#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Mahakumbh 2025: ಕುಂಭಮೇಳದ ಅಮೃತ ಸ್ನಾನಕ್ಕೆ ಪಾಪಗಳನ್ನು ತೊಳೆಯುವ ಶಕ್ತಿ ಇದೆಯೇ? ಇಲ್ಲಿದೆ ವಿವರವಾದ ಮಾಹಿತಿ

ಮಹಾಕುಂಭಮೇಳ ಪ್ರಾರಂಭಗೊಂಡು ಯಶಸ್ವಿಯಾಗಿ ನಡೆಯುತ್ತಿದೆ. ಈ ಕುಂಭಮೇಳದಲ್ಲಿ ಕೈಗೊಳ್ಳುವ ಪುಣ್ಯಸ್ನಾನದ ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ವಿವರ.

ಕುಂಭಮೇಳದ ಅಮೃತ ಸ್ನಾನಕ್ಕೆ ಯಾಕಿಷ್ಟು ಪ್ರಾಮುಖ್ಯತೆ? ಪಾಪ ತೊಳೆಯುವ ಶಕ್ತಿ ಇದಕ್ಕಿದೆಯೇ?

ಮಹಾ ಕುಂಭಮೇಳ

Profile Sushmitha Jain Jan 26, 2025 7:30 AM

ಲಖನೌ: ಉತ್ತರಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನ (Prayagraj) ತ್ರಿವೇಣಿ ಸಂಗಮದಲ್ಲಿ (Triveni Sangam) ಜ.13ರಂದು ಚಾಲನೆ ಪಡೆದುಕೊಂಡಿರುವ ಮಹಾ ಕುಂಭಮೇಳದಲ್ಲಿ (Mahakumbh MelaMela 2025) ಈಗಾಗಲೇ ದೇಶ-ವಿದೇಶಗಳ ಲಕ್ಷಾಂತರ ಜನರು ಪುಣ್ಯ ಸ್ನಾನವನ್ನು ಕೈಗೊಂಡಿದ್ದಾರೆ. ವಿವಿಧ ಅಖಾಡಗಳ ಸಾಧು ಸಂತರು, ನಾಗಾ ಸಾಧುಗಳು, ಅಘೋರಿಗಳು ಈ ಪುಣ್ಯ ಸ್ನಾನ ಕಾರ್ಯದಲ್ಲಿ ಪಾಲು ಪಡೆಯುತ್ತಿದ್ದಾರೆ.

ಈ ಬಾರಿಯ ಮಹಾ ಕುಂಭಮೇಳ 144 ವರ್ಷಗಳ ಬಳಿಕ ನಡೆಯುತ್ತಿದ್ದು, ಇದನ್ನು ಪರಮ ಪಾವನವೆಂದೇ ಪರಿಗಣಿಸಲಾಗುತ್ತಿದೆ. ನಿರ್ದಿಷ್ಟ ದಿನಗಳಂದು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನವನ್ನು ಕೈಗೊಳ್ಳುವುದರಿಂದ ಅಂತವರ ಪಾಪಗಳೆಲ್ಲ ತೊಳೆದು ಹೋಗಿ ಕರ್ಮ ಸುಧಾರಣೆಯಾಗುತ್ತದೆ ಎಂಬ ನಂಬಿಕೆಯೂ ಇದೆ.

ಹಾಗಾದರೆ ಮಹಾಕುಂಭದಲ್ಲಿ ಪುಣ್ಯ ಸ್ನಾನವನ್ನು ಮಾಡುವುದರ, ಅಮೃತ ಸ್ನಾನದ ದಿನಾಂಕಗಳ ಮಹತ್ವ, ಈ ಮಹಾಕುಂಭ ‘ನಾಗರೀಕತೆಯ ಸೊಬಗು’ ಎಂದು ಯಾಕಾಗಿ ಪರಿಗಣಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.



2025ರ ಮಹಾ ಕುಂಭ ಸರಿಸಾಟಿಯಿಲ್ಲದ್ದಾಗಿದೆ- ಯಾಕೆ?

ಮನುಷ್ಯರ ಜೀವಮಾನದಲ್ಲೊಮ್ಮೆ ಬರುವ ಈ ಮಹಾ ಕುಂಭಕ್ಕೆ ಸಾಕ್ಷಿಯಾಗುವ ಅವಕಾಶವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತೆ ಯೋಗ ಗುರು ಸದ್ಗುರು ಕೇಳಿಕೊಂಡಿದ್ದಾರೆ. “ಈ ಭವ್ಯ ಸಂಭ್ರಮಾಚರಣೆಯಲ್ಲಿ ನಿಮ್ಮ ಅರ್ಧ ದಿನವನ್ನಾದರೂ ವ್ಯಯಿಸಿ. ಭಾರತೀಯರಾಗಿ 144 ವರ್ಷಗಳಿಗೊಮ್ಮೆ ಸಂಭವಿಸುವ ಈ ಮಹಾಮೇಳವನ್ನು ತಪ್ಪಿಸಿಕೊಳ್ಳಬಹುದೇ?ʼʼ ಎಂದು ಸದ್ಗುರು ಪ್ರಶ್ನಿಸಿದ್ದಾರೆ.

ಗ್ರಹಗಳ ಅಪರೂಪದ ಸಮ್ಮಿಲನದ ಕಾರಣ ಈ ಬಾರಿಯ ಮಹಾಕುಂಭ ಇನ್ನಷ್ಟು ವಿಶೇಷವಾಗಿದೆ. ಕೆ.ಜೆ. ಸೋಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಧರ್ಮ ಸ್ಟಡೀಸ್‌ನ ಸಹಾಯಕ ಪ್ರಾಚಾರ್ಯರು ಮತ್ತು ಪ್ರಭಾರ ನಿರ್ದೇಶಕಿಯಾಗಿರುವ ಪಲ್ಲವಿ ಜಂಭಾಳೆ ಹೇಳುವ ಪ್ರಕಾರ, ಕುಂಭ ಮೇಳಕ್ಕೂ ಅಮೃತದ ಪುರಾಣ ಕಥೆಗೂ ಇರುವ ಸಂಬಂಧವನ್ನು ವಿಶ್ಲೇಷಿಸಿದ್ದಾರೆ. ಧಾರ್ಮಿಕ ಪುನರುತ್ಥಾನ ಹಾಗೂ ಮುಕ್ತಿಗಾಗಿ ಈ ಮಹಾಕುಂಭ ಎಷ್ಟು ಪ್ರಮುಖ ಎಂಬುದನ್ನೂ ಅವರು ವಿವರಿಸಿದ್ದಾರೆ.

ಗ್ರಹಗಳ ಅಪರೂಪದ ಸಂಗಮದ ಕಾರಣದಿಂದ ಈ ಮಹಾ ಕುಂಭ ಪ್ರಮುಖವಾಗಿದೆ. ‘ನೀರಿನ ಭಾಗವು ನಿರ್ಧಿಷ್ಟ ಶಕ್ತಿಯೊಂದಿಗೆ ನಿಗದಿತ ಅಂತರದಲ್ಲಿ ನಿರ್ದಿಷ್ಟ ಸಮಯದಲ್ಲಿ ಆವೃತಗೊಂಡಾಗ ಆ ವರ್ಷ ಜೀವನದ ಅಗಣಿತ ಸಾಧ್ಯತೆಗಳು ತೆರೆದುಕೊಳ್ಳುತ್ತವೆ ಎಂದು ಸದ್ಗುರು ಹೇಳುತ್ತಾರೆ. ನಮ್ಮ ದೇಹದ ಮೂರನೇ ಎರಡರಷ್ಟು ಭಾಗ ನೀರಿನಿಂದ ಆವೃತವಾಗಿದೆ. ಮಹಾ ಕುಂಭದ ಈ ಸಂದರ್ಭದಲ್ಲಿ ನೀವು ಪುಣ್ಯ ಸ್ನಾನವನ್ನು ಕೈಗೊಂಡಲ್ಲಿ ಅ‍ದು ನಿಮ್ಮ ದೇಹ ವ್ಯವಸ್ಥೆಯ ಮೇಲೆ ಧನಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ ಎಂದು ಸದ್ಗುರು ಹೇಳುತ್ತಾರೆ.

ಪ್ರತೀ ಮೂರು ವರ್ಷಗಳಿಗೊಮ್ಮ ಕುಂಭ ಮೇಳವನ್ನು ಆವರ್ತನ ಪದ್ಧತಿಯಲ್ಲಿ ನಾಲ್ಕು ಪುಣ್ಯ ಸ್ಥಳಗಳಲ್ಲಿ ನಡೆಸಲಾಗುತ್ತದೆ. ಅವುಗಳೆಂದರೆ – ಪ್ರಯಾಗ್ ರಾಜ್, ಹರಿದ್ವಾರ್, ಉಜ್ಜೈನಿ ಮತ್ತು ನಾಸಿಕ್. ಸೂರ್ಯ, ಚಂದ್ರ ಮತ್ತು ಗುರುವಿನ ಚಲನೆಯನ್ನು ಆಧರಿಸಿ ಈ ಕುಂಭ ಮೇಳದ ದಿನಾಂಕ ನಿರ್ಧಾರಗೊಳ್ಳುತ್ತದೆ. ಆದರೆ ಮಹಾಕುಂಭ ಪ್ರಯಾಗ್‌ರಾಜ್‌ನಲ್ಲಿ ಮಾತ್ರವೇ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಹಾಗಾಗಿ ಇದನ್ನು ಪ್ರಮುಖ ಧಾರ್ಮಿಕ ಕಾರ್ಯಕ್ರಮ ಎಂದು ಪರಿಗಣಿಸಲಾಗುತ್ತದೆ.

ಇಲ್ಲಿರುವ ಗಂಗಾ – ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಕೈಗೊಳ್ಳುವ ಅಮೃತ ಸ್ನಾನ ವ್ಯಕ್ತಿಯನ್ನು ಮೋಕ್ಷ ಪಥದಲ್ಲಿ ನಡೆಸುತ್ತದೆ ಎಂಬ ನಂಬಿಕೆಯಿದೆ. ಇನ್ನು ಗ್ರಹಗಳ ಈ ಅಪರೂಪದ ಸಮ್ಮಿಲನ ಸಂದರ್ಭದಲ್ಲಿ ಮಹಾ ಕುಂಭದಲ್ಲಿ ಪುಣ್ಯ ಸ್ನಾನವನ್ನು ಮಾಡುವುದರಿಂದ ಮಾನವ ಜೀವನದ ಅಂತಿಮ ಗುರಿಯಾಗಿರುವ ‘ಮುಕ್ತಿ’ಗೆ ಹತ್ತಿರವಾಗುತ್ತೇವೆ ಎಂಬ ನಂಬಿಕೆ ಆಸ್ತಿಕರದ್ದು.



ಹಾಗಾದರೆ ಅಮೃತ ಸ್ನಾನ ಎಷ್ಟರ ಮಟ್ಟಿಗೆ ಮುಖ್ಯ?

ಅಮೃತ ಸ್ನಾನವನ್ನು ಈ ಹಿಂದೆ ಶಾಹಿ ಸ್ನಾನವೆಂದು ಕರೆಯುತ್ತಿದ್ದರು. ಇದೊಂದು ಪುಣ್ಯ ಸ್ನಾನವಾಗಿದ್ದು ಭಕ್ತರು ಕುಂಭಮೇಳದ ಸಂದರ್ಭದಲ್ಲಿ ನದಿ ನೀರಿನಲ್ಲಿ ಮುಳುಗೇಳುತ್ತಾರೆ. ಹಿಂದೂ ಪುರಾಣ ಕಥೆಗಳ ಪ್ರಕಾರ, ಈ ಪ್ರಕ್ರಿಯೆಯು ವ್ಯಕ್ತಿಯನ್ನು ಪರಿಶುದ್ಧಗೊಳಿಸಿ ಆತನನ್ನು ಮೋಕ್ಷದ ಕಡೆಗೆ ಕೊಂಡೊಯ್ಯುತ್ತದೆ.

ಜೂನಾ ಅಖಾಡದ ಪೀಠಾಧೀಶ್ವರ ಆಚಾರ್ಯ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್ ಅವರ ಪ್ರಕಾರ, ಗುರು ವೃಷಭ ರಾಶಿಯನ್ನು ಪ್ರವೇಶಿದ ಸಂದರ್ಭದಲ್ಲಿ ಹಾಗೂ ಸೂರ್ಯ ಮತ್ತು ಚಂದ್ರ ಮಕರ ರಾಶಿಯಲ್ಲಿ ಒಂದೇ ರೇಖೆಯಲ್ಲಿ ಬಂದ ಸಂದರ್ಭದಲ್ಲಿ ಈ ಗ್ರಹಗಳ ಸಂಯೋಗವನ್ನು ‘ಅಮೃತ ಯೋಗ’ ಎಂದೇ ಪರಿಗಣಿಸಲಾಗುತ್ತದೆ ಮತ್ತು ಇದು ಪ್ರತೀ 12 ವರ್ಷಗಳಿಗೊಮ್ಮೆ ಸಂಭವಿಸುತ್ತದೆ.

ಇನ್ನು ಅಗ್ನಿ ಅಖಾಡದ ಮಹಾಂತ ಅದಿತ್ತಾನಂದ ಶಾಸ್ತ್ರಿ ಅವರು ಕುಂಭಮೇಳದಲ್ಲಿ ಪುಣ್ಯ ಸ್ನಾನ ಕೈಗೊಳ್ಳುವುದನ್ನು ಸಾವಿರ ಅಶ್ವಮೇಧದ ಫಲಕ್ಕೆ ಹೋಲಿಸಿದ್ದಾರೆ. ಅಮೃತ ಸ್ನಾನದ ಬಳಿಕ ಸಾಧು-ಸಂತರು ತಮ್ಮ ಇಷ್ಟದೇವತೆಯನ್ನು ಧ್ಯಾನಿಸುತ್ತಾ ಜ್ಞಾನದ ಬಗ್ಗೆ ಚರ್ಚೆಯನ್ನು ನಡೆಸುತ್ತಾರೆ.

ಜೆಮ್ಶೆಡ್‌ಪುರದಲ್ಲಿರುವ ಭಾರತೀಯ ಜ್ಯೋತಿಷ ಆದ್ಯಾತ್ಮ ಪರಿಷತ್‌ನ ಅಧ್ಯಕ್ಷ ರಮೇಶ್ ಕುಮಾರ್ ಉಪಾಧ್ಯಾಯ ಅವರು ಮಕರ ಸಂಕ್ರಾಂತಿ ದಿವಸ ಪುಣ್ಯ ಸ್ನಾನದ ಮಹತ್ವವನ್ನು ವಿವರಿಸಿದ್ದಾರೆ. ಮಕರ ಸಂಕ್ರಾಂತಿಯ ದಿನ ಸೂರ್ಯನು ಉತ್ತರದ ಕಡೆ ಚಲಿಸುವುದರಿಂದ ಪವಿತ್ರ ಉತ್ತರಾಯಣ ಪುಣ್ಯಕಾಲ ಪ್ರಾರಂಭಗೊಳ್ಳುತ್ತದೆ. ಹಿಂದೂ ಪುರಾಣಗಳ ಪ್ರಕಾರ ಇದು ದೇವರ ಹಗಲು ಹೊತ್ತಾಗಿರುತ್ತದೆ. ಹಾಗಾಗಿ ಈ ಕಾಲವನ್ನು ಆಸ್ತಿಕರು ಸಂಭ್ರಮದಿಂದ ಆಚರಿಸುತ್ತಾರೆ. ಮತ್ತೆ ಆರು ತಿಂಗಳ ಬಳಿಕ ಸೂರ್ಯ ದಕ್ಷಿಣಾಪಥದಲ್ಲಿರುತ್ತಾನೆ. ಈ ಕಾಲ ದೇವರಿಗೆ ರಾತ್ರಿ ಕಾಲವಾಗಿರುತ್ತದೆ. ಮಾತ್ರವಲ್ಲದೇ ಸೂರ್ಯ ಧನುರಾಶಿಯಿಂದ ಹೊರ ಬರುವುದೆಂದರೆ ‘ಕರ್ಮ’ಗಳ ಅಂತ್ಯವೆಂದು ಪರಿಗಣಿಸಲಾಗುತ್ತದೆ. ಈ 30 ದಿನಗಳ ಕಾಲ ಯಾವುದೇ ಪವಿತ್ರ ಕಾರ್ಯಗಳನ್ನು ನಡೆಸಲಾಗುವುದಿಲ್ಲ ಎಂದು ಅವರು ಮಾಧ್ಯಮಗಳಿಗೆ ವಿವರಿಸಿದ್ದಾರೆ.

ಕುಂಭ ಮೇಳದಲ್ಲಿ ಅಮೃತ ಸ್ನಾನವು 13 ಅಖಾಡಗಳ ಪಾಲ್ಗೊಳ್ಳುವಿಕೆಯೊಮದಿಗೆ ನಡೆಯುತ್ತದೆ. ಪ್ರತೀ ಅಖಾಡಕ್ಕೂ ಅಮೃತ ಸ್ನಾನಕ್ಕೆ ನಿರ್ಧಿಷ್ಟ ಪಥ ಮತ್ತು ಸಮಯವನ್ನು ನಿಗದಿಪಡಿಸಲಾಗಿರುತ್ತದೆ.

ಇದನ್ನೂ ಓದಿ: Lawyer Jagadish: ಲಾಯರ್‌ ಜಗದೀಶ್‌ ಮೇಲೆ ಮಾರಣಾಂತಿಕ ಹಲ್ಲೆ; ಮೂಗು, ಬಾಯಿಂದ ರಕ್ತ ಬರುವಂತೆ ಹೊಡೆದ ಕಿಡಿಗೇಡಿಗಳು!



ಅಮೃತ ಸ್ನಾನಕ್ಕೆ ನಿಗದಿಯಾಗಿರುವ ಪುಣ್ಯ ದಿನಗಳು ಮತ್ತು ವಿಶೇಷತೆ

ಪೌಷ ಪೌರ್ಣಮಿ: ಈ ಬಾರಿಯ ಮಹಾಕುಂಭ ಜ. 13ರಂದು ಪ್ರಾರಂಭಗೊಂಡಿದ್ದು, ಹಿಂದೂ ಪಂಚಾಂಗದ ಪ್ರಕಾರ ಆ ದಿನ ಪೌಷ ಮಾಸದ ಪೌರ್ಣಮಿ ತಿಥಿಯಾಗಿತ್ತು. ಆ ದಿನ ಕಲ್ಪವಾಸಿಗಳು ಮತ್ತು ತಿಂಗಳು ಪೂರ್ತಿ ಧಾರ್ಮಿಕ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದ ಆಸ್ತಿಕ ಗಡಣ ಕುಂಭ ಮೇಳದಲ್ಲಿ ಪುಣ್ಯ ಸ್ನಾನಕ್ಕಾಗಿ ಆಗಮಿಸಿತ್ತು. ಪೌರ್ಣಮಿ ದಿನದಂದು ಗಂಗಾ ನದಿಯಲ್ಲಿ ಮುಳುಗುವುದರಿಂದ ಆತ್ಮ ಶಾಂತಿ ಲಭಿಸಿ, ಅಪವಿತ್ರತೆ ದೂರವಾಗುತ್ತದೆ ಎಂಬ ನಂಬಿಕೆಯಿದೆ.

ಮಕರ ಸಂಕ್ರಾಂತಿ: ಎರಡನೇ ಅಮೃತ ಸ್ನಾನವು ಜ.14ರ ಮಕರ ಸಂಕ್ರಾಂತಿ ದಿನ ನಡೆಯಿತು. ಮಕರ ಸಂಕ್ರಾಂತಿ ಎಂದರೆ ಚಳಿಗಾಲದ ಕೊನೆ ಎಂದರ್ಥ. ಆ ದಿನ ಪುಣ್ಯ ಸ್ನಾನ ಕೈಗೊಳ್ಳುವುದರಿಂದ ಆಸ್ತಿಕರ ಬಾಳಿನ ಕತ್ತಲು ಮತ್ತು ಅಜ್ಞಾನ ಕಳೆಯುತ್ತದೆ ಎಂಬ ನಂಬಿಕೆಯಿದೆ.

ಮೌನಿ ಅಮವಾಸ್ಯೆ: ಆ ಬಳಿಕ ಪುಣ್ಯ ಸ್ನಾನವನ್ನು ಜ. 29ರ ಮೌನಿ ಅಮವಾಸ್ಯೆಯಂದು ಕೈಗೊಳ್ಳಲಾಗುತ್ತದೆ. ಈ ದಿನ ಆಸ್ತಿಕರ ಸಂಪೂರ್ಣ ಉಪವಾಸವಿದ್ದು, ಮೌನ ವೃತವನ್ನಾಚರಿಸುತ್ತಾರೆ. ಈ ದಿನ ಪುಣ್ಯ ಸ್ನಾನ ಕೈಗೊಳ್ಳುವುದರಿಂದ ಪಾಪಗಳೆಲ್ಲ ತೊಳೆದು ಹೊಗುವುದು ಮಾತ್ರವಲ್ಲದೇ ಮಾತು ಸಹ ಉತ್ತಮಗೊಳ್ಳುತ್ತದೆ ಎಂಬ ನಂಬಿಕೆಯಿದೆ.

ವಸಂತ ಪಂಚಮಿ: ಆ ಬಳಿಕದ ಪುಣ್ಯ ಸ್ನಾನದ ದಿನ ವಸಂತ ಪಂಚಮಿಯಾಗಿದ್ದು, ಈ ಬಾರಿ ಅದು ಫೆ. 3ರಂದು ಬಂದಿದೆ. ಈ ದಿನ ಪುಣ್ಯ ಸ್ನಾನ ಕೈಗೊಂಡಲ್ಲಿ ನಮ್ಮ ಜ್ಞಾನ ವಿಸ್ತಾರಗೊಳ್ಳುವುದಲ್ಲದೇ ನಮ್ಮ ನಡತೆ ಹಾಗೂ ಕ್ರಿಯಾಶೀಲತೆ ವೃದ್ಧಿಗೊಳ್ಳುತ್ತದೆ ಎಂಬ ನಂಬಿಕೆಯಿದೆ. ವಸಂತ ಪಂಚಮಿ ದೇವಿ ಸರಸ್ವತಿಯ ದಿನವಾಗಿದೆ.

ಮಾಘ ಪೌರ್ಣಮಿ: ಫೆ. 12ರ ಮಾಘ ಪೌರ್ಣಮಿಯಂದು 6ನೇ ಪುಣ್ಯ ಸ್ನಾನವನ್ನು ಕೈಗೊಳ್ಳಲಾಗುತ್ತದೆ. ದಾನಿಗಳಿಗೆ ಮಾಘ ಪೌರ್ಣಮಿ ಅದೃಷ್ಟವನ್ನು ತರುತ್ತದೆ ಎಂಬ ನಂಬಿಕೆಯಿದೆ. ಈ ದಿನ ಆಸ್ತಿಕರು ಧ್ಯಾನಾಸಕ್ತರಾಗಿ ಇತರರಿಗೆ ಸಹಾಯವನ್ನು ಮಾಡುತ್ತಾರೆ.

ಮಹಾ ಶಿವರಾತ್ರಿ: ಅಮೃತ ಸ್ನಾನದ ಅಂತಿಮ ದಿನ ಫೆ. 26ರ ಮಹಾಶಿವರಾತ್ರಿಯಂದು ನಡೆಸಲಾಗುತ್ತದೆ. ಇದು ಪರಶಿವನ ಪರಮ ಪುಣ್ಯ ರಾತ್ರಿ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಈ ದಿನ ಮಹಾಶಿವನ ಸಾಮರ್ಥ್ಯ ಉಚ್ಛ್ರಾಯ ಮಟ್ಟದಲ್ಲಿರುತ್ತದೆ. ಈ ದಿನದಂದು ಸ್ನಾನವನ್ನು ಕೈಗೊಳ್ಳುವುದರಿಂದ ಒಬ್ಬ ವ್ಯಕ್ತಿಯ ಜೀವನದ ಅಂಧಕಾರ ದೂರವಾಗಿ ಅಂತಹ ವ್ಯಕ್ತಿಗಳು ಪರಶಿವನಿಗೆ ಹತ್ತಿರವಾಗುತ್ತಾರೆ ಎಂಬ ನಂಬಿಕೆಯಿದೆ.