ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಮತ್ತೊಂದು ಹಿಟ್ ಆ್ಯಂಡ್ ರನ್ (Hit and Run) ಪ್ರಕರಣ ನಡೆದಿದ್ದು, ಇಬ್ಬರು ಬೈಕ್ ಸವಾರರು ಬಲಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯ ಬಳಿ ಈ ಅಪಘಾತ (Road Accident) ಸಂಭವಿಸಿದ್ದು, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರು ಅಪರಿಚಿತ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ತೂಬಗೆರೆ ನಿವಾಸಿ ನಂದನ್ ಕುಮಾರ್ (22) ಹಾಗೂ ದೊಡ್ಡ ತಿಮ್ಮನಹಳ್ಳಿಯ ರವಿಕುಮಾರ್ (24) ಮೃತ ಯುವಕರು ಎಂದು ತಿಳಿದುಬಂದಿದೆ. ಮೃತರು ದೊಡ್ಡಬಳ್ಳಾಪುರ ನಗರದ ಎಲ್ ಆ್ಯಂಡ್ ಟಿ ಕಂಪನಿಯ ಸಿಬ್ಬಂದಿಗಳು ಎಂದು ತಿಳಿದುಬಂದಿದೆ. ಬೈಕ್‌ಗೆ ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ನೆಲಕ್ಕಪ್ಪಳಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ ಅಪರಿಚಿತ ವಾಹನ ಸಮೇತ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತಿಯ ಕಿರಕುಳದಿಂದ ನೊಂದು ಮೂರನೇ ಮಹಡಿಯಿಂದ ಜಿಗಿದ ಪತ್ನಿ
ಬೆಂಗಳೂರು: ಪತಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬಳು ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆಯನ್ನು ಪ್ರಿಯಾ ಎಂದು ಗುರುತಿಸಲಾಗಿದೆ. ಆಕೆಯ ಬೆನ್ನುಮೂಳೆ ಹಾಗೂ ಎರಡು ಕಾಲುಗಳಿಗೆ ಗಂಭೀರವಾಗಿ ಗಾಯಗಳಾಗಿವೆ. ಮಹಿಳೆ ಸದ್ಯ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಪ್ರಿಯಾ ಹಾಗೂ ನಿಕ್ಸನ್ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು.
ಇದನ್ನೂ ಓದಿ: Gas Geyser leak: ಗ್ಯಾಸ್ ಗೀಸರ್ ಸೋರಿಕೆಯಾಗಿ ಅಕ್ಕ- ತಂಗಿ ಉಸಿರುಗಟ್ಟಿ ಸಾವು
ಮದುವೆಯಾಗಿ 7 ವರ್ಷ ಆದರೂ ಮಕ್ಕಳಾಗಿಲ್ಲ ಎಂದು ಪ್ರತಿ ನಿತ್ಯ ಪತ್ನಿಗೆ ನಿಕ್ಸನ್ ಕಿರುಕುಳ ನೀಡುತಿದ್ದ. ಹೀಗಾಗಿ ಸೂಕ್ತ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೇ ದಂಪತಿಗೆ ಹೆಣ್ಣು ಮಗು ಅಗಿತ್ತು. ಮಗುವಾದ ಬಳಿಕ ಸಹ ಪ್ರತಿ ದಿನ ಕುಡಿದು ಬಂದು ಎಲ್ಲಿಯಾದರೂ ಹೋಗಿ ಸಾಯಿ ಎಂದು ಪತ್ನಿ ಮೇಲೆ ಹಲ್ಲೆ ಮಾಡುತ್ತಿದ್ದ. ಇದಕ್ಕೆ ಬೇಸತ್ತು ತಾನು ವಾಸವಿದ್ದ ಮನೆಯ ಮೂರನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪತಿಯ ವಿರುದ್ಧ ಬಾಣವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.