ಯಾದಗಿರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಕರ್ಮಭೂಮಿ ಗುರುಮಠಕಲ್‌ನಲ್ಲಿ (Gurumatkal) ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನಕ್ಕೆ (RSS Patha Sanchalana) ಅನುಮತಿ ದೊರೆತಿದೆ. ಅಕ್ಟೋಬರ್ 31ರಂದು ಗುರುಮಠಕಲ್ ಪಟ್ಟಣದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಯಾದಗಿರಿ ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಿದೆ. ಯಾದಗಿರಿ ಡಿಸಿ ಹರ್ಷಲ್ ಬೋಯರ್ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅನುಮತಿ ನೀಡಿದ್ದಾರೆ.
8 ಬಾರಿ ಗುರುಮಠಕಲ್ ಮತಕ್ಷೇತ್ರದ ಶಾಸಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ತವರೂರಿನಲ್ಲಿ ಈ ಬಾರಿ ಪಥಸಂಚನಕ್ಕೆ ಆರೆಸ್ಸೆಸ್ ಕೋರಿತ್ತು. ಆದರೆ ಪ್ರಿಯಾಂಕ ಖರ್ಗೆ ಶಾಸಕರಾಗಿರುವ ಚಿತ್ತಾಪುರ ಕ್ಷೆತ್ರದಲ್ಲಿ ಪಥಸಂಚಲನಕ್ಕೆ ಉಂಟಾಗಿದ್ದ ಅಡೆತಡೆಗಳ ಹಿನ್ನೆಲೆಯಲ್ಲಿ, ಗುರುಮಠಕಲ್‌ನಲ್ಲಿಯೂ ಅಡೆತಡೆ ತಲೆದೋರುವ ಸಂಭವ ಇತ್ತು. ಆದರೆ, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಆರೆಸ್ಸೆಸ್ ಪಥಸಂಚಲನಕ್ಕೆ ಯಾವುದೇ ನಿರ್ಬಂಧ ವಿಧಿಸಲು ಅವಕಾಶವಿಲ್ಲದೆ ಜಿಲ್ಲಾಡಳಿತ ಅನಿವಾರ್ಯವಾಗಿ ಇದೀಗ ಅನುಮತಿ ನೀಡಿದೆ.
ಗುರುಮಠಕಲ್ ಪಟ್ಟಣದ ನರೇಂದ್ರ ರಾಠೋಡ್ ಲೇಔಟ್‌ನಿಂದ ಪಥಸಂಚಲನ ಆರಂಭವಾಗಲಿದೆ. ಸಾಮ್ರಾಟ್ ವೃತ್ತ, ಬಸವೇಶ್ವರ ವೃತ್ತ , ಹನುಮಾನ್ ದೇವಸ್ಥಾನ, ಕುಂಬಾರವಾಡಿ ಸೇರಿ ಹಲವೆಡೆ ಸಂಚರಿಸಲಿದೆ. ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹತ್ತು ಷರತ್ತುಗಳನ್ನು ವಿಧಿಸಿ ಜಿಲ್ಲಾಡಳಿತ ಅನುಮತಿ ನೀಡಿದೆ. ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು, ನಿಗದಿತ ಮಾರ್ಗವನ್ನಷ್ಟೇ ಪಥಸಂಚಲನಕ್ಕೆ ಬಳಸುವುದು, ಜಾತಿ, ಧಾರ್ಮಿಕ ಭಾವನೆಗೆ ಧಕ್ಕೆ ತರುವ ಘೋಷಣೆ ಕೂಗದಿರುವುದು ಎಂಬ ಷರತ್ತುಗಳನ್ನು ಹಾಕಲಾಗಿದೆ.
ಇದನ್ನೂ ಓದಿ: Gurumatkal RSS March: ಅ.31ಕ್ಕೆ ಗುರುಮಠಕಲ್‌ನಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ; ಅನುಮತಿಗಾಗಿ ಡಿಸಿಗೆ ಅರ್ಜಿ
ಮಾರಕಾಸ್ತ್ರ ಹಿಡಿದುಕೊಂಡು ಹೋಗುವಂತಿಲ್ಲ ಎಂದು ಷರತ್ತಿನಲ್ಲಿ ತಿಳಿಸಲಾಗಿದೆ. ಆದರೆ ಆರೆಸ್ಸೆಸ್ ಪಥಸಂಚಲನದಲ್ಲಿ ದೊಣ್ಣೆಯನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತಿದ್ದು, ಇದನ್ನೂ ನಿಷೇಧಿಸಲಾಗಿದೆಯೇ ಎಂಬುದು ಗೊತ್ತಾಗಿಲ್ಲ.
ಸರಕಾರಿ ಸ್ಥಳಗಳಲ್ಲಿ ಖಾಸಗಿ ಸಂಘಸಂಸ್ಥೆಗಳು ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ ಎಂಬ ಸರಕಾರದ ಆದೇಶವನ್ನು ಹೈಕೋರ್ಟ್ ಪೀಠ ರದ್ದುಪಡಿಸಿತ್ತು. ಇದು ಸಂವಿಧಾನ ಒದಗಿಸಿರುವ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಕಕ್ಷಿದಾರರು ವಾದಿಸಿದ್ದರು. ಹೈಕೋರ್ಟ್ ಪೀಠ, ಸರಕಾರದ ವಿರುದ್ಧ ತೀರ್ಪು ನೀಡಿತ್ತು.