ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ: ಬಲ ಸುಮ್ಮನೆ ಬರಲಿಲ್ಲ !

‘ಪಂದ್ಯ ಆಡಲು ಭಾರತ ಮಂಡಿಯೂರಿ ನಡೆದುಕೊಂಡು ಬರುತ್ತದೆ’ ಎಂಬ ಪಾಕಿಸ್ತಾನದ ಅಹಂಕಾರದ ಮಾತಿಗೆ, ಒಂದೂ ಪಂದ್ಯವನ್ನೂ ಆಡದೆ, ಕೊನೆಗೆ ಸೆಮಿಫೈನ್, ಫೈನಲ್ ಪಂದ್ಯ ವನ್ನೂ ಪಾಕಿಸ್ತಾನದಿಂದ ಭಾರತ ಕಸಿದುಕೊಂಡಿತು. ಅವಮಾನದ ಪರಮಾವಧಿ ಹೇಗಿತ್ತು ಎಂದರೆ, ಅಂತಿಮ ಪಂದ್ಯದಲ್ಲಿ ಜಯಿಸಿದ ತಂಡಕ್ಕೆ ಪ್ರಶಸ್ತಿ ವಿತರಿಸುವಾಗ ಆತಿಥೇಯ ಪಾಕಿಸ್ತಾನದ ಒಬ್ಬೇ ಒಬ್ಬ ಪದಾಧಿಕಾರಿಯೂ ವೇದಿಕೆಯಲ್ಲಿರಲಿಲ್ಲ!

ಅಂಕಣಕಾರ ಕಿರಣ್‌ ಉಪಾಧ್ಯಾಯ

ವಿದೇಶವಾಸಿ

dhyapaa@gmail.com

ಅಂತೂ-ಇಂತೂ ಈ ವರ್ಷದ ಐಸಿಸಿ ಚಾಂಪಿಯನ್ಸ್ ಕಪ್ ಕ್ರಿಕೆಟ್ ಪಂದ್ಯಾಟ ಮುಗಿದಿದೆ. ಅಂತೂ-ಇಂತೂ ಅಂತಲೇ ಹೇಳಬೇಕು, ಯಾರ ಪಾಲಿಗೆ ಅಲ್ಲದಿದ್ದರೂ, ಪಾಕಿಸ್ತಾನದ ಪಾಲಿಗಂತೂ ಇದು ಅಂತೂ-ಇಂತೂ ಪಂದ್ಯಾಟವೇ.‌ 1996ರ ವಿಶ್ವಕಪ್ ಆಯೋಜಿಸಿದ ಸುಮಾರು ಮೂರು ದಶಕದ ನಂತರ ಪಾಕಿಸ್ತಾನ ಆಯೋ ಜಿಸಿದ ಅತಿ ದೊಡ್ಡ ಪಂದ್ಯಾಟ, ಮೊನ್ನೆ ಮುಗಿದ ಐಸಿಸಿ ಚಾಂಪಿಯನ್ಸ್ ಟ್ರೋಫಿ. ಅದರಲ್ಲಿ ಪಾಕಿಸ್ತಾನದ ಹಣ, ಮಾನ, ಮರ್ಯಾದೆ, ಗೌರವ ಎಲ್ಲವೂ ಐಪಿಎಲ್ ಆಟಗಾರರಿಗಿಂತಲೂ ವೇಗವಾಗಿ ಹರಾಜಾದವು. ಸಾಲದು ಎಂಬಂತೆ ಆ ಪಂದ್ಯಾಟವನ್ನು ಭಾರತ ಜಯಿಸಿದ್ದು ಪಾಕಿಸ್ತಾನದ ಪಾಲಿಗೆ ಗಾಯದ ಮೇಲೆ ಬರೆ ಎಳೆದು, ಬಿಸಿಲಲ್ಲಿ ಕೂರಿಸಿ, ಉಪ್ಪು ಸಿಂಪಡಿಸಿದಂತೆ ಆಗಿತ್ತು.

ಬಹುಶಃ ಕ್ರಿಕೆಟ್ ಇತಿಹಾಸದಲ್ಲಿಯೇ ಈ ರೀತಿಯ ಒಂದು ಅವಮಾನಕಾರಿ ಘಟನೆ ನಡೆದಿರಲಿಕ್ಕಿಲ್ಲ. ಪಾಕಿಸ್ತಾನ ಈ ಪಂದ್ಯಾಟದ ಆತಿಥ್ಯ ವಹಿಸಿತ್ತು. ಆದರೆ ಭಾರತ ಮೈದಾ ನದ ಒಳಗಷ್ಟೇ ಅಲ್ಲ, ಹೊರಗೂ ತನ್ನ ಪಾರುಪತ್ಯ ಮೆರೆಯಿತು. ಭಾರತ ತಾನು ಒಂದೇ ಒಂದು ಪಂದ್ಯವನ್ನೂ ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂಬ ಛಲ ಸಾಧಿಸಿತು.

ಇದನ್ನೂ ಓದಿ: Kiran Upadhyay Column: ವಿನಾಕಾರಣ ಜೈಲಿನಲ್ಲಿ ಬಾಡಿದ ಸ್ನೇಹಲತೆ

ಇನ್ನು ಪಾಕಿಸ್ತಾನ, ಆತಿಥೇಯ ತಂಡವಾದರೂ ಒಂದು ಪಂದ್ಯವನ್ನು ದೇಶದ ಹೊರಗೆ ಆಡಬೇಕಾಯಿತು. ಅಲ್ಲ, ಒಂದು ಪಂದ್ಯವನ್ನು ಮಾತ್ರ ದೇಶದ ಒಳಗೆ ಆಡಿತು. ಈ ಎರಡು ವಾಕ್ಯದಲ್ಲಿ ಯಾವುದು ಸರಿ ಎಂದು ಕೇಳಿದರೆ, ಎರಡೂ ಸರಿ! ಒಟ್ಟೂ 15 ಪಂದ್ಯದಲ್ಲಿ, ಭಾರತ ಸೆಮಿಫೈನಲ್ ತಲುಪದಿದ್ದರೆ 12 ಪಂದ್ಯವಾದರೂ ಪಾಕಿಸ್ತಾನದಲ್ಲಿ ನಡೆಯ ಬೇಕಿತ್ತು. ಭಾರತ ಅಂತಿಮ ಹಂತಕ್ಕೆ ತಲುಪಿದರೂ ಕನಿಷ್ಠ 10 ಪಂದ್ಯವಾದರೂ ಅಲ್ಲಿ ನಡೆಯ ಬೇಕಿತ್ತು. ಆದರೆ ಮಳೆಯಿಂದಾಗಿ 5 ಪಂದ್ಯಗಳು ಮಾತ್ರ ಅಲ್ಲಿ ನಡೆದವು. ಅದರಲ್ಲಿ ಪಾಕಿಸ್ತಾನದ ಪಾಲಿಗೆ ದಕ್ಕಿದ್ದು ಒಂದೇ ಪಂದ್ಯ!

ಪಾಕಿಸ್ತಾನ ಈ ಪಂದ್ಯಾಟಕ್ಕಾಗಿ ನೂರು ಮಿಲಿಯನ್ ಡಾಲರ್ ಖರ್ಚು ಮಾಡಿತ್ತು. ಅದರಲ್ಲಿ ಟಿಕೆಟ್, ಜಾಹೀರಾತು ಇತ್ಯಾದಿಗಳಿಂದ ಬಂದ ಲಾಭ 15 ಮಿಲಿಯನ್. ಅಂದರೆ, 85 ಮಿಲಿಯನ್ ನೆಟ್ ಲಾಸ್! ಆರ್ಥಿಕ ನಷ್ಟವನ್ನು ಒಂದು ಕಡೆ ಇಡಿ. ಈ ಪಂದ್ಯಾಟದಲ್ಲಿ ಭಾರತದ ಮೈದಾನದ ಹೊರಗಿನ ಬಲಪ್ರದರ್ಶನದಿಂದ ಪಾಕಿಸ್ತಾನ ತೀರಾ ಮುಜುಗರ ಪಡುವಂತಾಯಿತು.

‘ಪಂದ್ಯ ಆಡಲು ಭಾರತ ಮಂಡಿಯೂರಿ ನಡೆದುಕೊಂಡು ಬರುತ್ತದೆ’ ಎಂಬ ಪಾಕಿಸ್ತಾನದ ಅಹಂಕಾರದ ಮಾತಿಗೆ, ಒಂದೂ ಪಂದ್ಯವನ್ನೂ ಆಡದೆ, ಕೊನೆಗೆ ಸೆಮಿಫೈನ್, ಫೈನಲ್ ಪಂದ್ಯವನ್ನೂ ಪಾಕಿಸ್ತಾನದಿಂದ ಭಾರತ ಕಸಿದುಕೊಂಡಿತು. ಅವಮಾನದ ಪರಮಾವಧಿ ಹೇಗಿತ್ತು ಎಂದರೆ, ಅಂತಿಮ ಪಂದ್ಯದಲ್ಲಿ ಜಯಿಸಿದ ತಂಡಕ್ಕೆ ಪ್ರಶಸ್ತಿ ವಿತರಿಸುವಾಗ ಆತಿಥೇಯ ಪಾಕಿಸ್ತಾನದ ಒಬ್ಬೇ ಒಬ್ಬ ಪದಾಧಿಕಾರಿಯೂ ವೇದಿಕೆಯಲ್ಲಿರಲಿಲ್ಲ!

ಇದಕ್ಕೆಲ್ಲ ಕಾರಣ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ- ‘ಬಿಸಿಸಿಐ’. ಹಾಗಾದರೆ ಬಿಸಿಸಿಐ ಅಷ್ಟು ಶಕ್ತಿಯುತವೇ? ಇಂದಿನ ಪರಿಸ್ಥಿತಿಯಲ್ಲಿ ಹೌದು. ಆದರೆ ಬಿಸಿಸಿಐಗೆ ಈ ಶಕ್ತಿ ಆರಂಭದಿಂದ ಬಂದದ್ದಲ್ಲ. ಒಂದು ಕಾಲದಲ್ಲಿ ಬಿಸಿಸಿಐ ಬಳಿ ಆಟಗಾರರಿಗೆ ಊಟ ಕೊಡಲೂ ಹಣ ಇರಲಿಲ್ಲ. ಆ ಕಾಲದಲ್ಲಿ ಒಂದು ಪಂದ್ಯಾವಳಿಗೆ ಬೇಕಾದ ನಲವತ್ತೋ-ಐವತ್ತೋ ಹೊಸ ಚೆಂಡು ಖರೀದಿಸಲೂ ತತ್ವಾರವಾಗಿತ್ತು.

ಆ ಕಾಲದಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾದಂಥ ದೇಶದ ಆಟಗಾರರು ಐಷಾರಾಮಿ ವಾಹನ ದಲ್ಲಿ ಓಡಾಡುತ್ತಿದ್ದರೆ, ಪಂಚತಾರಾ ಹೋಟೆಲ್‌ನಲ್ಲಿ ವಾಸಿಸುತ್ತಿದ್ದರೆ, ಭಾರತದ ಆಟಗಾರರು ಸಾಮಾನು ಸಾಗಿಸುವ ಹಡಗಿನ ಖಾಲಿ ಕಂಟೇನರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಸಾಧಾರಣ ಸ್ಥಳದಲ್ಲಿ ಉಳಿದುಕೊಳ್ಳುತ್ತಿದ್ದರು. ಮೊದಮೊದಲು ಭಾರತದ ತಂಡ ಇಂಗ್ಲೆಂಡ್‌ಗೆ ಕ್ರಿಕೆಟ್ ಆಡಲು ಹೋಗುತ್ತಿzಗ, ಅರ್ಧ ಪೌಂಡ್ ಸಿಗುತ್ತಿತ್ತು.

ಹಾ, ಹಾ, ಒಂದು ಹೊತ್ತಿಗಲ್ಲ, ದಿನಕಲ್ಲ, ಒಂದು ವಾರಕ್ಕೆ! ಅವರ ಊಟ, ಪ್ರಯಾಣ, ಲಾಂಡ್ರಿ ಇತ್ಯಾದಿಗಳೆಲ್ಲ ಅದರ ಆಗಬೇಕಿತ್ತು. ಎಷ್ಟೋ ಬಾರಿ ಭಾರತದ ಆಟಗಾರರು ಹಸಿದ ಹೊಟ್ಟೆಯಲ್ಲಿ ಪಂದ್ಯ ಆಡಿದ್ದೂ ಇದೆ. ವಿಜಯ್ ಹಜಾರೆ ಭಾರತ ತಂಡದ ನಾಯಕರಾ ಗಿದ್ದಾಗಿನ ಒಂದು ಘಟನೆ ಎಲ್ಲರೂ ಕೇಳಿರಬಹುದು.

ಅಭಿಮಾನಿಯೊಬ್ಬ ಹಜಾರೆಯವರನ್ನು ಭೇಟಿಯಾಗಿ, ಊಟಕ್ಕೆ ಆಹ್ವಾನಿಸಿದಾಗ, “ನೀವು ಊಟದ ಬದಲು ನಮಗೆ ಹಣವನ್ನೇ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ" ಎಂದಿದ್ದ ರಂತೆ. ಅಷ್ಟು ಹಿಂದೆ ಹೋಗುವುದೇಕೆ? ಭಾರತ 1983ರಲ್ಲಿ ವಿಶ್ವಕಪ್ ಜಯಿಸಿತಲ್ಲ, ಆ ತಂಡದಲ್ಲಿ ಸುನಿಲ್ ಗಾವಸ್ಕರ್, ಕಪಿಲ್ ದೇವ್, ಮೊಹಿಂದರ್ ಅಮರನಾಥ್‌ರಂಥ ಘಟಾ ನುಘಟಿಗಳಿದ್ದರು. ಅವರಿಗೆಲ್ಲ ಎಷ್ಟು ಹಣ ಸಿಗುತ್ತಿತ್ತು ಗೊತ್ತೇ? ಪ್ರತಿಯೊಬ್ಬರಿಗೂ ಒಂದು ಪಂದ್ಯಕ್ಕೆ 1500 ರುಪಾಯಿ, ನಿತ್ಯ 200 ರುಪಾಯಿ ಭತ್ಯೆ, ಅಷ್ಟೇ!

ವಿಶ್ವಕಪ್ ಗೆದ್ದಾಗ ಆಟಗಾರರಿಗೆ ಬಹುಮಾನ ಘೋಷಿಸಲು ಕೂಡ ಬಿಸಿಸಿಐ ಬಳಿ ಹಣ ಇರಲಿಲ್ಲ. ಆಟಗಾರರಿಗೆ ಒಂದು ಲಕ್ಷ ರುಪಾಯಿ ನೀಡಬೇಕೆಂದು ಮನಸಿದ್ದರೂ ಹಣವಿಲ್ಲದ ಕಾರಣ ಬಿಸಿಸಿಐ ಕೆಲವು ತಿಂಗಳು ಸುಮ್ಮನೆ ಕುಳಿತಿತ್ತು. ನಂತರ ಲತಾ ಮಂಗೇಶ್ಕರ್ ಉಚಿತ ವಾಗಿ ಒಂದು ಸಂಗೀತ ಕಾರ್ಯಕ್ರಮವನ್ನು ಮಾಡಿ, ಅದರಿಂದ ಬಂದ 20 ಲಕ್ಷ ರುಪಾಯಿ ಆದಾಯವನ್ನು ಬಿಸಿಸಿಐಗೆ ದೇಣಿಗೆಯಾಗಿ ನೀಡಿದರು.

ಆದರೆ ಭಾರತ ವಿಶ್ವ ಕಪ್ ಜಯಿಸಿದ್ದು ಒಂದು ಪ್ರಮುಖ ತಿರುವಾಯಿತು. ಭಾರತದಲ್ಲಿ ಕ್ರಿಕೆಟ್ ಹುಚ್ಚು ಹೆಚ್ಚಾಯಿತು. ಹೆಚ್ಚು ಜಾಹೀರಾತುಗಳು ಬರಲಾರಂಭಿಸಿದವು. ಅದರಿಂದ ಬಿಸಿಸಿಐಗೆ ಹೆಚ್ಚಿನ ಲಾಭವೇನೂ ಆಗಲಿಲ್ಲ. ಈ ನಡುವೆ ಒಂದು ಘಟನೆ ನಡೆಯಿತು. ಭಾರತ ವಿಶ್ವಕಪ್ ಅಂತಿಮ ಹಂತಕ್ಕೆ ತಲುಪಿದಾಗ, ಅಂದಿನ ಕೇಂದ್ರ ಸರಕಾರದ ಸಚಿವರಾಗಿದ್ದ ಸಿದ್ದಾರ್ಥ್ ಶಂಕರ್ ರಾಯ್ ತಮ್ಮ ಪತ್ನಿ ಸಮೇತ ಸರಕಾರಿ ಕೆಲಸದ ಮೇಲೆ ಇಂಗ್ಲೆಂಡ್‌ ನಲ್ಲಿದ್ದರು.

ಅವರಿಗೆ ಅಂತಿಮ ಪಂದ್ಯವನ್ನು ನೋಡುವ ಮನಸ್ಸಾಯಿತು. ಅವರು ಅಂದಿನ ಬಿಸಿಸಿಐ ಅಧ್ಯಕ್ಷರಾದ ಎನ್‌ಕೆಪಿ ಸಾಳ್ವೆ ಅವರಲ್ಲಿ ಪಂದ್ಯ ವೀಕ್ಷಿಸಲು ಎರಡು ಟಿಕೆಟ್ ಕೊಡಿಸುವಂತೆ ಕೇಳಿದರು. ಸಾಳ್ವೆ ಅವರು ಇಂಗ್ಲಿಷ್ ಕ್ರಿಕೆಟ್ ಬೋರ್ಡ್‌ನಲ್ಲಿ ಟಿಕೆಟ್ ಕೇಳಿದಾಗ, “ನಿಮಗೆ ಕೊಡಬೇಕಾದದ್ದನ್ನು ಕೊಟ್ಟಿದ್ದೇವೆ,

ಹೆಚ್ಚಿನ ಟಿಕೆಟ್ ಕೊಡಲಾಗುವುದಿಲ್ಲ" ಎಂಬ ಉತ್ತರ ಬಂತು. ಅಂತಿಮ ಪಂದ್ಯದವರೆಗೆ ಇಂಗ್ಲೆಂಡ್ ತಲುಪದ ಕಾರಣ ಕ್ರೀಡಾಂಗಣದಲ್ಲಿ ಸಾಕಷ್ಟು ಆಸನಗಳು ಖಾಲಿ ಇತ್ತು. ಆದರೂ ತನ್ನ ಅಹಂಕಾರದಿಂದ ಇಸಿಬಿ (ಇಂಗ್ಲಿಷ್ ಕ್ರಿಕೆಟ್ ಬೋರ್ಡ್) ಟಿಕೆಟ್ ನೀಡುವು ದಕ್ಕೆ ನಿರಾಕರಿಸಿತ್ತು.

ಅವಮಾನಿತರಾದ ಸಾಳ್ವೆ, ವಿಶ್ವಕಪ್ ಪಂದ್ಯಾಟವನ್ನೇ ಇಂಗ್ಲೆಂಡ್‌ನಿಂದ ಹೊರಗೆ ಆಡಿಸಬೇಕು ಎಂಬ ನಿರ್ಣಯಕ್ಕೆ ಬಂದರು. ಅಲ್ಲಿಯವರೆಗೆ ನಡೆದ ಎಲ್ಲ ವಿಶ್ವಕಪ್‌ಗಳೂ ಇಂಗ್ಲೆಂಡ್‌ನಲ್ಲಿಯೇ ನಡೆದಿದ್ದವು. ಆ ದೇಶದಲ್ಲಿಯೇ ವಿಶ್ವಕಪ್ ನಡೆಯುತ್ತಿಲ್ಲ ಎಂದರೆ ಅವರ ಅಹಂಕಾರಕ್ಕೆ ಮರ್ಮಘಾತ ಕೊಟ್ಟಂತಾಗುತ್ತದೆ ಎಂದು ಸಾಳ್ವೆ ತಿಳಿದಿದ್ದರು.

ಸಾಳ್ವೆ ಆಗಿನ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಮುಖ್ಯಸ್ಥರಾಗಿದ್ದ ಏರ್ ಮಾರ್ಷಲ್ ನೂರ್ ಖಾನ್ ಜತೆ ಮಾತನಾಡಿ ಮನವೊಲಿಸಿದರು. ನಂತರ ಶ್ರೀಲಂಕಾ, ಆಸ್ಟ್ರೇಲಿಯಾ ಜತೆ ಕೂಡ ಮಾತನಾಡಿದರು. ಆ ಕಾಲದಲ್ಲಿ ವಿಶ್ವಕಪ್ ಆಡಲು ಬಂದ ಅತಿಥಿ ತಂಡಕ್ಕೆ ಇಂಗ್ಲೆಂಡ್ 20 ಸಾವಿರ ಡಾಲರ್ ನೀಡುತ್ತಿತ್ತು. ಭಾರತ 40 ಸಾವಿರ ನೀಡುವುದಾಗಿ ಹೇಳಿತು. ಆ ಹಣ ಹೊಂದಿಸುವುದು ಬಿಸಿಸಿಐಗೆ ಅಷ್ಟು ಸುಲಭವಾಗಿರಲಿಲ್ಲವಾದರೂ ಇಂಗ್ಲೆಂಡಿನಿಂದ ಪಂದ್ಯಾಟ ಕಸಿದುಕೊಳ್ಳಬೇಕು ಎಂಬ ಕಾರಣಕ್ಕೆ ಈ ವಾಗ್ದಾನ ಮಾಡಿತ್ತು.

ಅದರೊಂದಿಗೆ ಮೈದಾನ, ಆಟಗಾರರಿಗೆ ಊಟ, ವಸತಿ, ಪ್ರವಾಸ ಇತ್ಯಾದಿಗಳಿಗೆ ಒಟ್ಟೂ 20 ಕೋಟಿ ರುಪಾಯಿಯ ಅವಶ್ಯಕತೆ ಇತ್ತು. ಜಾಹೀರಾತಿನಿಂದ 40 ಲಕ್ಷ ಮಾತ್ರ ಜಮೆ ಆಯಿತು. ಅಂದಿನ ಸರಕಾರ ಇಷ್ಟು ಹಣ ನೀಡುವ ಸ್ಥಿತಿಯಲ್ಲಿರದ ಕಾರಣ, 4 ಕೋಟಿ ಕೊಟ್ಟು ಕೈ ತೊಳೆದುಕೊಂಡಿತು. ಯಾವುದಾದರೂ ಉದ್ಯಮಿಯೇ ತಮ್ಮ ಸಹಾಯಕ್ಕೆ ಬರಬೇಕು ಎಂದು ಸಾಳ್ವೆಯವರಿಗೆ ಅರ್ಥವಾಗಿತ್ತು. ಆಗ ಅವರ ಸಹಾಯಕ್ಕೆ ನಿಂತವರು ರಿಲಾಯನ್ಸ್‌ನ ಧೀರೂಭಾಯಿ ಅಂಬಾನಿ.

ಬಿಸಿಸಿಐ ಇನ್ನೊಂದು ಮಹತ್ವದ ತಿರುವು ಪಡೆದುಕೊಂಡಿದ್ದು 90ರ ದಶಕದ ಆರಂಭದಲ್ಲಿ. ಆಗ ಜಗಮೋಹನ್ ದಾಲ್ಮಿಯಾ ಅಧ್ಯಕ್ಷರಾಗಿದ್ದರು. ಅವರು ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಬಂದು ಆಡುವಂತೆ ಅಲ್ಲಿಯ ಅಧ್ಯಕ್ಷ ಅಲಿ ಬಾಕರ್ ಅವರಿಗೆ ಆಹ್ವಾನವಿತ್ತರು. ಅವರಿಬ್ಬರ ನಡುವಿನ ಆ ಒಂದು ಟೆಲಿಫೋನ್ ಕರೆ ಬಿಸಿಸಿಐನ ಅದೃಷ್ಟದ ಬಾಗಿಲು ತೆರೆಯುವಂತೆ ಮಾಡಿತು. ಭಾರತಕ್ಕೆ ಬಂದು ಆಡಲು ಒಪ್ಪಿಕೊಂಡ ಅಲಿ ಬಾಕರ್, ಪಂದ್ಯ ವನ್ನು ತಮ್ಮ ದೇಶದ ಟೆಲಿವಿಷನ್‌ನಲ್ಲಿ ಪ್ರಸಾರ ಮಾಡುವುದಕ್ಕೆ ಎಷ್ಟು ಹಣ ಕೊಡ ಬೇಕೆಂದು ಕೇಳಿದರು.

ಅಲ್ಲಿಯವರೆಗೆ ಬಿಸಿಸಿಐಗೆ ಕ್ರಿಕೆಟ್ ಪಂದ್ಯವನ್ನು ಬಿತ್ತರಿಸಲು ಹಣ ಕೊಟ್ಟು ಗೊತ್ತಿತ್ತೇ ವಿನಾ, ಅದರಿಂದ ಹಣ ಬರುತ್ತದೆ ಎಂದು ಗೊತ್ತಿರಲಿಲ್ಲ. ನಿಮಗೆ ತಿಳಿದಿರಲಿ, ಆ ಕಾಲದಲ್ಲಿ ಭಾರತದ ಪಂದ್ಯವನ್ನು ತೋರಿಸಲು ದೂರದರ್ಶನ ಬಿಸಿಸಿಐನಿಂದ ಪ್ರತಿ ಪಂದ್ಯಕ್ಕೆ 5 ಲಕ್ಷ ರುಪಾಯಿ ಪಡೆಯುತ್ತಿತ್ತು. ಅಲ್ಲದೆ, ಜಾಹೀರಾತಿನಿಂದ ಬರುವ ಹಣವೂ ದೂರದರ್ಶನಕ್ಕೇ ಹೋಗುತ್ತಿತ್ತು.

ಮೈದಾನದಲ್ಲಿ ತೋರ್ಪಡಿಸುವ ಜಾಹೀರಾತುಗಳು ಮತ್ತು ಟಿಕೆಟ್ ಮಾರಿದ್ದರಿಂದ ಬಂದ ಮೊತ್ತದ ಅರ್ಧ ಹಣ ಮಾತ್ರ ಬಿಸಿಸಿಐ ಪಾಲಿಗೆ ಸೇರುತ್ತಿತ್ತು. ಹೀಗಿರುವಾಗ, ದಕ್ಷಿಣ ಆಫ್ರಿಕಾ ಭಾರತದಲ್ಲಿ 3 ಪಂದ್ಯ ಆಡಬೇಕಾಗಿತ್ತು. ಅಲಿ ಬಾಕರ್ ಪಂದ್ಯದ ಹಕ್ಕುಗಳಿಗಾಗಿ 40 ಸಾವಿರ ಡಾಲರ್ ಕೊಡುತ್ತೇನೆ ಎಂದಾಗ ಬಿಸಿಸಿಐಗೆ, ದಾಲ್ಮಿಯಾಗೆ ನಂಬಿಕೆಯೇ ಬರಲಿಲ್ಲ.

ಇದ್ದಕ್ಕಿದ್ದಂತೆ 40 ಸಾವಿರ ಡಾಲರ್ ಬರುತ್ತದೆ ಅಂದರೆ, ಏನು ಹುಡುಗಾಟವೇ? ಬಿಸಿಸಿಐ ಮರು ಮಾತನಾಡದೇ ಒಪ್ಪಿಕೊಂಡಿತ್ತು. ಆದರೆ ದಕ್ಷಿಣ ಆಫ್ರಿಕಾ ಒಂದು ಲಕ್ಷ ಇಪ್ಪತ್ತು ಸಾವಿರ ಡಾಲರ್ ಕೊಟ್ಟಾಗ ಬಿಸಿಸಿಐ ದಿಗ್ಮೂಢವಾಗಿತ್ತು. ಮೂರು ಪಂದ್ಯಗಳಿಂದ 40 ಸಾವಿರ ಬರುತ್ತದೆ ಎಂದು ಬಿಸಿಸಿಐ ತಿಳಿದಿದ್ದರೆ, ಪ್ರತಿ ಪಂದ್ಯಕ್ಕೆ 40ರಂತೆ ದಕ್ಷಿಣ ಆಫ್ರಿಕಾ ಹಣ ಪಾವತಿಸಿತ್ತು.

ಅಲ್ಲಿಂದ ಕ್ರಿಕೆಟ್ ಪಂದ್ಯವನ್ನು ದೂರದರ್ಶನದಲ್ಲಿ ತೋರಿಸಬೇಕಾದರೆ ದೂರದರ್ಶನವೇ ಬಿಸಿಸಿಐಗೆ ಹಣ ನೀಡಬೇಕೆಂದು ಬಿಸಿಸಿಐ ತಾಕೀತು ಮಾಡಿತು. ದೂರದರ್ಶನ ಒಪ್ಪದಿzಗ, ಈ ವಿಷಯ ನ್ಯಾಯಾಲಯಕ್ಕೆ ಹೋಗಿ, ನ್ಯಾಯಾಲಯ “ಇದು ಬಿಸಿಸಿಐ ಸ್ವತ್ತು, ಆದ್ದರಿಂದ ಈ ಹಕ್ಕು ಮಾರಲು ಬಿಸಿಸಿಐಗೆ ಅಧಿಕಾರವಿದೆ" ಎಂದು ತೀರ್ಪು ನೀಡಿತು.

1994ರಿಂದ 1999ರವರೆಗೆ ಬಿಸಿಸಿಐ ಪ್ರಸಾರದ ಹಕ್ಕನ್ನು ಟಿಡಬ್ಲ್ಯುಐ ಕಂಪನಿಗೆ 150 ಕೋಟಿಗೆ ನೀಡಿತು. ನಂತರದ 5 ವರ್ಷದ ಹಕ್ಕನ್ನು ದೂರದರ್ಶನ 250 ಕೋಟಿ ಕೊಟ್ಟು ಖರೀದಿಸಿತು. ಪರಿಣಾಮವಾಗಿ, 1993ರಲ್ಲಿ 80 ಲಕ್ಷ ರುಪಾಯಿ ನಷ್ಟದಲ್ಲಿದ್ದ ಬಿಸಿಸಿಐ 1998ರ ವೇಳೆಗೆ 8 ಕೋಟಿ ಲಾಭ ಮಾಡಿತು. 2008ರ ನಂತರ ಬಿಸಿಸಿಐನ ಹಣ ಗಳಿಕೆಯ ವೇಗ ಎಲ್ಲಿಲ್ಲದಂತೆ ಹೆಚ್ಚಿತು. ಆ ವರ್ಷದಿಂದ ಬಿಸಿಸಿಐ ಪ್ರತಿ ವರ್ಷವೂ ಹೆಚ್ಚು-ಕಮ್ಮಿ 300 ಕೋಟಿ ಲಾಭ ಗಳಿಸುತ್ತಿದೆ. ಅದಕ್ಕೆ ಕಾರಣ ಐಪಿಎಲ್.

ಐಪಿಎಲ್ ಆರಂಭವಾದಾಗ 2 ಬಿಲಿಯನ್ ಡಾಲರ್ ತೂಗುತ್ತಿದ್ದ ಬಿಸಿಸಿಐ 2023ರ ವೇಳೆಗೆ ಸುಮಾರು 11 ಬಿಲಿಯನ್ ಡಾಲರ್‌ನಷ್ಟು ತೂಗುತ್ತಿದೆ. ಇದರಿಂದಾಗಿ ಬಿಸಿಸಿಐ ಶ್ರೀಮಂತ ವಾದದ್ದಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಕ್ತಿಯುತವೂ ಆಗಿದೆ. ಇಂದು ಐಸಿಸಿಗೆ ಬರುವ ಆದಾಯದಲ್ಲಿ 70ರಿಂದ 80 ಪ್ರತಿಶತ ಹಣ ಬಿಸಿಸಿಐನಿಂದ ಬರುತ್ತದೆ.

ಇಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 500 ಕೋಟಿ, ಆಸ್ಟ್ರೇಲಿಯಾ 650 ಕೋಟಿ, ಪಾಕಿಸ್ತಾನ 450 ಕೋಟಿ ತೂಗುತ್ತವೆ. ಆದರೆ ಬಿಸಿಸಿಐ ಒಂದೇ 20700 ಕೋಟಿ ತೂಗುತ್ತದೆ. ಕ್ರಿಕೆಟ್ ಪ್ರೇಮಿ ಗಳಿಗೆ ನೆನಪಿರಬಹುದು, ಒಂದು ಕಾಲದಲ್ಲಿ ನಿಧಾನ ಗತಿಯಲ್ಲಿ ಬೌಲ್ ಮಾಡಿದ್ದಕ್ಕೆ ವೀರೇಂದ್ರ ಸೆಹ್ವಾಗ್‌ರನ್ನು, ಒಂದು ಪಂದ್ಯದಿಂದ ನಿರ್ಬಂಧಿಸಿತ್ತು. ಒಂದು ಬಾರಿಯಂತೂ ತೆಂಡೂಲ್ಕರ್, ಸೆಹ್ವಾಗ್, ಗಂಗೂಲಿ ಸೇರಿದಂತೆ ಆರು ಆಟಗಾರರರಿಗೆ ನಿರ್ಬಂಧ ಹೇರಲಾ ಗಿತ್ತು.

ಆಗೆಲ್ಲ ಬಿಸಿಸಿಐ ಧ್ವನಿ ಯಾರಿಗೂ ಕೇಳುತ್ತಿರಲಿಲ್ಲ. ಈಗ ಎಲ್ಲರೂ ಬಿಸಿಸಿಐ ಹೇಳಿದ್ದೇ ಸರಿ ಎನ್ನುವ ಸ್ಥಿತಿಗೆ ತಲುಪಿzರೆ. ಅದಕ್ಕಾಗಿಯೇ ಐಸಿಸಿ ಚಾಂಪಿಯ ಪಂದ್ಯಾಟವನ್ನು ಪಾಕಿಸ್ತಾನ ಆಯೋಜಿಸಿದಾಗ, ಬಿಸಿಸಿಐ ತಾನು ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂದು ಹೇಳಿತು.

ಅದನ್ನು ಪಾಕಿಸ್ತಾನ ಬಿಟ್ಟು ಬೇರೆ ಯಾರೂ ವಿರೋಧಿಸಲೂ ಇಲ್ಲ. ಬಿಸಿಸಿಐ ತನ್ನ ಬಲ ವನ್ನು ಜಗತ್ತಿಗೆ ತೋರಿಸಿಕೊಟ್ಟಿತ್ತು. ಬಿಸಿಸಿಐ ಬಗ್ಗೆ ಜನರಲ್ಲಿ ಒಳ್ಳೆಯ, ಕೆಟ್ಟ ಎರಡೂ ರೀತಿಯ ಅಭಿಪ್ರಾಯಗಳಿವೆ. ಕಾರಣ ಏನೇ ಇರಬಹುದು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಬಿಸಿಸಿಐ ಇಂದು ಶಕ್ತಿಯುತವಾದ ಧ್ವನಿಯನ್ನಂತೂ ಹೊಂದಿದೆ.

ಬಿಸಿಸಿಐ ಮಾತನ್ನು ಯಾರೂ ಅಲ್ಲಗಳೆಯುವ ಸ್ಥಿತಿಯಲ್ಲೂ ಇಲ್ಲ. ಈ ನಿಟ್ಟಿನಲ್ಲಿಯಾದ ರೂ ನಾವು ಬಿಸಿಸಿಐ ಬಗ್ಗೆ ಹೆಮ್ಮೆ ಪಡಬೇಕು. ಒಂದು ಕಾಲದಲ್ಲಿ ಹಡಗಿನಲ್ಲಿ ಪ್ರಯಾಣಿಸು ತ್ತಿದ್ದ ತಂಡದವರು ಇಂದು ಮ್ಯಾನೇಜರ್, ಕೋಚ್, ವೈದ್ಯರು, ಸಹಾಯಕರು ಇತ್ಯಾದಿ ಸೇರಿದಂತೆ ಕಮ್ಮಿ ಕಮ್ಮಿ ಎಂದರೂ 50 ಜನರ ತಂಡವಾಗಿ ವಿಮಾನದಲ್ಲಿ ಪ್ರಯಾಣಿಸು ತ್ತಾರೆ. ಪಂಚತಾರಾ ಹೋಟೆಲ್‌ನಲ್ಲಿ ಉಳಿಯುತ್ತಾರೆ. ಏನೂ ಇಲ್ಲದ ಸ್ಥಿತಿ ಯಿಂದ ಈ ಹಂತ ತಲುಪಿದ ಬಿಸಿಸಿಐನ ಪರಿಶ್ರಮಕ್ಕೆ ಒಂದು ನಮಸ್ಕಾರ ಹೇಳಲೇಬೇಕು. ಇದು ಎಷ್ಟು ದಿನ ಹೀಗೇ ಮುಂದುವರಿಯುತ್ತದೆಯೋ ಗೊತ್ತಿಲ್ಲ.

ಇಂದಿನ ಹೊಸ ಗುಸು-ಗುಸು ಸುದ್ದಿ ಏನು ಗೊತ್ತೆ? ಸೌದಿ ಅರೇಬಿಯಾ ‘ಗ್ಲೋಬಲ್ ಟಿ-20 ಲೀಗ್’ ಪಂದ್ಯಾಟವನ್ನು ಆಯೋಜಿಸುವುದಕ್ಕೆ ಸಿದ್ಧವಾಗುತ್ತಿದೆಯಂತೆ. ಅದಕ್ಕಾಗಿ 500 ಮಿಲಿಯನ್ ಡಾಲರ್ ಹಣ ಹೂಡಲು ಸಿದ್ಧವಾಗಿದೆಯಂತೆ. ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್‌ನ ಮಾಜಿ ಸದಸ್ಯ, ನೀಲ್ ಮ್ಯಾಕ್ಸ್ವೆಲ್ ಎಂಬ ವ್ಯಕ್ತಿ ಇದರ ಹಿಂದೆ ಕೆಲಸ ಮಾಡುತ್ತಿದ್ದಾರಂತೆ.

ಕಳೆದ ಒಂದು ವರ್ಷದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಜತೆ ಸಾಕಷ್ಟು ಬಾರಿ ಈ ವಿಷಯದ ಕುರಿತು ಗೌಪ್ಯ ಚರ್ಚೆಯೂ ಆಗಿದೆಯಂತೆ. ಹಾಗೇನಾದರೂ ಆದರೆ, ಬಿಸಿಸಿಐಗೆ ಬರುವ ಹಣದಲ್ಲಿ ಕಮ್ಮಿಯಾಗಬಹುದೇ? ಗೊತ್ತಿಲ್ಲ. ಏನೇ ಆದರೂ ಸದ್ಯ ಕ್ಕಂತೂ ಬಿಸಿಸಿಐ ಬಡವಾಗುವ ಲಕ್ಷಣ ಕಾಣುವುದಿಲ್ಲ. ಆಗುವುದೂ ಬೇಡ.

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

View all posts by this author