Srivathsa Joshi Column: ಲಿಂಕನ್: ಅಮೆರಿಕಾಧ್ಯಕ್ಷರಲ್ಲೇ ಎತ್ತರದ ಆಳು, ಗೌರವದ ಬಾಳು
ಐದನೆಯ ತರಗತಿಯಲ್ಲಿದ್ದಾಗ ಓದಿದ್ದ ಪಾಠ, ಕಲಿಸಿದ್ದ ಗುರುಗಳು, ಜತೆಯಲ್ಲಿದ್ದ ಸಹಪಾಠಿಗಳು, ಶಾಲಾ ದಿನಗಳು, ಆ ಕಾಲದಲ್ಲಿನ ನಮ್ಮ ದಿನಚರಿ... ಎಲ್ಲ ಒಮ್ಮೆ ಕಣ್ಮುಂದೆ ಬಂದುಹೋದುವು. “ಬಡ ಕುಟುಂಬವೊಂದರಲ್ಲಿ 1809ರ ಫೆಬ್ರವರಿ 12ರಂದು ಲಿಂಕನ್ ಜನನ. ಬಾಲ್ಯದಲ್ಲಿ ಸರಿಯಾದ ಶಿಕ್ಷಣ ದೊರಕಲಿಲ್ಲ


ತಿಳಿರು ತೋರಣ
srivathsajoshi@yahoo.com
ಅಬ್ರಹಾಂ ಲಿಂಕನ್ ಬಗ್ಗೆ ನಮಗೆ ಐದನೆಯ ತರಗತಿಯಲ್ಲೊಂದು ಕನ್ನಡ ಪಾಠ ಇತ್ತು. ಕುರುಚಲು ಗಡ್ಡಧಾರಿ ಲಿಂಕನ್ ಮುಖಭಾವದ ರೇಖಾಚಿತ್ರವೊಂದು ಪಾಠದ ಜತೆಗಿತ್ತು. ಪಠ್ಯಪುಸ್ತಕದಲ್ಲಿ ಅಚ್ಚಾಗಿದ್ದ ಆ ಚಿತ್ರ ನನ್ನ ಸ್ಮೃತಿಪಟಲದಲ್ಲೂ ಅಚ್ಚೊತ್ತಿ ನಿಂತಿತ್ತು. ಕನ್ನಡ ಭಾರತಿ ಪುಸ್ತಕದ ಪಿಡಿಎಫ್ ನನ್ನ ಸಂಗ್ರಹದಲ್ಲಿರುವುದರಿಂದ ಮೊನ್ನೆ ಅದನ್ನು ತೆರೆದು ಆ ಪಾಠವನ್ನೊಮ್ಮೆ ಓದಿ ಕೊಂಡೆ. ಮೊನ್ನೆ ಅಂದರೆ ಬುಧವಾರ ಫೆಬ್ರವರಿ 12. ಅಬ್ರಹಾಂ ಲಿಂಕನ್‌ನ ಜನ್ಮದಿನ. ಮಹಾ ಪುರುಷನ ಸ್ಮರಣೆಗೆ ಯೋಗ್ಯದಿನ. “ಅಮೆರಿಕೆಯ ನಾಲ್ಕು ಜನ ಶ್ರೇಷ್ಠ ಅಧ್ಯಕ್ಷರಲ್ಲಿ ಅಬ್ರಹಾಂ ಲಿಂಕನ್ ಒಬ್ಬನು.
ಅಂತಃಕಲಹದಿಂದ ದೇಶವೇ ಒಡೆದುಹೋಗುವ ದುರ್ಧರ ಪ್ರಸಂಗದಲ್ಲಿ ‘ನನ್ನ ಪರಮೋಚ್ಚ ಗುರಿ ರಾಷ್ಟ್ರದ ಐಕ್ಯ’ ಎಂದು ಸಾರಿ ದೇಶದ ಅಖಂಡತೆಯನ್ನು ಉಳಿಸಿದ ಮಹಾನುಭಾವ ಅಬ್ರಹಾಂ ಲಿಂಕನ್. ಇತರರಿಗೆ ಸ್ವಾತಂತ್ರ್ಯ ನೀಡದವನಿಗೆ ವೈಯಕ್ತಿಕ ಸ್ವಾತಂತ್ರ ದ ಹಕ್ಕಿಲ್ಲ. ಗುಲಾಮಗಿರಿಯು ಎಲ್ಲ ಕಡೆಯಲ್ಲಿಯೂ ಸಂಪೂರ್ಣವಾಗಿ ನಿರ್ನಾಮವಾಗಲೇಬೇಕು ಎಂದು ನೂರು ವರುಷಗಳ ಹಿಂದೆಯೆ ಘೋಷಿಸಿ ಗುಲಾಮರ ಬಂಧವಿಮೋಚನೆಗಾಗಿ ಹೋರಾಡಿದ ಧೀರ ಮಾನವ ಅಬ್ರಹಾಂ ಲಿಂಕನ್..." ಪಾಠದ ಆರಂಭಿಕ ವಾಕ್ಯಗಳನ್ನು ಓದಿದಾಗ, ಗಡ್ಡಧಾರಿ ಲಿಂಕನ್‌ನ ಚಿತ್ರವನ್ನು ನೋಡಿ ದಾಗ, ಒಂದುರೀತಿಯ ರೋಮಾಂಚನವಾಯಿತು.
ಐದನೆಯ ತರಗತಿಯಲ್ಲಿದ್ದಾಗ ಓದಿದ್ದ ಪಾಠ, ಕಲಿಸಿದ್ದ ಗುರುಗಳು, ಜತೆಯಲ್ಲಿದ್ದ ಸಹಪಾಠಿಗಳು, ಶಾಲಾದಿನಗಳು, ಆ ಕಾಲದಲ್ಲಿನ ನಮ್ಮ ದಿನಚರಿ... ಎಲ್ಲ ಒಮ್ಮೆ ಕಣ್ಮುಂದೆ ಬಂದುಹೋದುವು. “ಬಡ ಕುಟುಂಬವೊಂದರಲ್ಲಿ 1809ರ ಫೆಬ್ರವರಿ 12ರಂದು ಲಿಂಕನ್ ಜನನ. ಬಾಲ್ಯದಲ್ಲಿ ಸರಿಯಾದ ಶಿಕ್ಷಣ ದೊರಕಲಿಲ್ಲ.
ಶಾಲೆಗೆ ಹೋಗಿ ಕಲಿತದ್ದು ಕೇವಲ ಒಂದು ವರುಷ ಆದರೂ ಸ್ವಂತ ಪರಿಶ್ರಮದಿಂದ ಕಷ್ಟಪಟ್ಟು ಕಲಿತು ವಕೀಲನಾದನು. ಅದಕ್ಕೆ ಮುನ್ನ ಮರ ಕಡಿಯುವ, ತೆಪ್ಪ ದೋಣಿಗಳನ್ನು ನಡೆಸುವ ಕೆಲಸ ಮಾಡಿದನು. ಕೆಲಕಾಲ ಹಳ್ಳಿಯ ಪೋಸ್ಟ್‌ಮಾಸ್ಟರ್ ನೌಕರಿಯನ್ನೂ ಮಾಡಿದನು..." ಮುಂತಾದ ವಿವರಗಳು ಆ ಪಾಠದಲ್ಲಿ ಬರುತ್ತವೆ.
ತುಸು ಆಶ್ಚರ್ಯವೆನಿಸುವಂಥ ಒಂದು ಅಂಶವೂ ಇದೆ: ಲಿಂಕನ್ ಒಂಬತ್ತು ವರ್ಷದವನಾಗಿದ್ದಾಗ ಅವನ ತಾಯಿಯು ತೀರಿಕೊಂಡಳು ಎಂಬ ಮಾಹಿತಿಯ ಬಳಿಕ ‘ಆದರೆ ಮಲತಾಯಿಯು ಲಿಂಕನ್ ನನ್ನು ಚೆನ್ನಾಗಿ ನೋಡಿಕೊಂಡಳು. ಯಾವ ತಾಯಿಯಾದರೂ ಹೆಮ್ಮೆ ಪಡುವಂಥ ಮಗ ಲಿಂಕನ್ ಎಂದು ಅವಳು ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದಳಂತೆ’ ಎಂಬ ವಾಕ್ಯ.
ಸಾಮಾನ್ಯವಾಗಿ ಮಲತಾಯಿಯೆಂದರೆ ಗೋಳಿನ ಕಥೆಗಳೇ ಇರುವಾಗ ಇಂಥದ್ದು ನಿಜಕ್ಕೂ ಅಪ ರೂಪ! ಮುಂದುವರಿಯುತ್ತ ಸಂಕ್ಷಿಪ್ತ ರೂಪದಲ್ಲಿ ಲಿಂಕನ್ ಜೀವನಚರಿತ್ರೆ- ಆಗಿನ ರಾಜಕೀಯ ಚರ್ಚೆಗಳಲ್ಲಿ ಲಿಂಕನ್ನನ ವಾದಸರಣಿಯನ್ನು ಮೆಚ್ಚಿದ ಜನ ಆತನನ್ನು ನ್ಯಾಯವಿಧಾಯಕ ಸಭೆಗೆ ಆರಿಸಿದ್ದು, ಮುಂದೆ ಆತ ಅಮೆರಿಕ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್ಸಿನ ಸದಸ್ಯನಾದದ್ದು, ಗುಲಾಮ ಗಿರಿ ಪದ್ಧತಿಯನ್ನು ರದ್ದುಗೊಳಿಸುವ ವಿಧೇಯಕವನ್ನು ಮಂಡಿಸಿದ್ದು, ಮೊದಲೊಮ್ಮೆ ಅದು ಮುರಿದು ಬಿದ್ದದ್ದು, 1860ರಲ್ಲಿ ರಿಪಬ್ಲಿಕನ್ ಪಕ್ಷದಿಂದ ಉಮೇದುವಾರನಾಗಿ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸಿದ್ದು, ಜಯಭೇರಿ ಬಾರಿಸಿದ್ದು, ಅಮೆರಿಕದ ದಕ್ಷಿಣೋತ್ತರ ಭಾಗಗಳ ನಡುವೆ ಅಂತರ್ಯುದ್ಧ ಆರಂಭವಾಗಿ ಪೌರಸಮರವೇ ಆಗಿ ಉಲ್ಬಣಗೊಂಡಿದ್ದು, ಗೆಟ್ಟಿಸ್‌ಬರ್ಗ್‌ನಲ್ಲಿನ ಲಿಂಕನ್‌ನ ಅತಿ ಪ್ರಸಿದ್ಧ ಭಾಷಣ, 1864ರಲ್ಲಿ ಎರಡನೆಯ ಬಾರಿ ಅಧ್ಯಕ್ಷನಾಗಿ ಆಯ್ಕೆ, ಆಂತರಿಕ ಯುದ್ಧದ ಕೊನೆ, ತನ್ಮೂಲಕ ಗುಲಾಮಗಿರಿಯ ಅಂತ್ಯ, ವಿಜಯೋತ್ಸವದ ಖುಷಿಯಲ್ಲಿ ನಾಟಕ ವೀಕ್ಷಣೆಗೆಂದು ಲಿಂಕನ್ ಹೋಗಿದ್ದಾಗ ಅಜ್ಞಾತ ವ್ಯಕ್ತಿಯೊಬ್ಬನಿಂದ ಗುಂಡಿಕ್ಕಿ ಕೊಲೆ- ಎಂಬಲ್ಲಿಯವರೆಗೆ ಎಲ್ಲವೂ ಆ ಪಾಠದಲ್ಲಿದೆ.
“ಲಿಂಕನ್ನನು ಮಡಿದನು. ಆದರೆ ಅವನ ವಿಚಾರಗಳು ಸಾಯಲಿಲ್ಲ. ಲಿಂಕನ್ ಅಮರನಾದನು." ವಾಕ್ಯಗಳೊಂದಿಗೆ ಪಾಠ ಮುಗಿಯುತ್ತದೆ. ಐದನೆಯ ತರಗತಿಯಲ್ಲಿ ಅಬ್ರಹಾಂ ಲಿಂಕನ್ ಬಗ್ಗೆ ಓದಿದ್ದು ಗಾಢಪ್ರಭಾವ ಬೀರಿತು ಎನ್ನಬಹುದೋ ಇಲ್ಲವೋ ಗೊತ್ತಿಲ್ಲ, ಆದರೆ ಲಿಂಕನ್ ಅಂದರೆ ಯಾರಿಗೇ ಆದರೂ ಮನಸ್ಸಿನಲ್ಲಿ ಗೌರವಭಾವ ಮೂಡುತ್ತದೆ.
ಅಂತೆಯೇ ನನಗೂ. ‘ಇಟ್ ಸೋ ಹ್ಯಾಪ್ಪನ್ಡ್’ ಎನ್ನುವಂತೆ 25 ವರ್ಷಗಳ ಹಿಂದೆ ನಾನು ಅಮೆರಿಕ ದೇಶಕ್ಕೆ ವಲಸೆ ಬಂದಾಗ ಮೊದಲಿಗೆ ತಳವೂರಿದ್ದು ಶಿಕಾಗೊ ನಗರವಿರುವ ಇಲಿನಾಯ್ ಸಂಸ್ಥಾನ ದಲ್ಲಿ. ಅದನ್ನು ಲ್ಯಾಂಡ್ ಆಫ್ ಲಿಂಕನ್ ಎಂದು ಕರೆಯುತ್ತಾರೆ- ಅಬ್ರಹಾಂ ಲಿಂಕನ್ ತನ್ನ ಜೀವಿತದ ಬಹಳಷ್ಟು ವರ್ಷಗಳನ್ನು ಇಲಿನಾಯ್ ಸಂಸ್ಥಾನದಲ್ಲಿ ಕಳೆದಿದ್ದರಿಂದ. ಅಲ್ಲಿ ವಾಹನಗಳ ನಂಬರ್‌ಪ್ಲೇಟ್‌ನ ಮೇಲೆಯೂ ಲ್ಯಾಂಡ್ ಆಫ್ ಲಿಂಕನ್ ಎಂದು ಅಚ್ಚಾಗಿದ್ದಿರುತ್ತದೆ.
ಲಿಂಕನ್‌ನ ಸಮಾಽ ಇರುವುದು ಇಲಿನಾಯ್ ಸಂಸ್ಥಾನದ ಸ್ಪ್ರಿಂಗ್‌ಫೀಲ್ ನಲ್ಲಿ. ಅಮೆರಿಕದಲ್ಲಿ ಚಲಾವಣೆಯ ನಾಣ್ಯಗಳ ಪೈಕಿ ಅತಿಹೆಚ್ಚು ಬಳಕೆಯಾಗುವ ಪೆನ್ನಿ(ಒಂದು ಸೆಂಟ್) ನಾಣ್ಯದ ಮೇಲೆ ಅಬ್ರಹಾಂ ಲಿಂಕನ್‌ನದೇ ಚಿತ್ರವಿರುವುದು; ನೋಟುಗಳ ಪೈಕಿ 5 ಡಾಲರ್‌ಗಳ ನೋಟಿನ ಮೇಲೂ ಅಬ್ರಹಾಂ ಲಿಂಕನ್‌ನ ಚಿತ್ರವಿರುವುದು- ಇದನ್ನೆಲ್ಲ ಈ ದೇಶಕ್ಕೆ ಬಂದ ಮೊದಲಲ್ಲೇ ಗಮನಿಸಿದ್ದೆ, ಲಿಂಕನ್ ಬಗೆಗಿನ ಗೌರವದಿಂದ. ಶಿಕಾಗೊದಿಂದ ಉದ್ಯೋಗ ನಿಮಿತ್ತ ರಾಜಧಾನಿ ವಾಷಿಂಗ್ಟನ್ ಡಿಸಿ ಪ್ರದೇಶಕ್ಕೆ ಬಂದ ನಾನು ಇಲ್ಲಿಯ ಸ್ಮಾರಕಗಳ ಪೈಕಿ ಅತ್ಯಧಿಕ ಬಾರಿ ಭೇಟಿಯಿತ್ತದ್ದು, ಬಂಧು ಮಿತ್ರರು ಯಾರೇ ಬಂದರೂ ಅವರಿಗೆ ವಾಷಿಂಗ್ಟನ್ ಡಿಸಿ ದರ್ಶನ ಆರಂಭಿಸುವುದು ಲಿಂಕನ್ ಮೆಮೋರಿಯಲ್‌ನಿಂದಲೇ.
ಅಕ್ಕಪಕ್ಕ ಕೈಗಳನ್ನಿಟ್ಟು ಕುರ್ಚಿಯ ಮೇಲೆ ಕುಳಿತುಕೊಂಡ ಭಂಗಿಯಲ್ಲಿರುವ ಲಿಂಕನ್‌ನ ಬೃಹತ್ ಪ್ರತಿಮೆ, ಪ್ರತಿಮೆಯ ದೃಷ್ಟಿಪಾತಳಿಗೆ ಸರಿಯಾಗಿ ಒಂದು ಪ್ರತಿಫಲನ ಕೊಳ, ಅದೇ ಸರಳರೇಖೆಯಲ್ಲಿ ವಾಷಿಂಗ್ಟನ್ ಮಾನ್ಯುಮೆಂಟ್ ಮತ್ತು ಯುಎಸ್ ಕ್ಯಾಪಿಟೋಲ್. ಈ ಮೂರರೊಡನೆ ತ್ರಿಭುಜಾಕೃತಿ ನಿರ್ಮಿಸುವಂತಿರುವ ಶ್ವೇತಭವನ, ಈಗ್ಗೆ ಹತ್ತಿಪ್ಪತ್ತು ವರ್ಷಗಳಿಂದೀಚೆಗೆ ಹೊಸದಾಗಿ ಸೇರಿ ಕೊಂಡಿರುವ ವರ್ಲ್ಡ್ ವಾರ್ ಮೆಮೋರಿಯಲ್... ಹಿತವಾದ ಬಿಸಿಲಿರುವ ದಿನಗಳಲ್ಲಿ ಇವೆಲ್ಲವನ್ನು ನೋಡುವುದು, ಸುತ್ತ ಓಡಾಡುವುದು ಒಂದು ವಿಶೇಷ ಅನುಭವವೇ.
ಆದರೂ ಭಾವುಕತೆಯ ತೀವ್ರ ಅನುಭೂತಿಯಾಗುವುದು ಲಿಂಕನ್‌ನ ಪ್ರತಿಮೆಯೆದುರಿಗೆ ನಿಂತಾಗಲೇ. ಅಮೆರಿಕದಲ್ಲಿ ಇದುವರೆಗೆ ಆಗಿಹೋದ ಅಧ್ಯಕ್ಷರುಗಳ ಪೈಕಿ ಗ್ರೇಟೆಸ್ಟ್ ಅಂತನಿಸಿಕೊಂಡವನು ಅಬ್ರಹಾಂ ಲಿಂಕನ್. ಜನಸಾಮಾನ್ಯರ ಪ್ರೀತಿಪಾತ್ರನಾಗಿ, ಸರಳ ಪ್ರಾಮಾಣಿಕ ಸ್ವಭಾವದ ನೇತಾರ ನಾಗಿ, ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಿದ ಮುಂದಾಳುವಾಗಿ, ಮುತ್ಸದ್ದಿಯಾಗಿ, ಲಿಂಕನ್‌ಗೆ ಸಿಕ್ಕಿರುವಷ್ಟು ಜನಮನ್ನಣೆ ಬೇರಾರಿಗೂ ಸಿಕ್ಕಿಲ್ಲ.
ಜಾರ್ಜ್ ವಾಷಿಂಗ್ಟನ್‌ನನ್ನು ಮೊತ್ತಮೊದಲ ಅಧ್ಯಕ್ಷನೆಂಬ ಕಾರಣಕ್ಕೆ, ಥಾಮಸ್ ಜೆಫರ್ಸನ್ ನನ್ನು ‘ಡಿಕ್ಲರೇಷನ್ ಆಫ್ ಇಂಡಿಪೆಂಡೆನ್ಸ್’ ಬರೆದವನೆಂಬ ಕಾರಣಕ್ಕೆ, ಫ್ರಾಂಕ್ಲಿನ್ ರೂಸ್‌ವೆಲ್ಟ್‌ನನ್ನು ವಾಣಿಜ್ಯಾಭಿವೃದ್ಧಿಯ ಹರಿಕಾರನೆಂಬ ಕಾರಣಕ್ಕೆ ವಿಶೇಷವಾಗಿ ಸ್ಮರಿಸಿ ಗೌರವಿಸಲಾಗುತ್ತದಾದರೂ, ಅಬ್ರಹಾಂ ಲಿಂಕನ್ ಯಾವತ್ತಿಗೂ ಅಗ್ರಮಾನ್ಯ.
ಗೆಟ್ಟಿಸ್‌ಬರ್ಗ್‌ನಲ್ಲಿ ಅಬ್ರಹಾಂ ಲಿಂಕನ್ ಮಾಡಿದ್ದ ಭಾಷಣ- ಚಿಕ್ಕದಾದರೂ ಅತ್ಯಂತ ಪರಿಣಾಮ ಕಾರಿಯೆನಿಸಿದ್ದು- ಈಗಲೂ ಅಮೆರಿಕದ ಇತಿಹಾಸದಲ್ಲೇ ಅತ್ಯುತ್ಕೃಷ್ಟವೆಂದು ಪರಿಗಣನೆಯಾಗು ತ್ತದೆ. ಸುಮಾರು 18000ಕ್ಕೂ ಹೆಚ್ಚು ಪುಸ್ತಕಗಳು ಅಬ್ರಹಾಂ ಲಿಂಕನ್ ಬಗ್ಗೆ ಬರೆದಿರು ವಂಥವು ಇದುವರೆಗೆ ಪ್ರಕಟವಾಗಿವೆಯಂತೆ. ಅದು ಅಕ್ಷರಶಃ ಔನ್ನತ್ಯ ಎಂದುಕೊಳ್ಳುವುದಾದರೆ ಭೌತಿಕ ವಾಗಿಯೂ ಲಿಂಕನ್ ಅತಿ ಎತ್ತರದ ಆಳು!
ಭರ್ತಿ ಆರು ಅಡಿ ನಾಲ್ಕು ಇಂಚು ಎತ್ತರವಿದ್ದುದರಿಂದ ಟಾಲೆಸ್ಟ್ ಪ್ರೆಸಿಡೆಂಟ್ ಎಂಬ ಹೆಗ್ಗಳಿಕೆಯೂ ಲಿಂಕನ್‌ಗೇ ಸಲ್ಲುತ್ತದೆ. ಆತನಿಗಿಂತ ಅರ್ಧ ಇಂಚಿನಷ್ಟು ಕಡಿಮೆಯಿದ್ದ ಲಿಂಡನ್ ಬಿ.ಜಾನ್ಸನ್‌ಗೆ ಎರಡನೆಯ ಸ್ಥಾನ. ಕೇವಲ ಐದಡಿ ನಾಲ್ಕಿಂಚು ಎತ್ತರವಿದ್ದ ಜೇಮ್ಸ್ ಮ್ಯಾಡಿಸನ್ ಅತ್ಯಂತ ಗಿಡ್ಡ ನಿಲುವಿನ ಅಧ್ಯಕ್ಷನಾಗಿದ್ದವನು. ಲಿಂಕನ್‌ನ ನೀಳಕಾಯದಿಂದಾಗಿಯೇ ಇರಬಹುದು ಆತ ಒಬ್ಬ ಅಸಾಧಾರಣ ಕುಸ್ತಿಪಟುವೂ ಆಗಿದ್ದನು.
21ರ ವಯಸ್ಸಿಗೆಲ್ಲ ಕುಸ್ತಿ ಚಾಂಪಿಯನ್‌ಶಿಪ್ ಗಳಿಸಿದ್ದನು. ಕಾನೂನು ಓದುತ್ತಿದ್ದಾಗಲೂ ಹವ್ಯಾಸ ಕ್ಕೆಂದು ಕುಸ್ತಿಯಾಡುತ್ತಿದ್ದನು. 10-12 ವರ್ಷಗಳ ಅವಧಿಯಲ್ಲಿ 300ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ವಿಜೇತನಾಗಿದ್ದನು. 1992ರಲ್ಲಿ ಅಬ್ರಹಾಂ ಲಿಂಕನ್ ನನ್ನು ಮರಣೋತ್ತರವಾಗಿ ಅಮೆರಿಕದ ನ್ಯಾಷನಲ್ ರೆಸ್ಲಿಂಗ್ ಹಾಲ್ ಆಫ್ ಫ್ರೇಮ್‌ನಲ್ಲಿ ಸೇರಿಸಿ ಗೌರವಿಸಲಾಗಿತ್ತು. ಲಿಂಕನ್‌ನ ಎತ್ತರವಷ್ಟೇ ಅಲ್ಲ, ಪಾದಗಳ ಗಾತ್ರವೂ ದಢೂತಿಯೇ. ಆತನ ಶೂ ಸೈಜ್ 14 ಇತ್ತೆಂಬುದೂ ಬಹುಚರ್ಚಿತ ಸಂಗತಿ. ಅದರಿಂದಾಗಿ ಕಾಲುಗಳಿಗೆ ಹೊಂದುವ ಪಾದರಕ್ಷೆ ಸಿಗುವುದು ಕಷ್ಟವಾಗುತ್ತಿತ್ತು.
ತಪ್ಪು ಸೈಜಿನ ಶೂ ಧರಿಸಿ ಕಾಲಲ್ಲಿ ಗುಳ್ಳೆಯೇಳುತ್ತಿತ್ತು. ಶ್ವೇತಭವನದಲ್ಲಿ ಗಣ್ಯರ ಔತಣಕೂಟ ಸಂದರ್ಭಗಳಲ್ಲಿ ಫಾರ್ಮಲ್ ಶೂಸ್ ಧರಿಸದೆ ಬಾತ್‌ರೂಮ್ ಚಪ್ಪಲ್ ಹಾಕ್ಕೊಂಡು ಓಡಾಡುತ್ತಿದ್ದ ಲಿಂಕನ್‌ನಿಂದಾಗಿ ಅಲ್ಲಿ ಮುಜುಗರ ಪರಿಸ್ಥಿತಿ ಉಂಟಾಗುತ್ತಿತ್ತು. ಕೊನೆಗೂ ನ್ಯೂಯಾರ್ಕ್‌ನ ಡಾ. ಝೆಕರೀ ಎಂಬಾತ ಲಿಂಕನ್‌ನ ಪಾದಗಳಿಗೆ ಸರಿಹೊಂದುವ ವಿಶೇಷ ಶೂಗಳನ್ನು ನಿರ್ಮಿಸಿ ಒದ ಗಿಸುತ್ತಿದ್ದನಂತೆ.
ಲಿಂಕನ್‌ನ ಕುರುಚಲು ಗಡ್ಡದ ಬಗ್ಗೆಯೂ ಸ್ವಾರಸ್ಯಕರ ಐತಿಹ್ಯಗಳಿವೆ. ಮೊತ್ತಮೊದಲ ಗಡ್ಡಧಾರಿ ಅಮೆರಿಕಾಧ್ಯಕ್ಷ ಎಂಬ ಖ್ಯಾತಿ ಸಲ್ಲುವುದೂ ಲಿಂಕನ್‌ಗೇ. 1860ರಲ್ಲಿ ಅಧ್ಯಕ್ಷಗಿರಿಗೆ ಸ್ಪರ್ಧಿಸಿದಾಗ ಆಗಿನ್ನೂ ಲಿಂಕನ್ ಗಡ್ಡ ಬಿಟ್ಟಿರಲಿಲ್ಲ. ಚುನಾವಣಾ ಪ್ರಚಾರ ತುರುಸಿನಿಂದ ನಡೆದಿದ್ದಾಗ ನ್ಯೂ ಯಾರ್ಕ್‌ನ ವೆಸ್ ಫೀಲ್ಡ್ ಎಂಬಲ್ಲಿನ ಚಿಕ್ಕ ಹುಡುಗಿಯೊಬ್ಬಳು, 11 ವರ್ಷ ವಯಸ್ಸಿನ ಗ್ರೇಸ್ ಬೆಡೆಲ್ ಎಂಬಾಕೆ, ಲಿಂಕನ್‌ಗೆ ಒಂದು ಪತ್ರ ಬರೆದಳು: ‘ನನಗೆ ನಾಲ್ಕು ಮಂದಿ ಅಣ್ಣಂದಿರು.
ಅವರಲ್ಲಿಬ್ಬರು ನಿಮಗೇ ಮತ ಹಾಕುವವರಿದ್ದಾರಂತೆ. ಒಂದುವೇಳೆ ನೀವು ಗಡ್ಡ-ಮೀಸೆ ಬೋಳಿಸದೆ ಹಾಗೆಯೇ ಬಿಟ್ಟರೆ ಇನ್ನೂ ಚಂದ ಕಾಣುತ್ತೀರಿ. ನನ್ನ ಉಳಿದಿಬ್ಬರು ಅಣ್ಣಂದಿರನ್ನೂ ಆಗ ನಿಮಗೆ ಮತ ಹಾಕುವಂತೆ ನಾನು ಪುಸಲಾಯಿಸುತ್ತೇನೆ. ನಾನು ಹೀಗೆ ಬರೆಯುತ್ತಿರುವುದನ್ನು ಉದ್ಧಟತನ ವೆಂದು ನೀವು ಭಾವಿಸುವುದಿಲ್ಲ ಎಂದುಕೊಂಡಿದ್ದೇನೆ. ಆದರೆ ನನ್ನ ಮನದಾಳದ ಮಾತೇನೆಂದರೆ ನಿಮ್ಮ ಮುಖಕ್ಕೆ ಗಡ್ಡ-ಮೀಸೆ ಖಂಡಿತ ಶೋಭೆ ತರುತ್ತದೆ.
ದೇಶದ ಹೆಂಗಳೆಯರೆಲ್ಲ ಇದನ್ನು ಇಷ್ಟಪಡುತ್ತಾರೆ ಮತ್ತು ತಮ್ಮತಮ್ಮ ಗಂಡಂದಿರನ್ನು ನಿಮಗೇ ಮತ ಹಾಕುವಂತೆ ಒತ್ತಾಯಿಸುತ್ತಾರೆ. ನೀವು ರಾಷ್ಟ್ರಾಧ್ಯಕ್ಷರಾಗುವ ಹಾದಿ ಸುಗಮವಾಗುತ್ತದೆ’. ಚಿಕ್ಕ ಹುಡುಗಿಯ ಆ ಪತ್ರವನ್ನೋದಿದ ಲಿಂಕನ್ ಆಕೆಗೆ ಪ್ರಾಮಾಣಿಕವಾಗಿ ಉತ್ತರವನ್ನೂ ಬರೆದಿದ್ದನಂತೆ. ‘ಇದುವರೆಗೂ ಗಡ್ಡ ಬೆಳೆಸದ ನಾನು ಈಗ ಚುನಾವಣೆ ಸ್ಟೈಲ್ ಎಂದು ಗಡ್ಡ ಬೆಳೆಸಿದರೆ ಜನ ತಮಾಷೆ ಮಾಡಲಿಕ್ಕಿಲ್ಲವೇ?’ ಎಂದು ಹಿಂಜರಿಕೆ ವ್ಯಕ್ತಪಡಿಸಿದ್ದನಂತೆ.
ಆ ವರ್ಷ ನವೆಂಬರ್‌ನಲ್ಲಿ ಚುನಾವಣೆ ನಡೆದಾಗ ಲಿಂಕನ್‌ನ ಗಡ್ಡ-ಮೀಸೆ ಬೋಳಿಸಿದ್ದೇ ಇತ್ತು. ಆದರೆ ಆಮೇಲೆ ಏನನ್ನಿಸಿತೋ, ಮುಂದಿನ ಜನವರಿ ತಿಂಗಳ ಹೊತ್ತಿಗೆ ಲಿಂಕನ್ ಗಡ್ಡಧಾರಿಯಾಗಿ ದ್ದನು! ಫೆಬ್ರವರಿಯಲ್ಲಿ ಒಮ್ಮೆ ನ್ಯೂಯಾರ್ಕ್‌ನ ವೆಸ್ಟ್‌ಫೀಲ್ಡ್‌ನಲ್ಲಿ ಗ್ರೇಸ್ ಬೆಡೆಲ್ ಳನ್ನು ಮುಖತಃ ಭೇಟಿಯಾದ ಲಿಂಕನ್, ಮಾರ್ಚ್‌ನಲ್ಲಿ ವಾಷಿಂಗ್ಟನ್ ಡಿಸಿ.ಗೆ ಬಂದು ಪ್ರಮಾಣವಚನ ಸ್ವೀಕರಿಸಿದಾಗ ಮೊತ್ತಮೊದಲ ಗಡ್ಡಧಾರಿ ಪ್ರೆಸಿಡೆಂಟ್ ಎನಿಸಿಕೊಂಡನು!
ಗಡ್ಡದಂತೆಯೇ ಲಿಂಕನ್‌ನ ಇನ್ನೊಂದು ಹೆಗ್ಗುರುತು ಆತ ತಲೆಮೇಲೆ ಧರಿಸುತ್ತಿದ್ದ ಸ್ಟವ್‌ಪೈಪ್ ಹ್ಯಾಟ್. ಮೊದಲೇ ಎತ್ತರದ ನಿಲುವಿದ್ದ ಆಸಾಮಿ ಆ ಹ್ಯಾಟ್‌ನಿಂದಾಗಿ ಮತ್ತಷ್ಟು ಎತ್ತರ ಕಾಣು ತ್ತಿದ್ದನು. ಗುಂಪಿನಲ್ಲಿ ಎಲ್ಲರಿಗಿಂತ ಪ್ರತ್ಯೇಕವಾಗಿ ಎದ್ದುಕಾಣುವಂತಾಗುತ್ತಿತ್ತು. ಆ ಹ್ಯಾಟ್ ಅನ್ನು ಲಿಂಕನ್ ಕೆಲವು ಚಿಕ್ಕಪುಟ್ಟ ಕಾಗದಗಳ, ಭಾಷಣದ ಚೀಟಿಗಳ, ಖಾಸಗಿ ಪತ್ರಗಳ, ಸರಕಾರಿ ಕಡತ-ದಾಖಲೆಗಳ ಶೇಖರಣೆಗೂ ಬಳಸುತ್ತಿದ್ದನಂತೆ. 1850ರಲ್ಲಿ ಒಮ್ಮೆ ರಿಚರ್ಡ್ ಎಸ್.ಥಾಮಸ್ ಎಂಬ ರಾಜಕಾರಣಿಗೆ ಉತ್ತರ ಬರೆಯುವುದು ಏಕೆ ತಡವಾಯಿತೆಂಬುದಕ್ಕೆ ಲಿಂಕನ್ ಪ್ರಾಮಾಣಿಕ ವಾಗಿ ಕೊಟ್ಟಿದ್ದ ಕಾರಣ- “ನಿಮ್ಮ ಪತ್ರವನ್ನು ನನ್ನ ಹಳೆಯ ಹ್ಯಾಟ್‌ನಲ್ಲಿಟ್ಟಿದ್ದೆ. ಮಾರನೆಯ ದಿನವೇ ಹೊಸ ಹ್ಯಾಟ್ ಹಾಕಿಕೊಳ್ಳತೊಡಗಿದೆ, ಹಾಗಾಗಿ ನಿಮ್ಮ ಪತ್ರದ ಬಗ್ಗೆ ಮರೆತೇಹೋಗಿತ್ತು" ಎಂದು!
ಲಿಂಕನ್‌ನ ಆ ವಿಶೇಷ ಹ್ಯಾಟ್ ಆತನನ್ನು ಗುರಿಯಾಗಿಟ್ಟುಕೊಂಡಿದ್ದ ಶತ್ರುಗಳಿಗೂ ಅನುಕೂಲ ಕರವೇ ಆಗಿತ್ತು. ಆಗಸ್ಟ್ ೧೮೬೪ರಲ್ಲಿ ಒಂದು ದಿನ ಲಿಂಕನ್ ಶ್ವೇತಭವನದಿಂದ 3-4 ಮೈಲು ದೂರ ದಲ್ಲಿದ್ದ ತನ್ನ ಕ್ಯಾಟೇಜ್‌ಗೆ ಕುದುರೆಸವಾರಿ ಹೋಗುತ್ತಿದ್ದಾಗ ಒಬ್ಬ ಅಜ್ಞಾತ ವ್ಯಕ್ತಿ ಲಿಂಕನ್ ಮೇಲೆ ಗುಂಡು ಹಾರಿಸಿದ್ದನು. ಆವತ್ತು ಲಿಂಕನ್ ಎಂದಿನಂತೆಯೇ ಹ್ಯಾಟ್ ಧರಿಸಿದ್ದನಾದ್ದರಿಂದ ಅದೃಷ್ಟ ವಶಾತ್ ಗುಂಡು ಹ್ಯಾಟ್ ಗಷ್ಟೇ ತಗುಲಿ ಅದನ್ನುರುಳಿಸಿತು, ಲಿಂಕನ್‌ನ ತಲೆಯನ್ನುಳಿಸಿತು.
ಯಾರೋ ಬೇಟೆಗಾರನ ಗುರಿ ತಪ್ಪಿ ತನ್ನ ತಲೆಯತ್ತ ಬಂದಿರಬಹುದೆಂದು ಮೊದಲಿಗೊಮ್ಮೆ ಲಿಂಕನ್ ಆ ಘಟನೆಯನ್ನು ಲಘುವಾಗಿ ಪರಿಗಣಿಸಿದ್ದನಂತೆ. ಆಮೇಲೆ ಅಂಗರಕ್ಷಕ ವಾರ್ಡ್ ಲೇಮನ್ ನ ಬಳಿ ಘಟನೆಯ ಸೂಕ್ಷ್ಮವನ್ನು ಬಣ್ಣಿಸಿದನಂತೆ. ಗುಂಡು ತಗುಲಿ ತೂತಾಗಿದ್ದ ಹ್ಯಾಟ್ ಅಲ್ಲೇ ಪಕ್ಕ ಬಿದ್ದಿದ್ದು ಸಿಕ್ಕಿತ್ತು. ವಿಪರ್ಯಾಸವೆಂದರೆ ಮರುವರ್ಷ 1865ರ ಏಪ್ರಿಲ್ 14ರಂದು ವಾಷಿಂಗ್ಟನ್ ಡಿಸಿ.ಯ ಫೋರ್ಡ್ ಥಿಯೇಟರ್‌ನಲ್ಲಿ ಲಿಂಕನ್ ನಾಟಕವೀಕ್ಷಣೆಯಲ್ಲಿ ಮಗ್ನನಾಗಿದ್ದಾಗ, ಜಾನ್ ವಿಲ್ಕ್ಸ್ ಬೂತ್
ಎಂಬಾತ ಗುಂಡಿಕ್ಕಿ ಹತ್ಯೆಗೈದಾಗ, ಲಿಂಕನ್‌ನ ಅಂಗರಕ್ಷಕ ಜಾನ್ ಪಾರ್ಕರ್ ಪಕ್ಕದಲ್ಲಿರಲಿಲ್ಲ. ಯಾವಾಗಲೂ ತಲೆಮೇಲೆ ಧರಿಸಿಕೊಂಡಿರುತ್ತಿದ್ದ ಹ್ಯಾಟ್‌ಅನ್ನೂ ಲಿಂಕನ್ ಆವತ್ತು ತಲೆಯಿಂದ ತೆಗೆದು ಪಕ್ಕದಲ್ಲಿಟ್ಟುಕೊಂಡಿದ್ದನಂತೆ!
ಅಬ್ರಹಾಂ ಲಿಂಕನ್‌ಗೆ ಸಾಕುಪ್ರಾಣಿಗಳೆಂದರೆ, ಅದರಲ್ಲೂ ಬೆಕ್ಕುಗಳೆಂದರೆ, ತುಂಬ ಪ್ರೀತಿ. ಶ್ವೇತ ಭವನದಲ್ಲಿ ಬೆಕ್ಕುಗಳನ್ನು ಸಾಕಿದ ಮೊತ್ತಮೊದಲ ರಾಷ್ಟ್ರಾಧ್ಯಕ್ಷನೆಂಬ ಕೀರ್ತಿಯೂ ಅಬ್ರಹಾಂ ಲಿಂಕನ್‌ನದೇ. ಟ್ಯಾಬಿ ಮತ್ತು ಡಿಕ್ಸೀ ಎಂಬ ಹೆಸರಿನ ಎರಡು ಬೆಕ್ಕುಗಳನ್ನು ಲಿಂಕನ್ ದಂಪತಿಗೆ ಉಡುಗೊರೆಯಾಗಿ ಕೊಟ್ಟಿದ್ದವನು ಆಗಿನ ಸೆಕ್ರೆಟರಿ ಆಫ್ ಸ್ಟೇಟ್ ವಿಲಿಯಮ್ ಸಿವಾರ್ಡ್ ಎಂಬಾತ.
ಲಿಂಕನ್‌ನ ಮಾರ್ಜಾಲಪ್ರೇಮ ಎಷ್ಟಿತ್ತೆಂದರೆ ಒಮ್ಮೆ ಸಂದರ್ಶಕರೊಬ್ಬರು ಲಿಂಕನ್‌ನ ಹೆಂಡತಿ ಮೇರಿ ಟಾಡ್‌ರನ್ನು ‘ನಿಮ್ಮ ಗಂಡನ ಹವ್ಯಾಸಗಳೇನು?’ ಎಂದು ಪ್ರಶ್ನೆ ಕೇಳಿದ್ದಾಗ ಆಕೆ ಒಂದಿನಿತೂ ಹಿಂದೆಮುಂದೆ ಆಲೋಚಿಸದೆ ‘ಬೆಕ್ಕುಗಳೇ ಹವ್ಯಾಸ’ ಎಂದು ಉತ್ತರಿಸಿದ್ದರಂತೆ. ಅದರಲ್ಲೇನೂ ಉತ್ಪ್ರೇಕ್ಷೆಯಿರಲಿಲ್ಲ.
ಏಕೆಂದರೆ ಲಿಂಕನ್ ಕೆಲವೊಮ್ಮೆ ಗಂಟೆಗಟ್ಟಲೆ ಆ ಬೆಕ್ಕುಗಳೊಂದಿಗೆ ಸಂಭಾಷಣೆ ನಡೆಸುತ್ತ ಅವು ಗಳೊಂದಿಗೆ ಆಟವಾಡುತ್ತ ಸಮಯ ಕಳೆಯುತ್ತಿದ್ದನಂತೆ. “ನನ್ನ ಈ ಡಿಕ್ಸೀ ಬೆಕ್ಕು ಇದೆಯಲ್ಲ, ಇದು ನನ್ನ ಕ್ಯಾಬಿನೆಟ್‌ನಲ್ಲಿರುವ ಎಲ್ಲರಿಗಿಂತಲೂ ಸ್ಮಾರ್ಟ್ ಆಗಿದೆ!" ಎಂದು ಲಿಂಕನ್ ತನ್ನ ಬೆಕ್ಕು ಡಿಕ್ಸಿಯ ಬಗ್ಗೆ ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದುದನ್ನು ಅನೇಕರು ಕೇಳಿಸಿಕೊಂಡಿದ್ದಾರೆ.
ಟ್ಯಾಬಿಯ ಬಗ್ಗೆಯೂ ಅಷ್ಟೇ ಪ್ರೀತಿ. ಅದು ಡೈನಿಂಗ್ ಟೇಬಲ್ ಮೇಲಕ್ಕೆ ಬಂದು ಆಹಾರ ಸೇವಿಸ ತೊಡಗಿದರೂ ಅದನ್ನಲ್ಲಿಂದ ಓಡಿಸುವುದೆಲ್ಲ ಇಲ್ಲ, ಬೇಕಿದ್ದರೆ ಗಣ್ಯರಿಗೆ ಏರ್ಪಡಿಸಿದ್ದ ಔತಣ ಕೂಟವೇ ಇರಲಿ. ಹೆಂಡತಿಯೇ ಛೀ ಎಂದು ಮುಖ ಸಿಂಡರಿಸಿದರೂ ಲಿಂಕನ್ ಬೆಕ್ಕಿನ ಪರವಹಿಸಿ “ಶ್ವೇತಭವನದ ಡೈನಿಂಗ್ ಹಾಲ್‌ನಲ್ಲಿರುವ ಚಿನ್ನದ ಚಮಚಗಳು ಅಧ್ಯಕ್ಷರ ಮರ್ಯಾದೆಗೆ ತಕ್ಕು ದಾಗಿ ಇವೆಯಾದರೆ ಬೆಕ್ಕುಗಳ ಮರ್ಯಾದೆಗೂ ಏಕೆ ಕೂಡದು?" ಎನ್ನುತ್ತಿದ್ದನಂತೆ.
ಅಬ್ರಹಾಂ ಲಿಂಕನ್ ಬಗ್ಗೆ ಸಾಮಾನ್ಯವಾಗಿ ಯಾರಿಗೂ ಗೊತ್ತಿರದ ಇನ್ನೊಂದು ವಿಶಿಷ್ಟ ಸಂಗತಿ ಯೆಂದರೆ ಆತ ‘ಪೇಟೆಂಟ್ ಗೆ ಅರ್ಜಿ ಸಲ್ಲಿಸಿ ಪೇಟೆಂಟ್ ಗಳಿಸಿರುವ ಏಕೈಕ ಅಮೆರಿಕಾಧ್ಯಕ್ಷ’ ಎಂಬ ವಿಚಾರ! ದೋಣಿ ಮತ್ತು ತೆಪ್ಪಗಳನ್ನು ನಡೆಸುವುದರಲ್ಲಿ ನಿಷ್ಣಾತನಾಗಿದ್ದ ಲಿಂಕನ್ ರಾಜಕೀಯಕ್ಕೆ ಧುಮುಕುವುದಕ್ಕೆ ಮೊದಲು ಅದನ್ನೇ ಹೊಟ್ಟೆಪಾಡಿಗೆ ಮಾಡಿಕೊಂಡಿದ್ದವನು.
ಮಿಸ್ಸಿಸ್ಸಿಪ್ಪಿ ನದಿಯಲ್ಲಿ ಫೆರ್ರಿ ಆಪರೇಟರ್ ಆಗಿ ಕೆಲಸ ಮಾಡಿದ್ದೂ ಇತ್ತು. ದೋಣಿಗಳು ಕೆಲ ವೊಮ್ಮೆ ನದಿಯ ಜೌಗು ಪ್ರದೇಶದಲ್ಲಿ ಮರಳಿನಲ್ಲಿ ಹೂತುಕೊಳ್ಳುವುದು, ಅಲ್ಲಿಂದ ಎಬ್ಬಿಸಲಿಕ್ಕೆ ಕಷ್ಟಪಡುವುದು ಸಾಮಾನ್ಯವಾಗಿ ಹೋಗಿತ್ತು. ಒಮ್ಮೆಯಂತೂ ಸ್ವತಃ ಲಿಂಕನ್ ನಡೆಸುತ್ತಿದ್ದ ದೋಣಿ ಮರಳಿನಲ್ಲಿ ಹೂತುಹೋಗಿ ತುಂಬ ಕಷ್ಟಪಡಬೇಕಾಯಿತು. ಇದಕ್ಕೆ ಏನಾದರೊಂದು ಉಪಾಯ ಹುಡುಕಬೇಕೆಂದುಕೊಂಡ ಲಿಂಕನ್, ದೋಣಿಯ ಎರಡೂ ಬದಿಗಳಿಗೆ ಏರ್‌ಚೇಂಬರ್ (ವಾಯು ಕೋಶ)ಗಳನ್ನು ಅಳವಡಿಸಿ ಅವುಗಳ ನೆರವಿನಿಂದ ದೋಣಿಗಳನ್ನು ಮೇಲಕ್ಕೆತ್ತುವುದು ಸುಲಭ ವೆಂದು ಕಂಡುಕೊಂಡನು.
ಸ್ಪ್ರಿಂಗ್ ಫೀಲ್ಡ್‌ನಲ್ಲಿ ವಾಲ್ಟರ್ ಡೇವಿಸ್ ಎಂಬೊಬ್ಬ ಆರ್ಕಿಟೆಕ್ಟ್‌ನ ನೆರವು ಪಡೆದು ಅದರದೊಂದು ಕಚ್ಚಾ ಮಾದರಿಯನ್ನೂ ಸಿದ್ಧಪಡಿಸಿದನು. ಈ ಸಾಧನವನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಲಿಲ್ಲವಾದರೂ ವಾಷಿಂಗ್ಟನ್ ಡಿಸಿಗೆ ತೆಗೆದುಕೊಂಡು ಬಂದನು. ಪೇಟೆಂಟ್‌ಗೆ ಅರ್ಜಿ ಸಲ್ಲಿಸಿ 1849ರ ಮೇ 22ರಂದು ಪೇಟೆಂಟ್ ಪಡೆದುಕೊಂಡನು. ಹೀಗೆ ಹಲವು ಪ್ರಥಮಗಳ ಪ್ರೆಸಿಡೆಂಟ್ ಅಬ್ರಹಾಂ ಲಿಂಕನ್ ಜನಾನುರಾಗದಲ್ಲೂ ನಿರಂತರ ಪ್ರಥಮಸ್ಥಾನದಲ್ಲಿ ಇರುವುದು ಸಹಜವೇ. Honest Abe ಎಂಬ ಪ್ರೀತಿಯ ಅಭಿಧಾನವೊಂದೇ ಸಾಕು ಅಮರತ್ವದ ದ್ಯೋತಕವಾಗಿ.