ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara Chapter 1 Trailer: ಹೊಸ ದಾಖಲೆ ಬರೆದ ʼಕಾಂತಾರ: ಚಾಪ್ಟರ್‌ 1ʼ ಟ್ರೈಲರ್‌; 24 ಗಂಟೆಯಲ್ಲಿ 10.7 ಕೋಟಿ ವೀಕ್ಷಣೆ

Rishab Shetty: ಪ್ಟೆಂಬರ್‌ 22ರ ಮಧ್ಯಾಹ್ನ 12:45ಕ್ಕೆ ರಿಲೀಸ್‌ ಆದ ʼಕಾಂತಾರ: ಚಾಪ್ಟರ್‌ 1ʼ ಟ್ರೈಲರ್‌ 24 ಗಂಟೆಗಳಲ್ಲಿ ವಿವಿಧ ಡಿಜಿಟಲ್‌ ಫ್ಲಾಟ್‌ಫಾರ್ಮ್‌ಗಳಲ್ಲಿ ಬರೋಬ್ಬರಿ 107 ಮಿಲಿಯನ್ (10.7 ಕೋಟಿ) ವೀಕ್ಷಣೆ ಕಂಡಿದೆ. ಚಿತ್ರ ಅಕ್ಟೋಬರ್‌ 2ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.

ʼಕಾಂತಾರ: ಚಾಪ್ಟರ್‌ 1ʼ ಟ್ರೈಲರ್‌ 24 ಗಂಟೆಯಲ್ಲಿ 10.7 ಕೋಟಿ ವೀಕ್ಷಣೆ

-

Ramesh B Ramesh B Sep 23, 2025 6:56 PM

ಬೆಂಗಳೂರು: ಸೆಪ್ಟೆಂಬರ್‌ 22ರ ಮಧ್ಯಾಹ್ನ 12:45ಕ್ಕೆ ರಿಲೀಸ್‌ ಆದ ʼಕಾಂತಾರ: ಚಾಪ್ಟರ್‌ 1ʼ ಟ್ರೈಲರ್‌ (Kantara Chapter 1 Trailer) ಸೆಪ್ಟೆಂಬರ್‌ 23ರ ಮಧ್ಯಾಹ್ನ 12:45ಕ್ಕೆ ಹೊಸ ದಾಖಲೆ ಬರೆದುಬಿಟ್ಟಿದೆ. ಯೂಟ್ಯೂಬ್‌ ಸೇರಿ ವಿವಿಧ ಡಿಜಿಟಲ್‌ ಫ್ಲಾಟ್‌ಫಾರ್ಮ್‌ನಲ್ಲಿ ಬರೋಬ್ಬರಿ 107 ಮಿಲಿಯನ್ (10.7 ಕೋಟಿ) ವೀಕ್ಷಣೆ ಕಂಡಿದೆ. ಆ ಮೂಲಕ ರಿಷಬ್‌ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಚಿತ್ರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸದ್ಯ ʼಕಾಂತಾರ: ಚಾಪ್ಟರ್‌ 1ʼ ಟ್ರೈಲರ್‌ ನಾಗಾಲೋಟ ಮುಂದುವರಿದಿದೆ. ಕನ್ನಡದ ಜತೆಗೆ ಹಿಂದಿ, ಮಲಯಾಳಂ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ಟ್ರೈಲರ್‌ ಏಕಕಾಲಕ್ಕೆ ಮೂಡಿ ಬಂದಿದ್ದು, ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ. ಯೂಟ್ಯೂಬ್‌ ಜತೆಗೆ ಸೋಶಿಯಲ್‌ ಮೀಡಿಯಾದಲ್ಲಿಯೂ ಟ್ರೆಂಡಿಂಗ್‌ನಲ್ಲಿದೆ.

2022ರಲ್ಲಿ ತೆರೆಕಂಡ ʼಕಾಂತಾರʼ ಚಿತ್ರದ ಪ್ರೀಕ್ವೆಲ್‌ ಇದಾಗಿದ್ದು, ಈ ಕಾರಣಕ್ಕೆ ಘೋಷಣೆಯಾದಾಗಿನಿಂದಲೇ ಕುತೂಹಲ ಕೆರಳಿಸಿತ್ತು. ತುಳುನಾಡ ವಿಶಿಷ್ಟ ಭೂತಾರಾಧನೆ ಹೇಗೆ ಜನ ಜೀವನದೊಂದಿಗೆ ಬೆರೆತು ಹೋಗಿದೆ ಎನ್ನುವುದನ್ನು ʼಕಾಂತಾರʼದಲ್ಲಿ ರಿಷಬ್‌ ಶೆಟ್ಟಿ ರೋಚಕವಾಗಿ ಕಟ್ಟಿಕೊಟ್ಟಿದ್ದರು. ಈ ಭಾಗದಲ್ಲಿಯೂ ಜಾನಪದ ಮೂಲದ ಕಥೆಯನ್ನು ಅವರು ಆಯ್ಕೆ ಮಾಡಿದ್ದು, ಅದಕ್ಕೆ ಅದ್ಧೂರಿಯಾಗಿ ಸಿನಿಮಾ ರೂಪ ಕೊಟ್ಟಿರುವುದು ಟ್ರೈಲರ್‌ನಲ್ಲಿ ಕಂಡು ಬಂದಿದೆ.



ಈ ಸುದ್ದಿಯನ್ನೂ ಓದಿ: Kantara Chapter 1 Trailer: ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ ʼಕಾಂತಾರ ಚಾಪ್ಟರ್‌ 1ʼ ಟ್ರೈಲರ್‌; ರಿಲೀಸ್‌ ಕೆಲ ಹೊತ್ತಲ್ಲೇ 4 ಕೋಟಿ ವ್ಯೂವ್ಸ್‌

ಶತಶತಮಾನಗಳ ಹಿಂದಿನ ಕಥೆಯನ್ನು, ಬುಡಕಟ್ಟು ಜನಾಂಗದ ಬವಣೆಯನ್ನು, ಅಂದಿನ ಜನಜೀವನದ ರೀತಿಯನ್ನು, ರಾಜಾಡಳಿತವನ್ನು ರಿಷಬ್‌ ಶೆಟ್ಟಿ ಪರಿಣಾಮಕಾರಿಯಾಗಿ ತೆರೆಮೇಲೆ ತಂದಿದ್ದಾರೆ. ದಟ್ಟ ಕಾಡಿನಲ್ಲಿ, ನೈಜ ಸ್ಥಳಗಳಲ್ಲಿ ಶೂಟಿಂಗ್‌ ನಡೆದಿರುವುದು ಸಿನಿಮಾದ ಮತ್ತೊಂದು ಪ್ಲಸ್‌ ಪಾಯಿಂಟ್‌.

ಇನ್ನು 24 ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ ಕನ್ನಡ ವರ್ಷನ್ ಟ್ರೈಲರ್‌ 15 ಮಿಲಿಯನ್, ಹಿಂದಿ 26 ಮಿಲಿಯನ್, ತೆಲುಗು 14 ಮಿಲಿಯನ್, ತಮಿಳು 10 ಮಿಲಿಯನ್, ಮಲಯಾಳಂ 6.1 ಮಿಲಿಯನ್ ವ್ಯೂವ್ಸ್‌ ಕಂಡಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿನ ವೀಕ್ಷಣೆಯನ್ನೂ ಸೇರಿಸಿದರೆ 107 ಮಿಲಿಯನ್​​ ವೀಕ್ಷಣೆಯಾಗುತ್ತದೆ. ಒಟ್ಟು 7 ಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದ್ದು, ಅಕ್ಟೋಬರ್‌ 2ರಂದು ಭಾರತವೂ ಸೇರಿದಂತೆ 30 ದೇಶಗಳಲ್ಲಿ ಸುಮಾರು 7 ಸಾವಿರ ಸ್ಕ್ರೀನ್‌ಗಳಲ್ಲಿ ತೆರೆಗೆ ಬರಲಿದೆ.

ವಿಜಯ್ ಕಿರಗಂದೂರು ನೇತೃತ್ವದ ಹೊಂಬಾಳೆ ಫಿಲ್ಮ್ಸ್‌ ಅದ್ಧೂರಿ ವೆಚ್ಚದಲ್ಲಿ ಸಿನಿಮಾ ನಿರ್ಮಿಸಿದೆ. ಆರಂಭದಲ್ಲಿ ಚಿತ್ರತಂಡ ಯಾವುದೇ ಗುಟ್ಟು ಬಿಟ್ಟುಕೊಡದೆ ಕುತೂಹಲ ಹುಟ್ಟು ಹಾಕಿತ್ತು. ರಿಷಬ್‌ ಶೆಟ್ಟಿ ನಟಿಸುವುದು ಬಿಟ್ಟರೆ ಉಳಿದ ಕಲಾವಿದರ ವಿವರ ಹೊರ ಬಿದ್ದಿರಲಿಲ್ಲ. ಸುಮಾರು 3 ವರ್ಷಗಳ ಹಿಂದೆ ಸೆಟ್ಟೇರಿದ ಚಿತ್ರ ಸಾಕಷ್ಟು ಸಿದ್ಧತೆ ನಡೆಸಿ ಅಖಾಡಕ್ಕೆ ಇಳಿದಿತ್ತು. ಆರಂಭದಲ್ಲಿ ಕುಂದಾಪುರದಲ್ಲಿ ಬೃಹತ್‌ ಸೆಟ್‌ ಹಾಕಿ ಚಿತ್ರೀಕರಣ ನಡೆಸಲಾಯಿತು. ಬಳಿಕ ರಾಜ್ಯದ ವಿವಿಧ ಕಡೆಗಳ ಕಾಡಿನಲ್ಲಿ ಶೂಟಿಂಗ್‌ ಮುಂದುವರಿಯಿತು. ಬಹುಪಾಲು ಕಥೆ ಕಾಡಿನಲ್ಲೇ ನಡೆಯುವುದರಿಂದ ಚಿತ್ರತಂಡ ಕುಂದಾಪುರ, ತೀರ್ಥಹಳ್ಳಿ, ಹಾಸನ ಮುಂತಾದ ಕಡೆಗಳ ಅರಣ್ಯದಲ್ಲಿ ಹಲವು ದಿನಗಳ ಕಾಲ ಬೀಡು ಬಿಟ್ಟಿತ್ತು. ಸುಮಾರು 250 ದಿನಗಳ ಕಾಲ ಶೂಟಿಂಗ್‌ ನಡೆದಿದೆ. ಚಿತ್ರದಲ್ಲಿ ಯುದ್ಧದ ದೃಶ್ಯ ಹೈಲೈಟ್‌ ಆಗಲಿದ್ದು, ಅದರಲ್ಲಿ ಸಾವಿರಾರು ಕಲಾವಿದರು ಭಾಗಿಯಾಗಿದ್ದಾರೆ.

ʼಕಾಂತಾರ; ಚಿತ್ರದ ಸಂಗೀತದ ಮೂಲಕ ಗಮನ ಸೆಳೆದ ಬಿ. ಅಜನೀಶ್‌ ಲೋಕನಾಥ್‌ ಈ ಭಾಗಕ್ಕೂ ಸಂಗೀತ ಸಂಯೋಜಿಸಿದ್ದಾರೆ. ನಾಯಕಿಯಾಗಿ ರುಕ್ಮಿಣಿ ವಸಂತ್‌ ಕಾಣಿಸಿಕೊಂಡಿದ್ದು ಕನಕವತಿ ಪಾತ್ರದಲ್ಲಿ ಮೋಡಿ ಮಾಡಲು ಸಜ್ಜಾಗಿದ್ದಾರೆ. ಟ್ರೈಲರ್‌ನಲ್ಲಿ ರಿಷಬ್‌ ಜತೆಗೆ ಅವರ ಪಾತ್ರವೂ ಹೈಲೈಟ್‌ ಆಗಿದೆ.