ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Srivathsa Joshi Column: ಒಂದಕ್ಷರದ ಪದಗಳಿಂದ ಭಾಷೆಗೆ ಸೊಬಗು ಮತ್ತು ಸೋಜಿಗ

ಇಂಥವನ್ನು ನೀವೇ ಎಷ್ಟು ಬೇಕಾದರೂ ಕಂಡುಕೊಳ್ಳಬಹುದು. ಮಾತ್ರವಲ್ಲ, Queue ರೀತಿ ಯದು ಐದಕ್ಷರಗಳಿದ್ದರೂ ಒಂದಕ್ಷರದಂತೆ ಉಚ್ಚರಿಸುತ್ತೇವೆ, Brother ಎಂಬ ಸಪ್ತಾಕ್ಷರಿ ಯನ್ನೂ ಈಗ ಬ್ರೋ ಅಂತ ಒಂದಕ್ಷರಕ್ಕಿಳಿಸಿದ್ದೇವೆ ಎಂದು ಕೂಡ ಆಶ್ಚರ್ಯ ಪಡಬ ಹುದು

ಒಂದಕ್ಷರದ ಪದಗಳಿಂದ ಭಾಷೆಗೆ ಸೊಬಗು ಮತ್ತು ಸೋಜಿಗ

ಅಂಕಣಕಾರ ಶ್ರೀವತ್ಸ ಜೋಶಿ

ತಿಳಿರು ತೋರಣ

srivathsajoshi@yahoo.com

ಅಕ್ಷರವೇ ಒಂದು ಪದ ಸಹ ಆಗಬಹುದಾದ ಉದಾಹರಣೆಗಳು ಇಂಗ್ಲಿಷ್‌ನಲ್ಲಿ ಕೇವಲ ಎರಡೇ ಎರಡು: A ಮತ್ತು I. ಇದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಏನಲ್ಲ, ಇಂಗ್ಲಿಷ್ ಭಾಷೆಯ ವರ್ಣಮಾಲೆಯಲ್ಲಿರುವ 26 ಅಕ್ಷರಗಳ ಪೈಕಿ ಈ ಎರಡನ್ನು ಮಾತ್ರ ಸ್ವತಂತ್ರ ಪದಗಳಂತೆಯೂ ಬಳಸಬಲ್ಲೆವಷ್ಟೆ? ತುಂಬ ಆಳಕ್ಕೆ ಹೋಗದೆ ಸ್ಥೂಲವಾಗಿ ವಿವರಿಸುವು ದಾದರೆ- ಯಾವುದೇ ವಾಕ್ಯದಲ್ಲಿ A (ಅಥವಾ a)ಯನ್ನು ನಾಮಪದದ ಮೊದಲಿಗೆ, ಆ ನಾಮಪದವು ಅನಿರ್ದಿಷ್ಟ ಎಂದು ತಿಳಿಸಲಿಕ್ಕೆ, ಹಾಗೂ Iಯನ್ನು ನಾನು ಎಂಬರ್ಥದ ಉತ್ತಮ ಪುರುಷ ಏಕವಚನ ಸರ್ವನಾಮವಾಗಿ ಬಳಸುತ್ತೇವೆ. ಹೆಚ್ಚಿನ ವಿವರಗಳು ಪ್ರಖ್ಯಾತ ರೆನ್ ಆಂಡ್ ಮಾರ್ಟಿನ್ ಅಥವಾ ಬೇರಾವುದೇ ಇಂಗ್ಲಿಷ್ ವ್ಯಾಕರಣ ಪುಸ್ತಕಗಳಲ್ಲಿರುತ್ತವೆ, ನಮಗಿಲ್ಲಿ ಅವು ಬೇಡ. ಇಲ್ಲಿ ಹೇಳಹೊರಟಿದ್ದೇನೆಂದರೆ ಒಂದಕ್ಷರದ ಪದಗಳು ಇಂಗ್ಲಿಷಲ್ಲಿ ಇವೆರಡೇ. ಹಾಂ, ಒಂದಕ್ಷರ ಅಂದರೆ ಬರೆಯುವಾಗ ಒಂದಕ್ಷರ.

ಇದನ್ನೂ ಓದಿ: Srivathsa Joshi Column: ಲಿಂಕನ್:‌ ಅಮೆರಿಕಾಧ್ಯಕ್ಷರಲ್ಲೇ ಎತ್ತರದ ಆಳು, ಗೌರವದ ಬಾಳು

ಏಕೆಂದರೆ ಉಚ್ಚರಿಸುವಾಗ ಒಂದಕ್ಷರದ ರೀತಿಯವು ಇಂಗ್ಲಿಷಲ್ಲಿ ದಂಡಿಯಾಗಿ ಇವೆ. ಉದಾಹರಣೆಗೆ now, you, too, may, go, to, see, the, zoo, free, pay, no, fee ಇತ್ಯಾದಿ. ಇಂಥವನ್ನು ನೀವೇ ಎಷ್ಟು ಬೇಕಾದರೂ ಕಂಡುಕೊಳ್ಳಬಹುದು. ಮಾತ್ರವಲ್ಲ, Queue ರೀತಿ ಯದು ಐದಕ್ಷರಗಳಿದ್ದರೂ ಒಂದಕ್ಷರದಂತೆ ಉಚ್ಚರಿಸುತ್ತೇವೆ, Brother ಎಂಬ ಸಪ್ತಾಕ್ಷರಿ ಯನ್ನೂ ಈಗ ಬ್ರೋ ಅಂತ ಒಂದಕ್ಷರಕ್ಕಿಳಿಸಿದ್ದೇವೆ ಎಂದು ಕೂಡ ಆಶ್ಚರ್ಯ ಪಡಬ ಹುದು.

ಕನ್ನಡದಲ್ಲಿ ಹಾಗಲ್ಲ. ಬರೆದಂತೆಯೇ ಉಚ್ಚರಿಸುವ, ಉಚ್ಚರಿಸಿದಂತೆಯೇ ಬರೆಯುವ ಭಾಷೆ ಎಂಬ ಹಿರಿಮೆ ಕನ್ನಡದ್ದು. ಕನ್ನಡದಲ್ಲಿ ಬರೆಯುವಾಗಲೂ ಉಚ್ಚರಿಸುವಾಗಲೂ ಒಂದಕ್ಷರದ್ದೇ ಆಗಿರುವ ಪದಗಳನ್ನು ನಾವು ಹುಡುಕಬಲ್ಲೆವು. ತತ್‌ಕ್ಷಣಕ್ಕೆ ನೆನಪಾಗುವ ಉದಾಹರಣೆಯೆಂದರೆ ಓ. ಯಾರನ್ನೇ ಆಗಲಿ ಕರೆಯುವಾಗ, ದೇವರನ್ನು ಕರೆಯುವಾಗಲೂ, ತಪ್ಪದೇ ಬಳಸುತ್ತೇವೆ. ಇಲ್ಲವಾದರೆ ಓ ದೇವರೇ ಎಂದು ಪರಿತಪಿಸುತ್ತೇವೆ.

Joshi ok

ಯಾರಾದರೂ ನಮ್ಮನ್ನು ಕರೆದರೆ ಅವರಿಗೆ ಉತ್ತರವಾಗಿಯೂ ಓ ಎಂದೇ ಹೇಳುತ್ತೇವೆ. ಅದನ್ನು ಓಗೊಡುವುದು ಎನ್ನುತ್ತೇವೆ. ಸ್ವರಾಕ್ಷರಗಳಲ್ಲಿ ಓ ವರೆಗೆ ಯಾಕೆ ಹೋಗಬೇಕು, ಆ, ಈ, ಏಗಳನ್ನೂ ನಾವು ಸ್ವತಂತ್ರ ಪದಗಳಾಗಿ ಬಳಸುತ್ತೇವಲ್ಲ! “ಬಸವಾ ನೀನು ಬಾ. ಆ ಚೆಂಡು ತಾ. ಕಮಲಾ ನೀನು ಬಾ. ಈ ಚೆಂಡು ಹಿಡಿ..." ಸುಮಾರು 60 ವರ್ಷಗಳ ಹಿಂದೆ ಒಂದನೆಯ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿದ್ದ ಪಾಠ.

ಇದರಲ್ಲಿರುವ ಒಂದಕ್ಷರದ ಪದಗಳನ್ನು ಗಮನಿಸಿ. ಆ, ಈ, ಮಾತ್ರವಲ್ಲ ಬಾ, ತಾ ಸಹ ಅಂಥವೇ! ಎರಡನೆಯ ತರಗತಿಯ ಪಠ್ಯಪುಸ್ತಕದಲ್ಲಿ ಪಂಜೆ ಮಂಗೇಶರಾಯರ ‘ನಾಗರ ಹಾವೇ ಹಾವೊಳು ಹೂವೇ!’ ಪದ್ಯ. ಪ್ರತಿ ಚರಣವೂ ಅನುಕ್ರಮವಾಗಿ ಬಾ ಬಾ ಬಾ ಬಾ, ನೀ ನೀ ನೀ ನೀ, ಪೋ ಪೋ ಪೋ ಪೋ ಎಂದು ಒಂದಕ್ಷರದ ಪದಗಳಿಂದ ಕೊನೆಯಾಗುತ್ತದೆ. ಬಾ, ತಾ ಮುಂತಾದ ಕ್ರಿಯಾಪದಗಳು ಒಂದಕ್ಷರದವೆಂದು ನಮ್ಮ ಗಮನಕ್ಕೆ ಬರುತ್ತದೆ. ಹೊನ್ನು ತಾ ಗುಬ್ಬಿ ಹೊನ್ನು ತಾ... ಎಂದು ಹೆಳವನಕಟ್ಟೆ ಗಿರಿಯಮ್ಮನ

ಆರ್ದ್ರವಾದ ಹಾಡು ನನಗಿಲ್ಲಿ ನೆನಪಾಗುತ್ತಿದೆ. ತಾ ಗುಬ್ಬಿ ತಾ ತಾ ಗುಬ್ಬಿ ಎನ್ನುತ್ತ ಪಂಡಿತ್ ನಾಗರಾಜ ಹವಾಲ್ದಾರರು ಅದನ್ನು ಹೃದಯಸ್ಪರ್ಶಿಯಾಗಿ ಹಾಡುತ್ತಾರೆ. ತಾ ಅಕ್ಷರವನ್ನು ತಾನು ಎಂಬ ಪದದ ಹ್ರಸ್ವ ರೂಪವಾಗಿಯೂ ನಾವು ಒಂದಕ್ಷರದ ಪದದಂತೆ ಬಳಸುತ್ತೇವೆ. ವಸಂತ ಬಂದ ಋತುಗಳ ರಾಜ ತಾ ಬಂದ... ಅಥವಾ, ಭಾಮೆಯ ನೋಡಲು ತಾ ಬಂದ ಬೃಂದಾವನದಿಂದ ಮುಕುಂದ... ಅಥವಾ, ಪುಣ್ಯಕೋಟಿ ಎಂಬ ಹಸುವು ತನ್ನ ಕಂದನ ನೆನೆದುಕೊಂಡು ಮುನ್ನ ಹಾಲನು ಕೊಡುವೆನೆನುತ ಚೆನ್ನಾಗಿ ತಾ ಬರುತಿರೆ... ತಾನು ತಾ ಆದಂತೆ ನಾನು ನಾ ಆಗುತ್ತದೆ, ನೀನು ನೀ ಆಗುತ್ತದೆ. ನಾ ಕಂಡ ಕರ್ನಾಟಕ ಎಂದು ಡಾ.ಕೃಷ್ಣಾನಂದ ಕಾಮತರ ಒಂದು ಪುಸ್ತಕ.

ನಾ ಕಂಡ ಪ್ರಪಂಚ ಎಂದು ಜಾನಪದ ತಜ್ಞ ಎಚ್.ಎಲ್. ನಾಗೇಗೌಡರ ಪ್ರವಾಸಕಥನ. ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ... ನಾ ಬಯಸದ ಭಾಗ್ಯ ನನದಾಯಿತು... ನಾ ನೋಡಿ ನಲಿಯುವ ಕಾರವಾರ... ಮುಂತಾದ ಜನಪ್ರಿಯ ಚಿತ್ರಗೀತೆಗಳೂ ಇವೆ! ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ... ನೀ ಬಂದು ನಿಂತಾಗ ನಿಂತು ನೀ ನಕ್ಕಾಗ... ನೀ ತಂದ ಕಾಣಿಕೆ ನಗೆ ಹೂವ ಮಾಲಿಕೆ... ಸಹ ಇವೆ!

ಹೀಗೆ ಒಂದಕ್ಷರದ ಪದಗಳನ್ನು ಹುಡುಕುತ್ತ ಮೈಮರೆತರೆ, ಒಂದೂ ಹೊಳೆಯುತ್ತಿಲ್ಲವಲ್ಲ ಎಂದು ಕೈಕೈ ಹಿಸುಕಿಕೊಂಡರೂ, ಮೈ ಮತ್ತು ಕೈ ಕೂಡ ಒಂದಕ್ಷರದ ಪದಗಳೇ ಎಂದು ಜ್ಞಾನೋದಯವಾಗುತ್ತದೆ. ಆಗ ಆಕಾಶದಿಂದ ಹೂ ಮಳೆ ಸುರಿದರೆ? ಹೂ ಸಹ ಒಂದಕ್ಷರದ ಪದವೇ! ಆನಂದದಿಂದ ಒಂದು ಕಪ್ ಚಾ ಕುಡಿದರೆ ಚಾ ಸಹ ಒಂದಕ್ಷರದ ಪದವೇ(ಚಾ ಎನ್ನಲಿಕ್ಕೆ ಏಕಾಕ್ಷರಿ ಎಂದು ಗುಪ್ತಪದ ಬಳಸುವುದಿದೆ). ಸಿಟ್ಟಿನಿಂದ ಯಾರ ಜತೆಗೋ ಠೂ ಬಿಟ್ಟಿರಾದರೆ ಠೂ ಸಹ ಒಂದಕ್ಷರದ ಪದ.

ಇನ್ನೊಂದಿಷ್ಟು ಬೇಕೇ? ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯನವರ ಕಾವ್ಯನಾಮ ಶ್ರೀ. ಹನಿಗವನಗಳ ರಾಜ ಡುಂಡಿರಾಜ್ ಡುಂ ಎಂದು ಬರೆಯುತ್ತಾರೆ. ಲಂಕೇಶ್ ಪತ್ರಿಕೆಯಲ್ಲಿ ಬಂಗಾರಪ್ಪಗೆ ಬಂ, ಗುಂಡೂರಾವ್‌ಗೆ ಗುಂ ಎಂದು ನಾಮಕರಣ ಆಗಿತ್ತು. ವೈಎನ್ಕೆಯವರ ವಂಡರ್ ಕಣ್ಣಿನಲ್ಲಿ ಘಾ ಎಂಬೊಬ್ಬ ವ್ಯಕ್ತಿ ಕಾಣಿಸಿಕೊಳ್ಳುತ್ತಿದ್ದನು. ಘಾ ಅಂದರೆ ಗುಂಡು ಹಾಕುವ ಆಸಾಮಿ, ಅಥವಾ, ಗುಂಡು ಹಾಕದ ಆಸಾಮಿ- ಡಿಪೆಂಡ್ಸ್ ಆನ್ ಸಿಚ್ಯುವೇಷನ್. ಅಂತೂ ಒಂದಕ್ಷರದ ಪದಗಳ ಮಟ್ಟಿಗೆ ಕನ್ನಡವೂ ಸೈ ಎನ್ನುವಿರಿ. ಕನ್ನಡಕ್ಕೆ ಜೈ ಎನ್ನು ವಿರಿ. ಥೈ ಥೈ ಎಂದು ಕುಣಿಯುವುದೊಂದೇ ಬಾಕಿ. ಅಂದಹಾಗೆ ಥ ಬಳ್ಳಿಯವೇ ಇನ್ನೆರಡು ಇವೆ, ನೆನಪಿಸಿಕೊಳ್ಳಿ.

ಆದರೆ ಜಾಸ್ತಿ ಹಿಗ್ಗುವುದು ಬೇಡ. ಇಂಗ್ಲಿಷ್ ಮತ್ತು ಕನ್ನಡದ ಪದಭಂಡಾರವನ್ನು ನಿವಾಳಿಸಿ ಒಗೆವಷ್ಟು ದೊಡ್ಡ ಕಣಜವಿದೆ ಸಂಸ್ಕೃತದಲ್ಲಿ ಒಂದಕ್ಷರದ ಪದಗಳದ್ದು. ಪ್ರಪಂಚ ಹುಟ್ಟಿ ದ್ದೇ ‘ಓಂ’ ಎಂಬ ಒಂದಕ್ಷರ ಶಬ್ದದಿಂದ ಎಂದು ಪ್ರತೀತಿ. ನಿಮಗೆ ಆಶ್ಚರ್ಯವಾಗ ಬಹುದು, ಸಂಸ್ಕೃತದಲ್ಲಿ ಹೆಚ್ಚೂಕಡಿಮೆ ವರ್ಣಮಾಲೆಯ ಪ್ರತಿಯೊಂದು ಅಕ್ಷರವೂ ಬರೀ ಅಕ್ಷರ ವಷ್ಟೇ ಅಲ್ಲ, ಒಂದಕ್ಷರದ ಪದವೂ ಆಗಿರುತ್ತದೆ. ಅದೂ ಒಂದು ಅರ್ಥವಿರುವ ಪದವಲ್ಲ, ಹತ್ತಾರು ಅರ್ಥಗಳು!

ನಾನಿದನ್ನು ಗಮನಿಸಿದ್ದು ನನ್ನಲ್ಲಿರುವ ಒಂದು ಸಂಸ್ಕೃತ-ಕನ್ನಡ ನಿಘಂಟುವಿನಲ್ಲಿ (ಪ್ರೊ. ಜಿ.ಎನ್.ಚಕ್ರವರ್ತಿ; ಗೀತಾ ಬುಕ್ ಹೌಸ್, ಮೈಸೂರು). ‘ಅ’ ಅಕ್ಷರಕ್ಕೆ 24 ಬೇರೆಬೇರೆ ಅರ್ಥ ಗಳು! ವಿಷ್ಣು, ಬ್ರಹ್ಮ, ಈಶ್ವರ, ಆಮೆ, ಅಂಗಳ, ಯುದ್ಧ, ಗೌರವ, ಅಂತಃಪುರ, ಕಾರಣ, ಒಡವೆ, ಚರಣ, ಗೌರಿ, ಯಜ್ಞ, ಸುಖ, ತಿಳಿವಳಿಕೆ, ಶತ್ರು, ಬೆಟ್ಟ, ಭೂಮಿ, ಮರ, ದುಂಬಿ, ಜಿಂಕೆ, ಸಿಂಹ, ಹಂದಿ, ಮತ್ತು ಕತ್ತೆಕಿರುಬ. ಅದೇ ರೀತಿ, ‘ಆ’ ಅಕ್ಷರಕ್ಕೆ ಸ್ಮರಣೆ, ಅನುಕಂಪ, ಸಮು ಚ್ಚಯ ಎಂಬ ಅರ್ಥಗಳು. ‘ಇ’ ಅಕ್ಷರಕ್ಕೆ ಮನ್ಮಥ, ಸರ್ಪ, ರತ್ನ, ಕಾಂತಿ, ಮುಂಭಾಗ, ರಹಸ್ಯ, ಈಶ್ವರ, ಹೆಣ್ಣು ಆನೆ, ಅಂತಃಪುರ, ಚಂದ್ರಕಿರಣ, ಕನಿಕರ, ಆಶ್ಚರ್ಯ, ನಿಂದೆ, ಕೋಪದ ಮಾತು, ಖೇದ, ನಿರಾಕರಣೆ ಎಂಬ ಅರ್ಥಗಳು; ‘ಈ’ ಎಂದರೆ ಬಾಣ, ಗುಹೆ, ಲಕ್ಷ್ಮಿ, ಕಮಲ ದಳ, ಕಮಲಕೇಸರ, ನಾಲಗೆ, ಕಾಮನಬಿಲ್ಲು, ದುಃಖ, ಕೋಪ; ‘ಉ’ ಎಂದರೆ ಈಶ್ವರ, ಕ್ಷತ್ರಿಯ, ಕಣ್ಣು, ವಿಷ್ಣು, ಕರೆ, ಕೋಪದ ಮಾತು, ಪ್ರಶ್ನೆ, ಅಂಗೀಕಾರ, ಪಾದಪೂರಣ, ಅನುಕಂಪ, ನಿಯೋಗ; ‘ಊ’ ಎಂದರೆ ಪುರುಷ, ಚಂದ್ರ, ರಾಜಕುಮಾರ, ಕಂಠ, ದೇವತೆ, ಅಂಗಳ, ಹೋಲಿಕೆ, ಪೂರ್ಣಕುಂಭ, ವರ್ತಕ, ರಕ್ಷಣೆ, ಲಕ್ಷಣ, ಬ್ರಹ್ಮ, ಸೂಜಿ, ಹೊಲಿಗೆ, ಕರುಣೆ, ಕರೆ; ‘ಋ’ ಎಂದರೆ ಆನೆ, ಬೆಟ್ಟ, ಬುದ್ಧಿಯ ಭೇದ, ಸ್ವಭಾವ, ಗಂಡನ ಒಡಹುಟ್ಟಿ ದವನು, ಸ್ವರ್ಗಲೋಕ, ದೇವತೆಗಳ ಶತ್ರು, ನದಿ, ಮದ್ಯ, ನಿಂದೆ. ಇದೇರೀತಿ ಮಿಕ್ಕ ಸ್ವರಾಕ್ಷರ ಗಳಿಗೂ.

ವ್ಯಂಜನಗಳಿಗೂ ಹಾಗೆಯೇ. ‘ಕ’ ಎಂದರೆ ಬ್ರಹ್ಮ, ವಿಷ್ಣು, ಮಹೇಶ್ವರ, ಮನ್ಮಥ, ಅಗ್ನಿ, ವಾಯು, ಯಮ, ಸೂರ್ಯ, ಆತ್ಮ, ದಕ್ಷಬ್ರಹ್ಮ, ನವಿಲು, ಮನಸ್ಸು, ಬುದ್ಧಿ, ಏಟಿನ ಸದ್ದು, ಸಮುದ್ರ, ಬಿಳಿ ಬಣ್ಣ, ಕಾಂತಿ, ತಲೆ, ನೀರು, ಸುಖ ಎಂಬ 20 ಬೇರೆಬೇರೆ ಅರ್ಥಗಳು! ‘ಖ’ ಎಂದರೆ ಸೂರ್ಯ, ಇಂದ್ರಿಯ, ಆಕಾಶ, ಪಟ್ಟಣ, ಮೈದಾನ, ಶೂನ್ಯ, ಬಿಂದು, ತಿಳಿವಳಿಕೆ, ಸ್ವರ್ಗ, ಸುಖ, ಕಾಗೆ ಬಂಗಾರ, ಕರ್ಮ, ಪರಬ್ರಹ್ಮ, ರಂಧ್ರ; ‘ಗ’ ಎಂದರೆ ಗಣಪತಿ, ಗಂಧರ್ವ, ಗಾನ. ‘ಘ’ ಎಂದರೆ ಘಂಟೆ, ಗಲಗಲ ಶಬ್ದ; ಆಶ್ಚರ್ಯವೆಂಬಂತೆ ‘’ ಎಂಬ ಅನುನಾಸಿಕಕ್ಕೂ ಭೈರವ, ಈಶ್ವರ, ವಿಷಯ, ಮತ್ತು ಅಪೇಕ್ಷೆ ಎಂಬ ನಾಲ್ಕು ಅರ್ಥಗಳು!

ಉಳಿದ ವರ್ಗೀಯ ಮತ್ತು ಅವರ್ಗೀಯ ವ್ಯಂಜನಗಳಿಗೂ, ಅವುಗಳ ಕಾಗುಣಿತ ರೂಪ ಗಳಿಗೂ, ಹೀಗೆಯೇ ಬೇರೆಬೇರೆ ಅರ್ಥಗಳಿವೆ. ಸರಿ, ಶಬ್ದಕೋಶದಲ್ಲೇನೋ ಅಷ್ಟೆಲ್ಲ ಅರ್ಥ ಗಳನ್ನು ಕೊಟ್ಟಿರಬಹುದು, ಆದರೆ ಅವೆಲ್ಲ ನಿಜವಾಗಿಯೂ ಬಳಕೆಯಲ್ಲಿ ಇವೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಯಾಕಿಲ್ಲ, ನಾವು ಗಮನಿಸಿರುವುದಿಲ್ಲ ಅಷ್ಟೇ. ಒಂದು ಸರಳ ಉದಾಹರಣೆಯನ್ನು ನೋಡೋಣ.

ಖ ಅಕ್ಷರಕ್ಕಿರುವ ಹದಿನಾಲ್ಕು ಅರ್ಥಗಳಲ್ಲಿ ಆಕಾಶ ಸಹ ಇದೆಯಷ್ಟೆ? ಅದರಿಂದಲೇ ಬಂದದ್ದು ಖಗ ಎಂಬ ಪದ. ಆಕಾಶದಲ್ಲಿ ಗಮಿಸುವಂಥದ್ದು ಅಂದರೆ ಪಕ್ಷಿ. ಡಾ.ರಾಜ್ ಜೀವನಚೈತ್ರ ಚಿತ್ರಕ್ಕಾಗಿ ಅಭಿನಯಿಸಿ ಹಾಡಿ ರಾಷ್ಟ್ರಪ್ರಶಸ್ತಿ ಗಳಿಸಿದ ನಾದಮಯ ಹಾಡಿ ನಲ್ಲಿ ‘ಸ್ವರಗಳ ಮಾಧುರ್ಯ ರಾಗದ ಸೌಂದರ್ಯ ಮೃಗಗಳ ತಣಿಸೆ ಖಗಗಳ ಕುಣಿಸೆ...’ ಎಂದು ಬರುತ್ತದಲ್ಲ, ಖಗಗಳು ಎಂದರೆ ಪಕ್ಷಿಗಳು. ಖಗವಾಹನ ಎಂದರೆ ಪಕ್ಷಿಯನ್ನು (ಗರುಡನನ್ನು) ವಾಹನವಾಗುಳ್ಳವನು, ವಿಷ್ಣು.

“ಖಗವಾಹನನೇ ಬಗೆಬಗೆರೂಪನೆ ನಗುಮೊಗದರಸನೆ ನೀ ಬಾರೋ..." ಖ ಅಂದರೆ ಸೂರ್ಯ ಎಂಬರ್ಥದಿಂದ ಬಂದದ್ದು ಖಗೋಲ. ಸೂರ್ಯ ಮತ್ತು ಅವನ ಸುತ್ತಲ ಗ್ರಹ ಗಳಿಗೆ ಆಧಾರವಾದ ಪ್ರದೇಶ. ಖೇಚರ ಎಂದರೆ ಆಕಾಶದಲ್ಲಿ (ಖ ಪದದ ಸಪ್ತಮೀ ವಿಭಕ್ತಿ) ಸಂಚರಿಸುವ ದೇವತೆಗಳು. ದೇವತೆಗಳ ಒಡೆಯ ಇಂದ್ರ. ಇಂದ್ರನ ಮಗ ಅರ್ಜುನ. ಅರ್ಜು ನನ ರಥದ ಸಾರಥ್ಯ ವಹಿಸಿದವನು ಕೃಷ್ಣ. “ಖೇಚರೇಂದ್ರನ ಸುತನ ರಥದ ಅಚ್ಚಪೀಠ ದಲಿ..." ಪುರಂದರ ದಾಸರು ಕಂಡಿದ್ದು ಅದೇ ಪಿಳ್ಳಂಗೋವಿಯ ಚೆಲುವ ಕೃಷ್ಣ ನನ್ನು!

ಅಂಥ ಕೃಷ್ಣನೇನಾದರೂ ಕೆಳಗೆ ಬಿದ್ದರೆ ಪಾಂಡವರು ಖುಷಿಪಡುತ್ತಾರೆಯೇ? ಕೌರವರು ದುಃಖಿತರಾಗುತ್ತಾರೆಯೇ? ಹೌದೆನ್ನುತ್ತದೆ ಒಂದು ಚಮತ್ಕಾರಿಕ ಸಂಸ್ಕೃತ ಶ್ಲೋಕ. “ಕೇಶವಂ ಪತಿತಂ ದೃಷ್ಟ್ವಾ ಪಾಂಡವಾ ಹರ್ಷನಿರ್ಭರಾಃ| ರುರುದುಃ ಕೌರವಾಃ ಸರ್ವೇ ಹಾಹಾ ಕೇಶವ ಕೇಶವ||" ಮೇಲ್ನೋಟಕ್ಕೆ ಹಾಗೆಯೇ ಧ್ವನಿಸುತ್ತದೆ. ಕೇಶವ(ಕೃಷ್ಣ)ನು ಬಿದ್ದುದನ್ನು ನೋಡಿ ಪಾಂಡವರು ಹರ್ಷನಿರ್ಭರರಾದರಂತೆ.

ಕೌರವರು ಅಯ್ಯೋ ಕೇಶವ ಎಂದು ಕಣ್ಣೀರುಗರೆದರಂತೆ. ನಿಜವಾಗಿ ನಡೆದದ್ದು ಅದಲ್ಲ. ಏನೆಂದು ಅರ್ಥ ಮಾಡಿಕೊಳ್ಳಬೇಕಾದರೆ ಒಂದಕ್ಷರದ ಪದಗಳನ್ನು ಬಳಸಬೇಕು. “ಕೇ ಶವಂ ಪತಿತಂ ದೃಷ್ಟ್ವಾ ಪಾಂಡವಾ ಹರ್ಷನಿರ್ಭರಾಃ| ರುರುದುಃ ಕೌ ರವಾಃ ಸರ್ವೇ ಹಾ ಹಾ ಕೇ ಶವ ಕೇ ಶವ||" ಅರ್ಥ ತಿಳಿದುಕೊಳ್ಳಲಿಕ್ಕೆ ‘ಕ’ ಅಕ್ಷರಕ್ಕೆ ಕೊಟ್ಟಿರುವ 19ನೆಯ ಅರ್ಥ ನೀರು ಎಂಬುದನ್ನು ಗಮನಿಸಬೇಕು. ಕೇ ಎಂದರೆ ನೀರಿನಲ್ಲಿ ಎಂದು ಸಪ್ತಮೀ ವಿಭಕ್ತಿ ಪದ.

ನೀರಿನಲ್ಲಿ ಶವ ಬಿದ್ದುದನ್ನು ನೋಡಿ ಬಿಳಿಬಣ್ಣದ ಮೀನುಗಳು(ಪಾಂಡವಾಃ ಎಂಬ ಪದ ವನ್ನು ಆ ಅರ್ಥದಲ್ಲಿ ಬಳಸಿದೆ) ಖುಷಿಪಟ್ಟವಂತೆ. ಕೌ ರವಾಃ ಎಂದರೆ ಕವ್ ಕವ್ ಎಂದು ಶಬ್ದಮಾಡುವ ಕಾಗೆಗಳು. ಅವು ‘ಕೇ ಶವ ಕೇ ಶವ’ (ನೀರಿನಲ್ಲಿ ಶವ! ನೀರಿನಲ್ಲಿ ಶವ!) ಎಂದು ಕೂಗತೊಡಗಿದವಂತೆ. ಇನ್ನೊಂದು ಚಮತ್ಕಾರಿಕ ಶ್ಲೋಕದಲ್ಲಿ ‘ವಿ’ ಎಂಬ ಒಂದ ಕ್ಷರದ ಪದದ ಕರಾಮತ್ತಿದೆ. “ವಿರಾಜರಾಜಪುತ್ರಾರೇಃ ಯನ್ನಾಮ ಚತುರಕ್ಷರಮ್| ಪೂರ್ವಾ ರ್ಧಂ ತವ ಶತ್ರೂಣಾಂ ಪರಾರ್ಧಂ ತವ ಸಂಗರೇ"- ಇದೊಂದು ಒಗಟಿನ ರೀತಿಯ ಶುಭಹಾರೈಕೆ.

ಸಮರಸನ್ನದ್ಧ ಯೋಧನಿಗೆ ಬಯಸುವುದು. ಏನೆಂದರೆ, “ವಿರಾಜರಾಜಪುತ್ರಾರಿ ಒಬ್ಬನಿ ದ್ದಾನೆ. ಅವನ ಹೆಸರಲ್ಲಿ ನಾಲ್ಕಕ್ಷರಗಳು. ಮೊದಲೆರಡು ಅಕ್ಷರಗಳಿಂದಾದದ್ದು ನಿನ್ನ ಶತ್ರುಗಳಿಗಿರಲಿ, ಕೊನೆಯೆರಡು ಅಕ್ಷರಗಳಿಂದಾದದ್ದು ನಿನಗಿರಲಿ!" ಎಂದು. ಒಗಟನ್ನು ಬಿಡಿಸುವುದು ಹೇಗೆ? “ವಿ ಎಂದರೆ ಪಕ್ಷಿ ಎಂದರ್ಥ. ವಿರಾಜ ಎಂದರೆ ಪಕ್ಷಿಗಳ ರಾಜ ಗರುಡ. ವಿರಾಜರಾಜ ಎಂದರೆ ಗರುಡನ ಒಡೆಯ ವಿಷ್ಣು. ವಿರಾಜರಾಜಪುತ್ರ ಎಂದರೆ ವಿಷ್ಣುವಿನ ಮಗ ಮನ್ಮಥ. ವಿರಾಜರಾಜಪುತ್ರಾರಿ ಎಂದರೆ ಮನ್ಮಥನ ವೈರಿ ಈಶ್ವರ. ಈಶ್ವರನಿಗಿರುವ ನಾಲ್ಕಕ್ಷರಗಳ ಹೆಸರು ಮೃತ್ಯುಂಜಯ. ಇದರ ಮೊದಲೆರಡು ಅಕ್ಷರಗಳಿಂದಾದದ್ದು ಮೃತ್ಯು. ಅದು ನಿನ್ನ ಶತ್ರುಗಳಿಗಿರಲಿ. ಕೊನೆಯೆರಡು ಅಕ್ಷರಗಳಿಂದಾದದ್ದು ಜಯ. ಅದು ನಿನಗೆ ಸಿಗಲಿ" ಎಂಬ ಹಾರೈಕೆ!

ಮತ್ತೊಂದು ಚಮತ್ಕಾರವನ್ನು ‘ನಾ’ ಎಂಬ ಒಂದಕ್ಷರ ಪದದಿಂದ ಪಡೆಯಬಹುದು. ನಾ ಎಂದರೆ ಮನುಷ್ಯ ಎಂದರ್ಧ. ಇದು ನೃ ಎಂಬ ಒಂದಕ್ಷರ ಪದದ ಪ್ರಥಮಾ ವಿಭಕ್ತಿ ಏಕವಚನ ರೂಪ. “ಏಕೋನಾ ವಿಂಶತಿಃ ಸೀಣಾಂ ಸ್ನಾನಾರ್ಥಂ ಸರಯೂಂ ಗತಾಃ| ವಿಂಶತಿಃ ಪುನರಾಯಾತಾ ಏಕೋ ವ್ಯಾಘ್ರೇಣ ಭಕ್ಷಿತಃ" ಅಂತೊಂದು ಒಗಟು.

ಹತ್ತೊಂಬತ್ತು ಸ್ತ್ರೀಯರು ಸ್ನಾನಕ್ಕೆಂದು ಸರಯೂ ನದಿಗೆ ಹೋದರು. ಹಿಂದಿರುಗುವಾಗ ಇಪ್ಪತ್ತು ಸ್ತ್ರೀಯರಿದ್ದರು! ಅಷ್ಟೇಅಲ್ಲ, ಒಬ್ಬ ಗಂಡಸನ್ನು ಹುಲಿಯು ತಿಂದಿತು! ಇದೆಂಥ ಅಸಂಬದ್ಧ ಲೆಕ್ಕ? ಇದನ್ನು ಅರ್ಥೈಸಬೇಕಾದ್ದು ಹೀಗೆ: “ಏಕೋ ನಾ ವಿಂಶತಿಃ ಸೀಣಾಂ" ಎಂದರೆ ಒಬ್ಬ ಗಂಡಸು ಮತ್ತು ಸೀಯರ ಇಪ್ಪತ್ತರ ಗುಂಪು. ಸ್ನಾನಕ್ಕೆ ಹೋದವರಲ್ಲಿ ಇಪ್ಪತ್ತು ಸ್ತ್ರೀಯರೇನೋ ಹಿಂದಿರುಗಿದರು. ಆ ಒಬ್ಬ ಬಡಪಾಯಿ ಗಂಡಸನ್ನು ಹುಲಿ ಗುಳುಂ ಮಾಡಿತು.

ನಾ ಬಗ್ಗೆಯೇ ಇನ್ನೊಂದು: “ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ| ಪಂಚಕಂ ನಾ ಸ್ಮರೇನ್ನಿತ್ಯಂ ಮಹಾಪಾತಕನಾಶನಮ್||" ಎಂಬ ಶ್ಲೋಕವನ್ನು ನೀವು ಕೇಳಿರಬಹುದು. ಅಹಲ್ಯೆ, ದ್ರೌಪದಿ, ಸೀತೆ, ತಾರಾ, ಮಂಡೋದರಿ- ಈ ಐವರು ಪ್ರಾತಃ ಸ್ಮರಣೀಯರೆಂದು ಸಾರುವ ಶ್ಲೋಕ. ಸಾಮಾನ್ಯವಾಗಿ ಇದನ್ನು “ಪಂಚಕನ್ಯಾ ಸ್ಮರೇನ್ನಿತ್ಯಂ" ಎಂದು ತಪ್ಪಾಗಿ ಬರೆಯುತ್ತಾರೆ/ಹೇಳುತ್ತಾರೆ. ಪಟ್ಟಿಯಲ್ಲಿ ಇರುವವರು ಕನ್ಯೆಯರಲ್ಲ ಅಂದಮೇಲೆ ಪಂಚಕನ್ಯಾ ಹೇಗಾಗುತ್ತದೆ? ಬನ್ನಂಜೆ ಗೋವಿಂದಾಚಾರ್ಯರು ಒಂದು ಉಪನ್ಯಾಸದಲ್ಲಿ ಹೇಳಿರುವಂತೆ, “ಪಂಚಕಂ ನಾ ಸ್ಮರೇನ್ನಿತ್ಯಂ" ಐವರನ್ನು ಮನುಷ್ಯನು ನಿತ್ಯವೂ ಸ್ಮರಿಸಬೇಕು.

ಚ, ವೈ, ತು, ಹಿ- ಇವು ನಾಲ್ಕು ಕೂಡ ಸಂಸ್ಕೃತ ಕವಿಗಳಿಗೆ ಸುಲಭದಲ್ಲಿ ಸಿಗುವ ಒಂದಕ್ಷರದ ಪದಗಳು. ಛಂದಸ್ಸಿನ ಪ್ರಕಾರ ಅಕ್ಷರಗಳ/ಮಾತ್ರೆಗಳ ಟ್ಯಾಲಿ ಆಗುವಂತೆ ಇವುಗಳನ್ನು ಶ್ಲೋಕದಲ್ಲಿ ಎಲ್ಲಿ ಬೇಕಾದರೂ ಬಳಸಬಹುದು, ಇಸ್ಪೀಟ್‌ನಲ್ಲಿ ಜೋಕರ್ ಇದ್ದಹಾಗೆ. ಈಬಗ್ಗೆ ಒಂದು ಸ್ವಾರಸ್ಯಕರ ಕಥೆಯೂ ಇದೆ. ಹಿಂದಿನ ಕಾಲದಲ್ಲಿ ರಾಜರು ಕವಿಪ್ರತಿಭೆ ಗಳನ್ನು ಪ್ರೋತ್ಸಾಹಿಸುತ್ತಿದ್ದರು.

ಶ್ಲೋಕ ರಚಿಸಿದರೆ ಶ್ಲೋಕದ ಒಂದೊಂದು ಅಕ್ಷರಕ್ಕೆ ಒಂದೊಂದು ಲಕ್ಷದಂತೆ ಹೊನ್ನಿನ ನಾಣ್ಯಗಳು ಕವಿಗೆ ಉಡುಗೊರೆಯಾಗಿ ಸಿಗುತ್ತಿದ್ದವು. ಉಡುಗೊರೆಯ ಆಸೆಯಿಂದ ಅರೆ ಪ್ರತಿಭಾನ್ವಿತ ಕವಿಯೊಬ್ಬ ಒಂದುದಿನ ಬೆಳ್ಳಂಬೆಳಗ್ಗೆ ರಾಜನೆದುರು ಹಾಜರಾದ. “ಹೊಸ ದೊಂದು ಶ್ಲೋಕ ಕಟ್ಟಿ ತಮ್ಮೆದುರಿಗೆ ಹೇಳಲೇ?" ಎಂದ. ರಾಜ “ತಥಾಸ್ತು!" ಎನ್ನಲು ಕವಿವರೇಣ್ಯ ಶುರುಮಾಡಿದ.

ಸಂಸ್ಕೃತದಲ್ಲಿ ಅತಿಸುಲಭವಾದ ಅನುಷ್ಟುಪ್ ಛಂದಸ್ಸನ್ನೇ ಆಯ್ದುಕೊಂಡ. ತಲಾ ಎಂಟು ಅಕ್ಷರಗಳ ನಾಲ್ಕು ಪಾದಗಳಾದರೆ ಆಯ್ತು. “ಉತ್ತಿಷ್ಠೋತ್ತಿಷ್ಠ ರಾಜೇಂದ್ರ" ಇದು ಮೊದಲ ಪಾದ. ಛಂದೋಬದ್ಧವಾಗಿಯೇ ಇದೆ. ಉತ್ತಿಷ್ಠೋತ್ತಿಷ್ಠ ಗೋವಿಂದ ಎಂದು ದಿನಾ ಸುಪ್ರಭಾತ ಹೇಳಿ ಗೊತ್ತಿತ್ತಲ್ಲ, ಗೋವಿಂದನ ಬದಲು ರಾಜೇಂದ್ರ ಎಂದು ಮಾಡಿದ್ದ. ಸರಿ ಹೋಯ್ತು. “ಮುಖಂ ಪ್ರಕ್ಷಾಲಯಸ್ವ"(ಮುಖ ತೊಳೆದುಕೋ) ಎಂದು ಎರಡನೆಯ ಪಾದ ರಚಿಸಿದ. ಒಂದು ಅಕ್ಷರ ಕಮ್ಮಿ ಆಯ್ತಲ್ಲ, ಆಮೇಲೆ ನೋಡೋಣ ಎಂದುಕೊಂಡು ಮೂರನೇ ಪಾದಕ್ಕಿಳಿದ.

“ಪ್ರಭಾತೇ ಕೂಜತೇ ಕುಕ್ಕುಟಃ"(ಮುಂಜಾವಿನಲ್ಲಿ ಕೋಳಿ ಕೂಗುತ್ತಿದೆ) ಎಂದು ಬರೆದ. ಇದರಲ್ಲಿ ಒಂದು ಅಕ್ಷರ ಹೆಚ್ಚಾಯ್ತು! ಅದಕ್ಕೋಸ್ಕರ ಟಃ ವನ್ನು ಎರಡನೆಯ ಪಾದಕ್ಕೆ ವರ್ಗಾಯಿಸಿದ. “ಮುಖಂ ಪ್ರಕ್ಷಾಲಯಸ್ವಟಃ" ಎಂದು ಎರಡನೆಯ ಪಾದವನ್ನೂ, “ಪ್ರಭಾ ತೇ ಕೂಜತೇ ಕುಕ್ಕು" ಎಂದು ಮೂರನೆಯ ಪಾದವನ್ನೂ ರಾಜನೆದುರಿಗೆ ಮಂಡಿಸಿದ. ಈಗ ತಲಾ ಎಂಟು ಅಕ್ಷರಗಳ ಮೂರು ಪಾದಗಳಾದವು. ಕೊನೆಯ ಪಾದ ಏನೆಂದು ಬರೆಯಲಿ? ಎಷ್ಟು ಯೋಚಿಸಿದರೂ ಏನೂ ಹೊಳೆಯಲಿಲ್ಲ. ಆಗ ಗುರುಗಳ ನೆನಪಾಯ್ತು. ಚ, ವೈ, ತು, ಹಿ ಅಕ್ಷರಗಳನ್ನು ಶ್ಲೋಕದಲ್ಲಿ ಎಲ್ಲಿ ಬೇಕಾದರೂ ಬಳಸಬಹುದು ಎಂದು ಗುರುಗಳು ಹೇಳಿಕೊಟ್ಟಿದ್ದರು.

ಈ ಕವಿಪುಂಗವ ಕೊನೆಯ ಪಾದದಲ್ಲಿ “ಚವೈತುಹಿ ಚವೈತುಹಿ" ಎಂದು ನಾಲ್ಕು ಅಕ್ಷರ ಗಳನ್ನೇ ಎರಡು ಸಲ ಬರೆದು ತನ್ನ ಕವಿತೆಯನ್ನು ಪೂರ್ತಿಗೊಳಿಸಿದ. ರಾಜ ಅಕ್ಷರಲಕ್ಷ ಹೊನ್ನು ಕೊಡುವುದಿರಲಿ, ಕವಿಯ ಬೆನ್ನಿಗೆ ಛಡಿಯೇಟು ಕೊಡುವಂತೆ ಅಲ್ಲಿದ್ದ ಭಟರಿಗೆ ಆಜ್ಞಾಪಿಸಿದನೋ ಏನೋ! ಇಂತು ಏಕಾಕ್ಷರ ಪದಪುರಾಣ ಸಮಾಪ್ತವಾದುದು.