profile Ramesh B Jul 10, 2025 4:40 PM

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತವಾಗಿ ಮಹಿಳೆಯರ ವಿಡಿಯೊ ಚಿತ್ರೀಕರಣ ಮಾಡುವುದು ಹಾಗೂ ಅವರಿಗೆ ಕಿರುಕುಳ ನೀಡುವುದು, ವಿಡಿಯೊಗಳನ್ನು ಜಾಲತಾಣಗಳಲ್ಲಿ ಶೇರ್‌ ಮಾಡುವುದು ಮುಂತಾದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಣಿಸಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಅವರು ಎಕ್ಸ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತವಾಗಿ ಮಹಿಳೆಯರ ವಿಡಿಯೊ ಚಿತ್ರೀಕರಣ ಮಾಡುವುದು ಹಾಗೂ ಅವರಿಗೆ ಕಿರುಕುಳ ನೀಡುವುದು, ವಿಡಿಯೊಗಳನ್ನು ಜಾಲತಾಣಗಳಲ್ಲಿ ಶೇರ್‌ ಮಾಡಿ ಅವರ ಮಾನಹಾನಿ ಮಾಡುವುದು ಮಹಿಳೆಯರ ಗೌರವಕ್ಕೆ ಧಕ್ಕೆಯುಂಟು ಮಾಡುತ್ತದೆ. ಇದು ನಮ್ಮ ಕರ್ನಾಟಕದ ಪರಂಪರೆಯಲ್ಲ ಎಂದು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಇಂತಹ ಸಾಕಷ್ಟು ಘಟನೆಗಳು ಬೆಳಕಿಗೆ ಬಂದಿದ್ದು, ತಕ್ಷಣವೇ ಕೃತ್ಯ ಎಸಗಿದವರನ್ನು ಬಂಧಿಸುವುದು ಸೇರಿದಂತೆ ಎಲ್ಲ ಅಗತ್ಯ ಕಾನೂನು ಕ್ರಮಗಳನ್ನು ಸರ್ಕಾರ ಜರುಗಿಸಿದೆ. ಇದರ ಜತೆಗೆ ನಾವು ಇಂತಹ ಕೃತ್ಯಗಳ ಮೇಲೆ ತೀವ್ರ ನಿಗಾ ವಹಿಸಿದ್ದೇವೆ ಎಂದು ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಎಕ್ಸ್‌ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: Recording videos: ಶೌಚಾಲಯದಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ಚಿತ್ರೀಕರಣ; ಬೆಂಗಳೂರಿನಲ್ಲಿ ಇನ್ಫೋಸಿಸ್‌ ನೌಕರ ಅರೆಸ್ಟ್

ಶಿಕ್ಷಾರ್ಹ ಅಪರಾಧ

ಮಹಿಳೆಯರು ಕೀಳುದೃಷ್ಟಿಯ ಅಥವಾ ಯಾವುದೇ ತರನಾದ ಕಿರುಕುಳಗಳ ಭಯವಿಲ್ಲದೆ ಧೈರ್ಯವಾಗಿ ನಡೆಯಲಾರದ ಸ್ಥಿತಿಗೆ ನಮ್ಮ ಸಮಾಜ ಹೋಗುತ್ತಿದೆ ಎಂದಾದರೆ, ನಾಗರಿಕರಾಗಿ ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ? ಎಂಬುದನ್ನು ಎಲ್ಲರೂ ತಮ್ಮ ಆತ್ಮಸಾಕ್ಷಿಯನ್ನೊಮ್ಮೆ ಪ್ರಶ್ನಿಸಿಕೊಳ್ಳಬೇಕಿದೆ. ಇವು ನಮ್ಮ ಸಾಮಾಜಿಕ ಮೌಲ್ಯಗಳಿಗೆ ವಿರುದ್ಧವಾದವು ಮಾತ್ರವಲ್ಲ, ಕಾನೂನಿನ ರೀತಿಯಲ್ಲಿ ಶಿಕ್ಷಾರ್ಹ ಅಪರಾಧ ಕೂಡ ಹೌದು ಎಂದಿದ್ದಾರೆ.

ನಾಡಿನ ಮಹಿಳೆಯರ ಜತೆ ನಮ್ಮ ಸರ್ಕಾರ ದೃಢವಾಗಿ ನಿಂತಿದೆ. ಅವರ ಸುರಕ್ಷೆ ಮತ್ತು ಘನತೆ ನಮ್ಮ ಸರ್ಕಾರದ ಆದ್ಯತೆಯಾಗಿದೆ. ನಿಮ್ಮ ಮೇಲಿನ ದೌರ್ಜನ್ಯಗಳ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆಗೆ ನಾವು ಬದ್ಧರಿದ್ದೇವೆ ಎಂಬುದನ್ನು ನಾಡಿನ ನನ್ನ ಎಲ್ಲ ತಾಯಂದಿರಿಗೆ, ಅಕ್ಕತಂಗಿಯರಿಗೆ ತಿಳಿಸಲು ಬಯಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಯಾರೇ ಆಗಲಿ ಮಹಿಳೆಯರ ಘನತೆಗೆ ಚ್ಯುತಿಯುಂಟು ಮಾಡುವ ವಿಡಿಯೊಗಳು ಅಥವಾ ಖಾತೆಗಳನ್ನು ಆನ್‌ಲೈನ್‌ನಲ್ಲಿ ನೋಡಿದರೆ ತಕ್ಷಣವೇ ಸೈಬರ್ ಸೆಲ್‌ನ ದೂರವಾಣಿ ಸಂಖ್ಯೆ: 1930ಗೆ ಕರೆಮಾಡಿ ಅಥವಾ ವೆಬ್‌ಸೈಟ್: cybercrime.gov.inನಲ್ಲಿ ದೂರು ದಾಖಲಿಸಿ. ಎಲ್ಲರೂ ಜತೆಗೂಡಿ ಪ್ರತಿ ಮಹಿಳೆಯೂ ಸುರಕ್ಷಿತವಾಗಿ, ಗೌರವದಿಂದ ಮತ್ತು ಸ್ವಾತಂತ್ರ್ಯದಿಂದ ಬದುಕುವ ಶ್ರೇಷ್ಠ ಕರ್ನಾಟಕವನ್ನು ನಿರ್ಮಿಸೋಣ ಎಂದು ಸಿಎಂ ಕರೆ ನೀಡಿದ್ದಾರೆ.

ಮಹಿಳಾ ಉದ್ಯೋಗಿಗಳ ವಿಡಿಯೊ ಚಿತ್ರೀಕರಣ ನಡೆಸುತ್ತಿದ್ದಾತನ ಬಂಧನ

ಬೆಂಗಳೂರು: ಇತ್ತೀಚೆಗೆ ಶೌಚಾಲಯದಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಈ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಜತೆಗೆ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಮೂಡಿದ್ದವು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್ ಕಂಪನಿಯಲ್ಲಿ ಈ ಘಟನೆ ನಡೆದಿದ್ದು, ಎಚ್.ಆರ್. ಪರಿಶೀಲನೆ ವೇಳೆ ಕೃತ್ಯ ಬೆಳಕಿಗೆ ಬಂದಿತ್ತು. ಬಂಧಿತನನ್ನು ಅದೇ ಕಂಪನಿಯ ಉದ್ಯೋಗಿ, ಆಂಧ್ರ ಪ್ರದೇಶದ ಮೂಲದ ಸ್ಮಷ್ಟಿಲ್ ನಾಗೇಶ್ ಎಂದು ಗುರುತಿಸಲಾಗಿದೆ.

ಶೌಚಾಲಯಕ್ಕೆ ಹೋಗುವ ಮಹಿಳೆಯರ ವಿಡಿಯೊವನ್ನು ಈತ ರಹಸ್ಯವಾಗಿ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದ. ಇತ್ತೀಚೆಗೆ ಈ ಘಟನೆ ನಡೆದಿದ್ದು, ಅರೋಪಿಯಿಂದ ಕ್ಷಮೆ ಕೇಳಿಸಿ ಆಡಳಿತ ಮಂಡಳಿ ಸುಮ್ಮನಾಗಿತ್ತು ಎನ್ನಲಾಗಿದೆ. ಆದರೆ ಮಹಿಳಾ ಉದ್ಯೋಗಿಯೊಬ್ಬರ ಪತಿಗೆ ಈ ವಿಚಾರ ತಿಳಿದು ಘಟನೆ ಬೆಳಕಿಗೆ ಬಂದಿದೆ. ಈತನ ಮೊಬೈಲ್‌ನಲ್ಲಿ ಹಲವು ಮಹಿಳೆಯರ ಅಶ್ಲೀಲ ವಿಡಿಯೊ ಪತ್ತೆಯಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇಂತಹ ಪ್ರಕರನ ಪದೇ ಪದೆ ನಡೆಯುತ್ತಿರುವುದರಿಂದ ಎಚ್ಚೆತ್ತ ಸರ್ಕಾರ ಇದೀಗ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.