Jailer 2 Movie: ರಜನಿಕಾಂತ್ ಅಭಿನಯದ ʼಜೈಲರ್ 2ʼ ಚಿತ್ರಕ್ಕೆ ಸ್ಟಾರ್ ನಟಿ ಎಂಟ್ರಿ
Rajinikanth: ಭಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ ರಜನಿಕಾಂತ್ ನಟನೆಯ ʼಕೂಲಿʼ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಅವರ ಮುಂಬರುವ ʼಜೈಲರ್ 2ʼ ಚಿತ್ರದ ಮೇಲೆ ನಿರೀಕ್ಷೆ ಮೂಡಿದೆ. ಇದೀಗ ಚಿತ್ರಕ್ಕೆ ಬಾಲಿವುಡ್‌ನ ಸ್ಟಾರ್ ನಟಿಯೊಬ್ಬರ ಎಂಟ್ರಿಯಾಗಿದೆ.
ರಜನಿಕಾಂತ್ ಚಿತ್ರಕ್ಕೆ ಬಾಲಿವುಡ್ ಸ್ಟಾರ್ ನಟಿ ಆಯ್ಕೆ -
Ramesh B
Oct 27, 2025 4:56 PM
ಚೆನ್ನೈ, ಅ. 27: ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಸದ್ಯ ʼಜೈಲರ್ 2ʼ ಚಿತ್ರದಲ್ಲಿ (Jailer 2 Movie) ಅಭಿನಯಿಸುತ್ತಿದ್ದಾರೆ. 2023ರಲ್ಲಿ ತೆರೆಕಂಡ ʼಜೈಲರ್ʼ ಚಿತ್ರದ ಸೀಕ್ವೆಲ್ ಇದಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿದೆ. ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಚಿತ್ರೀಕರಣ ನಡೆದಿದ್ದು, ಈಗ ಚೆನ್ನೈಯಲ್ಲಿ ಮುಂದುವರಿದಿದೆ. ನೆಲ್ಸನ್ ದಿಲೀಪ್‌ಕುಮಾರ್ (Nelson Dilipkumar) ನಿರ್ದೇಶನದ ಈ ಚಿತ್ರಕ್ಕೆ ಇದೀಗ ಬಾಲಿವುಡ್ ಸ್ಟಾರ್ ನಟಿಯೊಬ್ಬರ ಎಂಟ್ರಿಯಾಗಿದೆ. ಇದುವರೆಗೆ ಸಿನಿಮಾದ ನಾಯಕಿಯನ್ನು ಚಿತ್ರತಂಡ ಘೋಷಿಸಿರಲಿಲ್ಲ. ಇದೀಗ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ನಟಿಯೊಬ್ಬರಿಗೆ ಮಣೆ ಹಾಕಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸದ್ಯ ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಹೊರ ಬಿದ್ದಿಲ್ಲ. ಹಾಗಾದರೆ ಯಾರು ಆ ನಟಿ?
ಮೂಲಗಳ ಪ್ರಕಾರ ಬಾಲಿವುಡ್‌ನಲ್ಲಿ ನಾಯಕಿ ಪ್ರಧಾನ ಚಿತ್ರಗಳಿಗೆ ಹೊಸ ಭಾಷ್ಯ ಬರೆದ ವಿದ್ಯಾ ಬಾಲನ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದು, ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡ ವಿದ್ಯಾ ಬಾಲನ್ ಇದೀಗ ರಜನಿಕಾಂತ್ ಚಿತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ.
ವಿದ್ಯಾ ಬಾಲನ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: Vidya Balan: ಅಕ್ಷಯ್‌ನಿಂದ ನನ್ನನ್ನು ರಕ್ಷಿಸಿದ್ದೇ ಜಾನ್ ಅಬ್ರಹಾಂ; ಸಿನಿಮಾ ಸೆಟ್‌ನಲ್ಲಿ ನಡೆದ ಘಟನೆ ನೆನಪಿಸಿಕೊಂಡ ವಿದ್ಯಾ ಬಾಲನ್
2ನೇ ತಮಿಳು ಚಿತ್ರ
ಹಾಗೆ ನೋಡಿದರೆ ವಿದ್ಯಾ ಬಾಲನ್ ಈ ಹಿಂದೆಯೂ ಕಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2019ರಲ್ಲಿ ತೆರೆಕಂಡ ಅಜಿತ್ ನಟನೆಯ ʼನೇರ್ಕೊಂಡ ಪರವೈʼ ಸಿನಿಮಾದಲ್ಲಿ ವಿದ್ಯಾ ಬಾಲನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಎಲ್ಲವೂ ಅಂದುಕೊಂಡಂತಾದರೆ ʼಜೈಲರ್ 2ʼ ಮೂಲಕ ತಮಿಳಿನಲ್ಲಿ ಮೊದಲ ಬಾರಿ ಪೂರ್ಣ ಪ್ರಮಾಣದ ಪಾತ್ರದಲ್ಲಿ ನಟಿಸಲಿದ್ದಾರೆ. ವಿಶೇಷ ಎಂದರೆ ಅವರು ನಾಯಕಿಯಲ್ಲ, ಬದಲಾಗಿ ವಿಲನ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಪ್ರಮುಖ ಪಾತ್ರ ಇದಾಗಿದ್ದು, ಚಿತ್ರದುದ್ದಕ್ಕೂ ಸಾಗಲಿದೆ ಎನ್ನಲಾಗಿದೆ.
ಸಿನಿಮಾದ ಮುಖ್ಯ ವಿಲನ್ ಮಿಥುನ್ ಚಕ್ರವರ್ತಿ ಮಗಳ ಪಾತ್ರದಲ್ಲಿ ವಿದ್ಯಾ ನಟಿಸಲಿದ್ದು, ಆ ಮೂಲಕ ರಜನಿಕಾಂತ್ ವಿರುದ್ಧ ತೊಡೆ ತಟ್ಟಲಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. ʼʼಮಿಥುನ್ ಚಕ್ರವರ್ತಿ ಅವರ ಹಿರಿ ಮಗಳ ಪಾತ್ರದಲ್ಲಿ ವಿದ್ಯಾ ಕಾಣಿಸಿಕೊಳ್ಳಲಿದ್ದು, ರಜನಿಕಾಂತ್ ವಿರುದ್ಧ ಇವರು ಹೋರಾಡಲಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ.
ವಿದ್ಯಾ ಪಾತ್ರಕ್ಕೆ ಸಾಕಷ್ಟು ಭಾವನಾತ್ಮಕ ಮತ್ತು ಆ್ಯಕ್ಷನ್ ಆಯಾಮ ಇರಲಿದೆ. ಮೂಲಗಳ ಪ್ರಕಾರ ಈಗಾಗಲೇ ಚೆನ್ನೈಯಲ್ಲಿ ರಜನಿಕಾಂತ್, ವಿದ್ಯಾ ಬಾಲನ್ ಮತ್ತು ಮಿಥುನ್ ಅವರ ಭಾಗದ ಚಿತ್ರೀಕರಣ ನಡೆಯುತ್ತಿದೆ. ಚಿತ್ರ ಮುಂದಿನ ವರ್ಷ ತೆರೆ ಕಾಣುವ ಸಾಧ್ಯತೆ ಇದೆ.
ಶ್ರೀನಿಧಿ ನಟಿಸ್ತಾರಾ?
ಕೆಲವು ದಿನಗಳ ಹಿಂದೆ 'ಜೈಲರ್ 2' ಸಿನಿಮಾದಲ್ಲಿ 'ಕೆಜಿಎಫ್' ಬೆಡಗಿ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ರಜನಿಕಾಂತ್ ಮಗಳ ಪಾತ್ರದಲ್ಲಿ ಅವರು ಕಾಣಿಸಿಕೊಳ್ಲಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ.
ಗೆಲುವಿನ ನಿರೀಕ್ಷೆಯಲ್ಲಿ ರಜನಿಕಾಂತ್
ಕೆಲವು ದಿನಗಳ ಹಿಂದೆ ರಜನಿಕಾಂತ್ ನಟನೆಯ ʼಕೂಲಿʼ ಚಿತ್ರ ತೆರೆ ಕಂಡಿತ್ತು. ಆದರೆ ಈ ಚಿತ್ರ ನಿರೀಕ್ಷಿತ ಮಟ್ಟಕ್ಕೆ ತಲುಪಿಲ್ಲ. ಹೀಗಾಗಿ ʼಜೈಲರ್ 2ʼ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇದೆ.