ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Caste census‌: ಜಾತಿ ಸಮೀಕ್ಷೆಗೆ ತಡೆ ಕೋರಿ ಪಿಐಎಲ್‌; ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್

socio-educational survey: ರಾಜ್ಯ ಸರ್ಕಾದ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದಿಸುತ್ತಾ ಮೊದಲಿಗೆ ಇದು ಜಾತಿಗಣತಿಯಲ್ಲ ಎಂದು ಹೇಳಬಯಸುತ್ತೇನೆ. ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸರ್ವೆ. ಸರ್ಕಾರದ ನೀತಿ ನಿರೂಪಣೆಗೆ ಪೂರಕವಾಗಿ ಸರ್ವೆಯಾಗಿದೆ. ಈ ಆಧಾರದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಬಾರದೆಂದು ಎಂದು ವಾದಿಸಿದ್ದಾರೆ.

ಜಾತಿ ಸಮೀಕ್ಷೆಗೆ ತಡೆ ಕೋರಿ ಪಿಐಎಲ್‌; ವಿಚಾರಣೆ ನಾಳೆಗೆ ಮುಂದೂಡಿಕೆ

-

Prabhakara R Prabhakara R Sep 23, 2025 5:36 PM

ಬೆಂಗಳೂರು: ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ತಡೆ ನೀಡಲು ಸಲ್ಲಿಸಿದ್ದ ಪಿಐಎಲ್‌ ವಿಚಾರಣೆಯನ್ನು ಸೆ.24ಕ್ಕೆ ಹೈಕೋರ್ಟ್‌ ಮುಂದೂಡಿದೆ. ಜಾತಿ ಸಮೀಕ್ಷೆಯನ್ನು ಪ್ರಶ್ನೆ ಮಾಡಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ , ರಾಜ್ಯ ಒಕ್ಕಲಿಗರ ಸಂಘ, ಮಾಜಿ ಶಾಸಕ ಹಾಗೂ ಹಿರಿಯ ವಕೀಲ ಕೆ ಎನ್‌ ಸುಬ್ಬಾರೆಡ್ಡಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು ನಡೆಸಿದ್ದು, ವಾದ-ಪ್ರತಿವಾದ ಆಲಿಸಿ, ವಿಚಾರಣೆಯನ್ನು ನಾಳೆಗೆ ಮುಂದೂಡಿದರು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿವೇಕ್ ರೆಡ್ಡಿ ವಾದ ಮಂಡಿಸಿ, ಅಂಕಿ ಅಂಶ ಸಂಗ್ರಹಕ್ಕೂ ಪ್ರತ್ಯೇಕ ಕಾಯ್ದೆ ಇದೆ. ಆ ಕಾಯ್ದೆಯಲ್ಲಿ ರಾಜ್ಯಕ್ಕೆ ಅಂಕಿ ಅಂಶ ಸಂಗ್ರಹದ ಅಧಿಕಾರ ನೀಡಲಾಗಿಲ್ಲ. ಹಿಂದೆಂದೂ ಇತರೆ ಧರ್ಮದೊಂದಿಗೆ ಜಾತಿಯನ್ನು ಸೇರಿಸಲಾಗಿರಲಿಲ್ಲ ಎಂದು ವಾದಿಸಿದರು.

ಬಣಜಿಗ ಕ್ರಿಶ್ಚಿಯನ್, ಬೆಸ್ತ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಚೆರೋಡಿ ಕ್ರಿಶ್ಚಿಯನ್, ದೇವಾಂಗ ಕ್ರಿಶ್ಚಿಯನ್, ಗೊಲ್ಲ ಕ್ರಿಶ್ಚಿಯನ್ ಹೀಗೆ 35 ರಿಂದ 40 ಧರ್ಮ ಮಿಶ್ರಿತ ಜಾತಿಗಳನ್ನು ಗುರುತಿಸಿದ್ದಾರೆ. 2002ರ ಜಾತಿಗಳ ಅಧಿಸೂಚನೆಗೂ ಈಗಿನ ಜಾತಿಗಳ ಸಮೀಕ್ಷೆಗೂ ವ್ಯತ್ಯಾಸಗಳಿವೆ. ಹೊಸ 1561 ಪಟ್ಟಿಯಲ್ಲಿ ಎಲ್ಲವನ್ನೂ ಪ್ರತ್ಯೇಕ ಜಾತಿ ಮಾಡಲಾಗಿದೆ. ಉಪ ಜಾತಿಗಳನ್ನೇ ಮುಖ್ಯ ಜಾತಿ ಎಂದು ಅವೈಜ್ಞಾನಿಕವಾಗಿ ಪರಿಗಣಿಸಲಾಗಿದೆ. 450 ಕೋಟಿ ರೂ ವೆಚ್ಚ ಮಾಡಿ ಮುಖ್ಯ ಜಾತಿಯನ್ನೇ ತಿಳಿಸಿಲ್ಲ. ಒಕ್ಕಲಿಗ ಮುಖ್ಯ ಜಾತಿಯಾಗಿ ಉಪ ಜಾತಿ ಬೇರೆ ಇದ್ದರೆ ಹೇಗೆ ನಮೂದಿಸುವುದು ಎಂದು ವಾದಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲ ಎಸ್‌.ಎಂ. ಚಂದ್ರಶೇಖರ್ ವಾದಿಸಿ, ಆಧಾರ್ ಸಂಗ್ರಹದಿಂದ ಮಾಹಿತಿ ಪಡೆಯಲು ಅನುಮತಿ ಬೇಕು. ಖಾಸಗಿ ತನದ ಹಕ್ಕಿನ ಪ್ರಶ್ನೆಯಿರುವುದರಿಂದ ತಡೆ ನೀಡಲು ಹೈಕೋರ್ಟ್ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಶ್ರೀರಂಗ ವಾದಿಸಿ, ತರಾತುರಿಯಲ್ಲಿ 17 ದಿನಗಳಲ್ಲೇ ಆತುರದ ಸರ್ವೆ ನಡೆಸುತ್ತಿದ್ದಾರೆ. ಮೊದಲಿಗೆ 1400 ಜಾತಿ ಎಂದು ವಾರದ ಬಳಿಕ 1561 ಜಾತಿ ನಮೂದಿಸಿದೆ. ಈ ರೀತಿ ದಿಢೀರ್ ಜಾತಿ ಹೆಚ್ಚಳಕ್ಕೆ ಸಮರ್ಥನೆ ನೀಡಿಲ್ಲ ಎಂಬುದಾಗಿ ಹೇಳುವ ಮೂಲಕ ಅರ್ಜಿದಾರರ ಪರ ವಾದವನ್ನು ಅಂತ್ಯಗೊಳಿಸಿದರು.

ರಾಜ್ಯ ಸರ್ಕಾದ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದಿಸುತ್ತಾ ಮೊದಲಿಗೆ ಇದು ಜಾತಿಗಣತಿಯಲ್ಲ ಎಂದು ಹೇಳಬಯಸುತ್ತೇನೆ. ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸರ್ವೆ. ಸರ್ಕಾರದ ನೀತಿ ನಿರೂಪಣೆಗೆ ಪೂರಕವಾಗಿ ಸರ್ವೆಯಾಗಿದೆ. ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಪೂರಕವಾಗಿ ಸರ್ವೆ ನಡೆಸಲಾಗುತ್ತಿದೆ. 20 ಡಿಗ್ರಿ ಆಕಡೆ ಇದೆ. 30 ಡಿಗ್ರಿ ಈ ಕಡೆ ಇದೆ ಎನ್ನುವಂತಿಲ್ಲ. ಈ ಆಧಾರದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಬಾರದೆಂದು ಎಂದು ವಾದಿಸಿದರು.

ಈಗ ತಡೆಯಾಜ್ಞೆ ನೀಡಿದರೇ ದೂರಗಾಮಿ ಪರಿಣಾಮವಾಗಲಿದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ತಡೆಯಾಜ್ಞೆ ನೀಡುವುದಿಲ್ಲ. ಅಂಕಿ ಅಂಶ ಸಂಗ್ರಹಿಸುವುದಷ್ಟೇ ಸರ್ವೆ ಉದ್ದೇಶವಾಗಿದೆ ಎಂದು ವಾದಿಸಿದರು.

ಈ ಸುದ್ದಿಯನ್ನೂ ಓದಿ | Caste census: ಸೆ.22 ರಿಂದ ರಾಜ್ಯದಲ್ಲಿ ಜಾತಿ ಸಮೀಕ್ಷೆ; ಜಾತಿ-ಉಪಜಾತಿಗಳ ಪಟ್ಟಿ ಇಲ್ಲಿದೆ

ಈ ವೇಳೆ ಗಣತಿಗೂ ಸರ್ವೆಗೂ ವ್ಯತ್ಯಾಸ ಏನಿದೆ. ರಾಜ್ಯ ಸರ್ಕಾರಕ್ಕೆ ಸರ್ವೆ ಮಾಡಲು ಅಧಿಕಾರವಿದೆಯೇ ಎಂಬುದಾಗಿ ಹೈಕೋರ್ಟ್ ನ್ಯಾಯಪೀಠವು ಪ್ರಶ್ನಿಸಿತು. ಅಲ್ಲದೇ 7 ಕೋಟಿ ಜನರನ್ನು ಜಾತಿಯಾಗಿ ಗಣತಿ ಮಾಡಲಾಗುತ್ತಿದೆಯಲ್ಲ ಎಂದಿತು.

ವಾದ-ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು, ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿದೆ.