ತುಮಕೂರು: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ಪ್ರವಾಸಿಗರನ್ನು ಹತ್ಯೆ ಮಾಡಿ, ಭಾರತದ ಭದ್ರತೆಗೆ ಸವಾಲು ಹಾಕಿದ ಕೃತ್ಯಕ್ಕೆ ಪ್ರತೀಕಾರವಾಗಿ ನಡೆದ ಕಾರ್ಯಾಚರಣೆಯ ಯಶಸ್ಸಿನ ‘ಆಪರೇಷನ್ ಸಿಂಧೂರ ವಿಜಯೋತ್ಸವ’ ವನ್ನು (Operation Sindoor Vijayotsava) ಆ. 30ರಂದು ಶನಿವಾರ ನಗರದಲ್ಲಿ (Tumkur News) ಆಚರಿಸಲಾಗುತ್ತದೆ ಎಂದು ಆಚರಣೆ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮೊದಲ ಬಾರಿಗೆ ಆಪರೇಷನ್ ಸಿಂಧೂರ ವಿಜಯೋತ್ಸವ ಆಚರಿಸಲಾಗುತ್ತಿದೆ. ಇದು ರಾಷ್ಟ್ರದ ಗೌರವ, ಶೌರ್ಯ ಮತ್ತು ಅಚಲ ಬದ್ಧತೆಯ ಸಂಕೇತವಾಗಿದೆ ಎಂದರು.
ವಿದ್ಯಾರ್ಥಿ, ಯುವಜನರಿಗೆ ದೇಶದ ರಕ್ಷಣಾ ಸಂಸ್ಥೆಯ ಕಾರ್ಯತಂತ್ರ ತಿಳಿಸಿ ಅವರಲ್ಲಿ ದೇಶದ ಭದ್ರತೆ, ದೇಶಪ್ರಮದ ಬಗ್ಗೆ ಜಾಗೃತಗೊಳಿಸುವ ಉದ್ದೇಶವಾಗಿದೆ. ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರೂ ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಶಾಸಕ ಬಿ. ಸುರೇಶ್‌ಗೌಡ ಮಾತನಾಡಿ, ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಒಂದು ಸೇನಾ ಕಾರ್ಯಚರಣೆ ಮಾತ್ರವಲ್ಲದೆ, ನಮ್ಮ ದೇಶ ಎಷ್ಟು ಬಲಿಷ್ಠವಾಗಿದೆ ಮತ್ತು ಕೆಲವೇ ಗಂಟೆಗಳಲ್ಲಿ ವೈರಿ ರಾಷ್ಟ್ರದ ಮಗ್ಗುಲು ಮುರಿದು ಶರಣಾಗತಿ ಆಗುವಂತೆ ಮಾಡಬಲ್ಲ ಸಾಮರ್ಥ್ಯ ನಮ್ಮ ದೇಶಕ್ಕಿದೆ ಎಂಬುದನ್ನು ತೋರಿಸಿಕೊಟ್ಟ ಕಾರ್ಯಾಚರಣೆಯಾಗಿದೆ. ದೇಶದ ಗಡಿ ಕಾಯುವ ಸೈನಿಕರಿಗೆ ಗೌರವ ಸಲ್ಲಿಸಲು ಹಾಗೂ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಲು ಶ್ರಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಾಳೆ ಬೆಳಿಗ್ಗೆ 10.30ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಸಂಸ್ಥಾನದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ದಿವ್ಯ ಸಾನಿಧ್ಯ ವಹಿಸುವರು. ಮೇಘಾಲಯ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್ ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರ ಸಚಿವರುಗಳಾದ ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸಂಸದರಾದ ಗೋವಿಂದ ಕಾರಜೋಳ, ಡಾ.ಸಿ.ಎನ್. ಮಂಜುನಾಥ್, ಶಾಸಕರಾದ ಕೆ.ಎನ್. ರಾಜಣ್ಣ, ಸುರೇಶ್ ಗೌಡ, ಎಂ.ಟಿ. ಕೃಷ್ಣಪ್ಪ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅಲ್ಲದೆ ಜಿಲ್ಲೆಯ ಶಾಸಕರು, ಅಧಿಕಾರಿಗಳು ಅತಿಥಿಗಳಾಗಿ ಭಾಗವಹಿಸುವರು. ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್, ಅಜಿತ್ ಹನುಮಕ್ಕನವರ್, ರಂಗನಾಥ ಭಾರಧ್ವಜ್ ಭಾಷಣಕಾರರಾಗಿ ಆಗಮಿಸುವರು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯದ ಮಾಜಿ ನಿರ್ದೇಶಕ ಡಾ. ಪ್ರಹ್ಲಾದ್ ರಾಮ್‌ರಾವ್, ಇಸ್ರೋ ಮಾಜಿ ಅಧ್ಯಕ್ಷರಾದ ಡಾ.ಎ.ಎಸ್. ಕಿರಣ್‌ಕುಮಾರ್, ಡಾ.ಎಸ್. ಸೋಮನಾಥ್ ಸೇರಿದಂತೆ ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯ ಸಾಧಕರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Intelligence Bureau Recruitment 2025: ಗುಪ್ತಚರ ಇಲಾಖೆಯಲ್ಲಿದೆ 394 ಹುದ್ದೆ; ಡಿಪ್ಲೊಮಾ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಿ
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಆಶಾ ಪ್ರಸನ್ನ ಕುಮಾರ್, ಡಾ.ಎಸ್. ಪರಮೇಶ್, ಪ್ರಭಾಕರ್, ಸಂಪಿಗೆ ಜಗದೀಶ್, ಎಂ.ಬಿ. ನಂದೀಶ್, ಜಿ.ಎಸ್. ಶಿವಕುಮಾರ್, ಧನಿಯಾಕುಮಾರ್, ರಂಗಾನಾಯ್ಕ, ಗೂಕುಲ ಮಂಜುನಾಥ್, ಡೆಲ್ಟಾ ರವಿ, ಶ್ರೀಧರಮೂರ್ತಿ, ಮಾಜಿ ಸೈನಿಕರ ಸಂಘದ ಕಾರ್ಯಾಧ್ಯಕ್ಷ ವಿ.ಡಿ. ನಾಗರಾಜು, ಪಿ. ರವಿಶಂಕರ್, ಕೆ.ಪಿ. ಮಹೇಶ್, ಬಾವಿಕಟ್ಟೆ ಗಣೇಶ್ ಉಪಸ್ಥಿತರಿದ್ದರು.