ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಾಲ್ಕಾಣೆ ಕೋಳಿಗೆ...

ರಾಜಧಾನಿಯ ನಿಜಸೌಂದರ್ಯ ಅಡಗಿರುವುದು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಮೇಲೆಯೇ ಹೊರತು, ಕಣ್ಣು ಕುಕ್ಕುವಂತೆ ರೂಪಿಸುವುದರಲ್ಲಲ್ಲ. ಇದೇ ಮೊತ್ತದ ಕೆಲ ಭಾಗವನ್ನು ಜನಕಲ್ಯಾಣ ಯೋಜನೆಗಳಿಗೆ ಬಳಸುವಂತಾದರೆ, ಅದಕ್ಕಿಂತ ಹೆಚ್ಚು ಸೌಂದರ್ಯ ಬೇರೊಂದಿದೆಯೇ? ಸಂಪಾದಕ ರೆಂದಂತೆ, ಒಬ್ಬ ಮನುಷ್ಯನಿಗೆ ಅನ್ನ-ಬಟ್ಟೆ- ವಸತಿ ಎಷ್ಟು ಮುಖ್ಯವೋ ಅದಕ್ಕೆ ಯಥೋಚಿತ ಮಾನ್ಯತೆ ಇದ್ದರೇನೇ ಚಂದ

ನಾಲ್ಕಾಣೆ ಕೋಳಿಗೆ...

Profile Ashok Nayak Apr 16, 2025 2:19 PM

ಓದುಗರ ಓಣಿ

‘ಇದು ಇಂದ್ರನ ಅಮರಾವತಿಯೇ?’ ಎಂಬ ಸಂಪಾದಕೀಯವು (ಏ.15) ‘ನಾಲ್ಕಾಣೆ ಮುರ್ಗಿಗೆ ಹನ್ನೆರಡಾಣೆ ಮಸಾಲೆ’ ಎಂಬ ಮಾತನ್ನು ನೆನಪಿಸಿತು. ರಾಜ್ಯದ ರಾಜಧಾನಿ ಸುಸಜ್ಜಿತವಾಗಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ; ಆದರೆ ಆಂಧ್ರಪ್ರದೇಶ ರೂಪಿಸಲಿರುವ ಅಮರಾವತಿ ರಾಜಧಾನಿಗೆ ನಿಗದಿಯಾಗಿಟ್ಟ ಮೊತ್ತ ಬರೋಬ್ಬರಿ 65000 ಕೋಟಿ! ಜತೆಗೆ ವಿಶ್ವವನ್ನೇ ಆಕರ್ಷಿಸ ಬೇಕೆಂಬ ಹಂಬಲ! ಇದು ನಿಜವಾಗಿಯೂ ಬೇಕಿತ್ತೇ? ಟೋಕಿಯೋ, ಸಿಂಗಾಪುರದಂಥ ನಗರದ ಸೃಷ್ಟಿಯ ಹೆಸರಿನಲ್ಲಿ ಆಂಧ್ರದ ಸರಕಾರವು ರಾಜ್ಯವನ್ನೇ ಬಡವಾಗಿಸಲು ಹೊರಟಿರಬಹುದೇ ಎಂಬ ಅನುಮಾನವೂ ಇಲ್ಲಿ ಕಾಡುತ್ತದೆ. ಅಗತ್ಯವಿರುವುದು ಸುಸಜ್ಜಿತ ವ್ಯವಸ್ಥೆಯೇ ಹೊರತು ಭವ್ಯತೆಯಲ್ಲ.

ರಾಜಧಾನಿಯ ನಿಜಸೌಂದರ್ಯ ಅಡಗಿರುವುದು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಮೇಲೆಯೇ ಹೊರತು, ಕಣ್ಣು ಕುಕ್ಕುವಂತೆ ರೂಪಿಸುವುದರಲ್ಲಲ್ಲ. ಇದೇ ಮೊತ್ತದ ಕೆಲ ಭಾಗವನ್ನು ಜನಕಲ್ಯಾಣ ಯೋಜನೆಗಳಿಗೆ ಬಳಸುವಂತಾದರೆ, ಅದಕ್ಕಿಂತ ಹೆಚ್ಚು ಸೌಂದರ್ಯ ಬೇರೊಂದಿ ದೆಯೇ? ಸಂಪಾದಕರೆಂದಂತೆ, ಒಬ್ಬ ಮನುಷ್ಯನಿಗೆ ಅನ್ನ-ಬಟ್ಟೆ- ವಸತಿ ಎಷ್ಟು ಮುಖ್ಯವೋ ಅದಕ್ಕೆ ಯಥೋಚಿತ ಮಾನ್ಯತೆ ಇದ್ದರೇನೇ ಚಂದ. ಅಷ್ಟಕ್ಕೂ ಇಷ್ಟೆಲ್ಲ ಹಣ ಯಾರದ್ದು, ಸಾಮಾನ್ಯ ತೆರಿಗೆದಾರರದ್ದಲ್ಲವೇ? ಅವರು ಈ ರೀತಿಯ ವೈಭವೋಪೇತ ರಾಜಧಾನಿಗೆ ಸಮ್ಮತಿ ಸೂಚಿಸಬಹುದೇ? ಅದಕ್ಕೆಂದು ಸಾಮಾನ್ಯರನ್ನು ಕೇಳುವವರಾರು? ತೆರಿಗೆ ತುಂಬುವು ದೊಂದೇ ಅವರ ಕೆಲಸ! ಮುಂದಿನದು ಆಳುಗರಿಗೇ ಬಿಟ್ಟಿದ್ದು! ಒಂದಂತೂ ನಿಜ, ಈ ರೀತಿಯ ಅತಿರೇಕವನ್ನು ಯಾರೂ ಸಹಿಸರು. ಸಂಬಂಧಪಟ್ಟವರು ಈ ಕುರಿತು ಎಂದಾದರೂ ಆಲೋಚಿಸಬಹುದೇ?

ಇದನ್ನೂ ಓದಿ: Cherkady Sachhidanand Shetty Column: ಬೂಮ್‌ರ್ಯಾಂಗ್‌ ಆಗಲಿರುವ ಟ್ರಂಪ್‌ ಸುಂಕನೀತಿ

- ಶಂಕರನಾರಾಯಣ ಭಟ್, ಮಾಡಗೇರಿ

ಇವರೂ ಸುಂಕವೀರರೇ!

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿಸುಂಕ ವೀರರಾದರೆ ನಮ್ಮ ಬಿಬಿಎಂಪಿ ಅಧಿಕಾರಿಗಳು ಸುಂಕವೀರರು! ಸಾಮಾನ್ಯ ಜನರ ತಲೆಮೇಲೆ ಒಂದಿಂದು ಬಗೆಯ ಸುಂಕವನ್ನು ಹೇರುತ್ತ ಹೋಗುವಲ್ಲಿ ಚತುರರು! ಇದೀಗ ಆ ಸುಂಕಪಟ್ಟಿಗೆ ಕಸ ವಿಲೇವಾರಿ ವಾಹನ ವೆಚ್ಚ ಸೇರಿಸಲ್ಪಡುತ್ತಿದೆ (ಬಿಬಿಎಂಪಿಯೂ ಟ್ರಂಪ್ ಅವರಂತೆ ಸುಂಕಗಳ ಮಾರುದ್ದ ಪಟ್ಟಿಯನ್ನು ಪ್ರದರ್ಶಿಸುವುದು ಒಳ್ಳೆಯದು). ವಿದ್ಯಾರಣ್ಯಪುರದ ನನ್ನ ಮನೆಯಿರುವ ಬೀದಿಯಲ್ಲಿ ಕಸ ವಿಲೇವಾರಿ ವಾಹನವು ಎರಡು ದಿನಕ್ಕೊಮ್ಮೆ ಬರುತ್ತದೆ. ರಸ್ತೆಯ ಕಸವನ್ನು ಎರಡು, ಮೂರು ತಿಂಗಳಿಗೆ ಒಂದು ಬಾರಿ ಮಾತ್ರ ಬಿಬಿಎಂಪಿ ಕಡೆಯವರು ಗುಡಿಸುತ್ತಾರೆ, ಅದೂ ಕಾಟಾಚಾರಕ್ಕೆ ಗುಡಿಸಿ ಭಕ್ಷೀಸಿಗಾಗಿ ನಮ್ಮ ಬಳಿ ಕೈ ಒಡ್ಡುತ್ತಾರೆ. ನಮ್ಮ ಮನೆಯ ಎದುರು ಒತ್ತುವರಿಯೊಂದಿಗೆ ನಿರ್ಮಿಸಲಾಗಿರುವ ಆಹಾರ ಮಳಿಗೆಯ ಗ್ರಾಹಕರೂ ಸೇರಿದಂತೆ ಯಾರೆ ರಸ್ತೆಮೇಲೆ ಬಿಸಾಡಿದ ತ್ಯಾಜ್ಯಗಳನ್ನು ನಿತ್ಯ ನಾನೇ ಎತ್ತಬೇಕು. ಹಾಗೆ ಎತ್ತಲು ಹೋಗಿಯೇ ಈಚೆಗೆ ಬೀದಿನಾಯಿಯ ಕಡಿತಕ್ಕೂ ಒಳಗಾದೆ.‌

ಇನ್ನು, ನಮ್ಮ ಬಡಾವಣೆಯ ಮುಖ್ಯರಸ್ತೆಯ ಪಾದಚಾರಿ ಮಾರ್ಗಗಳು ಸಂಪೂರ್ಣ ಅಸ್ತವ್ಯಸ್ತ ಹಾಗೂ ಒತ್ತುವರಿ ಆಗಿದ್ದು ನಡೆದಾಡಲು ಸಾಧ್ಯವೇ ಇಲ್ಲದಂತಾಗಿವೆ. ನಿರ್ಮಾಣ ಹಂತದ ಕಟ್ಟಡ ಗಳಿಗಾಗಿ ವರ್ಷಗಳ ಕಾಲ ಪಾದಚಾರಿ ಮಾರ್ಗಗಳನ್ನು ಆಕ್ರಮಿಸಲಾಗುತ್ತಿದ್ದು, ಪಾದಚಾರಿಗಳು ಕೈಯಲ್ಲಿ ಜೀವ ಹಿಡಿದುಕೊಂಡು ಮುಖ್ಯರಸ್ತೆಯ ಮೇಲೆ ಓಡಾಡುವಂತಾಗಿದೆ. ಇಷ್ಟೆ ’ಶೌರ್ಯ’ ಪ್ರದರ್ಶಿಸುತ್ತಿರುವ ಬಿಬಿಎಂಪಿಗೆ ನಾವೀಗ ಇನ್ನೊಂದಷ್ಟು ಸುಂಕ ತೆರಬೇಕಾಗಿದೆ. ’ಸುಂಕದವನ ಬಳಿ ಸುಖ-ದುಃಖ ಹೇಳಿಕೊಂಡು ಪ್ರಯೋಜನವಿಲ್ಲ’ ಎಂಬ ಗಾದೆಮಾತು ಬಿಬಿಎಂಪಿಯ ಮಟ್ಟಿಗಂತೂ ನೂರಕ್ಕೆ ನೂರು ಸತ್ಯ.

- ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ತಲೆತಗ್ಗಿಸುವಂಥ ಕೃತ್ಯ

ರಾಷ್ಟ್ರ ಹಾಗೂ ರಾಜ್ಯದ ನಾನಾ ಕಡೆ ಅತ್ಯಾಚಾರದಂಥ ಅಮಾನವೀಯ ಕೃತ್ಯಗಳು ದಿನೇ ದಿನೆ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಹುಬ್ಬಳ್ಳಿಯ ಬಡಾವಣೆಯೊಂದರಲ್ಲಿ ಐದು ವರ್ಷದ ಬಾಲಕಿಯ ಮೇಲೆ ಬಿಹಾರಿ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿರುವ ಘಟನೆಯು ನಾಗರಿಕ ಸಮಾಜವು ತಲೆತಗ್ಗಿಸುವಂತೆ ಮಾಡಿದೆ.

ಪ್ರೀತಿ, ಮಮತೆ, ವಾತ್ಸಲ್ಯ ಮತ್ತು ಸ್ನೇಹಭಾವವನ್ನು ತುಂಬಿಕೊಂಡಿರಬೇಕಾದ ಮನುಷ್ಯ ಯಾಕೆ ಹೀಗೆ ಮಾನವೀಯತೆಯನ್ನು ಮರೆತು ಮೃಗೀಯ ವರ್ತನೆಯಲ್ಲಿ ತೊಡಗುತ್ತಿದ್ದಾನೆ ಎಂಬುದು ತಿಳಿಯದಾಗಿದೆ. ನೈತಿಕತೆಯನ್ನು ಗಾಳಿಗೆ ತೂರಿ ಇಂಥ ಪಾಪಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದು ತರವಲ್ಲ ಎಂಬ ಬುದ್ಧಿಮಾತನ್ನು ಹೇಳುವವರು ಇಲ್ಲದಿರುವುದೇ ಇದಕ್ಕೆ ಕಾರಣವೇ? ಹೆಣ್ಣು ಮಕ್ಕಳ ಮೇಲಿನ ಇಂಥ ಪೈಶಾಚಿಕ ಕೃತ್ಯಗಳು ಇನ್ನಾದರೂ ನಿಲ್ಲಬೇಕಿದೆ. ಇಂಥ ತಪ್ಪು ಮಾಡಿದ ವರು ಅದೆಂಥ ಪ್ರಭಾವಿಗಳೇ ಆಗಿರಲಿ ಹೆಡೆಮುರಿ ಕಟ್ಟಿ ಶಿಕ್ಷೆ ನೀಡುವ ನಿಟ್ಟಿನಲ್ಲಿ ಪೊಲೀಸ್ ವ್ಯವಸ್ಥೆಯು ಟೊಂಕ ಕಟ್ಟಬೇಕಿದೆ.

- ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ಜಾಗೃತಿ ಮೂಡಿಸಲಿ

ರಾಜ್ಯದಲ್ಲಿ ಬಹಿರಂಗವಾಗಿರುವ ಜಾತಿಗಣತಿಯ ಅಂಕಿ- ಅಂಶಗಳು ಹಲವಾರು ಪ್ರಶ್ನೆಗಳಿಗೆ, ಅವಲೋಕನಕ್ಕೆ ಎಡೆಮಾಡಿ ಕೊಡುತ್ತವೆ. ಸಂವಿಧಾನಬದ್ಧವಾಗಿ ಇಷ್ಟು ದಿನಗಳ ಕಾಲ ಯಾವ ಸಮುದಾಯವನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಿ ವಿಶೇಷ ಮಾನ್ಯತೆಯನ್ನು ನೀಡಲಾ ಗಿತ್ತೋ, ಇಂದು ಅಂಥ ಜಾತಿಗಳೇ ಜನಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿವೆ. ಅಷ್ಟೇ ಅಲ್ಲದೆ ರಾಜಕೀಯ ಹಿತಾಸಕ್ತಿಗಾಗಿ ಕೆಲವು ಜಾತಿಗಳನ್ನು ಹಲವು ಉಪಜಾತಿಗಳನ್ನಾಗಿ ವಿಭಜಿಸಿದ್ದು ಸಾಮಾಜಿಕ ಸಾಮರಸ್ಯಕ್ಕೆ ತೊಡಕಾಗಲಿದೆ.

ರಾಜ್ಯದಲ್ಲಿ ಶೇ.೨.೯೮ರಷ್ಟು ಜನಸಂಖ್ಯೆ ಹೊಂದಿರುವ ಅಲ್ಪ ಸಂಖ್ಯಾತರ ಮಾನ್ಯತೆ ಹೊಂದ ಬೇಕಾದ ಬ್ರಾಹ್ಮಣ ಸಮುದಾಯವನ್ನು ಮಾತ್ರ ಸಾಮಾನ್ಯ ವರ್ಗದ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಇವೆ ಅಂಕಿ-ಅಂಶಗಳ ಲೆಕ್ಕಾಚಾರಗಳನ್ನು ವಿಶ್ಲೇಷಿಸಿದಾಗ ಅಲ್ಪಸಂಖ್ಯಾತರು ಎಂದು ಕರೆಯಿಸಿ ಕೊಳ್ಳಲು ಇರಬೇಕಾದ ಮಾನದಂಡಗಳು ಏನು ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಎನಿಸುತ್ತದೆ. ಜತೆಗೆ ಅಲ್ಪಸಂಖ್ಯಾತರ ಸ್ಥಾನ ಪಡೆದ ಕೆಲವು ಜಾತಿಗಳನ್ನು ಸಾಮಾನ್ಯ ವರ್ಗಕ್ಕೆ ಸೇರಿಸಬೇಕು ಹಾಗೂ ನಿಜವಾದ ಅಲ್ಪ ಸಂಖ್ಯಾತರನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವಂತಾಗಬೇಕು. ಒಟ್ಟಿನಲ್ಲಿ ಈ ಜಾತಿ ಸಮೀಕ್ಷೆ ಮತ್ತು ಗಣತಿಯ ಲೆಕ್ಕಾಚಾರಗಳು ಸಮಾಜದಲ್ಲಿ ಜಾಗೃತಿ ಮೂಡಿಸುವ ಸಾಧನಗಳಾಗಬೇಕಿದೆ.

-ಸುರೇಂದ್ರ ಪೈ, ಭಟ್ಕಳ

ಔನ್ನತ್ಯವೋ, ಪತನವೋ?

ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಇಂದು ಮತ್ತು ನಾಳೆ ಪರೀಕ್ಷೆಗಳು ನಡೆಯಲಿದ್ದು, ಈ ವೇಳೆ ಪರೀಕ್ಷಾರ್ಥಿಗಳು ಅನುಸರಿಸಬೇಕಾದ ಕಟ್ಟುಪಾಡುಗಳ ಬಗ್ಗೆ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ವಿವರಿಸಿದ್ದಾರೆ. ಪರೀಕ್ಷಾರ್ಥಿಗಳು ಇಂಥದೇ ವಸ್ತ್ರ ಧರಿಸಬೇಕು, ಷೂ ಬದಲಿಗೆ ಚಪ್ಪಲಿ ಹಾಕಿಕೊಂಡಿರಬೇಕು, ಪರೀಕ್ಷೆ ಪ್ರಾರಂಭವಾಗುವುದಕ್ಕೆ ಒಂದೂವರೆ ಗಂಟೆ ಮುಂಚೆ ಹಾಜರಿದ್ದು ಪೊಲೀಸರಿಂದ/ ಗೃಹರಕ್ಷಕ ದಳದವರಿಂದ ತಪಾಸಣೆಗೆ ಅನುವು ಮಾಡಿ ಕೊಡಬೇಕು ಹೀಗೆ ಇನ್ನೂ ಏನೇನೋ ಇದ್ದೀತು (ಉದಾಹರಣೆಗೆ ಹೆಣ್ಣು ಮಕ್ಕಳು ತಲೆಗೂದಲನ್ನು ಹಾಗೆಯೇ ಇಳಿಬಿಟ್ಟಿರಬೇಕು, ಓಲೆ, ಚಿನ್ನದ ಸರ, ಉಂಗುರ, ಕೈಗಡಿಯಾರ ಧರಿಸುವಂತಿಲ್ಲ ಇತ್ಯಾದಿ!).

ಮೊಬೈಲ್ ಮತ್ತಿತರ ಸೂಕ್ಷ್ಮ ವಿದ್ಯುನ್ಮಾನ ಉಪಕರಣಗಳ ನಿಷೇಧ ಅರ್ಥವಾಗುವಂಥದ್ದು. ಆದರೆ ಕೆಲವೇ ಅಪಮಾರ್ಗಿಗಳನ್ನು ಹತ್ತಿಕ್ಕುವ ಸಲುವಾಗಿ ಇತರ ಸಭ್ಯ ಅಭ್ಯರ್ಥಿಗಳನ್ನೂ ತಪಾಸಣೆಗೆ ಒಳಪಡಿಸುವಂತಾಗಿರುವುದು ನೋಡಿದರೆ, ನಮ್ಮ ಪರೀಕ್ಷಾ ಪದ್ಧತಿ ಎತ್ತ ಸಾಗಿದೆ? ಇಷ್ಟೆಲ್ಲಾ ಕಠಿಣ ಕ್ರಮಗಳು ಔನ್ನತ್ಯದ ಸಂಕೇತವೋ ಅಥವಾ ಪತನಗಾಮಿಯೋ? ಎಂದು ಪ್ರಶ್ನಿಸಿಕೊಳ್ಳು ವಂತಾಗುತ್ತದೆ.

- ಸಾಮಗ ದತ್ತಾತ್ರಿ, ಬೆಂಗಳೂರು