ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heart Attack: ನಿಲ್ಲದ ಹೃದಯಾಘಾತ ಸಾವಿನ ಸರಣಿ, ನಿನ್ನೆ ಒಂದೇ ದಿನ 8 ಮಂದಿ ಸಾವು

ರಾಜ್ಯದಲ್ಲಿ ಹೃದಯಾಘಾತದಿಂದ (Heart Attack) ಸಾವಿಗೀಡಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮೊನ್ನೆ ಆರು ಜನ ಮೃತಪಟ್ಟಿದ್ದರೆ, ನಿನ್ನೆ ಒಂದೇ ದಿನ ಕರ್ನಾಟಕದಲ್ಲಿ ಹೃದಯಾಘಾತದಿಂದ 8 ಮಂದಿ ಮೃತಪಟ್ಟಿದ್ದಾರೆ. ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಇಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ನಿಲ್ಲದ ಹೃದಯಾಘಾತ ಸಾವಿನ ಸರಣಿ, ನಿನ್ನೆ ಒಂದೇ ದಿನ 8 ಮಂದಿ ಸಾವು

-

ಹರೀಶ್‌ ಕೇರ ಹರೀಶ್‌ ಕೇರ Jul 7, 2025 6:30 AM

ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತದಿಂದ (Heart Attack) ಸಾವಿಗೀಡಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ನಿನ್ನೆ ಒಂದೇ ದಿನ ಕರ್ನಾಟಕದಲ್ಲಿ ಹೃದಯಾಘಾತದಿಂದ 8 ಮಂದಿ ಮೃತಪಟ್ಟಿದ್ದಾರೆ. ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಇಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕೊಂಗಲಬೀಡು ಗ್ರಾಮದ ಆನಂದ್ (44) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆನಂದ್​ ಐಚನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿದ್ದರು. ಶನಿವಾರ ರಾತ್ರಿ ಮನೆಯಲ್ಲಿ ಮಲಗಿದ್ದ ಆನಂದ್​ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಪತ್ನಿ ಬಳಿ ಎದೆ ನೋವುತ್ತಿದೆ ಎಂದು ಹೇಳಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಟೋ ಕರೆತರುವಷ್ಟರಲ್ಲಿ ಆನಂದ್​ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ 37 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಹಾಸನದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಕಾರಿನಲ್ಲಿ ತೆರಳುತ್ತಿದ್ದ ರಂಗನಾಥ್ (57) ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಂಗನಾಥ್​ ಅವರು ಕುಟುಂಬ ಸಮೇತ ಮಂಗಳೂರಿಗೆ ಪ್ರವಾಸಕ್ಕೆಂದು ಹೋಗಿದ್ದರು. ರವಿವಾರ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ಹಿಂದಿರುಗುತ್ತಿದ್ದರು. ರಂಗನಾಥ್​ ಅವರ ಪುತ್ರಿ ಕಾರು ಚಲಾಯಿಸುತ್ತಿದ್ದರು.

ಕಾರು ಹಾಸನ ಜಿಲ್ಲಾಧಿಕಾರಿ ಕಚೇರಿ ಸಮೀಪ ಬರುತ್ತಿದ್ದಂತೆ ರಂಗನಾಥ್‌ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಆದ್ದರಿಂದ, ರಂಗನಾಥ್​ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಂಗನಾಥ್​ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಹಿಮ್ಸ್ ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ. ಮೃತ ರಂಗನಾಥ್ ಅವರು ಬೆಂಗಳೂರಿನ ಜಯನಗರದ‌ ನಿವಾಸಿಯಾಗಿದ್ದಾರೆ.

ಯಾದಗಿರಿ ತಾಲೂಕಿನ ಶೆಟ್ಟಿಕೇರಾ ಗ್ರಾಮದ ಹಳ್ಳೆಪ್ಪ ಪೂಜಾರಿ (44) ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೊಹರಂ ಅಗ್ನಿಕುಂಡ ತುಳಿದ ಕೆಲವೇ ಗಂಟೆಗಳಲ್ಲಿ ಹಳ್ಳೆಪ್ಪ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಮಹಿಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಜೀರಮ್ಮ (53) ಮೃತ ದುರ್ದೈವಿ. ಕಿಮ್ಸ್​​ನಲ್ಲಿ ಆಯಾ ಆಗಿ ಕೆಲಸ ನಿರ್ವಹಿಸುತ್ತಿದ್ದ ನಜೀರಮ್ಮ ಇಂದು ಬೆಳಗ್ಗೆ ಆಸ್ಪತ್ರೆಯಲ್ಲೇ ಏಕಾಏಕಿ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಚಾಮರಾಜನಗರ ರಾಮಸಮುದ್ರ ಹೌಸಿಂಗ್‌ಬೋರ್ಡ್ ಕಾಲೋನಿ ನಿವಾಸಿ ಶಿವಕುಮಾರ್‌ (52) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಶಿವಕುಮಾರ್ ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಇಸಿಜಿ ಮಾಡುವಷ್ಟರಲ್ಲಿ ಶಿವಕುಮಾರ್ ಕೊನೆಯುಸಿರು ಎಳೆದಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಗ್ರಾಮದ ಯೋಧ ಗಂಗಾಧರಪ್ಪ (54) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಯೋಧ ಗಂಗಾಧರಪ್ಪ ಅವರು ಪಶ್ಚಿಮ ಬಂಗಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಯೋಧ ಗಂಗಾಧರಪ್ಪ ಇಂಡೋ ಟಿಬೇಟಿಯನ್ ಬಾರ್ಡರ್ ಫೋರ್ಸ್​ನಲ್ಲಿ ಹವಾಲ್ದಾರ್ ಆಗಿದ್ದರು. ಶನಿವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತೊಂಡೇಬಾವಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ದಿನ ಹೃದಯಾಘಾತಕ್ಕೆ ಇಬ್ಬರು ಮೃತಪಟ್ಟಿದ್ದಾರೆ. ಮೂಡಿಗೆರೆ ತಾಲೂಕಿನ ಬೆಳಗೋಡು ಗ್ರಾಮದ ಮೀನಾಕ್ಷಿ (29) ಮತ್ತು ಬಿ.ಹೊಸಳ್ಳಿ ಗ್ರಾಮದ ಸುಮಿತ್ರೆಗೌಡ (75) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೀನಾಕ್ಷಿ ಅವರಿಗೆ ಕಾರಿನಲ್ಲೇ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದಾರೆ. ವೃದ್ಧ ಸುಮಿತ್ರೆಗೌಡ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.