ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Case: ಧರ್ಮಸ್ಥಳ ವಿರುದ್ಧ ಅಪಪ್ರಚಾರ: ರಾಜ್ಯಾದ್ಯಂತ ಸಿಡಿದೆದ್ದ ಭಕ್ತರು, ಪ್ರತಿಭಟನೆ, ಬಿಜೆಪಿಯಿಂದ ಯಾತ್ರೆಗೆ ಚಿಂತನೆ

Dharmasthala: ಶ್ರೀಕ್ಷೇತ್ರದ ಅಭಿಮಾನಿಗಳು ರಾಜ್ಯಾದ್ಯಂತ ಸಿಡಿದೆದ್ದಿದ್ದಾರೆ. ಈ ಅಪಪ್ರಚಾರ ಮಾಡುತ್ತಿರುವವರು, ಅವರಿಗೆ ಎಲ್ಲಿಂದ ಫಂಡಿಂಗ್‌ ಆಗುತ್ತಿದೆ, ದೇಶದ್ರೋಹಿಗಳ ಹಾಗೂ ಧರ್ಮದ್ರೋಹಿಗಳ ಕೈವಾಡ ಇದರ ಹಿಂದೆ ಇದೆಯೇ ಎಂಬ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಕ್ತರು ಪ್ರತಿಭಟನೆ ಆರಂಭಿಸಿದ್ದಾರೆ.

ಧರ್ಮಸ್ಥಳ ವಿರುದ್ಧ ಅಪಪ್ರಚಾರ: ರಾಜ್ಯಾದ್ಯಂತ ಭಕ್ತರಿಂದ ಪ್ರತಿಭಟನೆ

ಹರೀಶ್‌ ಕೇರ ಹರೀಶ್‌ ಕೇರ Aug 13, 2025 1:00 PM

ಬೆಂಗಳೂರು: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಹೂತ ಹೆಣಗಳ ಕೇಸ್‌ (Dharmasthala Case) ಮುಂತಾದ ನೆಪಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ (Social media) ನಿರಂತರ ಅಪಪ್ರಚಾರ ನಡೆಸುತ್ತಿರುವುದರಿಂದ ನೊಂದಿರುವ ಭಕ್ತಾದಿಗಳು, ಶ್ರೀಕ್ಷೇತ್ರದ ಅಭಿಮಾನಿಗಳು ರಾಜ್ಯಾದ್ಯಂತ ಸಿಡಿದೆದ್ದಿದ್ದಾರೆ. ಈ ಅಪಪ್ರಚಾರ ಮಾಡುತ್ತಿರುವವರು, ಅವರಿಗೆ ಎಲ್ಲಿಂದ ಫಂಡಿಂಗ್‌ ಆಗುತ್ತಿದೆ, ದೇಶದ್ರೋಹಿಗಳ ಹಾಗೂ ಧರ್ಮದ್ರೋಹಿಗಳ ಕೈವಾಡ ಇದರ ಹಿಂದೆ ಇದೆಯೇ ಎಂಬ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಕ್ತರು ಪ್ರತಿಭಟನೆ ಆರಂಭಿಸಿದ್ದಾರೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾಗಿ ದೂರುದಾರ ತಪ್ಪೊಪ್ಪಿಗೆ ಹೇಳಿಕೆ ಹಿನ್ನೆಲೆಯಲ್ಲಿ ಎಸ್ ಐಟಿ ತಂಡ ತನಿಖೆ ಚುರುಕುಗೊಳಿಸಿದೆ. ದೂರುದಾರ ತೋರಿಸುತ್ತಿರುವ ವಿವಿಧ ಜಾಗಗಳಲ್ಲಿ ಮಣ್ಣು ಅಗೆದು ಅಸ್ಥಿಪಂಜರಕ್ಕಾಗಿ ಶೋಧ ನಡೆಸಲಾಗುತ್ತಿದೆ. ಆತ ತೋರಿಸಿದ 13 ತಾಣಗಳಲ್ಲಿ ಅಗೆದಿದ್ದರೂ ಏನೂ ಸಿಕ್ಕಿಲ್ಲ. ಈ ನಡುವೆ ಧರ್ಮಸ್ಥಳ ಕ್ಷೇತ್ರದ ಬಗ್ಗೆ, ಧರ್ಮಾಧಿಕಾರಿಗಳ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಎಸ್‌ಐಟಿ ತನಿಖೆಯ ಫಲಿತಾಂಶ ಬರುವ ಮುನ್ನವೇ ಧರ್ಮಸ್ಥಳ ಕ್ಷೇತ್ರದ ಆಡಳಿತದವರನ್ನು, ಭಕ್ತರನ್ನು ಅಪರಾಧಿಗಳು ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಕ್ತರು ಆರೋಪಿಸಿದ್ದಾರೆ.

ಈ ರೀತಿ ಅಪಪ್ರಚಾರ ಮಾಡುತ್ತಿರುವವರ ಉದ್ದೇಶವನ್ನು ಬಯಲಿಗೆಳೆಯಬೇಕು. ಅಪಪ್ರಚಾರ ಮಾಡುತ್ತಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಕೊಪ್ಪಳ, ದಾವಣಗೆರೆ, ಕೊಡಗು, ಉಡುಪಿ ಧಾರವಾಡ, ಶಿವಮೊಗ್ಗ, ಮಂಡ್ಯ, ಮೈಸೂರು ಸೇರಿದಂತೆ ಹಲವೆಡೆ ಜನರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಅಪಪ್ರಚಾರ ನಡೆಸುವ ಮೂಲಕ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಲಾಗುತ್ತಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪಪ್ರಚಾರ ವಿರೋಧಿಸಿ ಯಾತ್ರೆಗೆ ಸಜ್ಜಾದ ಬಿಜೆಪಿ

ಧರ್ಮಸ್ಥಳದ ಪ್ರಕರಣಕ್ಕೆ ಇದೀಗ ಬಿಜೆಪಿ ನಾಯಕರು ಎಂಟ್ರಿ ಕೊಟ್ಟಿದ್ದು, ಶಾಸಕ ಎಸ್.ಆರ್ ವಿಶ್ವನಾಥ್ ಅವರು ಆಗಸ್ಟ್ 16 ರಿಂದ ಯಲಹಂಕದಿಂದ ಧರ್ಮಸ್ಥಳ ಯಾತ್ರೆ ಕೈಗೊಳ್ಳಲಿದ್ದಾರೆ. ಶಾಸಕ ಎಸ್.ಆರ್ ವಿಶ್ವನಾಥ್ ಸೇರಿದಂತೆ ಹಲವು ಬಿಜೆಪಿ ನಾಯಕರು, ಸದಸ್ಯರು, ಕಾರ್ಯಕರ್ತರು ಆಗಸ್ಟ್ 16ರಿಂದ ಯಲಹಂಕದಿಂದ ಧರ್ಮಸ್ಥಳ ಯಾತ್ರೆ ಕೈಗೊಳ್ಳಲಿದ್ದು, ಬೃಹತ್ ಬೆಂಬಲಿಗರ ಪಡೆಯೊಂದಿಗೆ ಯಾತ್ರೆ ನಡೆಸಲು ನಿರ್ಧರಿಸಲಾಗಿದೆ. 300ಕ್ಕೂ ಹೆಚ್ಚು ಕಾರುಗಳೊಂದಿಗೆ ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡು, ಧರ್ಮಸ್ಥಳದ ಪರ ನಿಲ್ಲಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: 13ನೇ ಪಾಯಿಂಟ್‌ನಲ್ಲಿ 18 ಅಡಿ ಆಳ ಅಗೆದರೂ ಸಿಗಲಿಲ್ಲ ಕಳೇಬರ