IND vs ENG: ಭಾರತಕ್ಕೆ ಓವಲ್‌ನಲ್ಲಿ ಗೆಲುವು ಒಲಿದರಷ್ಟೇ ಸರಣಿ ಸಮಬಲ
ರಿಷಭ್ ಪಂತ್ ಗಾಯಗೊಂಡು ಸರಣಿಯಿಂದ ಹೊರಬಿದ್ದ ಕಾರಣ ಅವರ ಬದಲಿಗೆ ಕೀಪರ್ ಅಗತ್ಯ. ಈ ಸ್ಥಾನಕ್ಕೆ ಧ್ರುವ್ ಜುರೆಲ್ ಆಯ್ಕೆಯಾಗುವುದು ಫಿಕ್ಸ್. ಮೂರನೇ ಮತ್ತು ನಾಲ್ಕನೇ ಪಂದ್ಯದಲ್ಲಿ ಪಂತ್ ಅನುಪಸ್ಥಿತಿಯಲ್ಲಿ ಜುರೆಲ್ ಉತ್ತಮ ಕೀಪಿಂಗ್ ನಡೆಸಿದ್ದರು.


ಲಂಡನ್: ಹಲವು ರೋಚಕತೆಗೆ ಸಾಕ್ಷಿಯಾಗಿದ್ದ ಭಾರತ-ಇಂಗ್ಲೆಂಡ್(IND vs ENG 5th Test) ತಂಡಗಳ ಟೆಸ್ಟ್ ಸರಣಿಗೆ ತೆರೆ ಬೀಳುವ ಹೊತ್ತು ಸಮೀಪಿಸಿದೆ. ಇತ್ತಂಡಗಳ ನಡುವಣ ಅಂತಿಮ ಟೆಸ್ಟ್ ಲಂಡನ್‌ನ ಐತಿಹಾಸಿಕ ಕೆನ್ನಿಂಗ್ಟನ್ ಓವಲ್(kennington oval) ಅಂಗಳದಲ್ಲಿ ಗುರುವಾರದಿಂದ ಆರಂಭವಾಗಲಿದ್ದು ದೊಡ್ಡ ಮಟ್ಟದ ಹಣಾಹಣಿ ನಡೆಯಲಿದೆ. ಸದ್ಯ ಇಂಗ್ಲೆಂಡ್ 2-1 ಮುನ್ನಡೆಯಲ್ಲಿದೆ. ಈ ಪಂದ್ಯವನ್ನು ಗೆದ್ದು ಸರಣಿಯನ್ನು 2-2 ಸಮಬಲಕ್ಕೆ ತರುವುದು ಗಿಲ್ ಬಳಗದ ಮುಂದಿರುವ ಸವಾಲು.
ಮ್ಯಾಂಚೆಸ್ಟರ್ ಟೆಸ್ಟ್ ಬಳಿಕ ಕೇವಲ ಮೂರು ದಿನಗಳ ವಿಶ್ರಾಂತಿಯಷ್ಟೇ ಪಡೆದಿರುವ ಕಾರಣ ಉಭಯ ತಂಡಗಳ ಆಟಗಾರರು ಮಾನಸಿಕ ಮತ್ತು ದೈಹಿಕ ಆಯಾಸದಿಂದ ಬಳಲುತ್ತಿದಾರೆ. ವಿಶೇಷ ವಾಗಿ ವೇಗದ ಬೌಲರ್‌ಗಳು. ಇಂಗ್ಲೆಂಡ್ ಎದುರು ಓವಲ್‌ನಲ್ಲಿ ಆಡಿದ 14 ಟೆಸ್ಟ್‌ಗಳಲ್ಲಿ ಭಾರತ ಕೇವಲ ಎರಡನ್ನು ಮಾತ್ರ ಗೆದ್ದಿದೆ. ಐದನ್ನು ಸೋತಿದೆ. ಭಾರತ ಇಲ್ಲಿ ಕೊನೆಯ ಬಾರಿಗೆ ಆಡಿದ್ದು ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್. ಆದರೆ ಭಾರತ ಸೋಲು ಕಂಡಿತ್ತು. ಕೊನೆಯ ಬಾರಿಗೆ ಜಯಿಸಿದ್ದು 2021ರಲ್ಲಿ. ಕೊಹ್ಲಿ ನಾಯಕತ್ವದಲ್ಲಿ ಈ ಗೆಲುವು ಬಂದಿತ್ತು.
ಕೆಲವು ಜಟಿಲ ಆಯ್ಕೆಗಳು
ಭಾರತ ಅಂತಿಮ ಹನ್ನೊಂದರ ಆಯ್ಕೆ ವೇಳೆ ಒಂದೆರಡು ವಿಭಾಗಗಳಲ್ಲಿ ಹೆಚ್ಚು ಯೋಚಿಸಬೇಕಾಗುತ್ತದೆ. ಈ ವರ್ಷದ ಆರಂಭದಲ್ಲಿ ಜಸ್‌ಪ್ರೀತ್ ಬುಮ್ರಾ ಬೆನ್ನುನೋವಿನ ಶಸ್ತ್ರಚಿಕಿತ್ಸೆಗೆ ಒಳಗಾದ ಪರಿಣಾಮವಾಗಿ ಭಾರತವು, ಪ್ರಸ್ತುತ ಸರಣಿಯಲ್ಲಿ ಅವರನ್ನು ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಆಡಿಸುವುದಾಗಿ ಘೋಷಿಸಿತ್ತು. ಆದರೆ ಅವರನ್ನು ಮೊದಲ ಪಂದ್ಯದ ಬಳಿಕ ಮೂರು ಮತ್ತು ನಾಲ್ಕನೇ ಪಂದ್ಯದಲ್ಲಿ ಆಡಿಸಿದ ಕಾರಣ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯುವರೇ ಎನ್ನುವುದು ಕುತೂಹಲ ಮೂಡಿಸಿದೆ. ಇನ್ನೊಂದೆಡೆ ಈ ಪಂದ್ಯವನ್ನು ಭಾರತ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಕಾರಣ ಕೆಲಸದ ಒತ್ತಡವನ್ನು ಬದಿಗಿಟ್ಟು ಬುಮ್ರಾ ಆಡುವುದು ಅನಿವಾರ್ಯವಾಗಲಿದೆ.
ಅವಳಿ ಸ್ಪಿನ್ನರ್‌ಗಳಾದ ಜಡೇಜ ಮತ್ತು ಸುಂದರ್ ಜತೆ ಹೆಚ್ಚುವರಿ ಸ್ಪಿನ್ನರ್ ಬೇಕು ಅಂತಾದರೆ ಆಗ ಸರಣಿಯುದ್ದಕ್ಕೂ ಮೂಲೆಗುಂಪಾಗಿರುವ ಕುಲದೀಪ್ ಯಾದವ್ ಅವಕಾಶ ಪಡೆಯಬಹುದು. ವೇಗದ ಬೌಲಿಂಗ್ ವಿಭಾಗದಲ್ಲಿ ಅರ್ಶ್‌ದೀಪ್ ಮತ್ತು ಆಕಾಶ್‌ದೀಪ್ ಫಿಟ್ ಆಗಿದ್ದರೆ ಆಗ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಮತ್ತು ಅಂಶುಲ್ ಕಂಬೋಜ್ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಬೀಳುವುದು ಖಚಿತ.
ರಿಷಭ್ ಪಂತ್ ಗಾಯಗೊಂಡು ಸರಣಿಯಿಂದ ಹೊರಬಿದ್ದ ಕಾರಣ ಅವರ ಬದಲಿಗೆ ಕೀಪರ್ ಅಗತ್ಯ. ಈ ಸ್ಥಾನಕ್ಕೆ ಧ್ರುವ್ ಜುರೆಲ್ ಆಯ್ಕೆಯಾಗುವುದು ಫಿಕ್ಸ್. ಮೂರನೇ ಮತ್ತು ನಾಲ್ಕನೇ ಪಂದ್ಯದಲ್ಲಿ ಜುರೆಲ್ ಕೀಪಿಂಗ್ ಕೂಡ ನಡೆಸಿದ್ದರು.
ಬ್ಯಾಟಿಂಗ್ ಬಲಿಷ್ಠ
ಈಗಿನ ಟಿ20 ಜಮಾನಾದಲ್ಲಿ ಕ್ರಿಕೆಟಿಗರಿಗೆ ಕ್ರೀಸ್ ಆಕ್ರಮಿಸಿ ಕೊಂಡು ಬ್ಯಾಟಿಂಗ್ ಮಾಡುವುದೇ ದೊಡ್ಡ ಸಮಸ್ಯೆ. ಆದರೂ ಭಾರತೀಯ ಬ್ಯಾಟರ್‌ಗಳು ಸರಣಿಯಲ್ಲಿ ತೋರಿದ ಅದ್ಭುತ ಬ್ಯಾಟಿಂಗ್ ನೋಡುವಾಗ ತಂಡದ ಬ್ಯಾಟಿಂಗ್ ಬಲಿಷ್ಠವಾಗಿದೆ ಎಂದು ತಿಳಿದುಬರುತ್ತದೆ. ಇದು ಸಮಾಧಾನಕರ ಸಂಗತಿ.
ಇದನ್ನೂ ಓದಿ IND vs ENG 5th Test: ಅಂತಿಮ ಟೆಸ್ಟ್‌ನ ಪಿಚ್ ರಿಪೋರ್ಟ್, ಹವಾಮಾನ ವರದಿ ಹೀಗಿದೆ