ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr. N.R. Nayak: ಜಾನಪದ ತಜ್ಞ, ಸಾಹಿತಿ ಡಾ. ಎನ್.ಆರ್. ನಾಯಕ ನಿಧನ

Dr. N.R. Nayak: ಡಾ. ಎನ್.ಆರ್. ನಾಯಕ ಅವರು ಅಪ್ಪಟ ಗ್ರಾಮೀಣ ಜಾನಪದ ತಜ್ಞರಾಗಿ ನಾಡು ಕಂಡ ಒಬ್ಬ ಅಪರೂಪದ ಸಾಧಕರಾಗಿದ್ದು, ಕಳೆದ ಶತಮಾನದ ಆರಂಭದ ಒಂದೆರಡು ದಶಕಗಳ ನಂತರ ನಡೆದ ಜನಪದ ಕ್ಷೇತ್ರ ಕಾರ್ಯಗಳು, ವಿಚಾರ- ವಿಮರ್ಶೆ ಅಪೂರ್ವವಾದದ್ದು. ಆ ದಾರಿಯಲ್ಲಿ ತೊಡಗಿಸಿಕೊಂಡ ಕನ್ನಡದ ವಿದ್ವಾಂಸರಲ್ಲಿ ಒಬ್ಬರಾಗಿದ್ದಾರೆ.

ಜಾನಪದ ತಜ್ಞ, ಸಾಹಿತಿ ಡಾ. ಎನ್.ಆರ್. ನಾಯಕ ನಿಧನ

-

Prabhakara R Prabhakara R Sep 14, 2025 6:02 PM

ಹೊನ್ನಾವರ: ಖ್ಯಾತ ಜಾನಪದ ತಜ್ಞ, ನಾಟಕಕಾರ, ಕವಿ, ಸಾಹಿತಿ ಡಾ. ಎನ್.ಆರ್. ನಾಯಕ (90) (Dr. N.R. Nayak) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ನಿಧನರಾದರು. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಹೊನ್ನಾವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಇವರು ನಾಡು ಕಂಡ ಒಬ್ಬ ಅಪರೂಪದ ಸಾಧಕರಾಗಿದ್ದು, ಕಳೆದ ಶತಮಾನದ ಆರಂಭದ ಒಂದೆರಡು ದಶಕಗಳ ನಂತರ ನಡೆದ ಜನಪದ ಕ್ಷೇತ್ರ ಕಾರ್ಯಗಳು, ವಿಚಾರ- ವಿಮರ್ಶೆ ಅಪೂರ್ವವಾದದ್ದು. ಆ ದಾರಿಯಲ್ಲಿ ತೊಡಗಿಸಿಕೊಂಡ ಕನ್ನಡದ ವಿದ್ವಾಂಸರಲ್ಲಿ ಡಾ. ಎನ್. ಆರ್. ನಾಯಕರು ಒಬ್ಬರಾಗಿದ್ದಾರೆ.

ಎನ್.ಆರ್‌. ನಾಯಕ ಅವರು 1935 ಜೂನ್‌ 28 ರಂದು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಭಾವಿಕೇರಿಯಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ನಾರಾಯಣ ರಾಮ ನಾಯಕ. ತಂದೆ ರಾಮನಾಯಕರು. ತಾಯಿ ದೇವಮ್ಮ. ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ಯ್ರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಇವರು ಬಿ.ಎ. ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಸಾಹಿತ್ಯ ಕೃಷಿಯಲ್ಲಿಯು ತೊಡಗಿಸಿಕೊಂಡು, ಹಲವು ಕೃತಿಗಳನ್ನು ರಚಿಸಿದ್ದಾರೆ.

ಪ್ರಾಧ್ಯಾಪಕರಾಗಿ, ಪ್ರಾಚಾರ್‍ಯರಾಗಿ ಶಿಕ್ಷಣ ಕ್ಷೇತ್ರದಲ್ಲಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಜನಪದ ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವ ಅವರು ಸುಗ್ಗಿ ಕುಣಿತ, ಗುಮಟೆ ಪಾಂಗು, ಯಕ್ಷಗಾನ ಕಲೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ನಾಯಕರು ತಮ್ಮ ಜಾನಪದ ಪ್ರಕಾಶನದಿಂದ 1983ರಲ್ಲಿ ‘ಜಾನಪದ ದೀಪಾರಾಧನೆ’ ಎನ್ನುವ ಸಾಂಸ್ಕೃತಿಕ ಸಂಸ್ಥೆಯನ್ನು ಹುಟ್ಟುಹಾಕಿರುತ್ತಾರೆ. ಅವರ ‘ಕೂಸಾಯ್ತು ನಮ್ಮ ಕೊಮರಾಗೆ’(1983), ಗಾಮೊಕ್ಕಲ ಮಹಾಭಾರತ(1992), ಸುಗ್ಗಿ ಹಬ್ಬ(1999) ಕೃತಿಗಳಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಬಹುಮಾನವು ದೊರೆತಿದೆ. ಇವರ ‘ಹೇಳ್ತೇವೋ ಗುಮ್ಟೆ ಪದನಾವಾ’, ಉತ್ತರ ಕನ್ನಡ ಜಿಲ್ಲೆಯ ಜನಪದ ಆಟಗಳು’, ‘ಜೇಂಗೊಡ’, ‘ಕನ್ನಡ ಬಯಲಾಟ ಪರಂಪರೆ’ ಕೃತಿಗಳು ವಿಶ್ವವಿದ್ಯಾಲಯಗಳ ಪಠ್ಯ ಪುಸ್ತಕಗಳಾಗಿ ಮನ್ನಣೆ ಪಡೆದಿವೆ. ಉತ್ತರ ಕನ್ನಡ ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನ, ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ, ಅಖಿಲ ಕರ್ನಾಟಕ 27ನೇ ಜಾನಪದ ಸಮ್ಮೇಳನ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಜಾನಪದ ಗೋಷ್ಠಿಗಳ ಅಧ್ಯಕ್ಷತೆಯನ್ನು ವಹಿಸಿದ್ದರು.

ಗಾಮೊಕ್ಕಲ ಮಹಾಭಾರತ, ಹಾಲಕ್ಕಿ ಒಕ್ಕಲಿಗರು, ವಿಮೋಚನೆ(ನಾಟಕ ಕೃತಿ), ಚಿಂತನ ತರಂಗ, ಕೋಪ ನರಕದ ಬಾಗಿಲು, ಹುತ್ತವ ಬಡಿದರೆ ಹಾವು ಸಾಯಬಲ್ಲದೆ, ನ್ಯಾಯಾನ್ಯಾಯ ವಿವೇಚನೆ, ಬಾನುಲಿ ಅಲೆಗಳು, ಶರಣರ ಬೆಳಕಿನ ಪಥ, ಜಾನಪದ ಜಗಲಿಯಲ್ಲಿ(ಆತ್ಮಕಥನ), ಕಲಿಕೆಯ ಗುಡಿಲಲ್ಲಿ(ಅನುಭವ ಕಥನಗಳು), ಗಂಗೋತ್ರಿ, ಕರ್ನಾಟಕ ಬುಡಕಟ್ಟುಗಳು, ಗುಣ ಗೌರವ, ನಿಲಾಂಜನ, ಸೌಹಾರ್ದ ಸಂಗಮ(ಸಂಪಾದಕತ್ವದ ಕೃತಿಗಳು), ಕಾದು ಅರಳು(1981), ಹಂಸಪಥ(2001), ಕಾಡು ಹಾಡು(2005), ನೂರು ಪದ ನೂರು ಹದ(2007), ಮುರುಡ ಅರಳು(2009), ದೀಪಾರಾಧನೆ, ಕಲಶ(ಅಭಿನಂದನಾ ಗ್ರಂಥಗಳು) ಕೃತಿಗಳನ್ನು ರಚಿಸಿದ್ದಾರೆ.

ಇನ್ನು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ‘ಜಾನಪದ ತಜ್ಞ’(1993), ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ(2003), ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿ, ದೆಹಲಿಯ ಕರ್ನಾಟಕ ಸಂಘದಿಂದ ಪ್ರಶಸ್ತಿ, ಗೊರುಚ ಪ್ರಶಸ್ತಿ, ವಿ.ಸಿ.ಸನ್ಮಾನ, ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿಯಿಂದ, ಜಿ. ನಾರಾಯಣ ಅಡಿಗ ಪ್ರಶಸ್ತಿ ಹತ್ತು ಹಲವು ಪ್ರಶಸ್ತಿಗಳು ಇವರನ್ನರಸಿ ಬಂದಿದೆ.