ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Roopa Gururaj Column: ಸೀತಾಮಾತೆಯ ಸಹೋದರ ಯಾರು ಗೊತ್ತೇ ?

ಅಂದಿನ ಸೀತಾ-ರಾಮರ ಕಲ್ಯಾಣೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ‘ಮಂಗಳ ಗ್ರಹ’ ಅಲ್ಲಿ ಬಂದು ಕುಳಿತಿದ್ದ. ಕಾರಣ, ಭೂಮಿಗೆ ಸೀತೆ ಹೇಗೆ ಪುತ್ರಿಯೋ, ಹಾಗೆ ಮಂಗಳನೂ ಭೂಮಿಪುತ್ರನೇ. ವಿವಾಹ ಸಂಬಂಧಿತ ಅಗತ್ಯ ಶಾಸ್ತ್ರ-ಸಂಪ್ರದಾಯಗಳ ಅರಿವಿದ್ದ ಭೂಮಿ ತಾಯಿ ತನ್ನ ಮಗನಾದ ಮಂಗಳನಿಗೆ, “ಸೀತೆ ನಿನ್ನ ಸಹೋದರಿ, ಆಕೆಯ ವಿವಾಹ ಸಂದರ್ಭ ದಲ್ಲಿ ಇಂಥದೊಂದು ಶಾಸ್ತ್ರವಿದ್ದು ಅದನ್ನು ನೆರವೇರಿಸಬೇಕಾಗುತ್ತದೆ" ಎಂದು ಸೂಚಿಸಿದ್ದಳು

ಸೀತಾಮಾತೆಯ ಸಹೋದರ ಯಾರು ಗೊತ್ತೇ ?

ಸೀತಾಮಾತೆಯು ಅವತರಿಸಿದ್ದು ಜನಕನ ನೆಲೆಯಾದ ನೇಪಾಳದಲ್ಲಿ. ಪುಷ್ಯ ಮಾಸದ, ಕೃಷ್ಣ ಪಕ್ಷದ ಅಷ್ಟಮಿಯ ದಿನದಂದು ಜನಕ ಮಹಾರಾಜನು ಭೂಮಿಯನ್ನು ಉಳುತ್ತಿದ್ದ ಸಮಯದಲ್ಲಿ ಅಲ್ಲಿ ದೊರೆತವಳು ಸೀತೆ. ನೇಪಾಳದಲ್ಲಿ ಈ ದಿನವನ್ನು ‘ಜಾನಕಿ ಜಯಂತಿ’, ‘ಸೀತಾಷ್ಟಮಿ’ ಎಂದು ಆಚರಿಸುತ್ತಾರೆ. ಸೀತಾ-ರಾಮರ ಕಲ್ಯಾಣದ ಸಮಯದಲ್ಲಿ, ವಧು ವನ್ನು ಮಂಟಪಕ್ಕೆ ಕರೆತರುವ ಸಂದರ್ಭ ಎದುರಾಯಿತು. ಈ ವೇಳೆ ಸೋದರನು ವಧು ವಿನ ರೂಪದಲ್ಲಿರುವ ತನ್ನ ಸೋದರಿಗೆ ಸುಗಂಧ ದ್ರವ್ಯವನ್ನು ಸಿಂಪಡಿಸುತ್ತಾ, ಆಕೆಯ ಕೈಹಿಡಿದು ಮದುವೆಯ ಮಂಟಪಕ್ಕೆ ಕರೆತರಬೇಕು. ಅಂತೆಯೇ ಧಾರೆಯ ಸಮಯ ಬಂತು.

“ಶಾಸ್ತ್ರಕ್ಕನುಸಾರವಾಗಿ ಮಧು ಮಗಳನ್ನು ಆಕೆಯ ಸೋದರ ಮಂಟಪಕ್ಕೆ ಕರೆ ತರಲಿ" ಎಂದರು ಪುರೋಹಿತರು. ಆದರೆ ಜನಕ ಮಹಾರಾಜನಿಗೆ ಗಂಡು ಸಂತಾನವಿರಲಿಲ್ಲ.

ಅಂದಿನ ಸೀತಾ-ರಾಮರ ಕಲ್ಯಾಣೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ‘ಮಂಗಳ ಗ್ರಹ’ ಅಲ್ಲಿ ಬಂದು ಕುಳಿತಿದ್ದ. ಕಾರಣ, ಭೂಮಿಗೆ ಸೀತೆ ಹೇಗೆ ಪುತ್ರಿಯೋ, ಹಾಗೆ ಮಂಗಳನೂ ಭೂಮಿಪುತ್ರನೇ. ವಿವಾಹ ಸಂಬಂಧಿತ ಅಗತ್ಯ ಶಾಸ್ತ್ರ-ಸಂಪ್ರದಾಯಗಳ ಅರಿವಿದ್ದ ಭೂಮಿತಾಯಿ ತನ್ನ ಮಗನಾದ ಮಂಗಳನಿಗೆ, “ಸೀತೆ ನಿನ್ನ ಸಹೋದರಿ, ಆಕೆಯ ವಿವಾಹ ಸಂದರ್ಭದಲ್ಲಿ ಇಂಥದೊಂದು ಶಾಸ್ತ್ರವಿದ್ದು ಅದನ್ನು ನೆರವೇರಿಸಬೇಕಾಗುತ್ತದೆ" ಎಂದು ಸೂಚಿಸಿದ್ದಳು.

ಅವಳ ಸೂಚನೆಯ ಮೇರೆಗೆ ಹಾಗೆ ಅಲ್ಲಿ ಉಪಸ್ಥಿತನಿದ್ದ ಮಂಗಳನು ಪುರೋಹಿತರ ಮಾತು ಕೇಳುತ್ತಿದ್ದ ಹಾಗೆ ಥಟ್ಟನೆ ಎದ್ದು ನಿಂತು, “ನಾನು ಸೀತೆಯ ಸಹೋದರ. ಆಕೆಯ ವಿವಾಹಕ್ಕೆ ಸಂಬಂಧಿಸಿದ ಈ ಶಾಸ್ತ್ರವನ್ನು ನಾನು ನಿರ್ವಹಿಸುತ್ತೇನೆ" ಎನ್ನುತ್ತಾ ಮುಂದೆ ಬಂದ. ಅಂದಿನ ತನಕ ಕಂಡು-ಕೇಳರಿಯದ ಈ ಸಹೋದರ ಈಗ ಎಲ್ಲಿಂದ ಬಂದನೆಂದು ಅಲ್ಲಿದ್ದವರಿಗೆಲ್ಲಾ ಆಶ್ಚರ್ಯವಾಯಿತು.

ಅಂತೆಯೇ ಜನಕ ಮಹಾರಾಜನೂ, ‘ಕುಲ-ಗೋತ್ರ- ಧರ್ಮ-ವಂಶಗಳ ಸಂಬಂಧವಿಲ್ಲದ ಈ ವ್ಯಕ್ತಿ ಈಗ ಎಲ್ಲಿಂದ ಬಂದ?’ ಎಂದು ಕಸಿವಿಸಿಗೊಂಡಾಗ ಅವನಲ್ಲಿಗೆ ಬಂದ ಮಂಗಳನು, “ಓ ಜನಕ ಮಹಾರಾಜರೇ, ನಿಮಗೆ ಈ ವಿಷಯದಲ್ಲಿ ಸಂದೇಹವಿದ್ದರೆ, ಮಹರ್ಷಿಗಳಾದ ವಸಿಷ್ಠರು ಮತ್ತು ವಿಶ್ವಾಮಿತ್ರರನ್ನು ಕೇಳಿ" ಎಂದ. ಹಠಾತ್ತನೆ ಉದ್ಭವಿಸಿದ ಈ ಸಂದೇಹ ವನ್ನು ಪರಿಹರಿಸುವಂತೆ ವಸಿಷ್ಠ-ವಿಶ್ವಾಮಿತ್ರರನ್ನು ಜನಕ ಮಹಾರಾಜ ಕೇಳಿದ.

ಮಂಗಳನು ಭೂಮಿಪುತ್ರ ಎಂಬ ಸಂಗತಿಯನ್ನು ಮೊದಲೇ ತಿಳಿದಿದ್ದ ಆ ಮಹರ್ಷಿಗಳು ‘ಹೌದು, ಇದು ನಿಜ’ ಎಂಬಂತೆ ತಲೆಯಾಡಿಸಿದರು. ಅವರ ಅನುಮತಿಯ ಮೇರೆಗೆ ಜನಕ ಮಹಾರಾಜನು ಸೀತಾ-ರಾಮರ ಕಲ್ಯಾಣ ಮಹೋತ್ಸವವನ್ನು ಸಕಲ ವಿಧಿ-ವಿಧಾನ ಗಳೊಂದಿಗೆ ಮತ್ತು ವೈಭವೋಪೇತವಾಗಿ ನೆರವೇರಿಸಿದ. ನಂತರ, ಸೀತೆಯನ್ನು ಗಂಡನ ಮನೆಗೆ ಕಳಿಸುವಾಗ ಗೋಸಂಪತ್ತಿನ ಜತೆಗೆ ಮುತ್ತು-ರತ್ನಗಳು, ದಾಸ-ದಾಸಿಯರು, ಕುದುರೆ- ಕಾಲಾಳುಗಳು, ರಥ-ಸಾರಥಿ ಎಲ್ಲವನ್ನೂ ಬಳುವಳಿಯಾಗಿ ಕೊಡಲು ಮುಂದಾದ. ಆದರೆ ಅವೆಲ್ಲವನ್ನೂ ನಿರಾಕರಿಸಿದ ಸೀತೆ, ತಾನು ಆರಾಧಿಸುತ್ತಿದ್ದ ಪಾರ್ವತಿಯ ರೂಪವಾದ ‘ಕಾಳಿ ಮಾತೆ’ ವಿಗ್ರಹವನ್ನು ತನ್ನೊಂದಿಗೆ ಅಯೋಧ್ಯೆಗೆ ತಂದಳು.

ಮಹಾರಾಜ ದಶರಥನು ಈ ವಿಗ್ರಹವನ್ನು ಅಲ್ಲಿನ ಈಶಾನ್ಯ ಮೂಲೆಯಲ್ಲಿ ಪ್ರತಿಷ್ಠಾಪಿಸಿದ. ತರುವಾಯದಲ್ಲಿ ಸೀತೆಯು ತನ್ನ ಸಖಿಯರೊಂದಿಗೆ ಈ ದೇಗುಲಕ್ಕೆ ಬಂದು ಪೂಜೆ ಸಲ್ಲಿಸು ತ್ತಿದ್ದಳು. ಅಯೋಧ್ಯೆಯ ಚೌಟಿ ದೇವಾಲಯದಲ್ಲಿ ಇಂದಿಗೂ ಈ ವಿಗ್ರಹವಿದೆ. ಕಾಳಿ ಇಲ್ಲಿ ಸರ್ವ ಮಂಗಳೆಯಾಗಿ ಶೋಭಾಯಮಾನವಾಗಿದ್ದು, ‘ದೇವಕಾಳಿ’ ಹೆಸರಿನಲ್ಲಿ ಪೂಜಿಸಲ್ಪ ಡುತ್ತಾಳೆ. ಅಂತೆಯೇ, ದಶರಥನಂದನ ರಾಮನ ಕುಲದೇವರ ಹೆಸರು ‘ಬಡಾ ಕಾಳಿ’ ಎಂದಿ ದ್ದು, ಈ ಮಂದಿರವೂ ಅಯೋಧ್ಯೆಯಲ್ಲಿದೆ.

ನೇಪಾಳದಲ್ಲಿ ಪ್ರಚಲಿತವಿರುವ ಈ ಕಥಾಪ್ರಸಂಗವು, ಸೀತೆಯ ಸೋದರನ ಸ್ಥಾನದಲ್ಲಿ ನಿಂತು ಮದುವೆ ಮಾಡಿಕೊಟ್ಟ ಮಂಗಳ ಗ್ರಹದ ಭ್ರಾತೃ ಪ್ರೀತಿಯನ್ನು ತೋರುತ್ತದೆ, ತನ್ಮೂಲಕ ಒಂದು ಅನುಪಮ ಸಂದೇಶವನ್ನೂ ಸಾರುತ್ತದೆ. ‘ಸ್ವಂತ ಅಕ್ಕ ತಂಗಿಯರು ಇಲ್ಲದಿದ್ದರೇನಂತೆ? ನಿಮ್ಮ ಕುಟುಂಬದಲ್ಲಿ, ಸ್ನೇಹಿತರ ಬಳಗದಲ್ಲಿ ಅಂಥವರಿದ್ದರೆ ಅವರ ವಿವಾಹಕ್ಕೆ ನೆರವಾಗಿ’ ಎಂಬುದೇ ಆ ಸಂದೇಶ. ಇದು ನಮ್ಮ ಭಾರತೀಯ ಸಂಸ್ಕೃತಿಯು ನಮಗೆ ಕಲಿಸುವ ದೊಡ್ಡ ಸಂಸ್ಕಾರ.