ಕೊಲ್ಹಾರ: ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ(Ex Minister S K Bellubbi) ನೇತೃತ್ವದಲ್ಲಿ ವಿಜಯಪುರ-ಬಾಗಲಕೋಟ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆ ಆಲಮಟ್ಟಿ 3ನೇ ಹಂತದಲ್ಲಿ ಮುಳುಗಡೆಯಾಗುವ ಸುಮಾರು 1 ಲಕ್ಷ 30 ಸಾವಿರ ಎಕರೆ ಭೂಮಿಗೆ ಸಂತ್ರಸ್ತರ ಬೇಡಿಕೆಯಂತೆ ಪ್ರತಿ ಎಕರೆ ನೀರಾವರಿ ಭೂಮಿಗೆ 55 ಲಕ್ಷ ರೂಪಾಯಿ, ಒಣ ಬೇಸಾಯಿಗೆ ಭೂಮಿ ಪ್ರತಿ ಎಕರೆಗೆ 45 ಲಕ್ಷ ರೂಪಾಯಿ ಬೆಲೆ ನಿಗದಿ ಮಾಡಬೇಕೆಂದು ಆಗ್ರಹಿಸಿ ಹಮ್ಮಿಕೊಂಡಿರುವ ಪ್ರತಿಭಟನೆ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿತು.
ಕೊಲ್ಹಾರ ತಾಲೂಕ ಸಹಿತ, ಬಬಲೇಶ್ವರ ತಾಲೂಕಿನ ಮಮದಾಪೂರ, ಜೈನಾಪುರ, ಬಾಗಲಕೋಟೆ ಜಿಲ್ಲೆಯ ಟಕ್ಕಳಕಿ, ಢವಳೇಶ್ವರ ಸಹಿತ ವಿವಿಧ ಗ್ರಾಮಗಳ ರೈತರು ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಮಾತನಾಡಿ ಅನ್ನದಾತರ ಕೂಗಿಗೆ ಸರ್ಕಾರ ಬೆಲೆ ನೀಡಬೇಕು, ಸರ್ಕಾರ ರೈತರ ಹಿತಾಸಕ್ತಿಯನ್ನು ಕಡೆಗಣಿಸಿದರೆ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Kolhar News: ಯುಕೆಪಿಯಲ್ಲಿ ಭಯದ ವಾತಾವರಣ : ಮಂಗಗಳ ಸೆರೆ
ಸಂಪುಟ ಸಭೆಯಲ್ಲಿ ಸರ್ಕಾರ ಕೈಗೊಂಡಿರುವ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದ ಅವರು ಬಂಗಾರ ಬೆಲೆಯ ಭೂಮಿ ಕಳೆದುಕೊಳ್ಳುವ ರೈತರಿಗೆ ನಿರ್ದಿಷ್ಟ ಬೆಲೆ ನಿಗದಿಪಡಿಸುವವರೆಗೂ ಪ್ರತಿಭಟನೆ ಹಿಂಪಡೆದುಕೊಳ್ಳಲಾಗದು. ಹೋರಾಟ ಹೀಗೆ ಮುಂದುವರೆಯಲಿದೆ ಎಂದರು. ಅಲ್ಲದೇ, ಕಾಲುವೆಗಳಿಗೆ ಹೋಗುವ ಜಮೀನಿಗೆ ನಿರ್ಧಿಷ್ಟ ಪ್ರಮಾಣದ ದರ ನಿಗದಿ ಮಾಡಬೇಕು, ಆರ್ಥಿಕ ಮೂರು ವರ್ಷದಲ್ಲಿ ಹಂತ ಹಂತವಾಗಿ ಕೊಡುವ ಪರಿಹಾರ ಧನಕ್ಕೆ ಎಷ್ಟು ಪ್ರಮಾಣದಲ್ಲಿ ಬಡ್ಡಿ ದರ ನಿಗದಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಬೇಕು.
ವಿಶೇಷತೆಗಳು: ಹೋರಾಟ ನಿರತ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಕೊಲ್ಹಾರ ಭಜನಾ ಕಲಾವಿದರು ಭಜನಾ ಪದಗಳನ್ನು ಹಾಡುವುದು ಕಂಡುಬಂದಿತು. ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಜೀವನದ ಮಹತ್ತರ ಮಜಲುಗಳನ್ನು ಅನೇಕ ವಿಶೇಷ ಘಟನೆಗಳನ್ನು ಮಾಜಿ ಸಚಿವ ಬೆಳ್ಳುಬ್ಬಿ ಹೋರಾಟಗಾರರ ಮುಂದೆ ಪ್ರಚುರಪಡಿಸಿದರು, ಅವಳಿ ಜಿಲ್ಲೆಯ ರೈತರು ಬೈಕ್ ರ್ಯಾಲಿಯ ಮೂಲಕ ಆಗಮಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶೀಲವಂತ ಮಠದ ಕೈಲಾಸನಾಥ ಶ್ರೀಗಳು, ಪ್ರಭುಸ್ವಾಮಿ ಹಿರೇಮಠ, ಶಿವನಗೌಡ ಪಾಟೀಲ, ಸಿದ್ದು ದೇಸಾಯಿ, ಬಸಪ್ಪ ಮಲಕಗೊಂಡ, ಪ್ರಭು ಹಿರೇಮಠ, ಜಗನ್ನಾಥ ಹೀರೆದೇಸಾಯಿ, ವಿಠಲ ಕಿರಸೂರ, ಮುತ್ತುಗೌಡ ಪಾಟೀಲ, ಭೀಮಸಿ ಜೀರಗಾಳ, ವಿರಭದ್ರಪ್ಪ ಬಾಗಿ, ಸಿ.ಎಂ ಗಣಕುಮಾರ, ನಂದಬಸಪ್ಪ ಚೌಧರಿ, ಸಂಚಾಲಕರಾದ ಚಂದ್ರಶೇಖರ ಬೆಳ್ಳುಬ್ಬಿ, ಜಗದೀಶ್ ಸುನಗದ, ವಿರುಪಾಕ್ಷಿ ಕೋಲಕಾರ, ಚಿನ್ನಪ್ಪ ಗಿಡ್ಢಪ್ಪಗೋಳ, ಬಿ.ಎಸ್ ಹಂಗರಗಿ, ರಾಜುಗೌಡ ನ್ಯಾಮಗೌಡ ಹಾಗೂ ಇನ್ನಿತರರು ಇದ್ದರು.