ಬೆಂಗಳೂರು: ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ದುರಂತದಲ್ಲಿ (Stampede at Chinnaswamy Stadium) ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ನೂಕುನುಗ್ಗಲು ವೇಳೆ ಕಾಲ್ತುಳಿತ ಉಂಟಾಗಿ 50ಕ್ಕೂ ಹೆಚ್ಚು ಅಭಿಮಾನಿಗಳು ಅಸ್ವಸ್ಥರಾಗಿದ್ದರು. ತಕ್ಷಣ ಗಾಯಾಳುಗಳನ್ನು ಬೌರಿಂಗ್ ಆಸ್ಪತ್ರೆ ಹಾಗೂ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ 7 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ವೈದೇಹಿ ಆಸ್ಪತ್ರೆ ಹಾಗೂ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದೇಹಿ ಆಸ್ಪತ್ರೆಯಲ್ಲಿ ನಾಲ್ವರು ಹಾಗೂ ಬೌರಿಂಗ್ ಆಸ್ಪತ್ರೆಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಲವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಮೃತರ ಸ್ನೇಹಿತರು, ಆಪ್ತರ ಆಕ್ರಂದನ ಮುಗಿಲುಮುಟ್ಟಿದೆ.
ಕ್ರೀಡಾಂಗಣದ ಬಳಿ ನೂಕು ನುಗ್ಗಲು ಉಂಟಾಗಿದ್ದರಿಂದ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಈ ವೇಳೆ ಕಾಲ್ತುಳಿತ ಉಂಟಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಆರ್‌ಸಿಬಿ ವಿಜಯೋತ್ಸವ ಪರೇಡ್ ಭದ್ರತಾ ದೃಷ್ಟಿಯಿಂದ ಕೈಬಿಡಲಾಗಿತ್ತು. ಬದಲಾಗಿ ಚಿನ್ನಸ್ವಾಮಿಯಂ ಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಿಸಲು ಅನುಮತಿ ನೀಡಲಾಗಿತ್ತು. ವಿಧಾನಸೌಧದ ಬಳಿ ತಂಡದ ಸದಸ್ಯರಿಗೆ ಸರ್ಕಾರದಿಂದ ಸನ್ಮಾನಿಸಿ, ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಸಾವಿರಾರು ಅಭಿಮಾನಿಗಳು ಸ್ಟೇಡಿಯಂನತ್ತ ಬಂದಿದ್ದರಿಂದ ಜನಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸಪಡುವಂತಾಗಿದೆ.