ಚಿಕ್ಕನಾಯಕನಹಳ್ಳಿ, ಅ.15: ತಾಲೂಕಿನ ಕಂದಿಕೆರೆ ಹೋಬಳಿ ಕೇಂದ್ರದಲ್ಲಿರುವ ಶ್ರೀ ಯಲ್ಲಮ್ಮ ದೇವಾಲಯದ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವು ಪಡೆಯಲು ದೇವಸ್ಥಾನದ ಸಮಿತಿಯು ಕಂದಿಕೆರೆ ಪ್ರದೇಶದ ಅಕ್ರಮ ಮದ್ಯ ಮಾರಾಟದ ಹಕ್ಕುಗಳನ್ನು ಹರಾಜು ಹಾಕಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯು, ಅಬಕಾರಿ ನಿಯಮಗಳನ್ನು ಮತ್ತು ನೈತಿಕ ಮೌಲ್ಯಗಳನ್ನು ಉಲ್ಲಂಘನೆ ಮಾಡಿ ಸಭೆ ಸೇರಿ ಊರಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸಲು ಬಯಸುವವರಿಗೆ ನಿರ್ಬಂಧವಿಲ್ಲದ ಹಕ್ಕನ್ನು ನೀಡುವ ಹರಾಜು ಪ್ರಕ್ರಿಯೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಅಕ್ರಮ ಹರಾಜಿನಲ್ಲಿ 5.8 ಲಕ್ಷ ರೂ ಹಣ ಸಂಗ್ರಹವಾಗಿದೆ ಎಂದು ಹೇಳಲಾಗುತ್ತಿದೆ. ಕಾನೂನು ಬದ್ಧವಲ್ಲದ ಮಾರ್ಗಗಳಿಂದ ಹಣ ಸಂಗ್ರಹಿಸಿ ಧಾರ್ಮಿಕ ಕಾರ್ಯಕ್ಕೆ ಬಳಸುತ್ತಿರುವುದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. ಧಾರ್ಮಿಕ ಕಾರ್ಯದ ಪ್ರಭಾವವನ್ನು ಗುರಾಣಿಯನ್ನಾಗಿ ಬಳಸಿಕೊಂಡು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿರಾತಂಕವಾಗಿ ಮುಂದುವರಿಸುತ್ತಿರುವ ಹರಾಜು ಕೂಗಿದ ವ್ಯಕ್ತಿಗಳು ಲೈಸೆನ್ಸ್ ಇಲ್ಲದ ಮದ್ಯವನ್ನು ದುಬಾರಿ ಬೆಲೆಗೆ ಮಾರುತ್ತಿದ್ದಾರೆ. ಜೀರ್ಣೋದ್ಧಾರ ಕಾರ್ಯದ ನೆಪದಿಂದಾಗಿ ಅಬಕಾರಿ ಮತ್ತು ಪೋಲೀಸ್ ಇಲಾಖೆಯ ಅಧಿಕಾರಿಗಳು ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ. ಇದೇ ವೇಳೆ ಇತರರು ಗ್ರಾಮದಲ್ಲಿ ಮದ್ಯ ಮಾರಾಟ ಮಾಡಲು ನಿಷೇಧವಿರುತ್ತದೆ.
ಈ ನಿರ್ಧಾರವು ಸ್ಥಳೀಯ ರಾಜಕಾರಣಿಗಳು ಮತ್ತು ಮದ್ಯದ ಮಾಫಿಯಾ ನಡುವಿನ ಅಕ್ರಮ ಒಳ ಸಂಚನ್ನು ಸೂಚಿಸುತ್ತದೆ ಎಂಬ ಅನುಮಾನಗಳು ವ್ಯಕ್ತವಾಗಿದೆ. ದೇವಸ್ಥಾನದ ಪುನರುಜ್ಜೀವನಕ್ಕೆ ಹರಾಜಿನಿಂದ ಹಣ ಸಂಗ್ರಹಿಸುವುದು, ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವಂತಹ ಮದ್ಯದ ಮಾರಾಟವನ್ನು ಸುಲಭಗೊಳಿಸುವುದು ಎಷ್ಟು ಸರಿ? ಗ್ರಾಮಗಳಲ್ಲಿ ಮದ್ಯದ ಸುಲಭ ಲಭ್ಯತೆಯು ಯುವಜನರ ಮತ್ತು ಕುಟುಂಬಗಳ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಒಂದು ಪವಿತ್ರ ಕಾರ್ಯಕ್ಕೆ ಇನ್ನೊಂದು ವಿವಾದಾತ್ಮಕ ಮಾರ್ಗವನ್ನು ಅನುಸರಿಸಬಾರದೆಂದು ಹಾಗೂ ಹರಾಜು ಪ್ರಕ್ರಿಯೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ದೇವಸ್ಥಾನದ ಪಾವಿತ್ರ್ಯ ಮತ್ತು ಸಾರ್ವಜನಿಕ ಸ್ವಾಸ್ತ್ರ್ಯದ ನಡುವೆ ಉದ್ಭವಿಸಿರುವ ಈ ಸಂಘರ್ಷವು ದೊಡ್ಡ ಸವಾಲಾಗಿ ಪರಿಣಮಿಸಿದ್ದು ಈ ವಿವಾದಕ್ಕೆ ಸೂಕ್ತ ಪರಿಹಾರ ಸಿಗುವುದೇ ಕಾದು ನೋಡಬೇಕಿದೆ. ಇದೇ ಪ್ರಕಾರ ಸಾದರಹಳ್ಳಿಯಲ್ಲಿ ಶ್ರೀ ರಂಗನಾಥ ಜೀರ್ಣೋದ್ಧಾರ ಸಮಿತಿ 1.5 ಲಕ್ಷಕ್ಕೂ ಹೆಚ್ಚು ಹಣ ಹರಾಜು ಪ್ರಕ್ರಿಯೆ ನಡೆಸಿ ಸಂಗ್ರಹಿಸಿದೆ.
(ವರದಿ: ಧನಂಜಯ್, ಚಿಕ್ಕನಾಯಕನಹಳ್ಳಿ)