ನಟ ಸರಿಗಮ ವಿಜಿ ಇನ್ನಿಲ್ಲ
ಹಲವು ದಿನಗಳಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ನಟ ಸರಿಗಮ ವಿಜಿ ಮೃತಪಟ್ಟಿದ್ದಾರೆ.
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ (Sarigama Viji) (77) ನಿಧನರಾಗಿದ್ದಾರೆ. ಜನವರಿ 12ರಂದು ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಕಳೆದ 4 ದಿನಗಳಿಂದ ಯಶವಂತಪುರದ ಬಳಿಯ ಮಣಿಪಾಲ್ ಆಸ್ಪತ್ರೆಯಲ್ಲಿ (Manipal Hospital) ಚಿಕಿತ್ಸೆ ಪಡೆಯುತ್ತಿದ್ದರು.
ನಟ ಸರಿಗಮ ವಿಜಿ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹಿರಿಯ ನಟ ಸರಿಗಮ ವಿಜಯ್ 77ನೇ ವರ್ಷದಲ್ಲಿ ಮೃತಪಟ್ಟಿದ್ದು, ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ವಿಜಯ್ ಅವರಿಗೆ ಕಳೆದ ಒಂದು ವಾರದಿಂದ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಚಿಕಿತ್ಸೆ ಫಲಕಾರಿಯಾಗದೆ ವಿಜಯ್ ಇಂದು ಕೊನೆಯುಸಿರೆಳೆದಿದ್ದಾರೆ. ಇಂದು ಮಧ್ಯಾಹ್ನ 1 ಗಂಟಗೆ ಅಸ್ಪತ್ರೆಯಿಂದ ವಿಜಯ್ ನಿವಾಸಕ್ಕೆ ಮೃತದೇಹ ರವಾನೆಯಾಗಲಿದೆ. ಮಹಾಲಕ್ಷ್ಮಿಪುರಂ ನಲ್ಲಿರುವ ವಿಜಯ್ ನಿವಾಸಕ್ಕೆ ಮೃತದೇಹ ರವಾನೆಯಾಗಲಿದೆ. ಮಧ್ಯಾಹ್ನ ಒಂದು ಗಂಟೆಯಿಂದ ನಾಳೆ 10 ಗಂಟೆವರೆಗೂ ಅಂತಿಮ ದರ್ಶನ ನಡೆಯಲಿದೆ. ನಾಳೆ ಬೆಳಗ್ಗೆ 10 ಗಂಟೆ ನಂತರ ಚಾಮರಾಜಪೇಟೆ ಸ್ಮಶಾನದಲ್ಲಿ ಅಂತ್ಯಕ್ರಿಯೆಯಲ್ಲಿ ನಡೆಯಲಿದೆ.