ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Food poison: ಚಿಕ್ಕತಿರುಪತಿ ದೇವಸ್ಥಾನ ಜಾತ್ರಾ ಮಹೋತ್ಸವದ ವೇಳೆ ಪ್ರಸಾದ ಸೇವಿಸಿ 50ಕ್ಕೂ ಅಧಿಕ ಭಕ್ತರು ಅಸ್ವಸ್ಥ

Food Poison: ಜಾತ್ರೆಯ ಸಂದರ್ಭದಲ್ಲಿ, ದೇವಾಲಯದ ಹೊರಗೆ ಖಾಸಗಿ ಸಂಸ್ಥೆಯೊಂದರಿಂದ ಮೊಸರು ಮತ್ತು ಬಿಸಿಬೇಳೆಬಾತ್ ರೂಪದಲ್ಲಿ ಪ್ರಸಾದ ವಿತರಿಸಲಾಗಿತ್ತು. ಪ್ರಸಾದ ಸೇವಿಸಿದ ಕೆಲವೇ ಗಂಟೆಗಳಲ್ಲಿ, ರಾತ್ರಿಯಿಂದ ಸೋಮವಾರ ಮುಂಜಾನೆಯವರೆಗೆ ಹಲವು ಭಕ್ತರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು.

ಹಾಸನ ಚಿಕ್ಕತಿರುಪತಿ ಜಾತ್ರೆ ಪ್ರಸಾದ ಸೇವಿಸಿ 50ಕ್ಕೂ ಅಧಿಕ ಭಕ್ತರು ಅಸ್ವಸ್ಥ

ಹರೀಶ್‌ ಕೇರ ಹರೀಶ್‌ ಕೇರ Jul 15, 2025 10:13 AM

ಹಾಸನ: ಹಾಸನ (Hassan News) ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮಾಲೆಕಲ್ ತಿರುಪತಿ (Tirupati) ಗ್ರಾಮದಲ್ಲಿ, ಚಿಕ್ಕತಿರುಪತಿ ಎಂದೇ ಖ್ಯಾತವಾಗಿರುವ ಶ್ರೀ ವೆಂಕಟೇಶ್ವರ ಸ್ವಾಮಿ (Venkateshwara Swamy) ದೇವಾಲಯದ ಜಾತ್ರೆ (Jatre) ಮಹೋತ್ಸವದ ವೇಳೆ ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥರಾಗಿದ್ದಾರೆ. ಖಾಸಗಿ ಸಂಸ್ಥೆಯೊಂದರಿಂದ ವಿತರಿಸಲಾದ ಪ್ರಸಾದ (food poison) ಸೇವಿಸಿದ 50ಕ್ಕೂ ಅಧಿಕ ಭಕ್ತರು ಅಸ್ವಸ್ಥರಾಗಿದ್ದಾರೆ. ಭಾನುವಾರ ರಾತ್ರಿ 7:30ರ ಸುಮಾರಿಗೆ ಸುಮಾರು 1,500 ಭಕ್ತರಿಗೆ ಈ ಪ್ರಸಾದ ವಿತರಣೆಯಾಗಿದೆ. ಇದನ್ನು ಸೇವಿಸಿದ ಕೆಲ ಭಕ್ತರು ಅಸ್ವಸ್ಥರಾಗಿದ್ದಾರೆ.

ಮಾಲೆಕಲ್ ತಿರುಪತಿ ದೇವಾಲಯವು ಹಾಸನ ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳವಾಗಿದ್ದು, ಇದನ್ನು ಚಿಕ್ಕತಿರುಪತಿ ಎಂದು ಕರೆಯಲಾಗುತ್ತದೆ. ಈ ದೇವಾಲಯವು ಶ್ರೀ ವೆಂಕಟರಮಣ ಸ್ವಾಮಿ ಮತ್ತು ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸುವ ಸ್ಥಳವಾಗಿದ್ದು, ಪ್ರತಿವರ್ಷ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಈ ಬಾರಿಯ ಜಾತ್ರೆಯ ಸಂದರ್ಭದಲ್ಲಿ, ದೇವಾಲಯದ ಹೊರಗೆ ಖಾಸಗಿ ಸಂಸ್ಥೆಯೊಂದರಿಂದ ಮೊಸರು ಮತ್ತು ಬಿಸಿಬೇಳೆಬಾತ್ ರೂಪದಲ್ಲಿ ಪ್ರಸಾದ ವಿತರಿಸಲಾಗಿತ್ತು.

ಪ್ರಸಾದ ಸೇವಿಸಿದ ಕೆಲವೇ ಗಂಟೆಗಳಲ್ಲಿ, ರಾತ್ರಿಯಿಂದ ಸೋಮವಾರ ಮುಂಜಾನೆಯವರೆಗೆ ಹಲವು ಭಕ್ತರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಒಟ್ಟು 50ಕ್ಕೂ ಅಧಿಕ ಮಂದಿ ಈ ಲಕ್ಷಣಗಳಿಂದ ಬಳಲುತ್ತಿದ್ದರು. ಸ್ಥಳೀಯ ಆಡಳಿತವು ತಕ್ಷಣ ಕ್ರಮ ಕೈಗೊಂಡು, ಅಸ್ವಸ್ಥರನ್ನು ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿತು. ಸದ್ಯ, 30ಕ್ಕೂ ಹೆಚ್ಚು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ತಕ್ಷಣದ ವೈದ್ಯಕೀಯ ಸೌಲಭ್ಯದಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆಯನ್ನು ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಿದ್ದು, ಭಕ್ತರು ಸೇವಿಸಿದ ಪ್ರಸಾದದ ಮಾದರಿಗಳನ್ನು ಸಂಗ್ರಹಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ ಪರೀಕ್ಷೆಗಾಗಿ ಕಳುಹಿಸಿದೆ. ಪ್ರಸಾದದಲ್ಲಿ ಯಾವುದೇ ವಿಷಕಾರಕ ಅಂಶವಿತ್ತೇ ಎಂಬುದನ್ನು ತನಿಖೆಯಿಂದ ಖಚಿತಪಡಿಸಿಕೊಳ್ಳಲಾಗುತ್ತಿದೆ. ಪ್ರಸಾದದ ತಯಾರಿಕೆಯಲ್ಲಿ ಶುಚಿತ್ವದ ಕೊರತೆಯಿತ್ತೇ ಅಥವಾ ಇತರ ಯಾವುದೇ ಉದ್ದೇಶಿತ ಕೃತ್ಯವೋ ಎಂಬುದನ್ನು ಕೂಡ ತನಿಖೆಯಲ್ಲಿ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಲೆಕಲ್ ತಿರುಪತಿ ದೇವಾಲಯ ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದೆ. ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ಈ ದೇವಾಲಯ ವೆಂಕಟರಮಣ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರನ್ನು ಒಳಗೊಂಡಿದೆ. ಈ ದೇವಾಲಯವನ್ನು ವಸಿಷ್ಠ ಮಹರ್ಷಿಗಳು ಸ್ಥಾಪಿಸಿದ್ದಾರೆ ಎಂಬ ಐತಿಹ್ಯವಿದೆ. ಪ್ರತಿವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ.

ಇದನ್ನೂ ಓದಿ: Puri Jagannath Rath Yatra: ಪುರಿ ಜಗನ್ನಾಥ ರಥೋತ್ಸವ ವೇಳೆ ಕಾಲ್ತುಳಿತ: 600ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ