ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

African Swine Fever: ಕೊಡಗಿನಲ್ಲಿ ಆಫ್ರಿಕನ್ ಹಂದಿಜ್ವರ, ನೂರಾರು ಹಂದಿಗಳ ಸಾವು

ಕೊಡಗು ಜಿಲ್ಲೆಯ ಕುಶಾಲನಗರದ ಹುದುಗೂರು ಗ್ರಾಮದಲ್ಲಿ ನಿರಂತರವಾಗಿ ಹಂದಿಗಳು ಮೃತಪಟ್ಟಿರುವ ಹಿನ್ನೆಲೆ, ಪಶು ವೈದ್ಯಕೀಯ ಇಲಾಖೆ ಅವುಗಳ ಸ್ಯಾಂಪಲ್ ಸಂಗ್ರಹಿಸಿ ಹೈದರಾಬಾದಿಗೆ ಕಳುಹಿಸಿತ್ತು. ವರದಿಯಲ್ಲಿ ಹಂದಿಗಳಿಗೆ ಆಫ್ರಿಕನ್ ಹಂದಿಜ್ವರ (African Swine Fever) ಇರುವುದು ದೃಢಪಟ್ಟಿದೆ.

ಕೊಡಗಿನಲ್ಲಿ ಆಫ್ರಿಕನ್ ಹಂದಿಜ್ವರ, ನೂರಾರು ಹಂದಿಗಳ ಸಾವು

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ May 23, 2025 7:42 AM

ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಆಫ್ರಿಕನ್ ಹಂದಿಜ್ವರ (African Swine Fever) ಕಂಡುಬಂದಿದ್ದು, ಇದರಿಂದಾಗಿ ನೂರಾರು ಹಂದಿಗಳು ಮೃತಪಡುತ್ತಿವೆ. ಹಂದಿ ಸಾಕಾಣಿಕೆದಾರರು (Pig farmers) ನಷ್ಟ ಅನುಭವಿಸುವಂತಾಗಿದೆ. ಕಳೆದ ಒಂದು‌ ತಿಂಗಳಿಂದ ಕುಶಾಲನಗರದ ಹುದುಗೂರು ಗ್ರಾಮದಲ್ಲಿ ನೂರಾರು ಹಂದಿಗಳು ಮೃತಪಟ್ಟಿವೆ. ಗ್ರಾಮದ ಸಜನ್ ಹಾಗೂ ಹಲವು ಹಂದಿ ಸಾಕಾಣಿಕೆ ಕೇಂದ್ರದ 100ಕ್ಕೂ ಹೆಚ್ಚು ಹಂದಿಗಳು ಈ ಮಾರಕ ರೋಗಕ್ಕೆ ತುತ್ತಾಗಿವೆ. ಇದರಿಂದ ಹಂದಿ ಸಾಕಾಣಿಕೆದಾರರಲ್ಲಿ ಆತಂಕ ಎದುರಾಗಿದೆ.

ಈ‌ ಹಿಂದೆ ಪಶುಸಂಗೋಪನೆ ಅಧಿಕಾರಿಗಳು, ವೈದ್ಯರು ಗ್ರಾಮಕ್ಕೆ ಭೇಟಿ ನೀಡಿ, ಹಂದಿಗಳಿಗೆ ಫುಡ್​ ಪಾಯ್ಸನ್​ ಆಗಿದೆ. ಶುಚಿತ್ವ ಇಲ್ಲದೇ ಇರುವುದರಿಂದ ಹಂದಿಗಳು ಸಾಯುತ್ತಿವೆ ಎಂದು ಹೇಳಿದ್ದರು. ಗ್ರಾಮದಲ್ಲಿ ನಿರಂತರವಾಗಿ ಹಂದಿಗಳು ಮೃತಪಟ್ಟಿರುವ ಹಿನ್ನೆಲೆ, ಪಶು ವೈದ್ಯಕೀಯ ಇಲಾಖೆ ಅವುಗಳ ಸ್ಯಾಂಪಲ್ ಸಂಗ್ರಹಿಸಿ ಹೈದರಾಬಾದಿಗೆ ಕಳುಹಿಸಿತ್ತು. ವರದಿಯಲ್ಲಿ ಹಂದಿಗಳಿಗೆ ಆಫ್ರಿಕನ್ ಹಂದಿಜ್ವರ ಇರುವುದು ದೃಢಪಟ್ಟಿದೆ.

ಲ್ಯಾಬ್ ರಿಪೋರ್ಟ್ ಬರುವಷ್ಟರಲ್ಲಿ ಗ್ರಾಮದಲ್ಲಿ‌ ಇರುವ ಇನ್ನಷ್ಟು ಹಂದಿಗಳು ಮೃತಪಟ್ಟಿದ್ದವು. ಇದೀಗ ಹಂದಿ ಸಾಕಾಣಿಕ ಕೇಂದ್ರದ 1 ಕಿಲೋ ಮೀಟರ್​ ವ್ಯಾಪ್ತಿಯನ್ನು ರೋಗ ಪೀಡಿತ ವಲಯವೆಂದು ಮತ್ತು 10 ಕಿಲೋ ಮೀಟರ್​ ವ್ಯಾಪ್ತಿಯನ್ನ ಜಾಗೃತ ವಲಯವೆಂದು ಘೋಷಿಸಿದೆ. ಸೋಂಕಿಗೆ ತುತ್ತಾಗಿರುವ ಹಂದಿಗಳನ್ನು ವಧೆ ಮಾಡಿ ವೈಜ್ಞಾನಿಕ ರೂಪದಲ್ಲಿ ಸಂಸ್ಕಾರ ಮಾಡಬೇಕೆಂದು ಆದೇಶಿಸಲಾಗಿದೆ.

ಇದರಿಂದಾಗಿ ಲಕ್ಷಾಂತರ ಹಣವನ್ನು ಹೂಡಿಕೆ ಮಾಡಿ, ಹಂದಿ ಸಾಕಿದವರು ಈಗ ಕಂಗಾಲಾಗಿದ್ದಾರೆ. ಹಂದಿಗಳಿಗೆ ವ್ಯಾಕ್ಸಿನ್ ನೀಡಿದರೂ ಹಲವು ಹಂದಿಗಳು ಮೃತಪಟ್ಟಿವೆ. ಹೀಗಾಗಿ ಹಂದಿ ಸಾಕಾಣಿಕೆದಾರರಿಗೆ ದಿಕ್ಕೇ ತೋಚದಂತಾಗಿದೆ.

ಇದನ್ನೂ ಓದಿ: Viral Video: ಅಂದು ಗಗನಸಖಿ ಇಂದು ಹಂದಿ ಫಾರಂನಲ್ಲಿ ವರ್ಕರ್! – ಈಕೆಯ ಆದಾಯ ಕೇಳಿದ್ರೆ ನೀವಾಗ್ತೀರಾ ಶಾಕ್!