Ranji Trophy: ರಣಜಿ ಆಡದ ಕೊಹ್ಲಿ, ರಾಹುಲ್, ಸಿರಾಜ್ ವಿರುದ್ಧ ಗವಾಸ್ಕರ್ ಕಿಡಿ!
2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಎರಡನೇ ಅವಧಿಯ ಮೊದಲನೇ ಸುತ್ತಿನ ಪಂದ್ಯಗಳಿಂದ ಹೊರಗುಳಿದಿದ್ದ ಭಾರತ ತಂಡದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಮೊಹಮ್ಮದ್ ಸಿರಾಜ್ ಅವರ ನಡೆಯನ್ನು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಖಂಡಿಸಿದ್ದಾರೆ. ಇವರು ಗಾಯದ ನೆಪ ಹೇಳಿ ರಣಜಿ ಪಂದ್ಯವಾಡಿರಲಿಲ್ಲ ಎಂದು ಆರೋಪ ಮಾಡಿದ್ದಾರೆ.

Virat Kohli-Sunil Gavaskar

ನವದೆಹಲಿ: ಪ್ರಸಕ್ತ ಋತುವಿನ ರಣಜಿ ಟ್ರೋಫಿ ಟೂರ್ನಿಯ ಎರಡನೇ ಅವಧಿಯ ಮೊದಲ ಸುತ್ತಿನ ಪಂದ್ಯಗಳನ್ನು ಆಡದೆ ಹೊರಗುಳಿದಿದ್ದ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ವಿರುದ್ದ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಜನವರಿ 23 ರಿಂದ 26ರವರೆಗೆ ನಡೆದಿದ್ದ ರಣಜಿ ಪಂದ್ಯಗಳಲ್ಲಿ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ ಹಾಗೂ ರಿಷಭ್ ಪಂತ್ ತಮ್ಮ-ತಮ್ಮ ರಾಜ್ಯಗಳ ತಂಡಗಳಲ್ಲಿ ಕಾಣಿಸಿಕೊಂಡಿದ್ದರು.
ಆದರೆ, ಕತ್ತು ನೋವಿನ ಕಾರಣ ವಿರಾಟ್ ಕೊಹ್ಲಿ ಸೌರಾಷ್ಟ್ರ ವಿರುದ್ಧದ ಪಂದ್ಯಕ್ಕೆ ಡೆಲ್ಲಿಗೆ ಅಲಭ್ಯರಾಗಿದ್ದರು. ಮೊಣಕೈ ಗಾಯದ ಕಾರಣ ಪಂಜಾಬ್ ವಿರುದ್ಧದ ಪಂದ್ಯದ ನಿಮಿತ್ತ ಕರ್ನಾಟಕ ತಂಡಕ್ಕೆ ಕೆಎಲ್ ರಾಹುಲ್ ಲಭ್ಯರಾಗಿರಲಿಲ್ಲ. ಇನ್ನು ಹೈದರಾಬಾದ್ ತಂಡದ ಪರ ಮೊಹಮ್ಮದ್ ಸಿರಾಜ್ ಕೂಡ ಆಡಿರಲಿಲ್ಲ. ಗಾಯದ ಕಾರಣ ನೀಡಿ ರಣಜಿ ಪಂದ್ಯಕ್ಕೆ ಅಲಭ್ಯರಾಗಿದ್ದ ಈ ಆಟಗಾರರ ವಿರುದ್ಧ ಬಿಸಿಸಿಐ ಏಕೆ ಕ್ರಮಕೈಗೊಂಡಿಲ್ಲ ಎಂದು ಸುನೀಲ್ ಗವಾಸ್ಕರ್ ಪ್ರಶ್ನೆ ಮಾಡಿದ್ದಾರೆ.
Virat Kohli: 12 ವರ್ಷದ ಬಳಿಕ ರಣಜಿಯಲ್ಲಿ ವಿರಾಟ್ ಕೊಹ್ಲಿ ಆಟ
ಸುನೀಲ್ ಗವಾಸ್ಕರ್ ಗಂಭೀರ ಆರೋಪ
"ರಣಜಿ ಟ್ರೋಫಿ ಟೂರ್ನಿಯ ಎರಡನೇ ಅವಧಿಯ ಮೊದಲ ಸುತ್ತಿನ ಪಂದ್ಯಗಳಿಗೆ ಅಲಭ್ಯರಾಗಿದ್ದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಹಾಗೂ ಮೊಹಮ್ಮದ್ ಸಿರಾಜ್ ಮುಂದಿನ ಸುತ್ತಿನ ಪಂದ್ಯಗಳಲ್ಲಿ ಆಡಲಿದ್ದಾರೆಯೇ? ಎಂಬುದು ಆಸಕ್ತದಾಯಕ ಸಂಗತಿಯಾಗಿದೆ. ಒಂದು ವೇಳೆ ಆಡಿಲ್ಲವಾದರೆ ಇವರ ವಿರುದ್ಧ ಬಿಸಿಸಿಐ ಯಾವ ಕ್ರಮ ತೆಗೆದುಕೊಳ್ಳಲಿದೆ ಎಂಬುದು ಇನ್ನಷ್ಟು ಆಸಕ್ತಿಯನ್ನು ಕೆರಳಿಸಿದೆ. ಅವರು ಎಲ್ಲಿ ಗಾಯಕ್ಕೆ ತುತ್ತಾಗಿದ್ದರು? ಗಾಯದ ವೈದ್ಯಕೀಯ ಪ್ರಮಾಣ ಪತ್ರ ಪಡೆಯುವುದು ಮಕ್ಕಳ ಪ್ರವೃತ್ತಿಯಾಗಿದೆ. ಒಂದು ವೇಳೆ ಅವರು ಗಾಯಕ್ಕೆ ತುತ್ತಾಗಿದ್ದರೆ ನಿತೀಶ್ ರೆಡ್ಡಿ ಅವರ ಜೊತೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ ಹೋಗಿ ಗುಣಮುಖರಾಗಬೇಕಿತ್ತು," ಎಂದು ಸುನೀಲ್ ಗವಾಸ್ಕರ್ ಸ್ಪೋರ್ಟ್ಸ್‌ಸ್ಟಾರ್ ಅಂಕಣದಲ್ಲಿ ಬರೆದಿದ್ದಾರೆ.
"ಬಿಸಿಸಿಐ ಗುತ್ತಿಗೆ ಹೊಂದಿರುವ ಆಟಗಾರರಿಗೆ ಇದು ಅಭ್ಯಾಸವಾಗಬಾರದು. ಅವರು ಗಾಯಕ್ಕೆ ತುತ್ತಾಗಿದ್ದರೆ, ಅವರು ಎನ್‌ಸಿಎನಲ್ಲಿ ರಿಪೋರ್ಟ್ ಮಾಡಿಕೊಳ್ಳಬೇಕು ಹಾಗೂ ಇವರು ಭಾರತ ತಂಡದ ಪರ ಆಡಲು ಫಿಟ್ ಇದ್ದಾರೆಯೇ? ಅಥವಾ ಇಲ್ಲವೇ? ಎಂಬ ಬಗ್ಗೆ ಬಿಸಿಸಿಐ ವೈದ್ಯಕೀಯ ಪರಿಣಿತರು ಪ್ರಮಾಣ ಪತ್ರವನ್ನು ನೀಡಬೇಕು. ಗಾಯ ಇಲ್ಲದೇ ಇದ್ದರೂ ಕೂಡ ಈ ಆಟಗಾರರು ಏಕೆ ರಣಜಿ ಪಂದ್ಯಕ್ಕೆ ಅಲಭ್ಯರಾಗಿದ್ದರು ಎಂಬುದು ಎಲ್ಲರಿಗೂ ತಿಳಿಯಬೇಕು," ಎಂದು ಬ್ಯಾಟಿಂಗ್ ದಿಗ್ಗಜ ತಿಳಿಸಿದ್ದಾರೆ.
ಹರಿಯಾಣ ವಿರುದ್ದ ರಣಜಿ ಪಂದ್ಯವಾಡಲು ಕರ್ನಾಟಕ ತಂಡಕ್ಕೆ ಮರಳಿದ ಕೆಎಲ್ ರಾಹುಲ್!
ಜನವರಿ 30 ರಂದು ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಯ ಎರಡನೇ ಅವಧಿಯ ಎರಡನೇ ಸುತ್ತಿನ ಪಂದ್ಯಗಳಿಗೆ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಹಾಗೂ ಮೊಹಮ್ಮದ್ ಸಿರಾಜ್ ಲಭ್ಯರಾಗಿದ್ದಾರೆ. ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕೆ ಇಳಿಯಲಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಕಣಕ್ಕೆ ಇಳಿಯಲಿದ್ದಾರೆ. ಇನ್ನು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅವರು ನಾಗ್ಪುರ್‌ನಲ್ಲಿ ವಿದರ್ಭ ವಿರುದ್ದದ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ.