ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cherkady Sachhidanand Shetty Column: ಬೂಮ್‌ರ್ಯಾಂಗ್‌ ಆಗಲಿರುವ ಟ್ರಂಪ್‌ ಸುಂಕನೀತಿ

ತಮ್ಮ ದೇಶದ ಹಿತಾಸಕ್ತಿಯನ್ನು ಕಾಯುವ ನಿಟ್ಟಿನಲ್ಲಿ ಟ್ರಂಪ್ ಉದ್ದೇಶ ಚೆನ್ನಾಗಿದ್ದರೂ, ಅವರ ದುಡುಕಿನ ನಿರ್ಧಾರಗಳು, ಅವೈಜ್ಞಾನಿಕ ಸುಂಕನೀತಿಗಳಿಂದಾಗಿ ಜಗತ್ತಿನಲ್ಲಿ ಆರ್ಥಿಕ ಹಿಂಜರಿತ ಆರಂಭ ವಾಗುವ ಲಕ್ಷಣಗಳು ಕಾಣುತ್ತಿವೆ. ಟ್ರಂಪ್ ಅವರ ಕ್ರಮವನ್ನು ವಿರೋಧಿಸಿ ಅಮೆರಿಕದಲ್ಲಿಯೇ ಪ್ರತಿಭಟನೆ ಗಳು ನಡೆದಿವೆ

ಬೂಮ್‌ರ್ಯಾಂಗ್‌ ಆಗಲಿರುವ ಟ್ರಂಪ್‌ ಸುಂಕನೀತಿ

Profile Ashok Nayak Apr 16, 2025 7:05 AM

ಸುಂಕಸಮರ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ನೂತನ ಸುಂಕನೀತಿಯು ಅಮೆರಿಕಕ್ಕೆ ‘ಸ್ವಯಂ ರಕ್ಷಣೆ’ ಮತ್ತು ‘ಆಸ್ತಿತ್ವದ ಪ್ರಶ್ನೆ’ಯಾಗಿರಬಹುದು. ಆದರೆ ಈ ನೀತಿಯೇ ಅಮೆರಿಕದ ಪಾಲಿಗೆ ಬೂಮ್‌ರ‍್ಯಾಂಗ್ ಅಥವಾ ತಿರುಗೇಟು ಆಗಿ ಪರಿವರ್ತನೆ ಗೊಳ್ಳಲಿದೆ. ಡೊನಾಲ್ಡ್ ಟ್ರಂಪ್ ಎರಡನೆಯ ಬಾರಿಗೆ ಅಧಿಕಾರಕ್ಕೆ ಬಂದು 3 ತಿಂಗಳು ಕಳೆಯುವು ದರೊಳಗೆ, ಅಮೆರಿಕದ ಇತಿಹಾಸದಲ್ಲಿ ಯಾರೂ ಕಂಡು ಕೇಳರಿಯದ ಅಲ್ಲೋಲ ಕಲ್ಲೋಲವನ್ನು ಸೃಷ್ಟಿಸಿದ್ದಾರೆ. ಅಮೆರಿಕದ ಜತೆಯಲ್ಲೇ ಇಡೀ ವಿಶ್ವದಲ್ಲಿ ಕೋಲಾಹಲವೆದ್ದಿದೆ. ತಮ್ಮ ದೇಶದ ಹಿತಾ ಸಕ್ತಿಯನ್ನು ಕಾಯುವ ನಿಟ್ಟಿನಲ್ಲಿ ಟ್ರಂಪ್ ಉದ್ದೇಶ ಚೆನ್ನಾಗಿದ್ದರೂ, ಅವರ ದುಡುಕಿನ ನಿರ್ಧಾರ ಗಳು, ಅವೈಜ್ಞಾನಿಕ ಸುಂಕನೀತಿಗಳಿಂದಾಗಿ ಜಗತ್ತಿನಲ್ಲಿ ಆರ್ಥಿಕ ಹಿಂಜರಿತ ಆರಂಭವಾಗುವ ಲಕ್ಷಣಗಳು ಕಾಣುತ್ತಿವೆ. ಟ್ರಂಪ್ ಅವರ ಕ್ರಮವನ್ನು ವಿರೋಧಿಸಿ ಅಮೆರಿಕದಲ್ಲಿಯೇ ಪ್ರತಿಭಟನೆಗಳು ನಡೆದಿವೆ.

‘ಸುಂಕ ವಿಧಿಸುವ ಕ್ರಮವು ಅನಗತ್ಯ, ಅವುಗಳಿಂದ ಅಮೆರಿಕಕ್ಕೇ ನಷ್ಟ’ ಎಂದೂ ಅಲ್ಲಿನ ಅರ್ಥ ಶಾಸ್ತ್ರಜ್ಞರು ಹೇಳಿದ್ದಾರೆ. ಸುಂಕ ವಿಧಿಸುವ ಟ್ರಂಪ್ ಅವರ ಕ್ರಮದಿಂದಾಗಿ ಅಮೆರಿಕಕ್ಕೇ ಲಾಭ ಆಗುವುದಿಲ್ಲ, ಇದರಿಂದ ಹಣದುಬ್ಬರ ಹೆಚ್ಚಾಗುತ್ತದೆ, ಆರ್ಥಿಕ ಹಿಂಜರಿತ ಎದುರಾಗುತ್ತದೆ ಎಂಬ ಬಲವಾದ ಅಭಿಪ್ರಾಯವು ಅಮೆರಿಕದಲ್ಲಿದೆ. ಈ ಸುಂಕನೀತಿಯಿಂದಾಗಿ ಅಮೆರಿಕದಲ್ಲಿ ಹಾಗೂ ಜಗತ್ತಿನ ಇತರೆಡೆಗಳಲ್ಲಿ ಆರ್ಥಿಕ ಬೆಳವಣಿಗೆ ದರವು ಕಡಿಮೆಯಾಗುವುದು. ಈಗ ಟ್ರಂಪ್ ಪ್ರತಿಸುಂಕ ಜಾರಿಗೆ 90 ದಿನಗಳ ಗಡುವನ್ನೇನೋ ನೀಡಿ ಉಲ್ಟಾ ಹೊಡೆದಿದ್ದಾರೆ, ಆದರೆ ಶೇ.10ರ ಪ್ರಮಾಣದ ಮೂಲ ಆಮದು ತೆರಿಗೆ ಮುಂದುವರಿಯಲಿದೆ.

ಇದೇ ಸಂದರ್ಭದಲ್ಲಿ ಚೀನಾ ಮೇಲಿನ ಸುಂಕವನ್ನು ಅತಿರೇಕದ ಪ್ರಮಾಣದಲ್ಲಿ ಟ್ರಂಪ್ ಏರಿಸು ತ್ತಲೇ ಹೋದರು (ಪ್ರಸ್ತುತ ಅದು ಶೇ.145ರ ಮಟ್ಟವನ್ನು ತಲುಪಿದೆ!). ಈ ನಡೆಯನ್ನು ಖಂಡಿಸಿದ ಚೀನಾದ ವಾಣಿಜ್ಯ ಸಚಿವಾಲಯವು, ‘ಅಮೆರಿಕದ ವರ್ತನೆ ಹೀಗೆಯೇ ಮುಂದುವರಿದರೆ ನಾವು ಸುಮ್ಮನಿರುವುದಿಲ್ಲ; ನಮಗೂ ದೃಢವಾದ ಇಚ್ಛಾಶಕ್ತಿಯಿದೆ, ಪ್ರತೀಕಾರದ ಕ್ರಮಗಳನ್ನು ಕೈ ಗೊಳ್ಳಲು ಬೇಕಾದಷ್ಟು ದಾರಿಗಳಿವೆ" ಎಂದು ಕಟುಶಬ್ದಗಳಲ್ಲಿ ಅಮೆರಿಕಕ್ಕೆ ತಿರುಗೇಟು ನೀಡಿದ್ದನ್ನು ನೀವು ಗಮನಿಸಿರಬಹುದು.

ಇದನ್ನೂ ಓದಿ: Ravi Hunj Column: ಮಹಾಮನೆ, ಅನುಭವ ಮಂಟಪಗಳ ಯಾವುದೇ ಕುರುಹು ಈವರೆಗೆ ಸಿಕ್ಕಿಲ್ಲವೇಕೆ ?

ಪ್ರತಿಸುಂಕದ ಹೇರಿಕೆಯನ್ನು ಟ್ರಂಪ್ 90 ದಿನಗಳವರೆಗೆ ತಡೆ ಹಿಡಿದರೂ, ಜಗತ್ತು ಪ್ರತಿಸುಂಕದ ಹಿಡಿತದಿಂದ ಹೊರಬಂದಿಲ್ಲ. ಅಮೆರಿಕ ಮತ್ತು ಚೀನಾ ನಡುವಿನ ಸುಂಕಸಮರವೂ ಜಗತ್ತಿನ ಅರ್ಥವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಸುಂಕವೆಂಬುದು ವಾಣಿಜ್ಯ ವ್ಯವಸ್ಥೆಯ ಕೀಲಿಕೈ. ಪರಸ್ಪರ ಶತ್ರುತ್ವವಿರುವ ದೇಶಗಳ ನಡುವೆಯೂ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು ನಡೆಯುತ್ತವೆ. ಆ ಕಾರಣಕ್ಕಾಗಿ ಅಲ್ಲಿ ಸುಂಕದ ಆಟ ನಡೆಯುತ್ತದೆ. ಆದರೆ, ಸುಂಕದೊಡನೆ ಆಡುವ ಆಟವು ಜಗತ್ತನ್ನೇ ತಲ್ಲಣಗೊಳಿಸಿಬಿಡುತ್ತದೆ. ಅಮೆರಿಕದ ಹೊಸ ಸುಂಕನೀತಿ ಜಗತ್ತಿನ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ ಹಾಗೂ ಕರೋನಾ ಕಾಲಘಟ್ಟದ ಬಳಿಕ ಜಾಗತಿಕ ಆರ್ಥಿಕತೆಯನ್ನು ಮತ್ತೆ ಅನಿಶ್ಚಿತತೆಯ ಮಡಿಲಿಗೆ ದೂಡಿದೆ.

ಅದರಲ್ಲೂ ಇದು, ಅಭಿವೃದ್ಧಿಶೀಲ ದೇಶಗಳಲ್ಲಿ ಒಂದು ತೂಕ ಹೆಚ್ಚೇ ಎನ್ನಿಸುವಷ್ಟು ಆತಂಕ ವನ್ನು ಹುಟ್ಟು ಹಾಕಿದೆ. ಏಕೆಂದರೆ ಸುಂಕ ಏರಿಕೆಯನ್ನು ತಡೆದು ಕೊಳ್ಳುವ ಶಕ್ತಿ ಎಲ್ಲಾ ರಾಷ್ಟ್ರ ಗಳಿಗೂ ಇರುವುದಿಲ್ಲ. ದೂರದ ಅಮೆರಿಕದ ಸುಂಕನೀತಿಯು ಜನಸಾಮಾನ್ಯನಿಗೆ ಪ್ರತ್ಯಕ್ಷವಾಗಿ ತಟ್ಟದಿರಬಹುದು; ಆದರೆ ಅದರ ಪರಿಣಾಮವನ್ನು ಆತ ಪರೋಕ್ಷವಾಗಿಯಾದರೂ ಅನುಭವಿಸ ಲೇಬೇಕಾಗುತ್ತದೆ. ಆದ್ದರಿಂದ ಇದು ಎಲ್ಲರಿಗೂ ಸಂಬಂಧಿಸಿದ ವಿಷಯವೂ ಹೌದು.

ಟ್ರಂಪ್ ಜಾರಿಗೊಳಿಸಿದ ಪ್ರತಿಸುಂಕವು ಜಾಗತಿಕ ಅರ್ಥ ವ್ಯವಸ್ಥೆಗೆ ಅಂದಾಜು 120 ಲಕ್ಷ ಕೋಟಿ ರು.ನಷ್ಟು ಹೊರೆ ಹಾಕಲಿದೆ ಎಂಬ ಲೆಕ್ಕಾಚಾರವಿದೆ. ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ನಂತರ ಟ್ರಂಪ್ ಅವರಿಗೆ ಹಲವು ಸವಾಲುಗಳಿದ್ದವು. ಅವುಗಳ ಪೈಕಿ ಕೆಲವು ಅನಿವಾರ್ಯ ಸವಾಲುಗಳಾದರೆ, ಮತ್ತೆ ಕೆಲವು ಅವರೇ ಸೃಷ್ಟಿಸಿಕೊಂಡಂಥವು. ವಲಸೆನೀತಿ ಮತ್ತು ಸುಂಕನೀತಿಗೆ ಸಂಬಂಧಿಸಿ ಅವರು ತಳೆದ ನಿಲುವುಗಳು ಈ ಪೈಕಿ ಎದ್ದು ಕಾಣುವಂಥವು ಎನ್ನಬೇಕು.

ಪ್ರಸ್ತುತ ಟ್ರಂಪ್ ಪ್ರತಿಪಾದಿಸಿರುವ ಸುಂಕನೀತಿಯು ಜಾಗತಿಕ ಮಟ್ಟದಲ್ಲಿ ಒಂದಿಷ್ಟು ತಳಮಳ ವನ್ನು ಹುಟ್ಟಿಸಿದ್ದರೂ, ಹಲವು ದೇಶಗಳು ಸ್ವಾವಲಂಬಿತನದ ಕಡೆಗೆ ಚಿಂತನೆ ನಡೆಸುವುದಕ್ಕೆ ಇದೊಂದು ಸದವಕಾಶ ಎನ್ನಲಡ್ಡಿಯಿಲ್ಲ. ಮೇಲೆ ಉಲ್ಲೇಖಿಸಿರುವಂತೆ, ಚೀನಾದ ಮೇಲೆ ಟ್ರಂಪ್ ಹೇರಿರುವ ಹೆಚ್ಚುವರಿ ಸುಂಕದ ಪ್ರಮಾಣ ಈಗಾಗಲೇ ಶೇ.145ರ ಮಟ್ಟವನ್ನು ಮುಟ್ಟಿದೆ.

ಇದಕ್ಕೂ ಮೊದಲು ಟ್ರಂಪ್ ಸದರಿ ಸುಂಕದ ಮಟ್ಟವನ್ನು ಹಂತಹಂತವಾಗಿ ಏರಿಸುತ್ತಲೇ ಹೋದಾಗ ಚೀನಾ, “ಇದಕ್ಕೆ ನಾವು ಹೆದರುವುದಿಲ್ಲ, ಇದು ಅಮೆರಿಕದ ಬ್ಲ್ಯಾಕ್‌ಮೇಲ್ ತಂತ್ರ" ಎಂದಿತ್ತು. ಈ ಮಾತಿಗೆ ಪ್ರತಿಯಾಗಿ ಚೀನಾದ ಮೇಲಿನ ಸುಂಕದ ಮಟ್ಟ ಏರುತ್ತಲೇ ಹೋದಾಗ, “ನಮ್ಮ ಹಕ್ಕುಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳುತ್ತೇವೆ. ಮಾರುಕಟ್ಟೆಗಳಲ್ಲಿನ ಇಂಥ ಅತಿರೇಕದ ಕ್ರಮಗಳನ್ನು ಎದುರಿಸಲು ಹಾಗೂ ಅಂತಾರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಯನ್ನು ರಕ್ಷಿಸಲು ಮೈತ್ರಿಕೂಟವೊಂದನ್ನು ರಚಿಸುವ ಆಲೋಚನೆ ನಮಗಿದೆ" ಎಂದು ಚೀನಾ ಹೇಳಿಕೊಂಡಿತ್ತು ಎಂಬುದನ್ನಿಲ್ಲಿ ಸ್ಮರಿಸಬಹುದು.

ಅಮೆರಿಕದ ದೇಶೀಯ ಉದ್ಯಮಕ್ಕೆ ಆದ್ಯತೆ, ಆರ್ಥಿಕತೆಯ ಹಿತರಕ್ಷಣೆ ಮತ್ತು ನೌಕರಿ ಸೃಷ್ಟಿಯ ಅನಿವಾರ್ಯತೆ ಮುಂತಾದ ಸಬೂಬುಗಳನ್ನು ಹೇಳಿ ಟ್ರಂಪ್ ಅವರು ವಿಶ್ವದ ಅನೇಕ ದೇಶಗಳ ಮೇಲೆ ಹೀಗೊಂದು ಭಾರಿ ಸುಂಕ ಹೇರಿಕೆಯ ಘೋಷಣೆಗೆ ಮುಂದಾಗಿದ್ದು ಎಂಬುದನ್ನು ಗಮನಿಸ ಬೇಕು. ಇದರಿಂದಾಗಿ, ವಿಶ್ವದ ವಿವಿಧ ದೇಶಗಳಂತೆ ಭಾರತಕ್ಕೂ ಒಂದು ಮಟ್ಟದಲ್ಲಿ ಬಿಸಿ ತಟ್ಟಲಿದೆ. ಸುಂಕ ಹೇರಿಕೆಯಿಂದಾಗಿ ವಿಶ್ವದೆಲ್ಲೆಡೆಯ ಷೇರುಪೇಟೆಗಳಲ್ಲಿ ಭಾರಿ ಕದಲಿಕೆ ಉಂಟಾಗಿದೆ ಯಾದರೂ, ಸುಂಕ ಹೇರಿಕೆಯ ರದ್ದತಿಗೆ ಟ್ರಂಪ್ ನಿರಾಕರಿಸಿದ್ದಾರೆ.

ಅವರೀಗ ಸದ್ಯಕ್ಕೆ ನೀಡಿರುವ 90 ದಿನಗಳ ಗಡುವು ತಾತ್ಕಾಲಿಕ ವಿರಾಮವಷ್ಟೇ. ಬೇಕಿದ್ದರೆ ಇದನ್ನು ‘ಸುಂಕ ವಿರಾಮ’ ಎಂದು ಕರೆದುಕೊಳ್ಳಬಹುದು! ಸುಮಾರು 180 ರಾಷ್ಟ್ರಗಳ ಮೇಲೆ ಅಮೆರಿಕ ಹೇರಿರುವ ಸುಂಕವನ್ನು ಅವಲೋಕಿಸಿದಾಗ ‘ಸ್ತರ’ದ ಆಧಾರದಲ್ಲಿ ಭಾರತವು 10ನೇ ಸ್ಥಾನದಲ್ಲಿದ್ದು, ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಟ್ರಂಪ್ ಶೇ.26ರಷ್ಟು ಹೊರೆಯನ್ನು ಹೇರಿದ್ದಾರೆ.

‘ಭಾರತವನ್ನು ಮಣಿಸುವುದು ಕಠಿಣ’ ಎಂಬ ಮಾತು ಟ್ರಂಪ್‌ರಿಂದ ಹೊಮ್ಮಿರುವುದುಂಟು; ಇದಕ್ಕೆ ಕಾರಣ, ಅಮೆರಿಕ ತನ್ನ ನಿತ್ಯೋಪಯೋಗಿ ವಸ್ತುಗಳಿಗೆ ಭಾರತವನ್ನು ಅವಲಂಬಿಸಿರುವುದು ಹಾಗೂ ಟ್ರಂಪ್ ಒಬ್ಬ ನಿಪುಣ ವ್ಯಾಪಾರಸ್ಥರಾಗಿರುವುದು. ಅಮೆರಿಕದ ಮಾಹಿತಿ ತಂತ್ರಜ್ಞಾನ (ಐಟಿ) ವಲಯವು ಭಾರತವನ್ನು ಅವಲಂಬಿಸಿರುವುದನ್ನು ಬಿಡಿಸಿ ಹೇಳಬೇಕಿಲ್ಲ.

ತಮ್ಮ ಮೇಲೆ ಹೇರಿರುವ ಸುಂಕದ ಹೊರೆಯನ್ನು ತಗ್ಗಿಸಿ ಅಂತ ಸುಮಾರು 50 ರಾಷ್ಟ್ರಗಳು ಟ್ರಂಪ್ ಆಡಳಿತದ ಜತೆಗೆ ಮಾತುಕತೆ ಆರಂಭಿಸಿವೆ; ತಮ್ಮ ಸುಂಕಹೇರಿಕೆಯ ಕ್ರಮದಿಂದಾಗಿ ಅಮೆರಿಕದ ಬೊಕ್ಕಸಕ್ಕೆ ಬೆಂಕಿ ಬೀಳಬಹುದೆಂಬ ಭೀತಿಯಿಂದಾಗಿಯೇ ಟ್ರಂಪ್ 75 ದೇಶಗಳ ಮೇಲೆ ಹೇರಿದ್ದ ಹೊರೆಗೆ 90 ದಿನಗಳ ಮಟ್ಟಿಗೆ ವಿರಾಮ ನೀಡಿದ್ದಾರೆ ಎನ್ನಲಾಗುತ್ತಿದೆ.

ಮುಂದಾಗಬಹುದಾದ ಆರ್ಥಿಕ ಅನಾಹುತಗಳನ್ನು ಮುನ್ನಂದಾಜಿಸಿ ಅಮೆರಿಕದ ಹಣಕಾಸು ಇಲಾಖೆಯು ನೀಡಿದ ಎಚ್ಚರಿಕೆಯೂ ಇದಕ್ಕೊಂದು ಕಾರಣವಾಗಿದೆ. ಡೊನಾಲ್ಡ್ ಟ್ರಂಪ್ ಅಥವಾ ಅಮೆರಿಕ ದೇಶ ಜಗತ್ತನ್ನು ಬಿಟ್ಟು ಬಾಳಲು ಸಾಧ್ಯವಿಲ್ಲ. ಹೀಗಾಗಿ, ಮತ್ತೊಂದು ದೇಶದ ಮೇಲೆ ಹೇರುವ ಸುಂಕವು ತನಗೇ ತಿರುಗುಬಾಣವಾಗಲಿದೆ ಎಂಬುದನ್ನು ಮನಗಂಡು ಈ ಅವೈಜ್ಞಾನಿಕ ನೀತಿಯನ್ನು ಅವರು ಹಿಂಪಡೆಯಬೇಕು.

ಒಂದೊಮ್ಮೆ ಹಾಗಾಗದಿದ್ದರೆ, ಅಮೆರಿಕ ಸೇರಿದಂತೆ ವಿಶ್ವದ ಪ್ರಮುಖ ದೇಶಗಳು ಆರ್ಥಿಕ ಹಿಂಜರಿತಕ್ಕೆ ತುತ್ತಾಗಬೇಕಾಗುತ್ತದೆ ಹಾಗೂ ಬಡದೇಶಗಳ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಹೀಗಾಗಿ ಈ ಬಿಕ್ಕಟ್ಟಿಗೆ ಶೀಘ್ರ ಪರಿಹಾರದ ಅಗತ್ಯವಿದೆ, ಆ ನಿಟ್ಟಿನಲ್ಲಿ ಅಮೆರಿಕ ಹೆಜ್ಜೆಯಿಡಬೇಕಿದೆ. ಒಂದು ವೇಳೆ ಸುಂಕ ಸಮರವು ಮುಂದುವರಿದರೆ, ವಿಶ್ವ ವ್ಯಾಪಾರದ ಸಂಬಂಧದಲ್ಲಿ ಚಾಲ್ತಿಯಲ್ಲಿ ರುವ ಪದ್ಧತಿಗಳಲ್ಲಿ ಬಹಳಷ್ಟು ಬದಲಾವಣೆಗಳಾಗಲಿವೆ.

ಮುಖ್ಯವಾಗಿ ವಿವಿಧ ದೇಶಗಳು ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಗಳನ್ನು ಹೆಚ್ಚಾಗಿ ನೆಚ್ಚಿಕೊಳ್ಳ ಬೇಕಾಗಿ ಬರಬಹುದು. ಪ್ರತಿ ದೇಶಕ್ಕೂ ತನ್ನ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವುದು ಆದ್ಯತೆಯ ವಿಷಯವಾಗುತ್ತದೆ, ಹೀಗಾಗಿ ಅದಕ್ಕೆ ಅಗತ್ಯವಾದ ಮಾರ್ಗಗಳನ್ನು ಅನುಸರಿಸುವುದು ಅನಿವಾರ್ಯ ವಾಗಿ ಪರಿಣಮಿಸುತ್ತದೆ.

(ಲೇಖಕರು ವಿಜಯ ಬ್ಯಾಂಕ್‌ನ ನಿವೃತ್ತ ಮುಖ್ಯ ಪ್ರಬಂಧಕರು)