Sangamesh R Nirabi Column: ಕೃಷ್ಣೆಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ಪೋಷಿಸೋಣ...
ಕಾವೇರಿ ಬಗೆಗೆ ಅಲ್ಲಿಯ ಜನಕ್ಕೆ ಹಾಗೂ ನಮ್ಮ ಸರಕಾರಕ್ಕೆ ಅಭಿಮಾನವಿದೆ; ಆದರೆ ಕೃಷ್ಣೆಯ ವಿಷಯ ದಲ್ಲಿ ಹಾಗಾಗಲಿಲ್ಲ. ಅದನ್ನು ಸರಕಾರವು ಮೊದಲಿನಿಂದಲೂ 2ನೇ ದರ್ಜೆಗೆ ಸೇರಿಸಿ ಆ ದೃಷ್ಟಿಯಿಂದಲೇ ನೋಡುತ್ತಾ ಬಂದಿದೆ. ನೆಹರು-ಶಾಸ್ತ್ರೀ ಕಾಲದಲ್ಲಿ ಆರಂಭವಾದ ಆಣೆಕಟ್ಟು ಕಾಮಗಾರಿಯು ಮನ ಮೋಹನ್ ಸಿಂಗ್ ಕಾಲದಲ್ಲಿ ಉದ್ಘಾಟನೆಯಾಗಿದ್ದೇ ಇದಕ್ಕೆ ಸಾಕ್ಷಿ.


ಕೃಷ್ಣಾರತಿ
ಸಂಗಮೇಶ್ ಆರ್.ನಿರಾಣಿ
ಗಂಗಾ, ಯಮುನಾ, ಗೋದಾವರಿ, ಕಾವೇರಿ ಮುಂತಾದ ನದಿಗಳಿಗೆ ಆರತಿ ಮಾಡಲಾಗುತ್ತದೆ. ನಮ್ಮ ಜೀವನಾಡಿಗಳಾಗಿರುವ ನದಿಗಳನ್ನು ಭಕ್ತಿಭಾವದಿಂದ ಸ್ಮರಿಸಿ, ಪೂಜಿಸಿ, ಶುಭ ಸಂಕೇತವಾದ ದೀಪ ಹಚ್ಚಿ, ಉತ್ಸವದ ರೀತಿ ಸಂಭ್ರಮಿಸಲಾಗುತ್ತದೆ. ಈ ನದಿ ಆರಾಧನೆಯ ಸಂಸ್ಕೃತಿಯು ಕೃಷ್ಣೆಗೂ ವಿಸ್ತರಣೆಯಾಗಲಿ ಎಂಬ ಹಂಬಲವು ‘ಕೃಷ್ಣಾ ಆರತಿ’ ಆರಂಭಕ್ಕೆ ಮುನ್ನುಡಿ ಬರೆದಿದೆ.
ಭಾರತದ 4ನೇ ಅತಿದೊಡ್ಡ ಮತ್ತು ದಕ್ಷಿಣ ಭಾರತದ 2ನೇ ಅತಿದೊಡ್ಡ ನದಿಯಾಗಿರುವ ಕೃಷ್ಣೆ, ಉತ್ತರ ಕರ್ನಾಟಕದ ಜೀವನದಿಯಾಗಿದೆ. ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶ್ರೇಣಿಯ ಮಹಾ ಬಲೇಶ್ವರದಿಂದ ಆಂಧ್ರಪ್ರದೇಶದ ಬಂಗಾಳಕೊಲ್ಲಿಯ ಹಂಸಲಾದೇವಿಯವರೆಗೆ 1392 ಕಿ.ಮೀ. ಹರಿಯುವ ಈ ನದಿಯು ಕರ್ನಾಟಕದಲ್ಲಿ 483 ಕಿ.ಮೀ. ಹರಿಯುತ್ತದೆ.

1,13,271 ಚ.ಕಿ.ಮೀ. ಜಲಾನಯನ ಪ್ರದೇಶವಿದೆ. ಕೃಷ್ಣಾನದಿ ಮೂಲಕ ಒಟ್ಟು 303 ಟಿಎಂಸಿ ನೀರು ಲಭ್ಯವಿದ್ದು, ಅದರಲ್ಲಿ 173 ಟಿಎಂಸಿ ಮೊದಲ ಹಂತದಲ್ಲಿ ಬಳಕೆಯಾಗಿದೆ; ಬಚಾವತ್ ಆಯೋಗ ಬಿ-ಸ್ಕೀಮ್‌ನಲ್ಲಿ ಹಂಚಿಕೆಯಾದ 130 ಟಿಎಂಸಿ ನೀರನ್ನು 1 ದಶಕಕ್ಕೂ ಅಧಿಕ ಕಾಲ ಕಳೆದರೂ ಬಳಸಿಕೊಳ್ಳಲಾಗುತ್ತಿಲ್ಲ. ವಿಪರ್ಯಾಸವೆಂದರೆ, ಕಾವೇರಿ ಜಲಾನಯನ ಪ್ರದೇಶದ ಎಲ್ಲ ಯೋಜನೆ ಗಳು ಪೂರ್ಣಗೊಂಡು ದಶಕಗಳೇ ಕಳೆದುಹೋಗಿವೆ; ಈಗ ಮೇಕೆದಾಟು ಯೋಜನೆಗೂ ಸರಕಾರ ತುದಿಗಾಲಲ್ಲಿ ನಿಂತಿದೆ.
ಕಾವೇರಿ ಬಗೆಗೆ ಅಲ್ಲಿಯ ಜನಕ್ಕೆ ಹಾಗೂ ನಮ್ಮ ಸರಕಾರಕ್ಕೆ ಅಭಿಮಾನವಿದೆ; ಆದರೆ ಕೃಷ್ಣೆಯ ವಿಷಯದಲ್ಲಿ ಹಾಗಾಗಲಿಲ್ಲ. ಅದನ್ನು ಸರಕಾರವು ಮೊದಲಿನಿಂದಲೂ 2ನೇ ದರ್ಜೆಗೆ ಸೇರಿಸಿ ಆ ದೃಷ್ಟಿಯಿಂದಲೇ ನೋಡುತ್ತಾ ಬಂದಿದೆ. ನೆಹರು-ಶಾಸ್ತ್ರೀ ಕಾಲದಲ್ಲಿ ಆರಂಭವಾದ ಆಣೆಕಟ್ಟು ಕಾಮಗಾರಿಯು ಮನಮೋಹನ್ ಸಿಂಗ್ ಕಾಲದಲ್ಲಿ ಉದ್ಘಾಟನೆಯಾಗಿದ್ದೇ ಇದಕ್ಕೆ ಸಾಕ್ಷಿ.
ನಮ್ಮ ಜನರ ಅಭಿಮಾನಶೂನ್ಯತೆಯೂ ಇದಕ್ಕೆ ಕಾರಣವಾಗಿರಬಹುದು. ಕೃಷ್ಣೆಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವವನ್ನು ಪುನರುತ್ಥಾನಗೊಳಿಸಲು ಜನಜಾಗೃತಿಗೆ ಮುಂದಾಗಬೇಕಾದ ಅವಶ್ಯಕತೆಯಿದೆ. ‘ನಮ್ಮ ನೀರು-ನಮ್ಮ ಹಕ್ಕು’ ಎನ್ನುವ ಮಾತು ಕಾವೇರಿಗಷ್ಟೇ ಸೀಮಿತವಲ್ಲ. ಕೃಷ್ಣೆಯಲ್ಲಿ ಹರಿಯುವ ನೀರೂ ಕರ್ನಾಟಕದ್ದೇ ಅಲ್ಲವೇ? ಕಾವೇರಿ, ಶರಾವತಿ, ನೇತ್ರಾವತಿ ನದಿ ಗಳಂತೆ ಕೃಷ್ಣೆಗೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಿದೆ ಎಂಬುದನ್ನು ನಮ್ಮ ಜನರಿಗೆ ತಿಳಿಸಿಕೊಡಬೇಕಿದೆ.
ಇದನ್ನೂ ಓದಿ: Laxman Rao Nirani Column: ಸಶಕ್ತ ಭಾರತ: ಆರ್‌ಎಸ್‌ಎಸ್ ಗುರಿ
ತನ್ಮೂಲಕ ಈ ಜೀವನದಿಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸಬೇಕಿದೆ. ತಲಕಾವೇರಿಯಲ್ಲಿ ಪ್ರತಿವರ್ಷ ತೀರ್ಥೋದ್ಭವವಾದಾಗ ಕುಂಭಮೇಳವನ್ನು ನಡೆಸುತ್ತಾರೆ. ಶಿವ ಮೊಗ್ಗ ಮತ್ತು ಉತ್ತರ ಕನ್ನಡದ ಜನರು ಶರಾವತಿಗೆ ತೆಪ್ಪೋತ್ಸವ ಮಾಡುತ್ತಾರೆ. ಆ ಮೂಲಕ ತಮ್ಮ ಜೀವನಾಡಿಯಂತಿರುವ ನದಿಗಳ ಸಾಂಸ್ಕೃತಿಕ ಹಿರಿಮೆಯನ್ನು ಹಬ್ಬವಾಗಿಸಿ ಮುಂದಿನ ಪೀಳಿಗೆ ಯೂ ನದಿಗಳ ಬಗ್ಗೆ ಮಾತೃತ್ವದ ಗೌರವವನ್ನು ಹೊಂದುವಂತೆ ನೋಡಿಕೊಳ್ಳುತ್ತಾರೆ.
ಆದರೆ, ತಲೆ-ತಲಾಂತರಗಳಿಂದ ನಮ್ಮನ್ನು ಪಾಲಿಸಿ-ಪೋಷಿಸುತ್ತಿರುವ ಕೃಷ್ಣೆಗೆ ವರ್ಷಕ್ಕೊಮ್ಮೆ ಪೂಜೆ ಮಾಡಿ ಬಾಗಿನ ಕೊಟ್ಟು ಕೈಮುಗಿಯಬೇಕು, ಕಾರ್ತಿಕ ಮಾಸದಲ್ಲಿ ದೀಪ ಹಚ್ಚಬೇಕು, ಪ್ರತಿ 12 ವರ್ಷಗಳಿಗೊಮ್ಮೆ ಗುರುವು ಕನ್ಯಾರಾಶಿಯನ್ನು ಪ್ರವೇಶಿಸಿದಾಗ ಸಾಕ್ಷಾತ್ ಗಂಗೆಯೇ ಕೃಷ್ಣೆಯ ಭೆಟ್ಟಿಗೆ ಆಗಮಿಸುವ ವೇಳೆ ನೆರವೇರುವ ಕನ್ಯಾಗತವನ್ನು ಅದ್ದೂರಿಯಾಗಿ ಆಚರಿಸಬೇಕು ಅಂತ ನಮಗೆ ಎಂದಿಗೂ ಅನಿಸಲಿಲ್ಲ.
ಕೊಡಗಿನ ಜನರಿಗೆ ಕಾವೇರಿ ಕುಲದೈವವಾದಳು; ಆದರೆ ಮಹಾತಾಯಿ ಕೃಷ್ಣೆಯ ದೈವತ್ವವನ್ನು ಇಂದಿಗೂ ಅರಿಯದಿರುವುದು ಉತ್ತರ ಕರ್ನಾಟಕದವರ ಪಾಲಿಗೆ ಅತಿದೊಡ್ಡ ಸಾಂಸ್ಕೃತಿಕ ದುರಂತ ಎಂದರೆ ತಪ್ಪಾಗಲಾರದು. ಕರ್ನಾಟಕದ ಮಟ್ಟಿಗೆ ಕಾವೇರಿ ದಕ್ಷಿಣದ ಗಂಗೆಯಾದರೆ, ಕೃಷ್ಣೆ ಉತ್ತರದ ಗಂಗೆಯಾಗಿದ್ದಾಳೆ; ಇಬ್ಬರಿಗೂ ಸಮಾನ ಪ್ರಾತಿನಿಧ್ಯ ಸಿಕ್ಕಾಗ ಮಾತ್ರವೇ ‘ಕಾವೇರಿ ಆರತಿ’ಯಂಥ ಸರಕಾರದ ಹೊಸತನದ ಪ್ರಯತ್ನಕ್ಕೊಂದು ಅರ್ಥ ಬರುತ್ತದೆ.
ಆ ಕಾರಣಕ್ಕಾಗಿ, ಕಾವೇರಿಯಂತೆ ಕೃಷ್ಣೆಗೂ ಆರತಿ ನಡೆಯಲಿ ಎಂಬ ಆಶಯ ಹೊತ್ತು, ಶ್ರೀಕೃಷ್ಣ ಜನ್ಮಾಷ್ಟಮಿಯ ಮತ್ತು ಮಾಜಿ ಸಚಿವರು ಹಾಗೂ ಸೋದರರಾದ ಮುರುಗೇಶ ನಿರಾಣಿಯವರ ಹುಟ್ಟುಹಬ್ಬದ ನಿಮಿತ್ತ ಆಗಸ್ಟ್ 16ರಂದು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಕೃಷ್ಣಾನದಿ ತೀರದಲ್ಲಿ 2ನೇ ಬಾರಿಗೆ ಕೃಷ್ಣಾ ಆರತಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಬಾರಿ ಹಿಮಾಲಯದ ನಾಗಾ ಸಾಧುಗಳನ್ನು ಕರೆಸಿ ಕುಂಭಮೇಳ ಮಾದರಿಯಲ್ಲಿ ಕೃಷ್ಣಾ ಪುಣ್ಯ ಸ್ನಾನವನ್ನು ಆಯೋಜಿಸಲಾಗಿದೆ. ಕೃಷ್ಣೆಯ ಧಾರ್ಮಿಕ ಹಿನ್ನೆಲೆ: ಸ್ಕಂದ ಪುರಾಣದ ಭಾಗವಾದ ‘ಶ್ರೀ ಕೃಷ್ಣವೇಣಿ ಮಹಾತ್ಮೆ’ಯು ಕೃಷ್ಣಾನದಿಯ ಜನ್ಮದ ರೋಚಕತೆಗಳನ್ನು ತೆರೆದಿಡುತ್ತದೆ.
ಮುಂದೆ ಬರುವ ಕಲಿಯುಗದಲ್ಲಿ ಪಾಪ ಕರ್ಮಗಳು ಹೆಚ್ಚಾಗಿ, ಕಾಮಧೇನು-ಕಲ್ಪವೃಕ್ಷಗಳ ಪ್ರಭಾವ ಕಡಿಮೆಯಾಗಬಹುದು ಎಂಬುದನ್ನರಿತ ನಾರದರು ಭಗವಾನ್ ವಿಷ್ಣುವಿನ ಮೊರೆ ಹೋಗುತ್ತಾರೆ. ಆಗ ವಿಷ್ಣುವು, “ಜನರ ಕಷ್ಟಗಳು ಮತ್ತು ಪಾಪಕರ್ಮಗಳ ಪರಿಹಾರಕ್ಕಾಗಿ ಕಾಮಧೇನು ಫಲವೃಕ್ಷ ಗಳ ಬದಲಾಗಿ ತೀರ್ಥರೂಪದಲ್ಲಿರುವ ನದಿಯ ನೀರನ್ನು ಜನರು ವೀಕ್ಷಿಸಿ ಪೂಜಿಸಿ ಸೇವೆ ಸಲ್ಲಿಸುವುದರಿಂದ ಪಾಪ ಕಳೆದು ಸನ್ಮಾರ್ಗದ ದಾರಿಯಲ್ಲಿ ನಡೆದು ಮೋಕ್ಷ ಹೊಂದುತ್ತಾರೆ.
ಹೀಗಾಗಿ ನಾನೇ ಸ್ವತಃ ‘ಕೃಷ್ಣಾ’ ಎಂಬ ಹೆಸರಿನಿಂದ ನದಿಯಾಗಿ ಹರಿದು ಮನುಕುಲವನ್ನು ಉದ್ಧರಿಸುತ್ತೇನೆ" ಎನ್ನುತ್ತಾನೆ. ನಂತರ, ನೀಲಿ ಮತ್ತು ಕಪ್ಪು ಬಣ್ಣದ ಮೈಕಾಂತಿಯನ್ನು ಹೊಂದಿ ರುವ, ನಾಲ್ಕು ಕೈಗಳುಳ್ಳ, ತನ್ನಂತೆಯೇ ರೇಷ್ಮೆಯ ಪೀತಾಂಬರವನ್ನು ತೊಟ್ಟಿರುವ ಬಾಲಕಿಯನ್ನು ವಿಷ್ಣು ಸೃಷ್ಟಿಸುತ್ತಾನೆ.
ಅವಳನ್ನು ಮಗಳಾಗಿ ಸ್ವೀಕರಿಸುವ ಬ್ರಹ್ಮನು, ಆಕೆಯನ್ನು ಸ್ಪರ್ಶಿಸುವ ಮೂಲಕ ಕೆಲವು ತೀರ್ಥಗಳನ್ನು ಸೃಷ್ಟಿಸುತ್ತಾನೆ. ಹೀಗೆ ಜನಿಸಿದ ದೇವಿ ಕೃಷ್ಣೆಯು ಬ್ರಹ್ಮ-ವಿಷ್ಣು-ಮಹೇಶ್ವರು, ಋಷಿ-ಮುನಿಗಳ ಜತೆ ಆಗಮಿಸುತ್ತಾಳೆ. ತನ್ನ ಮಡಿಲಿನಲ್ಲಿಯೇ ಹುಟ್ಟುವಂತೆ ಸಹ್ಯಾದ್ರಿ ಪರ್ವತವು ಕೃಷ್ಣೆಯಲ್ಲಿ ಹಾಗೂ ದೇವತೆಗಳಲ್ಲಿ ನಿವೇದಿಸಿಕೊಳ್ಳುತ್ತದೆ. ಋಷಿ-ಮುನಿಗಳ ಯಜ್ಞ-ಯಾಗಾದಿಗಳು ಮತ್ತು ಮಂತ್ರಘೋಷಗಳ ನಡುವೆ, ಸಹ್ಯಾದ್ರಿ ಪರ್ವತದ ಮಡಿಲಲ್ಲಿ ಕೃಷ್ಣೆಯು ಉಗಮಿಸುತ್ತಾಳೆ.
ಇದು ಕೃಷ್ಣೆಯ ಹುಟ್ಟಿನ ಕುರಿತಾದ ಒಂದು ಉಲ್ಲೇಖ. ಒಮ್ಮೆ, ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಅಶ್ವತ್ಥ ಮರ ಸೇರಿದಂತೆ 5 ಬಗೆಯ ದೇವವೃಕ್ಷಗಳ ಕೆಳಗೆ ಹರಿಯುವ ನದಿ ತೊರೆಯಲ್ಲಿ ಮಾರ್ಕಂ ಡೇಯ ಮಹಾಋಷಿಗಳು ಬೆಳಗಿನ ಸಂಧ್ಯಾವಂದನೆ ವಿಧಿಗಳನ್ನು ಪೂರ್ಣಗೊಳಿಸಿ ಸೂರ್ಯದೇವ ನಿಗೆ ಅರ್ಘ್ಯ ಕೊಡುವ ಸಂದರ್ಭದಲ್ಲಿ, ಆಲದ ಎಲೆಯ ಮೇಲೆ ಬೆರಳು ಚೀಪುತ್ತಿರುವ ಬಾಲಕೃಷ್ಣ ತೇಲಿಬರುತ್ತಿರುವುದನ್ನು ಕಂಡರು.
ಅದುವೇ ಕೃಷ್ಣಾನದಿ ಎಂಬ ಪೌರಾಣಿಕ ಹಿನ್ನೆಲೆಯೂ ಕೃಷ್ಣೆಗಿದೆ. ಹೀಗಾಗಿ, ಕಲ್ಪವೃಕ್ಷ-ಕಾಮಧೇನು ಗಳ ನಂತರ ಇಷ್ಟಾರ್ಥಗಳನ್ನು ಪೂರೈಸುವ, ಮೋಕ್ಷ ಸೇರಿದಂತೆ ಎಲ್ಲವನ್ನೂ ಕರುಣಿಸುವ ಕೃಷ್ಣಾ ನದಿಯ ರೂಪವಾಗಿ ಭಗವಾನ್ ವಿಷ್ಣುವು ಭೂಲೋಕದಲ್ಲಿ ಅವತರಿಸಿದ್ದಾನೆ.
ಒಮ್ಮೆ ಶಿವನ ದರ್ಶನಕ್ಕೆಂದು ಋಷಿಗಳೊಂದಿಗೆ ಕೈಲಾಸಕ್ಕೆ ಬಂದ ಶ್ರೀ ಸುಬ್ರಹ್ಮಣ್ಯ ದೇವರು, ಕೃಷ್ಣಾ ನದಿಯ ಹಿರಿಮೆಯನ್ನು ತಿಳಿಸಿಕೊಡುವಂತೆ ಪರಮೇಶ್ವರನನ್ನು ಕೋರಿದಾಗ, “ಶ್ರೀ ವಿಷ್ಣುವಿನ ಪಾದಗಳನ್ನು ಒಮ್ಮೆ ಮಾತ್ರ ಸ್ಪರ್ಶಿಸಿದ ಗಂಗೆಯು ಮಾನವನಿಗೆ ಆಲೋಚನೆ ಮಾತ್ರದಿಂದಲೇ ಮೋಕ್ಷವನ್ನು ನೀಡಬಲ್ಲವಳಾದರೆ, ಕೃಷ್ಣಾನದಿಯು ನಿಜವಾಗಿಯೂ ವಿಷ್ಣುವಿನ ದೇಹ.
ಹೀಗಾಗಿ ಕೃಷ್ಣೆಯ ವ್ಯಕ್ತಿತ್ವವು ಎಲ್ಲರಿಗಿಂತ ಹಿರಿದಾಗಿದೆ" ಎಂದು ಪರಶಿವನು ಸಂಕ್ಷಿಪ್ತವಾಗಿ ವಿವರಿಸುತ್ತಾನೆ. ಅಂತೆಯೆ ನಮ್ಮ ಶರಣರು ಕೂಡ ಕೃಷ್ಣೆಯನ್ನು ‘ಹಿರಿಹೊಳಿ’ ಎಂದು ಕರೆದಿದ್ದಾರೆ; ಅಂದರೆ ಆಕೆ ಎಲ್ಲರಿಗಿಂತ ದೊಡ್ಡವಳು ಎಂಬರ್ಥ!
ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿರುವಂತೆ, ತನ್ನ ಪವಿತ್ರತೆಯನ್ನು ಭೂಮಿಯಲ್ಲಿ ಹರಡಲು ಬಯಸಿದ ಗಂಗಾ ಮಾತೆಯು ಅನೇಕ ತೀರ್ಥಗಳು ಮತ್ತು ನದಿಗಳಿಗೆ ತನ್ನ ಪುಣ್ಯಶಕ್ತಿಯನ್ನು ಹಂಚಿದಳು. ಅದರಲ್ಲಿ ಕೃಷ್ಣಾನದಿಗೆ ಅಗ್ರಸ್ಥಾನ ದೊರೆಯಿತು. ಆ ಕಾರಣಕ್ಕೆ, ‘ಕೃಷ್ಣಾಸ್ನಾನ ಮಾಡಿ ದರೆ ಗಂಗಾಸ್ನಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದು ಹೇಳಲಾಗಿದೆ.
ದೇವಗಂಗೆಯು ಕೂಡ ಎಲ್ಲರ ಪಾಪವನ್ನು ತೊಳೆದು ಮಲಿನವಾದಾಗ, ಪಾಪ ಪರಿಹಾರಕ್ಕೆಂದು ಮಹಾವಿಷ್ಣುವಿನ ಬಳಿಗೆ ಹೋಗುತ್ತಾಳೆ. ಆಗ ವಿಷ್ಣುವು, “ಎಲ್ಲಾ ನದಿಗಳಲ್ಲಿ ಸ್ನಾನ ಮಾಡಿ ನಿನ್ನ ಪುಣ್ಯಶಕ್ತಿಯನ್ನು ಪುನಃ ವೃದ್ಧಿಸಿಕೋ" ಎಂದು ಮಾರ್ಗದರ್ಶನ ಮಾಡುತ್ತಾನೆ.
“ಸ್ನಾನಕ್ಕೆ ಯಾವ ರೀತಿ ತೆರಳಬೇಕು, ಯಾವ ನದೀತೀರ್ಥದಲ್ಲಿ ಪುಣ್ಯವೃದ್ಧಿಯಾಗುತ್ತದೆ?" ಎಂದು ದೇವಗಂಗೆಯು ಕೇಳಿದಾಗ ವಿಷ್ಣುವು ಆಕೆಗೆ ಕಾಗೆಯ ರೂಪ ನೀಡಿ, “ಯಾವ ನದೀಸ್ನಾನದಿಂದಾಗಿ ನೀನು ಶ್ವೇತವರ್ಣಕ್ಕೆ ತಿರುಗಿ ಹಂಸವಾಗಿ ಪರಿವರ್ತನೆಯಾಗುವಿಯೋ, ಆಗ ನಿನಗೆ ಪುನಃ ಪುಣ್ಯ ಪ್ರಾಪ್ತಿಯಾಗುತ್ತದೆ" ಎಂದು ಹೇಳುತ್ತಾನೆ. ಹೀಗೆ, ಅಲ್ಲಿಂದ ಕಾಗೆಯ ರೂಪದಲ್ಲಿ ಹೊರಟ ಗಂಗೆಯು ಭೂಲೋಕದ ಎಲ್ಲ ನದಿಗಳಲ್ಲಿ ಸ್ನಾನ ಮಾಡಿ ದಣಿದು ಕಲ್ಲುಬಂಡೆಯ ಮೇಲೆ ಕುಳಿತಾಗ ನಾರದ ಮಹರ್ಷಿಗಳು ಪ್ರತ್ಯಕ್ಷರಾಗಿ, “ಕೃಷ್ಣೆಯಲ್ಲಿ ಸ್ನಾನ ಮಾಡಿದಾಗ ನೀನು ಹಂಸವಾಗಿ ಪರಿವರ್ತನೆ ಆಗುತ್ತೀಯೆ" ಎಂದು ಸುಳಿವು ನೀಡುತ್ತಾರೆ.
ಅಂತೆಯೇ, ಗಂಗೆಯ ರೂಪದ ಕಾಗೆ ಕೃಷ್ಣೆಯಲ್ಲಿ ಸ್ನಾನ ಮಾಡುತ್ತಿದ್ದಂತೆಯೇ ಹಂಸಪಕ್ಷಿಯಾಗಿ ಬದಲಾಗುತ್ತದೆ. ಈಗಿನ ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯಲ್ಲಿ ಕೃಷ್ಣೆಯು ಬಂಗಾಳ ಕೊಲ್ಲಿ ಯನ್ನು ಸೇರುವ ಸ್ಥಳವು ಇಂದಿಗೂ ‘ಹಂಸಲಾದೇವಿ’ ಎಂದೇ ಪ್ರಖ್ಯಾತವಾಗಿದೆ. ಅಲ್ಲಿ ಗಂಗಾಮಾತೆ ಯ ಸ್ವರೂಪದ ಹಂಸಲಾದೇವಿ ದೇವಸ್ಥಾನವಿದೆ.
ಮಹಾಭಾರತದಲ್ಲಿ, ವನವಾಸದಲ್ಲಿದ್ದ ಪಾಂಡವರು ಅಜ್ಞಾತವಾಸಕ್ಕಿಂತ ಮೊದಲು ತೀರ್ಥಯಾತ್ರೆಗೆ ಹೋದಾಗ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ, ಆ ನೀರನ್ನು ಕುಡಿದು ಅಲ್ಲಿ ತಪಸ್ಸು ಮಾಡಿದರು ಎಂಬ ಉಲ್ಲೇಖವಿದೆ. ಅವರ ತಪಸ್ಸಿನಿಂದಾಗಿ ನದಿಗೆ ಧರ್ಮ-ಶೌರ್ಯ-ಶುದ್ಧತೆ ಎಂಬ ಗುಣಗಳು ಸೇರಿಕೊಂಡವು ಎಂದು ಪುರಾಣಗಳು ಹೇಳುತ್ತವೆ. ಪದ್ಮಪುರಾಣದಲ್ಲಿ ಉಲ್ಲೇಖ ವಾಗಿರು ವಂತೆ, ಭೂಮಿಯನ್ನು 21 ಸಲ ಸುತ್ತಿ ಕ್ಷತ್ರಿಯರನ್ನು ಜಯಿಸಿದ ನಂತರ ಭಗವಾನ್ ಪರಶುರಾಮರು ಕೃಷ್ಣಾನದಿಯಲ್ಲಿ ಸ್ನಾನ ಮಾಡಿ ತಪವನ್ನಾಚರಿಸಿ ತಮ್ಮ ಪಾಪ ಪರಿಹಾರ ಮಾಡಿಕೊಂಡರು. ಆ ದಿನದಿಂದಲೇ ಕೃಷ್ಣಾನದಿ ‘ಪಾಪಹಾರಿಣಿ’ ಎಂದು ಖ್ಯಾತಿಪಡೆದಳು.
ಅಭಿಮಾನಶೂನ್ಯತೆ ದೂರವಾಗಲಿ: ಇಷ್ಟೊಂದು ಅಗಾಧ ಧಾರ್ಮಿಕ ಮತ್ತು ಪೌರಾಣಿಕ ಹಿನ್ನೆಲೆ ಹೊಂದಿರುವ ಕೃಷ್ಣೆಯನ್ನು ಅರಿತು ಆಕೆಗೆ ಹಿರಿತನದ ಸ್ಥಾನ ನೀಡುವಲ್ಲಿ ನಾವು ಎಡವಿದ್ದೇವೆ. ಉತ್ತರಭಾರತದ ‘ಗಂಗೆ’ಯು ಇಡೀ ದೇಶಕ್ಕೆ ಪಾಪವಿನಾಶಿನಿಯಾದಳು. ‘ಕಾವೇರಿ’ಯು ಕನ್ನಡ ನಾಡಿನ ಜೀವನದಿಯಾದಳು.
‘ಶರಾವತಿ’ಯು ಕನ್ನಡನಾಡಿನ ಭಾಗೀರಥಿಯಾದಳು. ‘ಗಂಗಾ ಸ್ನಾನ, ತುಂಗಾ ಪಾನ’ ಎನ್ನುವ ಮೂಲಕ ಹಿರಿಯರು ತುಂಗೆಗೂ ಧಾರ್ಮಿಕ ಮಹತ್ವ ನೀಡಿದರು. ಪಕ್ಕದ ಆಂಧ್ರದವರು ಗೋದಾ ವರಿಯನ್ನು ‘ತಾಯಿ’ ಎಂದರು. ಅಷ್ಟೇಕೆ, ಮಹಾರಾಷ್ಟ್ರದವರು ಕೂಡ ಇದೇ ಕೃಷ್ಣೆಯನ್ನು ‘ಮಾಯಿ’ ಎಂದು ಕರೆದರು.
ಆದರೆ, ನಮ್ಮ ಉತ್ತರ ಕರ್ನಾಟಕದ ಜನತೆಗೆ ಮಾತ್ರ ಕೃಷ್ಣೆಯ ಮಹತ್ವ ಮತ್ತು ಹಿರಿಮೆ ಅರ್ಥ ವಾಗದಿರುವುದು ನಿಜಕ್ಕೂ ವಿಷಾದನೀಯ. ಧಾರ್ಮಿಕವಾಗಿ ಮಾತ್ರವಲ್ಲದೆ, ಸಾಂಸ್ಕೃತಿಕ-ಸಾಹಿತ್ಯಿಕ ವಾಗಿ ಕೃಷ್ಣೆಯನ್ನು ಸ್ತುತಿಸುವಲ್ಲಿಯೂ ನಾವು ಹಿಂದೆ ಬಿದ್ದಿದ್ದೇವೆ. ಕಾವೇರಿ, ಶರಾವತಿ, ತುಂಗೆ-ಭದ್ರೆಯರ ಕುರಿತು ಸಾಹಿತ್ಯ, ನೃತ್ಯ, ಸಿನಿಮಾ ಹಾಡುಗಳು ರಚಿತವಾದವು. ಈ ನದಿಗಳ ವೈಭವವು ಹಿರಿಯ ಕಲಾವಿದರ ಬಾಯಲ್ಲಿ ನಲಿದಾಡಿತು. ಆದರೆ ಇದೇ ಪ್ರಾಮುಖ್ಯವು ಕೃಷ್ಣೆಗೆ ಇಂದಿಗೂ ದೊರೆತಿಲ್ಲವೇಕೆ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
ಇದು ನಮ್ಮ ಜನರ ಅಭಿಮಾನಶೂನ್ಯತೆಯನ್ನು ಬಿಂಬಿಸುತ್ತದೆ. ಇನ್ನಾದರೂ ಇದೆಲ್ಲವನ್ನೂ ತೊಡೆದು, ಕೃಷ್ಣೆಯ ಹಿರಿತನವನ್ನು ಅರಿತು, ಆಕೆಗೆ ಧಾರ್ಮಿಕ ಹಿರಿತನದ ಪ್ರಾಶಸ್ತ್ಯವನ್ನು ನೀಡ ಬೇಕಿದೆ. ಹಾಗೆ ನೋಡಿದರೆ, ಈ ಅಭಿಮಾನಶೂನ್ಯತೆಯಿಂದಾಗಿ ಸಾಮಾಜಿಕ ನ್ಯಾಯವನ್ನು ಪಡೆಯುವಲ್ಲಿಯೂ ನಾವು ಹಿಂದೆ ಬಿದ್ದಿದ್ದೇವೆ. ಹೌದು, ಕಾವೇರಿ ಜಲಾನಯನ ಪ್ರದೇಶದ ಯೋಜನೆ ಗಳು ಅಲ್ಲಿಯ ಜನರಿಗೆ ಅಸ್ಮಿತೆಯ ಸಂಕೇತವಾದರೆ, ನಮ್ಮ ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ಜಲಾನಯನ ಪ್ರದೇಶದ ಯೋಜನೆಗಳು ರಾಜಕೀಯ ಪ್ರಚಾರಕ್ಕಷ್ಟೇ ಸೀಮಿತವಾದವು. ಹೀಗಾಗಿ ನಮ್ಮ ಮಹತ್ವಾಕಾಂಕ್ಷೆಯ ನೀರಾವರಿ ಯೋಜನೆಗಳು ಇಂದಿಗೂ ಪೂರ್ಣಗೊಂಡಿಲ್ಲ.
ನಮಗೇ ಜಲಸಂಕಷ್ಟ ಇರುವಾಗಲೂ ತಮಿಳುನಾಡಿನವರು ಕಾವೇರಿ ನೀರನ್ನು ಹರಿಸುವಂತೆ ಕೇಳಿದರೆ ಹಳೇ ಮೈಸೂರು ಭಾಗದ ಜನರು ಬೀದಿಗಿಳಿದು ಹೋರಾಟ ಮಾಡುತ್ತಾರೆ. ಆದರೆ, ಸಾವಿರಾರು ಟಿಎಂಸಿ ಪ್ರಮಾಣದಷ್ಟು ಕೃಷ್ಣೆಯ ನೀರು ಆಂಧ್ರ-ತೆಲಂಗಾಣದ ಪಾಲಾದರೂ, ನಮ್ಮ ಜನರು ಗಾಢನಿದ್ರೆಯಲ್ಲಿದ್ದಾರೆ. ಯೋಜನೆ ಘೋಷಿಸಿದಾಗ ಇದ್ದ ಯೋಜನಾ ವೆಚ್ಚ ಇಂದು ಹತ್ತು ಪಟ್ಟು ಹೆಚ್ಚಾಗಿದೆ; ಆದರೂ ನಮ್ಮ ಸರಕಾರಗಳಿಗೆ ‘ಭದ್ರಾ ಮೇಲ್ದಂಡೆ-ಮೇಕೆದಾಟು-ಎತ್ತಿನಹೊಳೆ’ ಯೋಜನೆಗಳ ಮೇಲೆ ಇರುವಷ್ಟು ಮಮಕಾರವು ಕೃಷ್ಣೆಯ ಮೇಲೆ ಹುಟ್ಟುತ್ತಿಲ್ಲ!
ಶರಾವತಿ ಹಿನ್ನೀರಿನ 10 ಹಳ್ಳಿಯ ಜನರಿಗಾಗಿ ಕೇಂದ್ರ ಸರಕಾರವು ೩೫೦ ಕೋಟಿ ರು. ವೆಚ್ಚದಲ್ಲಿ ದೇಶದಲ್ಲೇ ಅತಿದೊಡ್ಡ ಕೇಬಲ್‌ಬ್ರಿಡ್ಜ್ ನಿರ್ಮಿಸಿದ್ದು ಸ್ವಾಗತಾರ್ಹ. ಆದರೆ ಜಿಲ್ಲಾ ಗಡಿಗಳನ್ನು ಬೆಸೆಯುವ ಒಂದು ಸೇತುವೆಯಿಲ್ಲದೆ ಜಮಖಂಡಿ ಮತ್ತು ಅಥಣಿ ಈ ಎರಡು ತಾಲೂಕಿನ ಜನರು ಬ್ಯಾರೇಜ್ ಸರ್ವೀಸ್ ರಸ್ತೆಯ ಮೇಲೆ ಇನ್ನೆಷ್ಟು ವರ್ಷ ಸಂಚರಿಸಬೇಕು? ನಮ್ಮ ಜನಗಳ ಸುರಕ್ಷತೆಗೆ ಬೆಲೆಯೇ ಇಲ್ಲವೇ? ಎತ್ತಿನಹೊಳೆಯ 6 ಟಿಎಂಸಿ ನೀರಿಗಾಗಿ ಕಳೆದ 2-3 ಸರಕಾರಗಳು 25 ಸಾವಿರ ಕೋಟಿಗೂ ಹೆಚ್ಚಿನ ಹಣವನ್ನು ಸುರಿದಿವೆ.
ಆದರೆ ಕಳೆದ ಒಂದು ದಶಕದಿಂದ ಕೃಷ್ಣೆಯ 130 ಟಿಎಂಸಿ ನೀರು ನಮ್ಮ ಉತ್ತರ ಕರ್ನಾಟಕಕ್ಕೆ ಬಳಕೆಯಾಗದೆ ಆಂಧ್ರ-ತೆಲಂಗಾಣದ ಪಾಲಾಗುತ್ತಿದೆ. ಕೃಷ್ಣೆಯಷ್ಟು ಹಿರಿದಾಗಿಲ್ಲದ ಕಾವೇರಿಗೆ, ಕೃಷ್ಣೆಗಿಂತ 3 ಪಟ್ಟು ಹೆಚ್ಚು ಹಣ ನೀಡುತ್ತಾರೆ. ಪ್ರತಿ ವರ್ಷ ರಾಜ್ಯ ಬಜೆಟ್‌ನಲ್ಲಿ ನೀರಾವರಿಗೆ ಮೀಸಲಿಡುವ ಅನುದಾನವೇ ಅಲ್ಪಮೊತ್ತದ್ದು, ಅದರಲ್ಲೂ ದಕ್ಷಿಣ ಕರ್ನಾಟಕಕಕ್ಕೆ ಸಿಂಹಪಾಲು! ಈ ಅಸಮಾನತೆಯನ್ನು, ಮಲತಾಯಿ ಧೋರಣೆಯನ್ನು ಇನ್ನೆಷ್ಟು ವರ್ಷ ಸಹಿಸಿಕೊಳ್ಳೋಣ? ಕಾವೇರಿಯ ಮೇಲೆ ಮೈಸೂರು ಮಹಾರಾಜರಿಗೆ ವಿಶೇಷ ಅಕ್ಕರೆಯಿತ್ತು.
ತುಂಗಭದ್ರೆಯ ದಡದಲ್ಲಿ ವೈಭವದ ವಿಜಯನಗರ ಸಾಮ್ರಾಜ್ಯ ನಿರ್ಮಾಣವಾಗಿತ್ತು, ಹೀಗಾಗಿ ವಿಜಯನಗರದ ಅರಸರು ತುಂಗಭದ್ರೆಯನ್ನು ದೈವವಾಗಿ ಕಂಡರು. ಆದರೆ ನಮ್ಮ ಕೃಷ್ಣೆಗೆ ಮೈಸೂರು ಮಹಾರಾಜರೂ ಸಿಗಲಿಲ್ಲ, ವಿಜಯನಗರದ ವೈಭವವೂ ದೊರೆಯಲಿಲ್ಲ. ಹೀಗಾಗಿ ಕೃಷ್ಣೆಯ ದೈವತ್ವ, ಪೂಜ್ಯತೆ, ಸಮೃದ್ಧತೆ, ವೈಶಾಲ್ಯಗಳು ನಮ್ಮ ಜನಕ್ಕೆ ಅರ್ಥವಾಗದೆ ಉಳಿದು ಹೋಗಿವೆ.
ಸಾಂಸ್ಕೃತಿಕ ಹಿನ್ನೆಲೆ, ಜಲಸಂಪನ್ಮೂಲ, ನೀರಾವರಿ ಉದ್ದೇಶಕ್ಕಾಗಿನ ಬಳಕೆ- ಈ ಎಲ್ಲದರಲ್ಲೂ ಕೃಷ್ಣೆಯು ಕಾವೇರಿಗಿಂತ ಹಿರಿದಾಗಿದ್ದಾಳೆ. ಆದರೆ ಸರಕಾರ ಮತ್ತು ಸಾರ್ವಜನಿಕ ವಲಯ ಎರಡ ರಲ್ಲೂ ಕೃಷ್ಣೆಗೆ ದೊರೆಯಬೇಕಿದ್ದ ಸಾಂಸ್ಕೃತಿಕ-ಧಾರ್ಮಿಕ ಪ್ರಾತಿನಿಧ್ಯ ಇಂದಿಗೂ ದೊರೆತಿಲ್ಲ. ಸರಕಾರಿ ಯೋಜನೆಗಳ ಅನುಷ್ಠಾನದ ವಿಷಯದಲ್ಲೂ ಕಾವೇರಿ ಕೊಳ್ಳಕ್ಕೆ ಸಿಕ್ಕಿರುವ ಪ್ರಾಮುಖ್ಯ ಮತ್ತು ಗಂಭೀರತೆ ಕೃಷ್ಣೆಯ ವಿಷಯದಲ್ಲಿ ಇಂದಿಗೂ ದಕ್ಕದಿರುವುದು ವಿಷಾದನೀಯ ಸಂಗತಿ.
ಈ ಹಿಂದೆ ಬಿಜೆಪಿ ಸರಕಾರವು, ಹರಿಹರದಲ್ಲಿನ ತುಂಗಭದ್ರೆಯ ದಂಡೆಯಲ್ಲಿ ಗಂಗಾತಟದ ಮಾದರಿ ಯಲ್ಲಿ ಮಂಟಪಗಳು ಹಾಗೂ ಸ್ನಾನಘಟ್ಟವನ್ನು ನಿರ್ಮಿಸಿ, ‘ತುಂಗಾರತಿ’ ಮಾಡುವುದಾಗಿ ಘೋಷಿಸಿತ್ತು. ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಾವೇರಿಗೆ ಆರತಿಯನ್ನು ಮಾಡಿದ್ದಾರೆ. ತುಂಗೆ, ಕಾವೇರಿಯ ಜತೆಜತೆಗೆ ಕೃಷ್ಣೆಯ ವಿಷಯದಲ್ಲಿಯೂ ಧಾರ್ಮಿಕ ಮತ್ತು ಸಾಮಾಜಿಕ ಕಳಕಳಿ ವ್ಯಕ್ತವಾದಾಗ ಮಾತ್ರವೇ ನಾಡಿನಲ್ಲಿ ಸಾಮರಸ್ಯ ಮೂಡುತ್ತದೆ.
ಕೃಷ್ಣೆಯ ಬಗ್ಗೆ ಸಮಗ್ರ ಅಧ್ಯಯನ, ಸಂಶೋಧನೆ ನಡೆಯಬೇಕು. ಹಾಡು, ಕಥೆ, ನೃತ್ಯ, ರೂಪಕಗಳ ರಚನೆಯಾಗಬೇಕು. ಸಿನಿಮಾ ನಟರು ಸೇರಿದಂತೆ ಎಲ್ಲ ಕಲಾಪ್ರಕಾರದವರೂ ಕೃಷ್ಣೆಯನ್ನು ಕಲಾ ತ್ಮಕವಾಗಿ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಬೇಕು. ನದಿಪೂಜೆ, ದೀಪೋತ್ಸವ, ತೆಪ್ಪೋ ತ್ಸವ, ಕೃಷ್ಣಾರತಿಗಳು ನಡೆಯಬೇಕು, ಉಪನದಿಗಳ ಸಂಗಮಕ್ಷೇತ್ರದಲ್ಲಿ ಕುಂಭಮೇಳಗಳು ಜರುಗಬೇಕು.
ಪ್ರತಿವರ್ಷವೂ ಕೃಷ್ಣೆಯ ಸಾಂಸ್ಕೃತಿಕ ಉತ್ಸವವನ್ನು ಹಮ್ಮಿಕೊಳ್ಳುವ ಮೂಲಕ ಅರಿವಿನ ಪ್ರಸಾರಕಾರ್ಯ ನಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಸರಕಾರದ ಜತೆಗಿನ ಸಹಭಾಗಿತ್ವ, ಆಸಕ್ತಿ, ಅಭಿಮಾನಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ಬನ್ನಿ, ಕೃಷ್ಣೆಯ ಬಗೆಗಿನ ಶತಮಾನಗಳ ಅಭಿಮಾನಶೂನ್ಯತೆಯನ್ನು ಕಳಚಿ ಜಾಗೃತರಾಗೋಣ...
(ಲೇಖಕರು ಅಧ್ಯಕ್ಷರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿ)