Dharmasthala Case: ಧರ್ಮಸ್ಥಳ ವಿರುದ್ಧ ಅಪಪ್ರಚಾರಕ್ಕೆ ವಿದೇಶದಿಂದ ಹಣ: ಅಮಿತ್ ಶಾಗೆ ಕೋಟ ಶ್ರೀನಿವಾಸ ಪೂಜಾರಿ ಪತ್ರ
Kota Srinivas Poojary: ಕೆಲವು ಯುಟ್ಯೂಬರ್‌ಗಳು ಧರ್ಮಸ್ಥಳದ ಹೆಸರನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡುತ್ತಿದ್ದಾರೆ. ಇದಕ್ಕಾಗಿ ವಿದೇಶಿ ಫಂಡಿಂಗ್‌ಗಳು ಬರುತ್ತಿವೆ ಎಂದು ಆರೋಪಿಸಿದ್ದಾರೆ. ಪೂಜಾರಿಯವರು ಈ ಪ್ರಕರಣವನ್ನು ಇಡಿ ತನಿಖೆಗೆ ನೀಡಬೇಕೆಂದು ಕೇಂದ್ರ ಗೃಹಸಚಿವ ಅಮಿತ್ ಶಾಗೆ (Amith Shah) ಪತ್ರ ಬರೆದಿದ್ದಾರೆ.


ಮಂಗಳೂರು: ದಕ್ಷಿಣ ಕನ್ನಡ (Dakshina kannada) ಜಿಲ್ಲೆಯ ಧರ್ಮಸ್ಥಳದ (Dharmasthala Case) ಪಾವಿತ್ರ್ಯಕ್ಕೆ ಧಕ್ಕೆ ತರುವ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಷಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಸಂಸದ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary), ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕೆಲವು ಯುಟ್ಯೂಬರ್‌ಗಳು ಧರ್ಮಸ್ಥಳದ ಹೆಸರನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡುತ್ತಿದ್ದಾರೆ. ಇದಕ್ಕಾಗಿ ವಿದೇಶಿ ಫಂಡಿಂಗ್‌ಗಳು ಬರುತ್ತಿವೆ ಎಂದು ಆರೋಪಿಸಿದ್ದಾರೆ. ಪೂಜಾರಿಯವರು ಈ ಪ್ರಕರಣವನ್ನ ಇಡಿ ತನಿಖೆಗೆ ನೀಡಬೇಕೆಂದು ಕೇಂದ್ರ ಗೃಹಸಚಿವ ಅಮಿತ್ ಶಾಗೆ (Amith Shah) ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಕೋಟಾ ಶ್ರೀನಿವಾಸ ಪೂಜಾರಿಯವರು, ’ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ ತರುವ ಸಂಚಿನ ಬಗ್ಗೆ ರಾಜ್ಯಾದಾದ್ಯಂತ ವ್ಯಾಪಕ ವರದಿಗಳು ಹರಿದಾಡುತ್ತಿವೆ. ರಾಜ್ಯದ ಉಪಮುಖ್ಯಮಂತ್ರಿಯವರು ಈ ದೇವಸ್ಥಾನದ ವಿರುದ್ಧ ಕುತಂತ್ರ ನಡೆಯುತ್ತಿದೆ ಎಂದು ಸಾರ್ವಜನಿಕವಾಗಿ ಘೋಷಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು, ಎಡಪಂಥೀಯ ಗುಂಪುಗಳ ಒತ್ತಾಯದ ಮೇರೆಗೆ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಾಜ್ಯದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನಾಮಧೇಯ ಆರೋಪಿಯ ಮಾತಿನ ಆಧಾರದ ಮೇಲೆ ಎಸ್‌ಐಟಿಯನ್ನು ರಚಿಸಿದ್ದಾರೆ ಎಂದು ವರದಿಯಾಗಿದ್ದು, ಸರ್ಕಾರವೇ ಈ ಆರೋಪಿಗೆ ಶರಣಾಗಿದೆ ಎಂಬ ಆರೋಪ ಕೇಳಿಬಂದಿದೆ‘ ಎಂದು ಬರೆದುಕೊಂಡಿದ್ದಾರೆ.
‘ಈ ತನಿಖೆಯ ಭಾಗವಾಗಿ, ಧರ್ಮಸ್ಥಳದ ಸುತ್ತಮುತ್ತಲೂ ಗುಂಡಿಗಳನ್ನು ತೋಡಲಾಗುತ್ತಿದ್ದು, ಇದು ಭಕ್ತರಲ್ಲಿ ಆತಂಕ ಮೂಡಿಸಿದೆ. ತಮಿಳುನಾಡಿನ ಒಬ್ಬ ರಾಜಕಾರಣಿಯು ಕಾಂಗ್ರೆಸ್‌ನ ಉನ್ನತ ನಾಯಕತ್ವದ ಮೇಲೆ ಒತ್ತಡ ಹೇರಿ, ಕರ್ನಾಟಕದ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ದುರ್ಬಲಗೊಳಿಸುವ ಯೋಜನೆಯನ್ನು ರೂಪಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ‘ ಎಂದು ಬರೆದಿದ್ದಾರೆ.
‘ಇದೇ ವೇಳೆ, ಧರ್ಮಸ್ಥಳದ ಕೀರ್ತಿಗೆ ಕಳಂಕ ತರುವ ಉದ್ದೇಶದಿಂದ ಕೆಲವು ಮುಸ್ಲಿಂ ಯೂಟ್ಯೂಬರ್‌ಗಳು ಮತ್ತು ಅವರ ಸಹಚರರು ವಿದೇಶಿ ಆರ್ಥಿಕ ನೆರವು ಪಡೆದಿದ್ದಾರೆ ಎಂಬ ಸುದ್ದಿಯೂ ಹರಡಿದೆ. ಈ ಹಿನ್ನೆಲೆಯಲ್ಲಿ, ಧರ್ಮಸ್ಥಳದ ವಿರುದ್ಧ ಕಾರ್ಯಾಚರಿಸುತ್ತಿರುವವರಿಗೆ ವಿದೇಶದಿಂದ ಬಂದಿರುವ ಆರ್ಥಿಕ ನೆರವಿನ ಕುರಿತು ಕೇಂದ್ರೀಯ ಜಾರಿ ನಿರ್ದೇಶನಾಲಯ (ED) ತನಿಖೆಗೆ ಆದೇಶಿಸಬೇಕುʼ ಎಂದು ಕೋಟಾ ಶ್ರೀನಿವಾಸ ಪೂಜಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: D Veerendra Heggade: ಧರ್ಮಸ್ಥಳ ವಿರುದ್ಧದ ಆರೋಪಗಳ ಬಗ್ಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಫಸ್ಟ್ ರಿಯಾಕ್ಷನ್