ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಕೊನೆಗೆ ತಲೆಯೂ ಹೋಗಿ ಬರಿಯ ದಿಂಬು ಉಳಿಯಿತು !

ಸ್ತ್ರೀಮೂಲ, ನದೀಮೂಲ, ಋಷಿಮೂಲ ಹುಡುಕಬಾರದು ಎನ್ನುತ್ತಾರೆ. ಮೂಲ ತಿಳಿದರೆ ಇದ್ದ ಗೌರವ ಕಮ್ಮಿಯಾದೀತು ಎನ್ನುವ ಭಯ. ಆದರೆ ಶಬ್ದಮೂಲ ಹುಡುಕಬೇಕು. ಹುಡುಕಿದಾಗ ಆ ಪುಟ್ಟ ಶಬ್ದದ ಒಡಲೊಳಗೆ ಇಡಿಯ ಬ್ರಹ್ಮಾಂಡ ಹುದುಗಿರುವುದನ್ನು ಕಂಡು ಒಮ್ಮೊಮ್ಮೆ ನಾವು ದಿಗಿಲುಗೊಳ್ಳು ವಂತಾಗುತ್ತದೆ.

ಕೊನೆಗೆ ತಲೆಯೂ ಹೋಗಿ ಬರಿಯ ದಿಂಬು ಉಳಿಯಿತು !

-

ತಿಳಿರು ತೋರಣ

srivathsajoshi@yahoo.com

ಸುಮಾರು 7000 ವರ್ಷಗಳ ಹಿಂದೆ, ಮೆಸಪೊಟೊಮಿಯಾ ಪ್ರದೇಶದಲ್ಲಿ ಜನರು ಇಟ್ಟಿಗೆ ಯಾಕಾರದ ಕಲ್ಲಿನ ತುಂಡನ್ನು ದಿಂಬಿನಂತೆ ಬಳಸುತ್ತಿದ್ದರಂತೆ. ಕಲ್ಲೆಂದ ಮೇಲೆ ತಲೆಗೆ ಮೆತ್ತನೆಯ ಅನುಭವವಾಗಲಿ ಎಂಬ ಉದ್ದೇಶವಂತೂ ಖಂಡಿತ ಅಲ್ಲ.

ಅರ್ಜುನನು ಶಿಖಂಡಿಯನ್ನು ಮುಂದಿರಿಸಿ ಭೀಷ್ಮಾಚಾರ್ಯರನ್ನು ಸೋಲಿಸಿದ ಮೇಲೆ ಅವರಿಗೆ ಶರಶಯ್ಯೆಯನ್ನು ಏರ್ಪಡಿಸಿದನು. ಇಚ್ಛಾಮರಣದ ವರವನ್ನು ಹೊಂದಿದ್ದ ಭೀಷ್ಮಾಚಾರ್ಯರು ಪ್ರಾಣ ತ್ಯಜಿಸಲಿಕ್ಕೆ ಉತ್ತರಾಯಣ ಆರಂಭದವರೆಗೂ ಕಾಯಲು ಬಯಸಿದ್ದರಿಂದ ಆ ಏರ್ಪಾಡು. ಶರಶಯ್ಯೆ ಅಂದರೆ ಬಾಣಗಳ ಹಾಸಿಗೆ. ಅಂಥದೊಂದು ಹಾಸಿಗೆಯಲ್ಲಿ ಸಿಕ್ಕಿಹಾಕಿಕೊಂಡೇ ಅಂತ್ಯ ಕಾಲ ಕಳೆಯಬೇಕೆಂದು ಭೀಷ್ಮಾಚಾರ್ಯರಿಗೆ ಶಾಪವೂ ಇತ್ತಂತೆ.

ಇರಲಿ, ಆ ವಿವರಗಳಿಲ್ಲಿ ಬೇಡ. ಆದರೆ ಭೀಷ್ಮರಿಗೆ ಹಾಸಿಗೆ ಮಾತ್ರ ಸಾಕಾಯ್ತೇ? ವಯೋವೃದ್ಧ ರಾಗಿದ್ದ ಅವರಿಗೆ ದಿಂಬಿನ ಆವಶ್ಯಕತೆ ಇರಲಿಲ್ಲವೇ? ಖಂಡಿತ ಇತ್ತು! ದಿಂಬನ್ನೂ ಮಾಡಿಕೊಡು ಎಂದು ಅರ್ಜುನನಲ್ಲಿ ಕೇಳಿಕೊಂಡರಂತೆ. ಇದನ್ನು ಕುಮಾರವ್ಯಾಸ ಬಣ್ಣಿಸಿರುವುದು ಹೀಗೆ: “ಮಗನೆ ಕೇಳೈ ಪಾರ್ಥ ಕೂರಂ| ಬುಗಳ ಹಾಸಿಕೆ ಚೆಂದವಾಯಿತು| ಹೊಗರಲಗ ತಲೆಗಿಂಬ ರಚಿಸೆನೆ ಪಾರ್ಥ ಕೈಕೊಂಡು| ಬಿಗಿದ ಬಿಲುಗೊಂಡೆದ್ದು ಮಂಡಿಸಿ| ಹೊಗರ ಕವಲಂಬೈದನೆಚ್ಚನು| ನೆಗಹಿದನು ಮಸ್ತಕವನಾ ಗಂಗಾ ಕುಮಾರಕನ||" ಗದುಗಿನ ಭಾರತದ ಭೀಷ್ಮಪರ್ವದ 10ನೆಯ ಸಂಧಿಯ 22ನೆಯ ಪದ್ಯವಿದು.

“ಮಗು ಅರ್ಜುನ, ಬಾಣಗಳ ಹಾಸಿಗೆ ಚೆಂದವಾಗಿದೆ. ಅಂತೆಯೇ ಬಾಣಗಳ ತಲೆದಿಂಬನ್ನೂ ಏರ್ಪಡಿಸು ಎಂದು ಭೀಷ್ಮಾಚಾರ್ಯರು ಕೇಳಲು, ಅರ್ಜುನನು ಎದ್ದು ಐದು ಬಾಣಗಳನ್ನು ನೆಲಕ್ಕೆ ನೆಟ್ಟು, ತಲೆದಿಂಬನ್ನು ಮಾಡಿಕೊಟ್ಟನು; ಭೀಷ್ಮಾಚಾರ್ಯರ ಮೈ ಮಾತ್ರವಲ್ಲ ತಲೆಯೂ ಭೂಮಿಗೆ ತಾಕದಂತೆ ನೋಡಿಕೊಂಡನು" ಎಂದು ಪದ್ಯದ ತಾತ್ಪರ್ಯ.

ಇದನ್ನೂ ಓದಿ: Srivathsa Joshi Column: ಅಡಿಕೆಮರದಿಂದ ಬಿದ್ದು ಡಿಪ್ಲೊಮಾ ಓದುತ್ತಿದ್ದ ಯುವಕನ ಸಾವು !

ಈ ಪದ್ಯದಲ್ಲೊಂದು ಸೂಕ್ಷ್ಮಾತಿಸೂಕ್ಷ್ಮ ಅಂಶವನ್ನು ನೀವು ಗಮನಿಸಬೇಕು. ‘ತಲೆಗಿಂಬು’ ಎಂಬ ಪದಬಳಕೆ. ಕುಮಾರವ್ಯಾಸ ತಪ್ಪಾಗಿ ಬರೆದನೇ? ತಾಳೆಗರಿಗಳು ಶಿಥಿಲವಾಗಿ ‘ದಿ’ ಅಕ್ಷರದ ತಳ ಹರಿದು ‘ಗಿ’ ಆಯಿತೇ? ಗದುಗಿನ ಭಾರತದ ಈಗಿನ ಪ್ರತಿಗಳಲ್ಲಿ ಈ ತಪ್ಪು ನುಸುಳಿದ್ದೇ? ಯಾವುದೂ ಅಲ್ಲ.

ಮೂಲತಃ ಕನ್ನಡದಲ್ಲಿ ‘ತಲೆಗಿಂಬು’ ಎಂಬ ಪದವೇ ಇದ್ದದ್ದು. ತಲೆಗೆ + ಇಂಬು =ತಲೆಗಿಂಬು. ಲೋಪ ಸಂಧಿ. ಮತ್ತೆ ಅದು ದಿಂಬು ಹೇಗಾಯಿತು? ಪಾ.ವೆಂ. ಆಚಾರ್ಯರ ‘ಪದಾರ್ಥ ಚಿಂತಾಮಣಿ’ ಗ್ರಂಥಕ್ಕೆ ಬರೆದ ಮುನ್ನುಡಿಯಲ್ಲಿ ಬನ್ನಂಜೆ ಗೋವಿಂದಾಚಾರ್ಯರು ಇದನ್ನು ಮನೋಜ್ಞವಾಗಿ ವಿವರಿಸಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ತಿಳಿಯಬೇಕು: “ಶಬ್ದದ ಮೂಲವನ್ನರಸುವುದು ತುಂಬ ರೋಚಕವಾದ ಸಂಗತಿ. ಒಮ್ಮೆ ಅದರ ಬೆನ್ನು ಹತ್ತಿದರೆ ಸಾಕು, ಮತ್ತೆ ಅದೇ ನಮ್ಮ ಬೆನ್ನು ಹತ್ತುತ್ತದೆ.

ಸ್ತ್ರೀಮೂಲ, ನದೀಮೂಲ, ಋಷಿಮೂಲ ಹುಡುಕಬಾರದು ಎನ್ನುತ್ತಾರೆ. ಮೂಲ ತಿಳಿದರೆ ಇದ್ದ ಗೌರವ ಕಮ್ಮಿಯಾದೀತು ಎನ್ನುವ ಭಯ. ಆದರೆ ಶಬ್ದಮೂಲ ಹುಡುಕಬೇಕು. ಹುಡುಕಿದಾಗ ಆ ಪುಟ್ಟ ಶಬ್ದದ ಒಡಲೊಳಗೆ ಇಡಿಯ ಬ್ರಹ್ಮಾಂಡ ಹುದುಗಿರುವುದನ್ನು ಕಂಡು ಒಮ್ಮೊಮ್ಮೆ ನಾವು ದಿಗಿಲುಗೊಳ್ಳುವಂತಾಗುತ್ತದೆ. ಒಂದೊಂದು ಶಬ್ದವೂ ಆ ಭಾಷೆಯನ್ನಾಡುವ ಜನಾಂಗದ ಸಾಂಸ್ಕೃತಿಕ ಇತಿಹಾಸಕ್ಕೆ ಕನ್ನಡಿ ಹಿಡಿಯುತ್ತದೆ.

S Joshi

ಚರಿತ್ರೆಯ ಪುಟಗಳಲ್ಲಿ ದಾಖಲಾಗದ ಸಂಗತಿಗಳನ್ನು ಶಬ್ದದ ಬೇರುಗಳಲ್ಲಿ ಹುಡುಕಬಹುದು. ಈ ಬೇರು ಹುಡುಕುವುದು ಅಷ್ಟೊಂದು ಸುಲಭವೇನೂ ಅಲ್ಲ. ಇದೊಂದು ಶೈವಪುರಾಣದ ಲಿಂಗ ಮೂಲಾನ್ವೇಷಣೆ. ಕಂಡೆ ಎಂದುಕೊಂಡವರು ಬಹಳ ಮಂದಿ ಉಂಟು. ಕಂಡವರು ಕಡಿಮೆ.

ಇವು ಕಂಡೂ ಕಾಣದ ನೋಟಗಳು. ಕಂಡಕಂಡವರು ಕಾಣುವುದು ಸಾಧ್ಯವಿಲ್ಲ. ಇರುವುದು ಒಂದು ಕಾಣುವುದು ಇನ್ನೊಂದು. ಬುಡದ ಗುಣವೇ ಗಿಡದಲ್ಲಿರುವುದಿಲ್ಲ. ಬುಡದಲ್ಲಿ ‘ದ್ವಿವೇದಿ’ ಇತ್ತು, ಬೆಳೆಯುತ್ತ ‘ದುಬೇ’ ಆಯಿತು. ಇದಾದರೂ ಅಚ್ಚರಿಯೆನಿಸಲಿಕ್ಕಿಲ್ಲ. ಆದರೆ ಉಪಾಧ್ಯಾಯರ ಕತೆ ಕೇಳಿ. ‘ಉಪಾಧ್ಯಾಯ’ ಇತ್ತು, ಉವಜ್ಝಾಯ ಆಯ್ತು, ಓಝಾ ಆಯ್ತು, ಕೊನೆಗೆ ಝಾ ಮಾತ್ರ ಉಳಿಯಿತು.

ರೂಪಾಂತರದಲ್ಲಿ ಮೂಲದ ಯಾವ ಅಕ್ಷರವೂ ಉಳಿಯಲಿಲ್ಲ. ಎಂಥ ವಿಚಿತ್ರ! ಕನ್ನಡದ ದಿಂಬಿನ ಕತೆಯೇನು ಕಮ್ಮಿ ರೋಚವೆ? ತಲೆಗೆ + ಇಂಬು = ತಲೆಗಿಂಬು ಆಯಿತು. ಅರ್ಥದ ಚಿಂತೆ ಇಲ್ಲದವರ ಬಾಯಿಯಲ್ಲಿ ತಲೆಗಿಂಬು ಹೋಗಿ ತಲೆದಿಂಬು ಆಯಿತು. ಕೊನೆಗೆ ತಲೆಯೂ ಹೋಗಿ ಬರಿಯ ದಿಂಬು ಉಳಿಯಿತು!

ಕನ್ನಡ ಭಾಷೆಯಲ್ಲೊಂದು ಹೊಸ ಶಬ್ದ ಹುಟ್ಟಿಕೊಂಡಿತು: ದಿಂಬು! ಏನು ಹಾಗೆಂದರೆ? ಗೊತ್ತಿಲ್ಲವೇನು? ಎಂಥವರಯ್ಯಾ ನೀವು! ದಿಂಬು ಎಂದರೆ ದಿಂಬು!" ಬನ್ನಂಜೆಯವರು ಬೆಳಗಿದ ಈ ಪದವ್ಯುತ್ಪತ್ತಿ ದೀಪವನ್ನು ಹಿಡಿದುಕೊಂಡು ಸಾಗಿದರೆ ನಮಗೆ ಹಳಗನ್ನಡ ನಡುಗನ್ನಡಗಳ ಗಹ್ವರಗಳಲ್ಲಿ ತಲೆಗಿಂಬು ಸ್ಪಷ್ಟವಾಗಿ ಗೋಚರಿಸುತ್ತದೆ! ಅಲ್ಲಮ ಪ್ರಭುಗಳು ಬಸವಣ್ಣನವರ ಆದರ್ಶ ಜೀವನ, ಸಾಧನೆಯ ಕಾಠಿನ್ಯ ಮತ್ತು ತಪೋನಿಷ್ಠೆಗಳನ್ನು ಕೊಂಡಾಡುತ್ತ ತಮ್ಮದೊಂದು ವಚನದಲ್ಲಿ “ನಾದಬಿಂದುವಿನೊಳಗಣ ಪದ್ಮಾಸನದ ಮೇಲೆ ಕುಳ್ಳಿರ್ದು| ಗಳಿಗೆಗೊಮ್ಮೆ ಸುಳಿದು ಹೋದ ಕಳ್ಳನನಾರಯ್ಯಾ ಬಲ್ಲವರು?| ಹಾರುವ ಹಂಸೆಯ ತಲೆಗಿಂಬು ಮಾಡಿದವರ| ಬಸವಣ್ಣ ಬಲ್ಲ ಕಾಣಾ ಗುಹೇಶ್ವರ" ಎಂದಿದ್ದಾರೆ.

ಅಂತೆಯೇ “ಅಷ್ಟದಳವ ಮೆಟ್ಟಿ ಚರಿಸುವ ಆ ಪರಮಹಂಸನ| ತಲೆಗಿಂಬ ಮಾಡಿ ನಿಲ್ಲಿಸಬಲ್ಲ ನಿಮ್ಮ ಶರಣ ಚನ್ನಬಸವಣ್ಣಂಗೆ| ನಾನು ನಮೋ ನಮೋ ಎಂಬೆನು ಗುಹೇಶ್ವರ" ಎಂದು ಅವರದೇ ಇನ್ನೊಂದು ವಚನದಲ್ಲೂ ತಲೆಗಿಂಬನ್ನು ತಂದಿದ್ದಾರೆ. ಒಂದು ದಾಸರಪದದಲ್ಲಿಯೂ “ಅಂಬು ಜೋದ್ಭವ ತಾನು ಸ್ತಂಭಿತಾಗಿಸುರ ಕ| ದಂಬವನು ಕಾಣುತಲೆ ಸಾಂಬನ ಮಹಿಮೆಯಿದು| ಅಂಬಿಕೆಯ ತೊಡೆಯ ತಲೆಗಿಂಬು ಮಾಡಿಹ ಬಾಲ| ಸಾಂಬನಿವನಹದೆಂದು ಸಂಭವಿಸಿದಾಗ| ನಂಬಿ ಸ್ತುತಿ ಮಾಡಿದನು ಸ್ತಂಭೀತರು ಎಂದೆನಿಸಿ| ಕೊಂಬುವರು ಎಲ್ಲಾರು ನಂಬಿ ಸ್ತುತಿಸಿದರು..." ಎಂದು ತಲೆಗಿಂಬು ಕಾಣಿಸುತ್ತದೆ.

ರಸಋಷಿ ಕುವೆಂಪು ಹಳಗನ್ನಡ ಶೈಲಿಯಲ್ಲಿ ಬರೆದ ‘ಯಮನ ಸೋಲು’ ನಾಟಕದಲ್ಲಿ ಸತ್ಯವಾನನು ಸಾವಿತ್ರಿಯನ್ನು “ನಿನ್ನಂಕವೆನಗಿಂದು ತಲೆಗಿಂಬು. ನಾಚಿಕೆಯೆ, ಸಾವಿತ್ರಿ, ನಿನಗೆ?" ಎಂದು ಕೇಳುತ್ತಾನೆ. ಸಾವಿತ್ರಿಯು “ಇಲ್ಲ ಮಲಗೆನ್ನಿನಿಯ..." ಎಂದು ಹೇಳಿ ಮನದಲ್ಲೇ “ಶಿವ ಶಿವಾ! ಮೃತ್ಯುವಿನ ಮುಂದೆಯೂ ನಾಚಿಕೆಯೆ?" ಎಂದುಕೊಳ್ಳುತ್ತಾಳೆ.

ಅಂತೂ ಈಗ ನಮಗೆ ‘ದಿಂಬು’ ಎಂದು ಪರಿಚಿತವಿರುವುದು ಪ್ರಾಚೀನ ಕಾಲದಲ್ಲಿ ‘ತಲೆಗಿಂಬು’ ಆಗಿತ್ತೆನ್ನುವುದು ನಿಜ. ಅಷ್ಟೇಅಲ್ಲ, ತಲೆಗಿಂಬು ಅಲ್ಲದೆ ಇನ್ನೂ ಕೆಲವು ಚಂದದ ಪದಗಳು ದಿಂಬು ಎಂಬರ್ಥದಲ್ಲಿ ಕನ್ನಡದಲ್ಲಿ ಬಳಕೆಯಲ್ಲಿದ್ದುವು. ಸಾಹಿತ್ಯ ಕೃತಿಗಳಲ್ಲಿಯೂ ಕಂಗೊಳಿಸುತ್ತಿದ್ದುವು. ಕವುಳುಡೆ/ಕೌಳುಡೆ ಅಂಥ ದೊಂದು ಪದ. ಮೆತ್ತೆ, ದಿಂಬು, ಲೋಡು ಎಂದೇ ಅರ್ಥ. “ಕವಲಂ ಬಾ ತಲೆಗಿಂಬೆನೆ ಕವುಳುಡೆ ಶರಮಂಚವೆರಸದಂತಿಯ ಹಾಸಂಬಿವು ಬಾಣಂ ಬಿಡದೆಸೆದಿರೆ" ಎಂದು ರನ್ನನ ಗದಾಯುದ್ಧದಲ್ಲಿ, “ಕವುಳುಡೆ ಧವಳಚ್ಛತ್ರಮುಮಿವೊಪ್ಪೆ ಪಾಸಂ ಸಮಂತು ಪಾಸುವು ದರರೊಳ್" ಎಂದು ಚಂದ್ರರಾಜನ ಮದನತಿಲಕಂನಲ್ಲಿ, “ಮೂಡಾವಿಯೆಂದುಂ ಕೌಳುಡೆಯೆಂದು ಮಲಗು" ಎಂದು ಎಸ್.ಜಿ. ನರಸಿಂಹಾಚಾರ್ ಸಂಪಾದಿಸಿದ ಕರ್ಣಾಟಕ ಶಬ್ದಸಾರ ದಲ್ಲಿ, “ಬೆಳ್ಪೆಸೆದಿರ್ಪ ಕೌಳುಡೆಯನೊಂದಂ ನೆಮ್ಮಿ ಕುಳ್ಳಿರ್ದ ಕೋಮಳೆಯಂ" ಎಂದು ನಾಗವರ್ಮನ ಕರ್ಣಾಟಕ ಕಾದಂಬರಿಯಲ್ಲಿ, “ಹೈಮವತಿಯ ಕೌಳುಡೆಗಳೊ ನವಕಾಂತಿಲಕ್ಷ್ಮಿ ಸಂತಸದಿರ್ಪೆಡೆ ಗಳೊ" ಎಂದು ಹರಿಹರನ ಗಿರಿಜಾಕಲ್ಯಾಣದಲ್ಲಿ, “ಅಂಚೆದುಪ್ಪುಳುವಾಸು ಕೌಳುಡೆ ಮಲಗು ಪೊಣ್ಮಂಚಿಯ ಮೇಲ್ಗಟ್ಟು" ಎಂದು ರತ್ನಾಕರವರ್ಣಿಯ ಭರತೇಶವೈಭವದಲ್ಲಿ, “ಸಿರಿಪೊಡ ವಿರಾಣಿಯರ ಕರ್ಬಟ್ಟೆಯ ಕೌಳುಡೆಗಳಂತೆಯುಂ ತೋರ್ಕೆವೆತ್ತ ತೋರದೊಡೆಗಳಿಂ" ಎಂದು ತಿರುಮಲಾಚಾರ್ಯರ ಚಿಕದೇವರಾಯ ವಂಶಾವಳಿ ಕೃತಿಯಲ್ಲೂ ಬರುತ್ತದಂತೆ.

ಅಂತೆ ಎಂದಿದ್ದೇಕೆಂದರೆ ನಾನು ಇವೆಲ್ಲ ಕೃತಿಗಳನ್ನು ಓದಿದವನು ಖಂಡಿತ ಅಲ್ಲ. ಆದರೆ ಜಿ.ವೆಂಕಟಸುಬ್ಬಯ್ಯನವರು ಮತ್ತವರಂಥ ವಿದ್ವಾಂಸರು ಕನ್ನಡ ಸಾಹಿತ್ಯ ಪರಿಷತ್ತಿನ ಎಂಟು ಸಂಪುಟಗಳ ಬೃಹತ್ ನಿಘಂಟು ರಚಿಸುವಾಗ ಒಂದೊಂದು ಪದಕ್ಕೂ ಇಂಥ ಬಹುಮೂಲ್ಯ ಮಾಹಿತಿಯನ್ನು ಕಲೆ ಹಾಕಿದ್ದಾರೆ, ಅದೂ ನಮ್ಮ ನಿಮ್ಮಂತೆ ಗೂಗಲ್ ಸರ್ಚ್ ಮಾಡಿ ಅಲ್ಲ, ಸಂಪೂರ್ಣವಾಗಿ ಸ್ವಾಧ್ಯಯನವೆಂಬ ಸಂಪನ್ಮೂಲದಿಂದ!

ಇನ್ನೊಂದು, ‘ಮೂಡಾವಿ’ ಎಂಬ ಪದ. ಮಲಗುವಾಗ ಅಥವಾ ಕುಳಿತುಕೊಳ್ಳುವಾಗ ಒರಗಿಕೊಳ್ಳ ಲಿಕ್ಕೆ ಬಳಸುವ ಮೆತ್ತೆ, ದಿಂಬು, ಒರಗು, ಲೋಡು ಎಂಬರ್ಥದಲ್ಲಿ ಬಳಕೆಯಾಗುತ್ತಿದ್ದದ್ದು. “ಕಣ್ಗೊಳಿಸುವ ಮುಡುಹಿನ ಮೂಡಾವಿಗೆ ಕೈಯಿಟ್ಟ ಸುಗೀಶ್ವರನ ಲಲಿತಾಂಗದ ಮೇಲಾ ಸತಿಯ ಲರ್ಗಣ್ವೆಳಗು ಪರಿದು ಮುಸುಕಲು" ಎಂದು ಮಂಗರಸನ ಜನನೃಪ ಕಾವ್ಯದಲ್ಲಿ, “ಸೆಳೆಗೊಂಬಿನ ಕೇರ್, ಪಣ್ಣೆಲೆಯ ಪೊದಕೆ, ಚೆಂದಳಿರ ಪಳ್ಕೆ, ಪೊಸಸುಳಿಯ ಮೂಡಾವಿ, ಅಲರ್ಜೊಂಪದ ಮೇಲ್ಕಟ್ಟು ಚೆಲ್ವಾಗೆ..." ಎಂದು ಮುದ್ದಣನ ಶ್ರೀ ರಾಮಾಶ್ವಮೇಧಂನಲ್ಲಿ, “ಶಾಂತಲಾದೇವಿ ಸೆಜ್ಜೆಯ ರೇಶಿಮೆಯ ಹೊನ್ನ ಜರಿಯ ಮೂಡಾವಿಗಳನ್ನು ಅನುಗೊಳಿಸಿದಳು" ಎಂದು ಸಮೇತನಹಳ್ಳಿ ರಾಮರಾಯರ ಸವತಿ ಗಂಧವಾರಣೆ ಕೃತಿಯಲ್ಲಿ, “ಸುಖಾಸೀನದ ಮೂಡಾವಿ ಗಳಲ್ಲಿ ಸಿಂಗಾರಮ್ಮನು ನೀಳ್ದೊರಗಿರುವಳು" ಎಂದು ಸಂಸ ಅವರ ಬೆಟ್ಟದ ಅರಸು ನಾಟಕದಲ್ಲಿ ಉಲ್ಲೇಖ.

ಒರಗಿಕೊಳ್ಳಲು ಉಪಯೋಗಿಸುವ ಉದ್ದವಾದ ದಿಂಬು ಅಥವಾ ಲೋಡು ಎಂಬರ್ಥದಲ್ಲಿ ‘ಮೂಡೆ’ ಸಹ ಬಳಕೆಯಲ್ಲಿತ್ತಂತೆ. “ಪಾಡುವ ಗಾನವ ನಿಲಿಸಿ ಮತ್ತೊರಗುವ ಮೂಡೆಯನೊರಗಿ ಚಕ್ರೇಶ ನೋಡುತಿರ್ದನು" ಎಂದು ಭರತೇಶವೈಭವದಲ್ಲಿ ರತ್ನಾಕರವರ್ಣಿ ಮೂಡೆಯನ್ನೂ ಬಳಸಿದ್ದಾನೆ ಎನ್ನುತ್ತಾರೆ ನಿಘಂಟುಕಾರರು.

ಇದಿಷ್ಟು ಭಾಷೆಗೆ ಸಂಬಂಧಿಸಿದ ವಿಚಾರವಾಯಿತು. ವ್ಮಾಯದಲ್ಲಿ ಮತ್ತು ವಾಸ್ತವದಲ್ಲಿ ದಿಂಬು ಹೇಗೆ ಬೆಳೆದುಬಂತು ಎನ್ನುವುದೂ ಕೌತುಕದ ವಿಚಾರವೇ. ಈಗ ನಮಗೆ ದಿಂಬು ಎಂದರೆ ಬಟ್ಟೆಯ ಕವಚದೊಳಗೆ ಹತ್ತಿ ತುಂಬಿಸಿ ಮಾಡಿದ ರಚನೆಯೇ ಕಣ್ಮುಂದೆ ಬರುವುದು. ಬೇಕಿದ್ದರೆ ಆ ಕವಚವು ಚಂದವಾಗಿ ಕಾಣಬೇಕೆಂದು ಅದರ ಮೇಲೆ ಒಂದಿಷ್ಟು ಚಿತ್ತಾರ. ಆದರೆ ಅದೊಂದೇ ಕಲ್ಪನೆಯಲ್ಲ ದಿಂಬಿನದು.

ಸರಳಾತಿಸರಳ ಮತ್ತು ಸ್ವಸಹಾಯ ಪದ್ಧತಿಯ ದಿಂಬೆಂದರೆ ಸ್ವಂತ ತೋಳನ್ನೇ ತಲೆಯ ಕೆಳಗಿಟ್ಟು ಮಲಗುವುದು. ಇಲ್ಲಿ ನನಗೊಂದು ಹಳೆಯ ಕನ್ನಡ ಚಿತ್ರಗೀತೆ ನೆನಪಾಗುತ್ತಿದೆ. ರವಿ ನಿರ್ದೇಶನದಲ್ಲಿ 1976ರಲ್ಲಿ ತೆರೆಕಂಡ ‘ತುಳಸಿ’ ಚಿತ್ರದ ಗೀತೆ. ಕಸ್ತೂರಿ ಶಂಕರ್ ಧ್ವನಿಯಲ್ಲಿ ‘ಪಾಪಾ ಪಾಪಾ ನಿದಿರೆ ಬಂತೇ ನಿನ್ನ ಕಂಗಳಿಗೆ... ಭೂಮಿಯೇ ಹಾಸಿಗೆ ಗಗನವೇ ಹೊದಿಕೆ ತೋಳೇ ತಲೆಕೆಳಗೆ ತೋಳೆ ತಲೆಕೆಳಗೆ...’ ಆ ರೀತಿ ತೋಳನ್ನೇ ತಲೆದಿಂಬಾಗಿಸುವುದು ಬಡತನದ, ನಿರ್ಗತಿಕ ಸ್ಥಿತಿಯ ರೂಪಕ.

‘ಇಟ್ಟಾಂಗೆ ಇರುವೆನೊ ಹರಿಯೇ ಎನ್ನ ದೊರೆಯೇ...’ ಎಂಬ ಕೀರ್ತನೆಯಲ್ಲಿ ದಾಸರೆನ್ನುತ್ತಾರೆ “ಚಂದ್ರ ಶಾಲೆ ಚಂದ್ರಕಿರಣದಿಂದೊಪ್ಪುವ ಚಂದದ ಮಂಚದೋಳ್ ಮಲಗಿಸುವಿ| ಮಂದರೋ ದ್ಧರ ನಿನ್ನ ಮಮತೆ ತಪ್ಪಲು ಧರ್ಮ ಮಂದಿರದೊಳು ತೋಳು ತಲೆದಿಂಬು ಮಾಡಿಸುವಿ|" ಎಂದು.

ತೋಳನ್ನೇ ತಲೆದಿಂಬಾಗಿಸುವುದು ಅವಧೂತರ ಅಂದರೆ ವಿರಾಗಿಗಳ ಲಕ್ಷಣ ಕೂಡ. ಭರ್ತೃಹರಿಯ ವೈರಾಗ್ಯಶತಕದಲ್ಲಿ ಒಂದು ಸುಭಾಷಿತ ಹೀಗಿದೆ: “ಮಹೀ ರಮ್ಯಾ ಶಯ್ಯಾ ವಿಪುಲಮುಪ ಧಾನಂ ಭುಜಲತಾ| ವಿತಾನಂ ಚಾಕಾಶಂ ವ್ಯಜನಮನುಕೂಲೋಧಿ ಯಮನಿಲಃ| ಸುರದ್ದೀಪಶ್ಚಂದ್ರೋ ವಿರತಿವನಿತಾಸಂಗಮುದಿತಃ| ಸುಖಂ ಶಾಂತಃ ಶೇತೇ ಮುನಿರತನುಭೂತಿರ್ನೃಪ ಇವ||" ಅಂದರೆ, ಭೂಮಿಯೇ ಸೊಗಸಾದ ಹಾಸಿಗೆ; ಭುಜವೇ ವಿಸ್ತಾರವಾದ ದಿಂಬು(ಉಪಧಾನ); ಆಕಾಶವೇ ಹೊದಿಕೆ; ಅನುಕೂಲ ವಾದ ಗಾಳಿಯೇ ಬೀಸಣಿಗೆ; ಚಂದ್ರನೇ ಉರಿಯುವ ದೀಪ; ವೈರಾಗ್ಯವನಿತೆಯ ಸಹವಾಸ; ಇವೆಲ್ಲದರಿಂದ ಸಂತುಷ್ಟನಾದವನು ಮಹೈಶ್ವರ್ಯವುಳ್ಳ ರಾಜನಂತೆ ಸುಖದಿಂದ ಮಲಗುತ್ತಾನೆ!

ಅಂದಹಾಗೆ, ಭುಜವನ್ನು ಅಂದರೆ ತಮ್ಮ ಮುಂಗಾಲನ್ನು ದಿಂಬಾಗಿಸುವುದು ಬೆಕ್ಕು-ನಾಯಿಗಳೂ ಅನುಸರಿಸುವ ಒಂದು ತಂತ್ರವೆಂದು ನೀವು ಗಮನಿಸಿರಬಹುದು. ಕೈಗಳನ್ನು ದಿಂಬು ಎಂದು ಪರಿಗಣಿಸುವುದು ನೃತ್ಯಾಭಿನಯದ ಹಸ್ತಮುದ್ರೆಗಳಲ್ಲೂ ಇದೆಯೆಂದು ಕಾಣುತ್ತದೆ. ನೃತ್ಯದಲ್ಲಿ ಸಾಮಾನ್ಯವಾಗಿ ನಿದ್ರೆಯನ್ನು ಅಥವಾ ಮಲಗುವುದನ್ನು ಅಥವಾ ಕನಸು ಕಾಣುವುದನ್ನು ಸೂಚಿಸುವ ಭಂಗಿ- ತಲೆಯನ್ನು 45 ಡಿಗ್ರಿ ಎಡಕ್ಕೋ ಬಲಕ್ಕೋ ವಾಲಿಸಿ, ಎರಡೂ ಕೈಗಳನ್ನು ನಮಸ್ಕಾರದಂತೆ ಮುಚ್ಚಿ ತಲೆ ಬಗ್ಗಿಸಿದ ಭಾಗದಲ್ಲಿ ಕಿವಿಗಳ ಕೆಳಗೆ ಇಟ್ಟುಕೊಳ್ಳುವುದು- ರೀತಿಯಲ್ಲಿ ಇರುತ್ತದೆ.

ತುಂಬ ಹಿಂದೆ, ಸುಮಾರು 7000 ವರ್ಷಗಳ ಹಿಂದೆ, ನಾಗರಿಕತೆಯ ತೊಟ್ಟಿಲು ಎಂದು ಕರೆಯ ಲಾಗುವ ಮೆಸಪೊಟೊಮಿಯಾ ಪ್ರದೇಶದಲ್ಲಿ ಜನರು ಇಟ್ಟಿಗೆಯಾಕಾರದ ಕಲ್ಲಿನ ತುಂಡನ್ನು ದಿಂಬಿ ನಂತೆ ಬಳಸುತ್ತಿದ್ದರಂತೆ. ಕಲ್ಲೆಂದ ಮೇಲೆ ತಲೆಗೆ ಮೆತ್ತನೆಯ ಅನುಭವವಾಗಲಿ ಎಂಬ ಉದ್ದೇಶ ವಂತೂ ಖಂಡಿತ ಅಲ್ಲ. ಆಗಿನವರ ಅಂಥ ದಿಂಬಿನ ಬಳಕೆಯ ಉದ್ದೇಶವಿದ್ದದ್ದು ಮಲಗಿದಾಗ ಕ್ರಿಮಿಕೀಟ ಹುಳಹುಪ್ಪಟೆಗಳು ಸುಲಭವಾಗಿ ಬಾಯಿ-ಮೂಗು- ಕಿವಿಗಳೊಳಗೆ ಪ್ರವೇಶಿಸದಿರಲಿ ಎಂದು.

ಪ್ರಾಚೀನ್ ಈಜಿಪ್ಟ್‌ನಲ್ಲಿ ಅದನ್ನೇ ಸ್ವಲ್ಪ ಸುಧಾರಣೆ ಮಾಡಿ ಕಟ್ಟಿಗೆಯಿಂದ ಅಥವಾ ಕಲ್ಲಿನಿಂದ ರಚಿಸಿದ, ಎತ್ತರವನ್ನು ಬದಲಿಸಬಹುದಾದ, ತಲೆಯನ್ನಿಡಲಿಕ್ಕೆ ಅರ್ಧಚಂದ್ರಾಕೃತಿಯಲ್ಲಿ ನುಣುಪು ಮೇಲ್ಮೈಯುಳ್ಳ ರಚನೆಯನ್ನು ದಿಂಬು ಎಂದು ಬಳಸಿದರು. ಉಳ್ಳವರು ಅಂಥ ದಿಂಬು ಗಳ ಮೇಲೆ ದೇವತೆಗಳ, ರಾಜರ, ಅಥವಾ ಶುಭಸಂಕೇತಗಳ ಚಿತ್ರ ಗಳನ್ನೂ ಕೆತ್ತಿಸುತ್ತಿದ್ದರು.

ಶಿರವೆಂದರೆ ಶ್ರೇಷ್ಠ ಅಂಗ (ಸಂಸ್ಕೃತದಲ್ಲಿ ‘ಉತ್ತಮಾಂಗ’ ಎಂದರೆ ಶಿರವೆಂದೇ ಅರ್ಥ), ಅದಕ್ಕೆ ಹೆಚ್ಚಿನ ಕಾಳಜಿ ಬೇಕು ಎಂಬ ಭಾವನೆ ಮನುಷ್ಯನಲ್ಲಿ ಮೊದಲಿಂದಲೂ ಇದ್ದದ್ದೇ. ಆದ್ದರಿಂದಲೇ ಇರಬಹುದು, ನಿದ್ದೆ ಮಾಡುವಾಗಷ್ಟೇ ಅಲ್ಲ, ಚಿರನಿದ್ರೆಗೆ ಜಾರಿದ ಮೇಲೆ ಸಮಾಧಿಯಲ್ಲೂ ತಲೆಗೆ ದಿಂಬಿನ ಆಧಾರ ಒದಗಿಸುವುದನ್ನು ಪ್ರಾಚೀನ ಈಜಿಪ್ಟ್‌ನ ಜನರು ಮಾಡುತ್ತಿದ್ದರು.

ಟುಟಂಖಮನ್ ಎಂಬ ಈಜಿಪ್ಷಿಯನ್ ಫರೋನ ಗೋರಿಯಲ್ಲಿ ಆತನಿಗೆ ತಲೆಯ ಕೆಳಗೆ ಮತ್ತು ಸುತ್ತಮುತ್ತ ಎಂಟು ದಿಂಬುಗಳ ಆಧಾರ ಕೊಡಲಾಗಿತ್ತಂತೆ. ಚೀನಾದಲ್ಲೂ ಹಳೆಯ ಕಾಲದಲ್ಲಿ ಕಲ್ಲು, ಮರ, ಕಂಚು, ಪಿಂಗಾಣಿಗಳಿಂದ ತಯಾರಿಸಿದ ದಿಂಬುಗಳು ಬಳಕೆಯಲ್ಲಿದ್ದವಂತೆ. ಆರೋಗ್ಯಕ್ಕೆ, ನೆನಪಿನ ಶಕ್ತಿಯ ವೃದ್ಧಿಗೆ ಅವೇ ಒಳ್ಳೆಯದು ಎಂದು ಅವರ ನಂಬಿಕೆ. ಮೆತ್ತನೆಯ ದಿಂಬಿನ ಕಲ್ಪನೆ ಹುಟ್ಟಿಕೊಂಡಿದ್ದು ಗ್ರೀಕ್ ಮತ್ತು ರೋಮನ್ ಸಂಸ್ಕೃತಿಗಳಲ್ಲಿ. ಹುಲ್ಲು, ಧಾನ್ಯಗಳ ಹೊಟ್ಟು, ಹಕ್ಕಿಯ ಗರಿಗಳು, ಬಟ್ಟೆಯ ಚೂರುಗಳು ಅವರಿಗೆ ದಿಂಬು ನಿರ್ಮಾಣದಲ್ಲಿ ಉಪಯೋಗ ವಾಗುತ್ತಿದ್ದ ಕಚ್ಚಾವಸ್ತುಗಳು.

ಹತ್ತಿಯಿಂದ ಮಾಡಿದ ದಿಂಬುಗಳೇನಿದ್ದರೂ ಆರೇಳು ಶತಮಾನಗಳಿಂದ ಈಚೆಗಿನದು ಎನ್ನಲಾಗಿದೆ. ಈಗಂತೂ ಬಿಡಿ, ಮೆಮೊರಿ ಫೋಮ್ ಅಂತೆ, ಮೈಕ್ರೊ-ಬರ್ ಅಂತೆ, ಲ್ಯಾಟೆಕ್ಸ್ ಅಂತೆ, ಜೆಲ್ ಅಂತೆ ಒಟ್ಟಿನಲ್ಲಿ ದಿಂಬುಗಳ ವೈವಿಧ್ಯ ವಿಸ್ತಾರವಾಗಿದೆ. ಹೊಚ್ಚಹೊಸ ಸೇರ್ಪಡೆಯೆಂದರೆ ಆರ್ಟಿಫಿಷಿ ಯಲ್ ಇಂಟೆಲಿಜೆನ್ಸ್ ದಿಂಬು. ನಿದ್ರೆಯಲ್ಲಿ ಇಂತಿಂಥವೇ ಕನಸುಗಳು ಬೀಳಬೇಕು ಎಂದು ಅದು ನಿಮ್ಮ ಕನಸುಗಳನ್ನೂ ನಿರ್ಧರಿಸಬಹುದೇನೋ!

ಒಂದಂತೂ ನಿಜ, ವಾಚ್ಯಾರ್ಥದಲ್ಲಷ್ಟೇ ಅಲ್ಲ ಧ್ವನ್ಯಾರ್ಥದಲ್ಲೂ ‘ದಿಂಬು’ ಕೊಡುವ ಸುಖ, ಶಾಂತಿ, ಮನಸ್ಸಿನ ನೆಮ್ಮದಿ, ಬೆಚ್ಚಗಿನ ಹಿತಕರ ಅನುಭವ ಅನಿರ್ವಚನೀಯ. ಇನ್ನೊಬ್ಬರ ಹೆಗಲನ್ನೋ ತೊಡೆಯನ್ನೋ ದಿಂಬನ್ನಾಗಿಸುವುದೆಂದರೆ ಅದು ಬರೀ ತಲೆಗೆ ಆಧಾರವಷ್ಟೇ ಅಲ್ಲ, ನಮ್ಮ ಅಸ್ತಿತ್ವಕ್ಕೇ ಆಸರೆ. ಸ್ಪರ್ಶದಿಂದ ಲಭಿಸುವ ಸಾಂತ್ವನವೂ ಹೌದು.

ವನವಾಸ ಕಾಲದಲ್ಲಿ ಸೀತೆ ಶ್ರೀರಾಮನ ತೊಡೆಯನ್ನು, ಕೆಲವೊಮ್ಮೆ ಶ್ರೀರಾಮನು ಸೀತೆಯ ತೊಡೆ ಯನ್ನು, ದಿಂಬನ್ನಾಗಿಸಿ ವಿಶ್ರಮಿಸುತ್ತಿದ್ದರಂತೆ. ಪರಸ್ಪರ ಸಾಂತ್ವನ ಪಡೆಯುತ್ತಿದ್ದರಂತೆ. ಪಾಶ್ಚಾತ್ಯ ಸಂಸ್ಕೃತಿಯಿಂದಾಗಿ ಇಂಗ್ಲಿಷ್ ಭಾಷೆಯಲ್ಲಿ ನುಡಿಗಟ್ಟಾಗಿರುವ pillow talk ಆಗಲೀ, pillow fight ಆಗಲೀ, ಅಥವಾ ಚಿಕ್ಕ ಮಕ್ಕಳಲ್ಲೊಂದು ಮುಗ್ಧ ನಂಬಿಕೆಗೆ ಕಾರಣವಾಗಿರುವ tooth fairy pillow - ಮಗುವಿನ ಹಾಲುಹಲ್ಲು ಬಿದ್ದಾಗ ಅದನ್ನು ಎಲೆಯಲ್ಲೋ ಕಾಗದ ದಲ್ಲೋ ಮಡಚಿ ಮಗು ಮಲಗುವ ದಿಂಬಿನ ಕೆಳಗಡೆ ಇಟ್ಟರೆ ರಾತ್ರಿ ಕಿನ್ನರಿಯೊಬ್ಬಳು ಬಂದು ಅದನ್ನು ತೆಗೆದು ಕೊಂಡು ಹೋಗಿ ಅದರ ಜಾಗದಲ್ಲಿ ನಿಧಿ ತಂದಿಡುತ್ತಾಳೆ ಎಂಬ ನಂಬಿಕೆಯಲ್ಲಾಗಲೀ, pillow ಒಂದು ಸಂಕೇತ ಅಷ್ಟೇ; ಅದರ ಹಿಂದಿನ ಭಾವನೆಗೇ ಹೆಚ್ಚು ಮಹತ್ತ್ವ.

ಇಂತಿರುವ ಪಿಲ್ಲೋ ಪುರಾಣವನ್ನು ಭೀಷ್ಮನಿಗೆ ಒದಗಿ ಬಂದ ಶರ(ಬಾಣ)ಗಳ ದಿಂಬಿನಿಂದ ಆರಂಭಿಸಿದ್ದೆವಷ್ಟೆ? ಕುಸುಮ (ಹೂವು)ಗಳ ದಿಂಬಿನ ಉಲ್ಲೇಖದೊಡನೆ ಮುಗಿಸೋಣ. ಅಂದ ಹಾಗೆ ಭೋಗ, ಭಾಮಿನಿ, ಪರಿವಽನಿ, ವಾರ್ಧಕಗಳನ್ನೂ ದಿಂಬಿಗೆ ತಳುಕುಹಾಕಬಹುದೆನ್ನಿ. ಈಗ, ಪ್ರಖ್ಯಾತ ವಾದೊಂದು ಕನ್ನಡ ಜನಪದ ಗೀತೆಯನ್ನು ನೆನಪಿಸಿಕೊಳ್ಳಿ. “ಮಲ್ಲಿಗೂವಿನ ಮಂಚ, ಮರುಗಾದ ಮೇಲೊದಪು, ತಾವರೆ ಹೂವು ತಲೆ ದಿಂಬು..." ಯಾರಿಗೆ?