ಶತಮಾನೋತ್ಸವದ ಅಂಚಿನಲ್ಲಿ ಹೆಚ್.ಎನ್.ಓದಿದ ಹೊಸೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ
ವಿದ್ಯಾರ್ಥಿ ಹೆಚ್.ಎನ್.ಅವರಿಗೆ ಕೂಡ 105 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಎರಡನ್ನೂ ಸೇರಿಸಿ ಶಾಲೆಯ ಶತಮಾನೋತ್ಸವ ಹಾಗೂ ಪದ್ಮಭೂಷಣ ಡಾ.ಹೆಚ್.ಎನ್.ಅವರ ಜನ್ಮಶತಮಾನೋತ್ಸವ ಆಚರಿಸುವ ಮೂಲಕ ಹುಟ್ಟೂರು ಗೌರವ ನಮನ ಸಲ್ಲಿಸುತ್ತಿರುವುದು ವಿಶೇಷಗಳಲ್ಲಿ ವಿಶೇಷ
ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯಷ್ಟೇ ಅಲ್ಲದೆ ನಾಡಿನ ಹೆಮ್ಮೆಯ ಗಾಂಧಿವಾದಿ ಶಿಕ್ಷಣ ತಜ್ಞ ಹೆಚ್.ನರಸಿಂಹಯ್ಯ ಅವರ ಸ್ವಗ್ರಾಮ ಹೊಸೂರಿನಲ್ಲಿಂದು ಹಬ್ಬದ ಸಂಭ್ರಮ.ಮುಖ್ಯಮAತ್ರಿಗಳ ಸಮ್ಮುಖದಲ್ಲಿ ಶಾಲೆಯ ಶತಮಾನೋತ್ಸವ ಹಾಗೂ ಹೆಚ್.ಎನ್.ಅವರ ಜನ್ಮಶತಮಾನೋತ್ಸವ ದಲ್ಲಿ ಭಾಗಿಯಾಗುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಪ್ಪಟ ಗಾಂಧಿವಾದಿಗೆ ನುಡಿತೋರಣ ಕಟ್ಟಲಿದ್ದಾರೆ.
ಹೌದು ಹೆಚ್.ನರಸಿಂಹಯ್ಯ ಅವರು ಓದಿರುವ ಹೊಸೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಇದೇ ೨೦೨೫ಕ್ಕೆ ೧೦೦ ವರ್ಷದ ತುಂಬಿದೆ. ಇಲ್ಲಿನ ವಿದ್ಯಾರ್ಥಿ ಹೆಚ್.ಎನ್.ಅವರಿಗೆ ಕೂಡ 105 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಎರಡನ್ನೂ ಸೇರಿಸಿ ಶಾಲೆಯ ಶತಮಾನೋತ್ಸವ ಹಾಗೂ ಪದ್ಮಭೂಷಣ ಡಾ.ಹೆಚ್.ಎನ್.ಅವರ ಜನ್ಮಶತಮಾನೋತ್ಸವ ಆಚರಿಸುವ ಮೂಲಕ ಹುಟ್ಟೂರು ಗೌರವ ನಮನ ಸಲ್ಲಿಸುತ್ತಿರುವುದು ವಿಶೇಷಗಳಲ್ಲಿ ವಿಶೇಷ.
ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದ ಹೆಚ್.ನರಸಿಂಹಯ್ಯ ಅಪ್ಪಟ ಗಾಂಧೀವಾದಿ.ಕನ್ನಡ ನಾಡಿನ ಸಾಮಾಜಿಕ ಶೈಕ್ಷಣಿಕ ವೈಚಾರಿಕ ವಲಯಕ್ಕೆ ಸದಾ ಚಿರಪರಿಚಿತರು.ಕಡು ಬಡತನದಲ್ಲಿ ಹುಟ್ಟಿ ಬೆಳೆ ದರೂ ಸಾಧಿಸುವ ಛಲ ಮತ್ತು ಅವಿರತ ಹೋರಾಟ ಸಾಧನೆಗಳ ಮೂಲಕವೇ ಮನೆಮಾತಾಗಿದ್ದು ಇಂದಿಗೆ ಇತಿಹಾಸ.
ಫೆ.೨೦ ೧೯೨೦ರಲ್ಲಿ ಗೌರಿಬಿದನೂರು ತಾಲೂಕು ಹೊಸೂರು ಗ್ರಾಮದಲ್ಲಿ ಹುಟ್ಟಿದ ಹೆಚ್.ಎನ್ ಅವರಿಗೆ ೨೦೨೫ಕ್ಕೆ ಶತಮಾನೋತ್ಸವ ಸಂಭ್ರಮ,ಅAತೆಯೇ ಅವರು ಓದಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೂ ಕೂಡ ಸಾರ್ಥಕವಾದ ೧೦೦ ವರ್ಷಗಳ ಸಂಭ್ರಮ. ಶಿಕ್ಷಣದಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ನಂಬಿದ್ದ ಹೆಚ್.ಎನ್.ನ್ಯಾಷನಲ್ ಕಾಲೇಜು ಸಂಸ್ಥೆ ವತಿಯಿಂದಲೇ ೧೧ ಶಾಲಾ ಕಾಲೇಜುಗಳನ್ನು ನಡೆಸಿದ ಕೀರ್ತಿವಂತರು.ಇದರಲ್ಲಿ ಗೌರಿಬಿದನೂರು ಬಾಗೇಪಲ್ಲಿಯಲ್ಲಿ ಎರಡು ಕಾಲೇಜು, ನಾಲ್ಕು ಪ್ರೌಢಶಾಲೆಗಳಿರುವುದು ನಮ್ಮ ಹೆಮ್ಮೆ.
ಸಮಾಜ ಸೇವೆ, ಶಿಕ್ಷಣ ಹಾಗೂ ವಿಜ್ಞಾನ ಅವರಿಗೆ ಪ್ರಿಯವಾದ ಕ್ಷೇತ್ರಗಳು.ಬಾಲ್ಯದಿಂದಲೂ ಖಾದಿ ಮತ್ತು ಸರಳ ಜೀವನವನ್ನು ಮೈಗೂಡಿಸಿಕೊಂಡವರು.ಗ್ರಾಮೀಣ ಭಾಗದ ದೀನ ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಇವರು ವಿದ್ಯಾರ್ಥಿ ದಿಸೆಯಿಂದಲೂ ಸಮಾಜ ಸೇವೆಗೆ ಸದಾ ಮುಂದು. ಕುಲದ ಬೆಂಬಲವೇ ಇಲ್ಲದ ಹೆಚ್.ಎನ್. ಬೆಂಗಳೂರು ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ಜ್ಞಾನ ಭಾರತಿ ಕಟ್ಟಿದ್ದು ಅವರಿಗಿದ್ದ ಸಾಮರ್ಥ್ಯದ ಪ್ರತೀಕ.ಈ ವೇಳೆ ಅತೀಂದ್ರಿಯ ಘಟನೆಗಳ ಸತ್ಯಶೋಧನೆಗಾಗಿ ತಮ್ಮ ಅಧ್ಯಕ್ಷತೆಯಲ್ಲಿಯೇ ಸತ್ಯಶೋಧನಾ ಸಮಿತಿ ರಚಿಸಿ ಮೌಢ್ಯತೆ ಹಾಗೂ ಕಪಟಗಳ ವಿರುದ್ಧ ಸಮರವನ್ನು ಸಾರಿದ್ದರು.
ವಿದ್ಯಾರ್ಥಿ ದೆಸೆಯಲ್ಲಿಯೇ ೧೯೪೨ರಲ್ಲಿ ಕ್ವಿಟ್‌ಇಂಡಿಯಾ ಚಳವಳಿಯಲ್ಲಿ ಭಾಗವಹಿಸುವ ಮೂಲಕ ಮಹಾತ್ಮಾಗಾಂಧೀಜಿ ಪ್ರಭಾವಕ್ಕೆ ಒಳಗಾಗಿ ಆನರ್ಸ್ಗೆ ವಿಧಾಯ ಹೇಳಿ ಬೆಂಗಳೂರಿನ ಸೆಂಟ್ರಲ್ ಜೈಲು, ಮೈಸೂರು,ಯರವಾಡ ಜೈಲುಗಳಲ್ಲಿ ಶಿಕ್ಷೆಗೆ ಗುರಿಯಾದರು.ಬೆಂಗಳೂರಿನಲ್ಲಿ ಓದುವಾಗ ವಾರಾನ್ನ ತಿಂದು ಶಿಕ್ಷಣ ಮುಂದುವರೆಸಿದ ಛಲಗಾರ.ಬೆಂಗಳೂರಿನ ರಾಮಕೃಷ್ಣ ಆಶ್ರಮದಲ್ಲಿ ಓದಿ ಗುರುಗಳ ಪ್ರೀತಿಪಾತ್ರರಾದ ಪುಸ್ತಕಪ್ರೇಮಿ.ಪ್ರಶ್ನಿಸದೇ ಯಾವುದನ್ನೂ ಒಪ್ಪಬೇಡಿ ಎನ್ನುವ ಮೂಲಕ ವೈಜ್ಞಾನಿಕತೆ, ವಿಚಾರವಾದಕ್ಕೆ ದೊಡ್ಡ ಶಕ್ತಿಯಾಗಿದ್ದವರು.
ಪುಟ್ಟಪರ್ತಿಯ ಸತ್ಯಾಸಾಯಿಬಾಬಾ ಅವರನ್ನು ನೀವು ಪವಾಡಪುರುಷರೇ ಆಗಿದ್ದಲ್ಲಿ ಕುಂಬಳ ಕಾಯಿ ಸೃಷ್ಟಿಸಿ ಕೊಡುವಂತೆ ಕೇಳಿದ್ದು,ಪರ್ಜನ್ಯ ಜಪದ ಖ್ಯಾತಿಯ ಶಿಬಾಲಯೋಗಿಗಳ ಜತೆಗೆ ನಡೆಸಿದ ತಾತ್ವಿಕ ಸಂಘರ್ಷಗಳು,ಹೆಚ್.ಎನ್.ಅವರಿಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮನ್ನಣೆ ತಂದುಕೊಟ್ಟವು. ಅಲ್ಲದೆ ಅಮೆರಿಕಾದಲ್ಲಿರುವ ಅತೀಂದ್ರಿಯ ಘಟನೆಗಳ ವೈಜ್ಞಾನಿಕ ವಿಶ್ಲೇಷಣೆಗಾಗಿ ಇರುವ ಅಂತರಾಷ್ಟಿçÃಯ ಸಮಿತಿ ಸದಸ್ಯತ್ವ ಪಡೆದ ಮೊದಲ ಭಾರತೀಯರೆನಿಸಿದ್ದರು.
ಆಂಗ್ಲ ವ್ಯಾಮೋಹವಿರುವ ಬೆಂಗಳೂರಿನ ಬಸವನಗುಡಿ,ವಿ.ವಿ.ಪುರಂ ಶಂಕರ ಮಠಗಳು ಕೂಡುವ ಸಂಗಮ ಸ್ಥಳದಲ್ಲಿ ಕನ್ನಡ ಶಾಲೆಯನ್ನು ತೆರೆದು ತಮ್ಮ ಜೀವಿತಾವಧಿಯುದ್ದಕ್ಕೂ ಯಶಸ್ವಿಯಾಗಿ ನಡೆಸಿಕೊಂಡು ಬರುವ ಮೂಲಕ ಮಾತೃಭಾಷಾ ಪ್ರೇಮ ಮೆರೆದಿದ್ದು ಸಾಮಾನ್ಯ ಸಂಗತಿಯಲ್ಲ. ವಿಜ್ಞಾನವನ್ನು ಜನಪ್ರಿಯಗೊಳಿಸಲು, ವೈಚಾರಿಕ ಮನೋಭಾವನೆಯನ್ನು ಸಾರ್ವಜನಿಕರ ಬದುಕಿನ ಭಾಗವಾಗಿಸಲು ಬೆಂಗಳೂರು ಸೈನ್ಸ್ ಪೋರಂ ಕಟ್ಟಿ, ಈ ಮೂಲಕ 1400ಕ್ಕೂ ಹೆಚ್ಚು ಯಶಸ್ವೀ ಉಪನ್ಯಾಸ ಮಾಲಿಕೆ ನಡೆಸಿಕೊಟ್ಟು, ಹಲವು ಪುಸ್ತಕ ಪ್ರಕಟಣೆ ಮಾಡಿಸಿದ್ದರು.ಇಂತಹ ಹೆಚ್.ಎನ್. ಕರ್ನಾಟಕ ವಿಧಾನಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
1995-96ರವರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಡಿದ ಸೇವೆ ಸ್ಮರಣೀಯ ವಾದದ್ದು. ಭೌತಶಾಸ್ತ್ರದ ಪ್ರಾಧ್ಯಾಪಕರಾದರೂ ವಿನೋದ ಪ್ರಿಯರಾಗಿದ್ದರು. ವಿಜ್ಞಾನ ಮತ್ತು ವೈಚಾರಿಕತೆ ಸಂಬಂಧ ಅನೇಕ ಲೇಖನಗಳನ್ನು ಬರೆದಿದ್ದು ಹಲವು ವಿಶ್ವವಿದ್ಯಾಲಯಗಳಲ್ಲಿ ಪಠ್ಯ ವಾಗಿವೆ.
ಪದವಿ ಪ್ರಶಸ್ತಿಗಳ ಬೆನ್ನತ್ತಿ ಹೋಗದ ಹೆಚ್.ಎನ್‌ರನ್ನು ಅರಸಿಕೊಂಡು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ತಾಮ್ರಪತ್ರ, ಕೇಂದ್ರ ಸರಕಾರದ ಪದ್ಮಭೂಷಣ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಹಂಪೆಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿಗಳೇ ತಮ್ಮ ಅವಿರತ ಹೋರಾಟ,ಸರಳತೆ ಸಜ್ಜನಿಕೆಯ ಹೋರಾಟಕ್ಕೆ ಹಿಡಿದ ಕನ್ನಡಿ ಯಾಗಿವೆ.
ನಮ್ಮ ಜಿಲ್ಲೆಯ ಅನರ್ಘ್ಯ ರತ್ನವಾಗಿರುವ ಹೆಚ್.ನರಸಿಂಹಯ್ಯ ಅವರು 84 ವರ್ಷಗಳ ಕಾಲ ಬ್ರಹ್ಮಚಾರಿಯಾಗಿಯೇ ಜೀವಿಸಿ 2015ರಲ್ಲಿ ಇಹಲೋಕ ತ್ಯಜಿಸಿ ಹುಟ್ಟೂರಿನ ಅಮರಧಾಮದಲ್ಲಿ ಐಕ್ಯರಾಗಿದ್ದಾರೆ.
ಅಧ್ಯಾಪಕ ಆಡಳಿತಗಾರ, ಸ್ನೇಹಮಯಿ, ಮಾನವತಾವಾದಿ, ವಿಚಾರವಾದಿಯ ಜನ್ಮ ಶತಮಾನೋ ತ್ಸವಕ್ಕೆ ಹೊಸೂರು ಭಾಜನವಾಗಿದ್ದು ಮುಖ್ಯಮಂತ್ರಿಗಳ ಆಗಮನಕ್ಕೆ ಕಾಯುತ್ತಿದೆ. ಈ ಕಾರ್ಯ ಕ್ರಮ ಆಯೋಜಿಸಿರುವ ಹಳೆಯ ವಿದ್ಯಾರ್ಥಿಗಳ ಸಂಘ ಕಾರ್ಯಕ್ರಮದ ಯಶಸಿಗೆ ಹಗಲಿರುಳು ಶ್ರಮಿಸುತ್ತಿದ್ದು ಕಾರ್ಯಕ್ರಮ ಯಶಸ್ವಿಯಾಗಲಿ,ಬರಪೀಡಿತ ಜಿಲ್ಲೆಗೆ ಮುಖ್ಯಮಂತ್ರಿ ಗಳು ವಿಶೇಷ ಅನುದಾನ ನೀಡಿ ಇನ್ನಷ್ಟು ಬೆಳವಣಿಗೆ ಕಾಣುವಂತೆ ಮಾಡಲಿ ಎನ್ನುವುದೇ ಪತ್ರಿಕೆಯ ಸದಾಶಯ ವಾಗಿದೆ.