ಚಿನ್ನಸ್ವಾಮಿಯಿಂದ ಮಹಿಳಾ ವಿಶ್ವಕಪ್ ಟೂರ್ನಿ ಶಿಫ್ಟ್; ಈ ವಾರ ಅಂತಿಮ ನಿರ್ಧಾರ
ಈ ವರ್ಷದ ಜೂನ್‌ನಲ್ಲಿ ಐಪಿಎಲ್ ಗೆದ್ದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಮೆರವಣಿಗೆಯಲ್ಲಿ ಸಂಭವಿಸಿದ ಕಾಲ್ತುಳಿತದ ನಂತರ ನ್ಯಾ.ಮೈಕೆಲ್ ಕುನ್ಹಾ ಆಯೋಗವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚಿನ ಜನರು ಸೇರುವ ಪಂದ್ಯಗಳನ್ನು ಆಯೋಜಿಸುವುದು ಸೂಕ್ತವಲ್ಲ ಎಂದು ಉಲ್ಲೇಖಿಸಿದೆ


ಮುಂಬಯಿ: ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್(ICC Women’s ODI World Cup 2025) ಪಂದ್ಯಗಳು ಬೆಂಗಳೂರಿನಿಂದ(Bengaluru ) ಸ್ಥಳಾಂತರಿಸುವ ನಿರ್ಧಾರವನ್ನು ಈ ವಾರದ ಕೊನೆಯಲ್ಲಿ ಅಂತಿಮಗೊಳಿಸುವ ನಿರೀಕ್ಷೆಯಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಪಂದ್ಯಗಳನ್ನು ಆಯೋಜಿಸಲು ಅಗತ್ಯವಾದ ಅನುಮತಿಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ತಿಳಿಸಿದೆ. ಪರಿಣಾಮವಾಗಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಬಿಸಿಸಿಐ ಜೊತೆ ಸಮಾಲೋಚಿಸಿ, ಪರ್ಯಾಯ ಸ್ಥಳವನ್ನು ಗುರುತಿಸುವ ಕೆಲಸ ಮಾಡುತ್ತಿದೆ.
ಸದ್ಯಕ್ಕೆ ಬೆಂಗಳೂರಿನಲ್ಲಿ ಸೆಪ್ಟೆಂಬರ್ 30 ರಂದು ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯಾವಳಿಯ ಉದ್ಘಾಟನಾ ಪಂದ್ಯ, ಅಕ್ಟೋಬರ್ 3 ರಂದು ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಗಳು ಮತ್ತು ಅಕ್ಟೋಬರ್ 26 ರಂದು ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯಗಳು, ಅಕ್ಟೋಬರ್ 30 ರಂದು ಎರಡನೇ ಸೆಮಿಫೈನಲ್ ಮತ್ತು ನವೆಂಬರ್ 2 ರಂದು ಫೈನಲ್ ಪಂದ್ಯವನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಆದರೆ ಈ ವರ್ಷದ ಜೂನ್‌ನಲ್ಲಿ ಐಪಿಎಲ್ ಗೆದ್ದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಮೆರವಣಿಗೆಯಲ್ಲಿ ಸಂಭವಿಸಿದ ಕಾಲ್ತುಳಿತದ ನಂತರ ನ್ಯಾ.ಮೈಕೆಲ್ ಕುನ್ಹಾ ಆಯೋಗವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚಿನ ಜನರು ಸೇರುವ ಪಂದ್ಯಗಳನ್ನು ಆಯೋಜಿಸುವುದು ಸೂಕ್ತವಲ್ಲ ಎಂದು ಉಲ್ಲೇಖಿಸಿದೆ. ಹೀಗಾಗಿ ಇಲ್ಲಿ ಯಾವುದೇ ಪಂದ್ಯ ನಡೆಸಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಅನುಮತಿ ನಿರಾಕರಿಸುತ್ತಿದೆ.
ಮೂಲಗಳ ಪ್ರಕಾರ ಮಹಿಳಾ ವಿಶ್ವಕಪ್ ಪಂದ್ಯಗಳ ಆಯೋಜನೆಗೆ ತಿರುವನಂತಪುರದ ಗ್ರೀನ್ಫೀಲ್ಡ್ ಕ್ರೀಡಾಂಗಣದ ಹೆಸರು ಮುಂಚೂಣಿಯಲ್ಲಿದ್ದು, ಬಿಸಿಸಿಐ ತನ್ನ ಅಂತಿಮ ನಿರ್ಧಾರವನ್ನು ಇನ್ನಷ್ಟೇ ಘೋಷಿಸಬೇಕಿದೆ. ಟೂರ್ನಿಯ ಕೆಲ ಅಭ್ಯಾಸ ಪಂದ್ಯಗಳು ಇದೇ ಮೈದಾನದಲ್ಲಿ ನಡೆಯಲಿವೆ ಎನ್ನಲಾಗಿದೆ. ತಿರುವನಂತಪುರದಲ್ಲಿ ಆಗಸ್ಟ್ 21ರಿಂದ ಸೆಪ್ಟೆಂಬರ್ 7ರವರೆಗೆ ಕೇರಳ ಕ್ರಿಕೆಟ್ ಲೀಗ್ ನಿಗದಿಯಾಗಿದ್ದರೂ, ಅದನ್ನು ಬೇರೆ ತಾಣಕ್ಕೆ ಸ್ಥಳಾಂತರಿಸಲು ಕೇರಳ ಕ್ರಿಕೆಟ್ ಸಂಸ್ಥೆ ಮುಂದಾಗಿದೆ ಎನ್ನಲಾಗಿದೆ.
ಇದನ್ನೂ ಓದಿ Women ODI World Cup 2025: ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ವನಿತೆಯರ ತಂಡ ಪ್ರಕಟ!