DPIIT Delegation: ಫಾಕ್ಸ್‌ಕಾನ್, ಏರೋಸ್ಪೇಸ್ ವಲಯ, ಕ್ವಿನ್ ಸಿಟಿ, ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಡಿಪಿಐಐಟಿ ನಿಯೋಗ ಭೇಟಿ
ಕೇಂದ್ರ ಸರ್ಕಾರದ ಕೈಗಾರಿಕಾ ಹಾಗೂ ಆಂತರಿಕ ವಾಣಿಜ್ಯ ಉತ್ತೇಜನಾ ಇಲಾಖೆ (ಡಿಪಿಐಐಟಿ) ಕಾರ್ಯದರ್ಶಿ ಅಮರ್ ದೀಪ್ ಸಿಂಗ್ ಭಾಟಿಯಾ ಅವರ ನೇತೃತ್ವದ ಉನ್ನತ ನಿಯೋಗದ ಪ್ರತಿನಿಧಿಗಳು, ದೇವನಹಳ್ಳಿಯ ಫಾಕ್ಸ್‌ಕಾನ್, ಏರೋಸ್ಪೇಸ್ ವಿಶೇಷ ಆರ್ಥಿಕ ವಲಯ ಸೇರಿ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.


ಬೆಂಗಳೂರು: ಕೇಂದ್ರ ಸರ್ಕಾರದ ಕೈಗಾರಿಕಾ ಹಾಗೂ ಆಂತರಿಕ ವಾಣಿಜ್ಯ ಉತ್ತೇಜನಾ ಇಲಾಖೆ (ಡಿಪಿಐಐಟಿ) ಕಾರ್ಯದರ್ಶಿ ಅಮರ್ ದೀಪ್ ಸಿಂಗ್ ಭಾಟಿಯಾ ಅವರ ನೇತೃತ್ವದ ಉನ್ನತ ನಿಯೋಗದ ಪ್ರತಿನಿಧಿಗಳು (DPIIT Delegation) ಕೆ-ಟೆಕ್ (ಎಂಇಐಟಿವೈ) ನ್ಯಾಸ್ಕಾಂ ಉತ್ಕೃಷ್ಟತಾ ಕೇಂದ್ರ, ದೇವನಹಳ್ಳಿಯ ಫಾಕ್ಸ್‌ಕಾನ್, ಏರೋಸ್ಪೇಸ್ ವಿಶೇಷ ಆರ್ಥಿಕ ವಲಯ, ಡೈನಮ್ಯಾಟಿಕ್ ಟೆಕ್ನಾಲಜೀಸ್, ತುಮಕೂರಿನ ಚೆನ್ನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ಹಾಗೂ ಕ್ವಿನ್ ಸಿಟಿಗೆ ಭೂಮಿ ಗುರುತಿಸಿರುವ ಹುಲಿಕುಂಟೆಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದಲ್ಲಿ ಶನಿವಾರ ‘ವಿಕಸಿತ ಭಾರತ@20247’ ಉಪಕ್ರಮದ ಭಾಗವಾಗಿ ನಡೆದ ಹೂಡಿಕೆದಾರರೊಂದಿಗಿನ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡಿದ್ದ ನಿಯೋಗದವರು ಉದ್ಯಮ ಪರಿಸರ ವೀಕ್ಷಿಸಲು ಈ ಭೇಟಿ ಹಮ್ಮಿಕೊಂಡಿದ್ದರು. ಎನ್ ಐಸಿಡಿಸಿ ಸಿಇಒ ರಜತ್ ಕುಮಾರ್ ಸೈನಿ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಕೆಐಎಡಿಬಿ ಸಿಇಒ ಡಾ.ಎಂ.ಮಹೇಶ, ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮತ್ತಿತರರು ಈ ಭೇಟಿ ವೇಳೆ ಉಪಸ್ಥಿತರಿದ್ದರು.
ನ್ಯಾಸ್ಕಾಂ ಉತ್ಕೃಷ್ಟತಾ ಕೇಂದ್ರದಲ್ಲಿ ಸ್ಟಾರ್ಟ್-ಅಪ್ ಗಳ ಸ್ಥಾಪಕರು ಮತ್ತು ಇನ್ ಕ್ಯುಬೇಷನ್ ನಿರ್ವಾಹಕರೊಂದಿಗೆ ಸಮಾಲೋಚನೆ ನಡೆಸಿ, ಐಒಟಿ, ಎಐ, ಡ್ಯಾಟಾ ಸೈನ್ಸ್, ಬಿಗ್ ಡ್ಯಾಟಾ, ಎಆರ್/ವಿಆರ್, ಮಷೀನ್ ಲರ್ನಿಂಗ್ ಹಾಗೂ ರೋಬೋಟಿಕ್ಸ್ ತಾಂತ್ರಿಕತೆಗಳು ಮುಂಬರುವ ದಿನಗಳಲ್ಲಿ ತಯಾರಿಕೆ, ಲಾಜಿಸ್ಟಿಕ್ಸ್ ಮತ್ತು ನಗರ ಯೋಜನಾ ಪರಿಹಾರಗಳನ್ನು ಯಾವ ರೀತಿ ಪ್ರಭಾವಿಸಬಲ್ಲವು ಎಂಬ ಬಗ್ಗೆ ವಿನಿಮಯ ನಡೆಸಿದರು.

ತುಮಕೂರಿನ ಭೇಟಿ ವೇಳೆ, ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದಡಿ (ಎನ್ ಸಿಐಡಿಪಿ) 1,736 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಒಂದನೇ ಹಂತದ ಕೈಗಾರಿಕಾ ಪ್ರದೇಶದ ಪ್ರಗತಿಯನ್ನು ಅವಲೋಕಿಸಿದರು. ಒಳರಸ್ತೆಗಳು, ಚರಂಡಿ ವ್ಯವಸ್ಥೆ, ಯುಟಿಲಿಟಿ ಕಾರಿಡಾರುಗಳು ಹಾಗೂ ಹೂಡಿಕೆದಾರರನ್ನು ಬೆಂಬಲಿಸಲು ರೂಪಿಸಿರುವ ಉಪಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ, ಗುತ್ತಿಗೆದಾರ ಸಂಸ್ಥೆಯಾದ ಎಲ್ ಅಂಡ್ ಟಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ನಿಗದಿತ ಜಾಗಗಳನ್ನು ಅಭಿವೃದ್ಧಿಪಡಿಸಿ ಉದ್ದಿಮೆದಾರರಿಗೆ ಈ ವರ್ಷದ ಕೊನೆಗೆ ವೇಳೆಗೆ ಲಭ್ಯವಾಗಿಸಲು ಸೂಚಿಸಿದರು.
ಪ್ರಮುಖವಾಗಿ, ಎಲೆಕ್ಟ್ರಾನಿಕ್ಸ್, ವಾಹನೋದ್ಯಮ, ಕ್ಲೀನ್ ಟೆಕ್ ಮತ್ತು ಲಾಜಿಸ್ಟಿಕ್ಸ್ ವಲಯಗಳಿಂದ ಜಾಗತಿಕ ಹಾಗೂ ದೇಶೀಯ ಹೂಡಿಕೆ ಸೆಳೆಯುವುದನ್ನು ಗಮನದಲ್ಲಿರಿಸಿಕೊಂಡು ತುಮಕೂರು ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದೂ ಅವರು ತಿಳಿಸಿದರು.
ದೇವನಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಫಾಕ್ಸ್ ಕಾನ್ ಘಟಕ, ಏರೋಸ್ಪೇಸ್ ವಿಶೇಷ ಹೂಡಿಕೆ ವಲಯ ಮತ್ತು ಡೈನಮ್ಯಾಟಿಕ್ ಟೆಕ್ನಾಲಜೀಸ್ ಘಟಕಗಳಿಗೆ ಭೇಟಿ ನೀಡಿ ಉನ್ನತ ತಯಾರಿಕಾ ಸಾಮರ್ಥ್ಯ, ಪ್ರಿಸಿಷನ್ ಎಂಜಿನಿಯರಿಂಗ್ ಹಾಗೂ ಜಾಗತಿಕ ವೈಮಾಂತರಿಕ್ಷ ಪೂರೈಕೆ ಸರಪಳಿಯಲ್ಲಿ ಭಾರತದ ಪಾತ್ರ ಮತ್ತಿತರ ವಿಷಯಗಳ ಕುರಿತು ಚರ್ಚಿಸಿದರು.

ಭೂಬಳಕೆ ಸಂಘರ್ಷನಿವಾರಣೆಗೆ ಒತ್ತು: ಭಾಟಿಯಾ
ಕರ್ನಾಟಕದಲ್ಲಿ ಉದ್ಯಮ ಹೂಡಿಕೆದಾರರು ಕೈಗಾರಿಕಾ ಉದ್ದೇಶಿತ ಭೂಬಳಕೆಗೆ ಸಂಬಂಧಿಸಿದಂತೆ ಸಂಘರ್ಷಗಳು ಹೆಚ್ಚುತ್ತಿರುವ ಪ್ರವೃತ್ತಿಯ ಬಗ್ಗೆ ತಮ್ಮ ಅಹವಾಲುಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ಕೈಗಾರಿಕಾ ಹಾಗೂ ಆಂತರಿಕ ವಾಣಿಜ್ಯ ಉತ್ತೇಜನಾ ಇಲಾಖೆ ಕಾರ್ಯದರ್ಶಿ ಅಮರ್ ದೀಪ್ ಸಿಂಗ್ ಭಾಟಿಯಾ ಅವರು ಹೇಳಿದರು.
ಇಲ್ಲಿ ಭಾನುವಾರ ನಡೆದ ಹೂಡಿಕೆದಾರರ ದುಂಡು ಮೇಜಿನ ಸಭೆಯ ವೇಳೆ ಈ ಸಂಬಂಧ ಅಹವಾಲು ಕೇಳಿಬಂದಿದ್ದು, ಇವುಗಳನ್ನು ಪರಿಹರಿಸಲು ಕರ್ನಾಟಕ ಸರ್ಕಾರವು ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿಯನ್ನೂ ಓದಿ | Elephant Arjuna: ದಸರಾ ಆನೆ ಅರ್ಜುನನ ಹೆಸರಲ್ಲಿ ಪ್ರಶಸ್ತಿ ಸ್ಥಾಪಿಸಿದ ರಾಜ್ಯ ಸರ್ಕಾರ
“ಕರ್ನಾಟಕ ಸರ್ಕಾರದ ಪ್ರಯತ್ನಗಳ ಜೊತೆಗೆ ನಾವು ಕೂಡ ಪರಿಸ್ಥಿತಿ ಸುಧಾರಿಸಲು ಏನೇನು ಸಾಧ್ಯವೋ ಎಲ್ಲವನ್ನೂ ಮಾಡುತ್ತೇವೆ. ಏಕಗವಾಕ್ಷಿ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ಮತ್ತು ಈಗಾಗಲೇ ಇರುವ ಕೈಗಾರಿಕಾ ವಲಯಗಳಲ್ಲಿ ತಾಜ್ಯ ಸಂಸ್ಕರಣಾ ಘಟಕಗಳ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳ ಉನ್ನತೀಕರಣದ ಅಗತ್ಯದ ಬಗ್ಗೆ ಉದ್ದಿಮೆದಾರರು ಗಮನಕ್ಕೆ ತಂದಿದ್ದಾರೆ ಎಂದು ಅವರು ವಿವರಿಸಿದ್ದಾರೆ.